1998 “ದೇವರ ಜೀವನ ಮಾರ್ಗ” ಜಿಲ್ಲಾ ಅಧಿವೇಶನಗಳು
1 ಲೋಕದಾದ್ಯಂತವಿರುವ ಯೆಹೋವನ ಆಧುನಿಕ ದಿನದ ಆರಾಧಕರು, ಜಿಲ್ಲಾ ಅಧಿವೇಶನಗಳಲ್ಲಿ ಅಧಿಕ ಸಂಖ್ಯೆಗಳಲ್ಲಿ ಸೇರಿಬರುವುದನ್ನು ಪ್ರತಿ ವರ್ಷ ತವಕದಿಂದ ಮುನ್ನೋಡುತ್ತಾರೆ. ಈ ರೀತಿಯಲ್ಲಿ ಅವರು, ಯೆರೂಸಲೇಮಿನಲ್ಲಿ ಯೆಹೋವನ ಆರಾಧನೆಗೆ ಹೋಗುವಾಗ ದಾರಿಯಲ್ಲಿ, 122ನೆಯ ಕೀರ್ತನೆಯ ವಾಕ್ಯಗಳನ್ನು ಆನಂದದಿಂದ ಹಾಡುತ್ತಿದ್ದ ಪ್ರಾಚೀನ ಇಸ್ರಾಯೇಲಿನ ಯೆಹೋವನ ನಂಬಿಗಸ್ತ ಸೇವಕರ ಮನೋಭಾವವನ್ನು ಪ್ರತಿಬಿಂಬಿಸುತ್ತಾರೆ. ಆ ಕೀರ್ತನೆಯ 1ನೆಯ ವಚನವು ಹೀಗೆ ಓದುತ್ತದೆ: “ಯೆಹೋವನ ಮಂದಿರಕ್ಕೆ ಹೋಗೋಣ ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.” ಅಂತಹ ಸಂದರ್ಭಗಳಲ್ಲಿ, ಯೆಶಾಯ 2:2, 3ರ ಪ್ರೇರಿತ ಮಾತುಗಳು ನೆರವೇರುತ್ತಿರುವುದರ ಅತ್ಯಧಿಕ ರುಜುವಾತನ್ನು ಸಹ ನಾವು ನೋಡುತ್ತೇವೆ.
2 “ಯೆಹೋವನ ಮಾರ್ಗವು ಒಂದು ಪ್ರಬಲಸ್ಥಾನ” ಆಗಿದೆಯೆಂದು ನಮಗೆ ಜ್ಞಾನೋಕ್ತಿ 10:29 ಜ್ಞಾಪಕಹುಟ್ಟಿಸುತ್ತದೆ. ಈ ವರ್ಷದ ಅಧಿವೇಶನಕ್ಕೆ ಎಷ್ಟೊಂದು ಸೂಕ್ತವಾದ ಶೀರ್ಷಿಕೆ ಇದೆ—“ದೇವರ ಜೀವನ ಮಾರ್ಗ”! ಮೂರು ದಿನದ ಕಾರ್ಯಕ್ರಮದಾದ್ಯಂತ ಈ ಶೀರ್ಷಿಕೆಯನ್ನು ಹೇಗೆ ವಿವರಿಸಲಾಗುವುದು? ನಮಗಾಗಿ ತಯಾರಿಸಲ್ಪಟ್ಟಿರುವ ವಿಷಯಕ್ಕಾಗಿ ನಾವೆಲ್ಲರೂ ತವಕದಿಂದ ಎದುರುನೋಡುತ್ತೇವೆ. ಮಹತ್ವಪೂರ್ಣವಾದ ವಿಷಯಗಳನ್ನು ಅಲ್ಲಿ ತಿಳಿಸಲಾಗುವುದು.
3 ಹಾಜರಾಗಲು ಮಾಡಲ್ಪಡುವ ಪ್ರಯತ್ನವು ಸಾರ್ಥಕವಾಗಿರುವುದು: ಆಫ್ರಿಕದಲ್ಲಿರುವ ನಮ್ಮ ಸಹೋದರರಲ್ಲಿ ಅನೇಕರು, ಆ ಖಂಡದಲ್ಲಿನ ಕೆಲವೊಂದು ಭಾಗಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸಂಕ್ಷೋಭೆಯಿಂದಾಗಿ ಕಷ್ಟಗಳನ್ನು ಅನುಭವಿಸಿದ್ದಾರೆ. ಅವರು ಯೆಹೋವನ ಜನರ ಅಧಿವೇಶನಗಳನ್ನು ತಮ್ಮ ಜೀವಾಧಾರವಾಗಿ ವೀಕ್ಷಿಸುತ್ತಾರೆ. ಕೆಲವರು ಒಂದು ಅಧಿವೇಶನಕ್ಕೆ ಹಾಜರಾಗಲು ತುಂಬ ದೂರ ನಡೆದುಕೊಂಡು ಹೋಗಬೇಕಾದರೂ, ಅವರು ಅದನ್ನು ತಪ್ಪಿಸಿಕೊಳ್ಳುವ ಕುರಿತು ಯೋಚಿಸುವುದೂ ಇಲ್ಲ. ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಹಿಂದಿನ ಸಾಎರ್)ನಲ್ಲಿರುವ 73 ವರ್ಷ ಪ್ರಾಯದ ಸಹೋದರರೊಬ್ಬರು, ಒಂದು ಅಧಿವೇಶನಕ್ಕೆ ಹಾಜರಾಗಲು ಸುಮಾರು 450 ಕಿಲೊಮೀಟರುಗಳಷ್ಟು ದೂರ ನಡೆದರು. ಅವರು 16 ದಿನಗಳ ಬಳಿಕ ಅಲ್ಲಿ ತಲಪಿದರು. ಅವರ ಪಾದಗಳು ಊದಿಕೊಂಡಿದ್ದವಾದರೂ ಅವರು ಅಲ್ಲಿದ್ದುದಕ್ಕಾಗಿ ಸಂತೋಷಿಸಿದರು. ಅಧಿವೇಶನದ ನಂತರ, ಆನಂದದಿಂದ ತುಳುಕುತ್ತಿದ್ದು ಮತ್ತು ಆತ್ಮಿಕವಾಗಿ ಬಲಗೊಳಿಸಲ್ಪಟ್ಟು, ಅವರು ನಡೆದುಕೊಂಡೇ ಮನೆಗೆ ಹಿಂದಿರುಗಿದರು. ಇದು ಅನೇಕ ವರ್ಷಗಳಿಂದ ನಡೆದುಬಂದ ಅವರ ರೂಢಿಯಾಗಿದೆ!
4 ಮೊಸಾಂಬೀಕ್ನಲ್ಲಿ ಒಬ್ಬ ಜಿಲ್ಲಾ ಮೇಲ್ವಿಚಾರಕರು ಮತ್ತು ಅವರ ಹೆಂಡತಿಯು, ಒಂದು ಸರ್ಕಿಟ್ ಸಮ್ಮೇಳನವನ್ನು ಹಾಜರಾಗಲಿಕ್ಕಾಗಿ ಒಂದು ದೊಡ್ಡ ಪರ್ವತವನ್ನು ಹತ್ತಿ, ಕಾಲ್ನಡಿಗೆಯಲ್ಲಿಯೇ ಒಂದು ದೊಡ್ಡ ಮರುಭೂಮಿಯಂತಹ ಕ್ಷೇತ್ರವನ್ನು ದಾಟಿದರು. 45 ತಾಸುಗಳಲ್ಲಿ ಅವರು ಆ 90 ಕಿಲೊಮೀಟರ್ ದೂರದ ಪ್ರಯಾಣವನ್ನು ಮುಗಿಸಿದರು. ಹಾಜರಿದ್ದವರೆಲ್ಲರೂ ಈ ದಂಪತಿಗಳ ಉತ್ತಮ ಮಾದರಿಯಿಂದ ತುಂಬ ಉತ್ತೇಜನಗೊಂಡರು. ಅಲ್ಲಿ ಹಾಜರಿದ್ದ ಅನೇಕ ಕುಟುಂಬಗಳು, ಹಾಜರಾಗಲು ಅಂತಹದ್ದೇ ಪ್ರಯತ್ನಗಳನ್ನು ಮಾಡಿದ್ದವು. 60 ವರ್ಷ ಪ್ರಾಯದ ಸಹೋದರರೊಬ್ಬರನ್ನು ಸೇರಿಸಿ, ಕೆಲವು ಸಹೋದರರು, ಕಾಲ್ನಡಿಗೆಯಲ್ಲಿ 200 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿದ್ದರೆಂದು ಜಿಲ್ಲಾ ಮೇಲ್ವಿಚಾರಕನು ವರದಿಸಿದನು!
5 ಈ ವರ್ಷದ ಅಧಿವೇಶನಕ್ಕೆ ಹಾಜರಾಗಲು ನೀವು ನಿಶ್ಚಿತ ಯೋಜನೆಗಳನ್ನು ಮಾಡಿದ್ದೀರೊ? ನೀವು ತುಂಬ ದೂರದ ವರೆಗೆ ನಡೆಯಬೇಕಾಗಿರಲಿಕ್ಕಿಲ್ಲ. ಆದರೆ ನೀವು ಮತ್ತು ನಿಮ್ಮ ಕುಟುಂಬವು ಹಾಜರಾಗುವಂತೆ, ಒಂದಿಷ್ಟು ಪ್ರಯತ್ನ ಮತ್ತು ತ್ಯಾಗವನ್ನು ಮಾಡುವ ಅಗತ್ಯವಿರಬಹುದು. ಆರಂಭದಿಂದ ಮುಕ್ತಾಯದ ವರೆಗೂ, ಇಡೀ ಕಾರ್ಯಕ್ರಮಕ್ಕೆ ಹಾಜರಿರಲು ಏರ್ಪಾಡನ್ನು ಮಾಡಿರಿ. ಅನೇಕ ಬೈಬಲ್ ವಿದ್ಯಾರ್ಥಿಗಳು ಸಮರ್ಪಣೆಯ ಕಡೆಗೆ ಪ್ರಗತಿಯನ್ನು ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಹಾಜರಿರುವುದು, ಅವರಿಗೆ ಸರಿಯಾದ ನಿರ್ಣಯವನ್ನು ಮಾಡಲು ಸಹಾಯಮಾಡುವುದು. ನಿಮ್ಮೊಂದಿಗೆ ಹಾಜರಾಗುವಂತೆ ನೀವು ನಿಮ್ಮ ಬೈಬಲ್ ವಿದ್ಯಾರ್ಥಿಗಳು ಮತ್ತು ಇತರ ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸಿದ್ದೀರೊ?
6 ಮೂರು ದಿನದ ಕಾರ್ಯಕ್ರಮ: ಈ ವರ್ಷ ಭಾರತದಲ್ಲಿ, ಈ ಕಾರ್ಯಕ್ರಮವನ್ನು 20 ಅಧಿವೇಶನಗಳಲ್ಲಿ ಸಾದರಪಡಿಸಲಾಗುವುದು. ಇಂಗ್ಲಿಷ್ ಭಾಷೆಗೆ ಕೂಡಿಸಿ, ಕನ್ನಡ, ಗುಜರಾತಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಅಧಿವೇಶನಗಳು ನಡೆಯುವವು. ಈ ಪುರವಣಿಯ 6ನೆಯ ಪುಟವು, ಈ ಅಧಿವೇಶನಗಳ ತಾರೀಖು ಮತ್ತು ನಿವೇಶನಗಳನ್ನು ಪಟ್ಟಿಮಾಡುತ್ತದೆ.
7 ವಿಶೇಷ ಸೂಚನೆ: ಶುಕ್ರವಾರ, ಶನಿವಾರ, ಮತ್ತು ಆದಿತ್ಯವಾರ ಬೆಳಗ್ಗೆಗಳಂದು, ಕಾರ್ಯಕ್ರಮವು 9:30ಕ್ಕೆ ಆರಂಭವಾಗುವುದು. ಶುಕ್ರವಾರ ಮತ್ತು ಶನಿವಾರದಂದು, ಕಾರ್ಯಕ್ರಮವು ಸಾಯಂಕಾಲ 5:00 ಘಂಟೆಗೆ ಮತ್ತು ಆದಿತ್ಯವಾರದಂದು ಸಾಯಂಕಾಲ 4:00 ಘಂಟೆಗೆ ಮುಕ್ತಾಯಗೊಳ್ಳುವುದು. ಪ್ರತಿ ದಿನ ಬಾಗಿಲುಗಳನ್ನು ಬೆಳಗ್ಗೆ 8:00 ಘಂಟೆಗೆ ತೆರೆಯಲಾಗುವುದು. ಕೆಲಸದ ನೇಮಕಗಳಿರುವವರನ್ನು ಮಾತ್ರ ಅದಕ್ಕಿಂತ ಮುಂಚೆ ಪ್ರವೇಶಿಸಲು ಅನುಮತಿಸಲಾಗುವುದು. ಆದರೆ, ಬೆಳಗ್ಗೆ 8:00 ಘಂಟೆಯ ಮುಂಚೆ ಯಾರೂ ಆಸನಗಳನ್ನು ಕಾದಿರಿಸಬಾರದು.
8 ನಾವು ಅಧಿವೇಶನಕ್ಕೆ ಹೋಗುತ್ತಿರುವಾಗ ಮತ್ತು ಹಿಂದಿರುಗುತ್ತಿರುವಾಗ, ಅನೌಪಚಾರಿಕ ಸಾಕ್ಷಿಯನ್ನು ನೀಡಲಿಕ್ಕಾಗಿರುವ ಅವಕಾಶಗಳಿಗಾಗಿ ನಾವು ಹುಡುಕಬೇಕು. ಪೆಟ್ರೋಲ್ ಬಂಕ್ನಲ್ಲಿರುವ ಕಾರ್ಮಿಕರು, ಅಂಗಡಿಗಾರರು, ಹೊಟೇಲ್ ಸಿಬ್ಬಂದಿ, ಮತ್ತು ಪರಿಚಾರಕರು ರಾಜ್ಯ ಸಂದೇಶದಲ್ಲಿ ಆಸಕ್ತರಾಗಿರಬಹುದು. ನಿಮ್ಮೊಂದಿಗೆ ಕಿರುಹೊತ್ತಗೆಗಳು, ಸದ್ಯದ ಪತ್ರಿಕೆಗಳು, ಬ್ರೋಷರುಗಳು ಅಥವಾ ಇತರ ಸಾಹಿತ್ಯವನ್ನು ತರುವ ಮೂಲಕ ಇದಕ್ಕಾಗಿ ತಯಾರಿಸಿರಿ. ಈ ರೀತಿಯಲ್ಲಿ, ಸುವಾರ್ತೆಯು ತಲಪಿಸಲ್ಪಡದೇ ಇರಬಹುದಾದ ಜನರಿಗೆ ನೀವು ಸಾಕ್ಷಿಯನ್ನು ಕೊಡುವ ಅವಕಾಶಗಳ ಪ್ರಯೋಜನವನ್ನು ತೆಗೆದುಕೊಳ್ಳಸಾಧ್ಯವಿದೆ.—2 ತಿಮೊ. 3:17.
9 “ನೀವು ಹೇಗೆ ಕಿವಿಗೊಡುತ್ತೀರೆಂಬುದಕ್ಕೆ ಗಮನಕೊಡಿರಿ”: ಅಧಿವೇಶನದ ಪ್ರತಿನಿಧಿಗಳು, ಲೂಕ 8:18ರಲ್ಲಿ (NW) ಕೊಡಲ್ಪಟ್ಟಿರುವ ಬುದ್ಧಿವಾದಕ್ಕೆ ಲಕ್ಷ್ಯಕೊಡುವುದು ವಿವೇಕಯುತ. ಎಲ್ಲರೂ ಒಂದು ಬೈಬಲ್, ಒಂದು ಸಂಗೀತ ಪುಸ್ತಕ ಮತ್ತು ನೋಟ್ಬುಕನ್ನು ತರುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ಪ್ರತಿಯೊಂದು ಭಾಷಣದಲ್ಲಿರುವ ಮುಖ್ಯ ವಿಷಯಗಳಿಗಾಗಿ ಜಾಗರೂಕತೆಯಿಂದ ಕಿವಿಗೊಡಿರಿ, ಮತ್ತು ಸಂಕ್ಷಿಪ್ತವಾದ ನೋಟ್ಸ್ಗಳನ್ನು ಬರೆದುಕೊಳ್ಳಿರಿ. ವಿಷಯವನ್ನು ನೀವು ಹೇಗೆ ವೈಯಕ್ತಿಕವಾಗಿ ಅನ್ವಯಿಸಿಕೊಳ್ಳಬಲ್ಲಿರೆಂದು ನಿಮ್ಮನ್ನೇ ಕೇಳಿಕೊಳ್ಳಿರಿ. ಅಧಿವೇಶನದ ಪ್ರತಿ ರಾತ್ರಿ ನೀವು ಮಲಗುವ ಮುಂಚೆ, ನಿಮ್ಮ ನೋಟ್ಸ್ಗಳನ್ನು ಪುನರ್ವಿಮರ್ಶಿಸಿ, ಯೆಹೋವನ ಜೀವನ ಮಾರ್ಗಕ್ಕೆ ನೀವು ಎಷ್ಟು ನಿಕಟವಾಗಿ ಅಂಟಿಕೊಳ್ಳುತ್ತಿದ್ದೀರೆಂದು ಏಕೆ ಪರಿಶೀಲಿಸಬಾರದು?—ಜ್ಞಾನೋ. 4:10-13.
10 ಕಾರ್ಯಕ್ರಮಾವಧಿಗಳ ಸಮಯದಲ್ಲಿ, ಕೆಲವರು ಸಭಾಂಗಣದಿಂದ ಹೊರಬಂದು ತಮ್ಮ ವಾಹನಗಳಲ್ಲಿ ಕುಳಿತುಕೊಳ್ಳುವುದನ್ನು ಗಮನಿಸಲಾಗಿದೆ. ಹೀಗೆ ಅವರು ಕಾರ್ಯಕ್ರಮದಲ್ಲಿ ನೀಡಲಾಗುವ ಮಾಹಿತಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇತರರು, ಸಭಾಂಗಣದಲ್ಲಿ ಕುಳಿತುಕೊಂಡು ಕಿವಿಗೊಡುತ್ತಿರಬೇಕಾದ ಸಮಯದಲ್ಲಿ, ಸಭಾಂಗಣದ ಹೊರದಾರಿಗಳಲ್ಲಿ ಸುಮ್ಮನೆ ನಡೆದಾಡುತ್ತಿರುವುದನ್ನು ಗಮನಿಸಲಾಗಿದೆ. ನಡುಮಧ್ಯಾಹ್ನದ ಕಾರ್ಯಕ್ರಮವು ನಡೆಯುತ್ತಿರುವಾಗ, ಯುವ ಜನರ ಗುಂಪುಗಳು ಅಧಿವೇಶನದ ಸ್ಥಳವನ್ನು ಬಿಟ್ಟುಹೋಗುತ್ತಿರುವುದನ್ನು ಗಮನಿಸಲಾಗಿದೆ. ಗತಕಾಲದ ಯೆಹೋವನ ಸೇವಕರಲ್ಲಿ ಕೆಲವರು, ಯೆಹೋವನ ಮರುಜ್ಞಾಪನಗಳಿಗೆ ಗಮನವಿಟ್ಟು ಕಿವಿಗೊಡದೆ ಇದ್ದುದರಿಂದ, ತಮ್ಮ ಜೀವಿತಗಳಲ್ಲಿ ಗಂಭೀರವಾದ ತಪ್ಪುಗಳನ್ನು ಮಾಡಿದರು. ನಿಶ್ಚಯವಾಗಿಯೂ ನಾವು ಅಂತಹದ್ದೇ ತಪ್ಪನ್ನು ಮಾಡಲು ಬಯಸುವುದಿಲ್ಲ. (2 ಅರಸು. 17:13-15) ‘ನಂಬಿಗಸ್ತನೂ ವಿವೇಕಿಯೂ ಆದ ಆಳು’ ನಮಗೆಲ್ಲರಿಗೂ ಅಗತ್ಯವಿರುವಂತಹ ಉಪದೇಶವನ್ನು ತಯಾರಿಸಿದೆ. ಮೂರು ದಿನದ ಅಧಿವೇಶನ ಕಾರ್ಯಕ್ರಮದ ಪ್ರತಿಯೊಂದು ಅವಧಿಯಲ್ಲಿ, ನಾವು ‘ಕೇಳಿದ ಸಂಗತಿಗಳಿಗೆ . . . ಹೆಚ್ಚಾಗಿ ಲಕ್ಷ್ಯಕೊಡುವವರಾಗಿ’ರುವುದು ವಿಶೇಷವಾಗಿ ಪ್ರಾಮುಖ್ಯ. ನಮಗೆ ವಿಶೇಷ ಆಸಕ್ತಿಯದ್ದಾಗಿರುವ ವಿಷಯವು ಪ್ರತಿ ದಿನ ತಿಳಿಸಲಾಗುವುದು. ಇದರಲ್ಲಿ, ಭವಿಷ್ಯತ್ತಿನಲ್ಲಿ ನಮ್ಮ ಜೀವನ ರೀತಿಯ ಮೇಲೆ ಒಂದು ಹಿತಕರವಾದ ಪ್ರಭಾವವನ್ನು ಬೀರಲಿರುವ ಮಾಹಿತಿಯು ನಿಶ್ಚಯವಾಗಿಯೂ ಸೇರಿರುವುದು. ಬರಲಿರುವ ಅಧಿವೇಶನಗಳ ಸರಣಿಯಲ್ಲಿ ಯೆಹೋವನು ಒದಗಿಸಲಿರುವ ಆತ್ಮಿಕ ವಿಷಯಕ್ಕೆ ಗಮನಕೊಡುವವರೂ, ಅದನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳುವವರೂ ಆಗಿರುವ ಮೂಲಕ, ನಮ್ಮ ನಿರೀಕ್ಷೆಯು ದೃಢವಾಗಿ ನೆಲೆನಿಲ್ಲುವುದು. ಹೀಗೆ ನಾವು ದೇವರ ಜೀವನ ಮಾರ್ಗದಿಂದ ‘ತಪ್ಪಿಹೋಗ’ದೆ ಇರುವೆವು.—ಮತ್ತಾ. 24:45; ಇಬ್ರಿ. 2:1.
11 ಯೆಹೋವನನ್ನು ಸನ್ಮಾನಿಸುವ ವೇಷಭೂಷಣ: ಈ ಕಠಿನ ಸಮಯಗಳಲ್ಲಿ, ಈ ಲೋಕದ ಆತ್ಮವು ನಮ್ಮ ಮೇಲೆ ಪ್ರಭಾವ ಬೀರದಂತೆ ನಾವು ಸಾಮಾನ್ಯವಾದುದಕ್ಕಿಂತಲೂ ಹೆಚ್ಚಿನ ಗಮನವನ್ನು ಕೊಡಬೇಕಾಗಿದೆ. (1 ಕೊರಿಂ. 2:12) ನಮ್ಮ ಉಡುಪು ಮತ್ತು ಕೇಶಶೈಲಿಯು ಸಭ್ಯವಾದದ್ದೂ, ನಾವು ಆರಾಧಿಸುತ್ತಿರುವ ದೇವರ ಘನತೆಯನ್ನು ಪ್ರತಿಬಿಂಬಿಸುವಂತಹದ್ದೂ ಆಗಿರಬೇಕು. (1 ತಿಮೊ. 2:9, 10) “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರ”ಲು, ದುಬಾರಿಯಾದ ಬಟ್ಟೆಬರೆಯ ಆವಶ್ಯಕತೆಯಿಲ್ಲ. (ತೀತ 2:10) ಕಾವಲಿನಬುರುಜು ಪತ್ರಿಕೆಯ 1997, ಜೂನ್ 15ರ ಸಂಚಿಕೆಯ 17 ಮತ್ತು 18ನೆಯ ಪುಟಗಳು, 14-18ನೆಯ ಪ್ಯಾರಗ್ರಾಫ್ಗಳಲ್ಲಿ ಕೊಡಲ್ಪಟ್ಟಿರುವ ಅತ್ಯುತ್ಕೃಷ್ಟ ವ್ಯಾವಹಾರಿಕ ಮತ್ತು ಶಾಸ್ತ್ರೀಯ ಸಲಹೆಯನ್ನು ಗಮನಿಸಿರಿ. ಯೆಹೋವನನ್ನು ಸನ್ಮಾನಿಸುವಂತಹ ವಿಧದಲ್ಲಿ ಉಡುಪನ್ನು ಧರಿಸುವ ಮೂಲಕ, ನಾವು ಕೊಡಸಾಧ್ಯವಿರುವ ಪ್ರಭಾವಶಾಲಿ ಸಾಕ್ಷಿಯನ್ನು ಎಂದಿಗೂ ಅಲ್ಪ ವಿಷಯವೆಂದು ಎಣಿಸಬೇಡಿರಿ.
12 ಒಬ್ಬ 16 ವರ್ಷ ಪ್ರಾಯದ ಸಾಕ್ಷಿ ಹೇಳಿದ್ದೇನೆಂದರೆ, ಅವಳು ಮತ್ತು ಅವಳ ಅಣ್ಣನು ಕಾರ್ಯಾಕ್ರಮಾವಧಿಗಳ ನಂತರ, ಒಂದು ಸಾಯಂಕಾಲ ಹೋಟೇಲಿಗೆ ಹೋದಾಗ, ಅಲ್ಲಿದ್ದ ಕೆಲವು ಸಹೋದರ ಸಹೋದರಿಯರು ಅಯೋಗ್ಯವಾದ ವೇಷಭೂಷಣದಲ್ಲಿದ್ದುದ್ದನ್ನು ಅವರು ಗಮನಿಸಿದರು. ಆದರೆ, ನೀಟಾಗಿ ಮತ್ತು ಯೋಗ್ಯವಾಗಿ ಉಡುಪನ್ನು ಹಾಗೂ ಬ್ಯಾಡ್ಜ್ ಕಾರ್ಡ್ಗಳನ್ನು ಧರಿಸಿದ್ದ ಸಾಕ್ಷಿಗಳನ್ನು ನೋಡಿದಾಗ, ಹೋಟೇಲಿನ ಗಿರಾಕಿಗಳಲ್ಲಿ ಅನೇಕರು ಪ್ರಸನ್ನವಾದ ಪ್ರತಿಕ್ರಿಯೆಯನ್ನು ತೋರಿಸಿದರು. ಇದು, ಆ ಗಿರಾಕಿಗಳಲ್ಲಿ ಕೆಲವರಿಗೆ ಸಾಕ್ಷಿಯನ್ನು ಕೊಡಲು ಮಾರ್ಗವನ್ನು ತೆರೆಯಿತು.
13 ಯೆಹೋವನಿಗೆ ಸ್ತುತಿಯನ್ನು ತರುವ ನಡತೆ: ನಮ್ಮ ಕ್ರೈಸ್ತ ನಡತೆಯು, ಇತರರು ಸತ್ಯಾರಾಧನೆಯನ್ನು ದೃಷ್ಟಿಸುವ ವಿಧದ ಮೇಲೆ ಪ್ರಭಾವ ಬೀರಬಲ್ಲದೆಂದು ನಮಗೆ ತಿಳಿದಿದೆ. ಆದುದರಿಂದ, ಎಲ್ಲ ಸಮಯದಲ್ಲೂ ಸುವಾರ್ತೆಗೆ ಯೋಗ್ಯವಾಗಿರುವ ಮತ್ತು ಯೆಹೋವನಿಗೆ ಸ್ತುತಿಯನ್ನು ತರುವಂತಹ ರೀತಿಯಲ್ಲಿ ನಾವು ನಡೆದುಕೊಳ್ಳಲು ಬಯಸುತ್ತೇವೆ.—ಫಿಲಿ. 1:27.
14 ಕಳೆದ ವರ್ಷ, ಅಂಗೋಲದ ಉತ್ತರಭಾಗದಲ್ಲಿ, ಪ್ರಥಮ ಬಾರಿ ಒಂದು ಜಿಲ್ಲಾ ಅಧಿವೇಶನವನ್ನು ನಡೆಸಲಾಯಿತು. ಅಧಿವೇಶನದ ಎರಡನೆಯ ದಿನದಂದು, ಶಾಂತಿಯನ್ನು ಕಾಪಾಡಲಿಕ್ಕಾಗಿ ಇಬ್ಬರು ಸ್ಥಳಿಕ ಪೊಲೀಸ್ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಲಾಯಿತು. ಅವರು ಇಡೀ ದಿನ ಅಲ್ಲಿದ್ದರು. ದಿನದ ಅಂತ್ಯದಲ್ಲಿ, ತಾವು ಕೇಳಿಸಿಕೊಂಡಂತಹ ವಿಷಯ ಮತ್ತು ಗಮನಿಸಿದಂತಹ ಸುವ್ಯವಸ್ಥಿತ ನಡತೆಯನ್ನು ಅವರು ಶ್ಲಾಘಿಸಿದರು. ಅವರಲ್ಲೊಬ್ಬನು ಹೇಳಿದ್ದು: “ನಮ್ಮನ್ನು ಸುಮ್ಮನೆ ಇಲ್ಲಿ ಏಕೆ ಕಳುಹಿಸಲಾಯಿತೊ? ಯೆಹೋವನ ಸಾಕ್ಷಿಗಳು ತಮ್ಮ ಕೂಟಗಳಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುತ್ತಾರೆಂದು ನಮಗೆ ಗೊತ್ತಿದೆ.”
15 ಆಫ್ರಿಕದ ಒಂದು ದೇಶದಲ್ಲಿನ ರಾಜಕೀಯ ಪಕ್ಷದ ಒಬ್ಬ ಸದಸ್ಯನು, ತನ್ನ ಪಕ್ಷದ ಇತರ ಎಲ್ಲ ಸದಸ್ಯರ ಹತ್ಯೆಯಾದಾಗ, ಯೂರೋಪಿಗೆ ಓಡಿಹೋದನು. ಅವನು ಅನೇಕ ವೈಯಕ್ತಿಕ ಸಮಸ್ಯೆಗಳನ್ನು ಅನುಭವಿಸಿ, ಬಹಳ ನಿರುತ್ತೇಜಿತನಾದನು. ಕಟ್ಟಕಡೆಗೆ ಅವನು ಒಂದು ಬೈಬಲ್ ಅಭ್ಯಾಸವನ್ನು ಸ್ವೀಕರಿಸಿದನು. ತನ್ನ ಪ್ರಥಮ ಜಿಲ್ಲಾ ಅಧಿವೇಶನಕ್ಕೆ ಹಾಜರಾದಾಗ, ವಿಭಿನ್ನ ಹಿನ್ನಲೆಗಳ ಜನರು ಶಾಂತಿ ಮತ್ತು ಸಾಮರಸ್ಯದಲ್ಲಿ ಜೊತೆಯಾಗಿ ಕೂಡಿಬರುವುದನ್ನು ನೋಡಿ ಪ್ರಭಾವಿತನಾದನು. ತನಗೆ ಸತ್ಯವು ಸಿಕ್ಕಿದೆಯೆಂದು ಅವನಿಗೆ ಮನವರಿಕೆಯಾಯಿತು, ಮತ್ತು ಆ ಅಧಿವೇಶನದ ಸಮಯದಲ್ಲಿ ಅವನು ತನ್ನ ಎಲ್ಲ ರಾಜಕೀಯ ಸಂಬಂಧಗಳನ್ನು ಕಡಿದುಹಾಕಲು ನಿರ್ಣಯಿಸಿದನು. ತದನಂತರ ಅವನು ದೀಕ್ಷಾಸ್ನಾನ ಪಡೆದುಕೊಂಡನು, ಮತ್ತು ಈಗ ಅವನು ಮತ್ತು ಅವನ ಮಕ್ಕಳು ಯೆಹೋವನನ್ನು ಸೇವಿಸುತ್ತಿದ್ದಾರೆ.
16 ಈ ವರ್ಷದ ಅಧಿವೇಶನಗಳಲ್ಲಿನ ನಮ್ಮ ನಡತೆಯು, ಪ್ರಥಮ ಬಾರಿ ಹಾಜರಾಗುತ್ತಿರುವವರನ್ನು ಹೇಗೆ ಪ್ರಭಾವಿಸುವುದು? ನಾವು ಸ್ವಯಂಸೇವಕರಾಗಿ ಜೊತೆಯಾಗಿ ಕೆಲಸಮಾಡುತ್ತಿರುವಾಗ ಎದ್ದುಕಾಣುವ ಸಹಕಾರದ ಆತ್ಮವನ್ನು ಅವರು ಗಮನಿಸುವರೊ? ನಮ್ಮ ಪರಿಸರದ ಶುಚಿತ್ವದಿಂದ ಮತ್ತು ಅಧಿವೇಶನದ ಸ್ಥಳವನ್ನು ಬಿಟ್ಟುಹೋಗುವ ಮುಂಚೆ, ನಾವು ಮತ್ತು ನಮ್ಮ ಮಕ್ಕಳು ನಮ್ಮ ಆಸನಗಳ ಬಳಿ ಶೇಖರವಾಗಿರುವ ಯಾವುದೇ ಕಸವನ್ನು ಎತ್ತುವುದನ್ನು ನೋಡುವುದರಿಂದ ಅವರು ಪ್ರಭಾವಿತರಾಗುವರೊ? ಅಧಿವೇಶನದ ಸ್ಥಳಕ್ಕೆ ನಾವು ಹೋಗಿಬರುತ್ತಿರುವಾಗ ನಾವು ಪ್ರದರ್ಶಿಸುವ ಉತ್ತಮ ನಡತೆಯನ್ನು ಅವರು ಗಮನಿಸುವರೊ? ಹೆತ್ತವರೋಪಾದಿ, ನಾವು ಎಲ್ಲ ಸಮಯದಲ್ಲೂ ನಮ್ಮ ಮಕ್ಕಳ ಮೇಲೆ ನಿಗಾವಹಿಸುತ್ತಿರುವುದನ್ನು ಅವರು ಗಮನಿಸುವರೊ? ನಮ್ಮನ್ನು ಗಮನಿಸುವವರೆಲ್ಲರ ಮೇಲೆ ಸಾಧ್ಯವಿರುವಷ್ಟು ಅತ್ಯುತ್ತಮವಾದ ಅಭಿಪ್ರಾಯವನ್ನು ಮೂಡಿಸಲು ನಾವು ನಿಶ್ಚಿತರಾಗಿರೋಣ.
17 ಅಧಿವೇಶನದ ಖರ್ಚುಗಳನ್ನು ಭರಿಸುವುದು: ಒಂದು ಕ್ರೀಡಾಂಗಣದಲ್ಲಿ ಅಥವಾ ಸಭಾಂಗಣದಲ್ಲಿ, ಕ್ರೀಡಾ ಘಟನೆ ಅಥವಾ ಬೇರೆ ಯಾವುದೇ ಪ್ರದರ್ಶನಕ್ಕಾಗಿರುವ ಪ್ರವೇಶ ಟಿಕೇಟು, ಇಂದಿನ ಲೋಕದಲ್ಲಿ ದುಬಾರಿಯಾಗಿರಬಲ್ಲದು. ಇದು ಆಂಶಿಕವಾಗಿ, ಪ್ರಮುಖ ಕ್ಷೇತ್ರಗಳಲ್ಲಿನ ದುಬಾರಿ ಬಾಡಿಗೆ ದರಗಳಿಂದಾಗಿರುತ್ತದೆ. ಅಧಿವೇಶನಗಳಲ್ಲಿ ಸೊಸೈಟಿಯ ಕಾರ್ಯನೀತಿಯು ಯಾವಾಗಲೂ, “ಉಚಿತ ಆಸನಗಳು, ಯಾವುದೇ ವಂತಿಗೆಗಳು ಇಲ್ಲ” ಎಂದಾಗಿದೆ. ಹಾಗಾದರೆ, ಬಾಡಿಗೆಯ ಹಣ ಮತ್ತು ಅಧಿವೇಶನದ ಇತರ ಖರ್ಚುಗಳನ್ನು ಹೇಗೆ ಭರಿಸಲಾಗುತ್ತದೆ? ಹಾಜರಿರುವವರ ಉದಾರಭಾವದ ಕಾಣಿಕೆಗಳ ಮೂಲಕವೇ. ಯೆಹೋವ ದೇವರು ಮತ್ತು ಯೇಸು ಕ್ರಿಸ್ತನನ್ನು ಅನುಕರಿಸುತ್ತಾ, ಗತಕಾಲದಲ್ಲಿ ದೇವರ ಸೇವಕರಿಂದ ತೋರಿಸಲ್ಪಟ್ಟಿರುವ ಉದಾರ ಆತ್ಮವನ್ನು ನೀವು ತೋರಿಸುವಿರೆಂಬ ಖಾತರಿ ನಮಗಿದೆ. (2 ಕೊರಿಂ. 8:7) ಎಲ್ಲ ಕಾಣಿಕೆಗಳನ್ನು ಸುರಕ್ಷಿತವಾಗಿಡಲು, ಲೆಕ್ಕಮಾಡಲು, ಮತ್ತು ಗೊತ್ತುಮಾಡಲ್ಪಟ್ಟಿರುವ ಉದ್ದೇಶಕ್ಕಾಗಿಯೇ ಅವು ಬಳಸಲ್ಪಡುವುದನ್ನು ನೋಡಿಕೊಳ್ಳಲು ತುಂಬ ಕಾಳಜಿ ವಹಿಸಲಾಗುತ್ತದೆ. ಚೆಕ್ ಮೂಲಕ ಮಾಡಲ್ಪಡುವ ಯಾವುದೇ ಕಾಣಿಕೆಗಳು “ವಾಚ್ಟವರ್”ಗೆ ಕೊಡಲ್ಪಡಬೇಕು.
18 ಆಸನವ್ಯವಸ್ಥೆ: ಅನೇಕ ವರ್ಷಗಳಿಂದ ಕೊಡಲ್ಪಟ್ಟಿರುವ ನಿರ್ದೇಶನಗಳ ಅನ್ವಯವು ಮುಂದುವರಿಯುವುದು, ಅಂದರೆ, ನಿಮ್ಮ ಅತಿ ಸಮೀಪದ ಕುಟುಂಬ ಸದಸ್ಯರಿಗೆ ಮತ್ತು ನಿಮ್ಮ ಜೊತೆಯಲ್ಲಿ ಪ್ರಯಾಣಿಸುತ್ತಿರುವವರಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು. ಈ ವಿಷಯದಲ್ಲಿ ಮಾಡಲ್ಪಟ್ಟಿರುವ ಉತ್ತಮವಾದ ಸುಧಾರಣೆಯನ್ನು ನೋಡುವುದು ಉತ್ತೇಜನಕರವಾಗಿದೆ. ಮತ್ತು ಇದು ಅಧಿವೇಶನಗಳಲ್ಲಿ ತೋರಿಸಲ್ಪಡುವ ಪ್ರೀತಿಪರ ವಾತಾವರಣವನ್ನು ಹೆಚ್ಚಿಸಿದೆ. ಹೆಚ್ಚಿನ ನಿವೇಶನಗಳಲ್ಲಿ, ಕೆಲವು ಆಸನಗಳ ಬಳಿ ಹೋಗುವುದು ಹೆಚ್ಚು ಸುಲಭವಾಗಿರುತ್ತದೆ. ದಯವಿಟ್ಟು ಪರಿಗಣನೆಯನ್ನು ತೋರಿಸಿ, ವೃದ್ಧರಿಗಾಗಿ ಹಾಗೂ ಯಾರ ಆವಶ್ಯಕತೆಗಳು ಹೆಚ್ಚು ಅನುಕೂಲಕರವಾದ ಆಸನಗಳನ್ನು ಆವಶ್ಯಪಡಿಸುತ್ತವೊ ಅವರಿಗಾಗಿ ಅಂತಹ ಆಸನಗಳನ್ನು ಬಿಟ್ಟುಕೊಡಿರಿ. ‘ಪ್ರೀತಿಯು ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ’ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.—1 ಕೊರಿಂ. 13:4, 5; ಫಿಲಿ. 2:4.
19 ಕ್ಯಾಮರಾಗಳು, ಕ್ಯಾಮ್ಕಾರ್ಡರ್ಗಳು, ಮತ್ತು ಆಡಿಯೊ ಕ್ಯಾಸೆಟ್ ರೆಕಾರ್ಡರ್ಗಳು: ಕ್ಯಾಮರಾಗಳು ಮತ್ತು ರೆಕಾರ್ಡ್ಮಾಡುವ ಸಲಕರಣೆಯನ್ನು ಅಧಿವೇಶನಗಳಲ್ಲಿ ಉಪಯೋಗಿಸಬಹುದು. ಆದರೆ, ನೀವು ಅದನ್ನು ಉಪಯೋಗಿಸುವಾಗ, ಅದು ಇತರರನ್ನು ಅಪಕರ್ಷಿಸಬಾರದು. ಕಾರ್ಯಕ್ರಮಾವಧಿಗಳ ಸಮಯದಲ್ಲಿ ಫೋಟೋಗಳನ್ನು ತೆಗೆಯುತ್ತಾ ಸುತ್ತಾಡುವುದು, ಕಾರ್ಯಕ್ರಮದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತಿರುವವರಿಗೆ ತೊಂದರೆಯನ್ನು ಉಂಟುಮಾಡುವುದು. ಯಾವುದೇ ರೀತಿಯ ರೆಕಾರ್ಡಿಂಗ್ ಉಪಕರಣಗಳನ್ನು ಇಲೆಕ್ಟ್ರಿಕಲ್ ಅಥವಾ ಧ್ವನಿ ವ್ಯವಸ್ಥೆಗಳಿಗೆ ಜೋಡಿಸಬಾರದು, ಅಥವಾ ಆ ಸಲಕರಣೆಯು ಪಡಸಾಲೆಗಳನ್ನು, ದಾರಿಗಳನ್ನು ಅಡ್ಡಗಟ್ಟಬಾರದು ಅಥವಾ ಇತರರ ವೀಕ್ಷಣೆಗೆ ಅಡ್ಡಿಯನ್ನುಂಟುಮಾಡಬಾರದು.
20 ಪ್ರಥಮ ಚಿಕಿತ್ಸೆ: ಪ್ರಥಮ ಚಿಕಿತ್ಸೆ ಇಲಾಖೆಯು, ಕೇವಲ ತುರ್ತುಪರಿಸ್ಥಿತಿಗಳಿಗಾಗಿರುತ್ತದೆ. ದಯವಿಟ್ಟು ನಿಮ್ಮ ಸ್ವಂತ ಆ್ಯಸ್ಪಿರಿನ್, ಪಚನಕಾರಿ ಸಹಾಯಕಗಳು, ಬ್ಯಾಂಡೇಜುಗಳು, ಸೇಫ್ಟಿ ಪಿನ್ಗಳು, ಮತ್ತು ತದ್ರೀತಿಯ ಐಟಮ್ಗಳನ್ನು ತನ್ನಿರಿ, ಯಾಕಂದರೆ ಅಂತಹ ವಸ್ತುಗಳು ಅಧಿವೇಶನದಲ್ಲಿ ಲಭ್ಯವಿರುವುದಿಲ್ಲ. ಫಿಟ್ಸ್, ಇನ್ಸುಲಿನ್ ಶಾಕ್, ಹೃದಯದ ಸಮಸ್ಯೆಗಳೇ ಮುಂತಾದ ತೊಂದರೆಗಳಿವೆಯೆಂದು ತಿಳಿದಿರುವ ಯಾರಾದರೂ, ತಮ್ಮೊಂದಿಗೆ ಅವುಗಳಿಗೆ ಆವಶ್ಯಕವಾದ ಔಷಧವನ್ನು ತರಬೇಕು. ಅವರ ಪರಿಸ್ಥಿತಿಯನ್ನು ತಿಳಿದಿರುವ ಮತ್ತು ಒಂದು ತುರ್ತುಪರಿಸ್ಥಿತಿಯು ಏಳುವಲ್ಲಿ ಅವರನ್ನು ನೋಡಿಕೊಳ್ಳಬಹುದಾದ ತಮ್ಮ ಕುಟುಂಬದ ಸದಸ್ಯನೊಬ್ಬನು ಅಥವಾ ತಮ್ಮ ಸಭೆಯ ಸದಸ್ಯನೊಬ್ಬನು ಅವರೊಂದಿಗೆ ಇರಬೇಕು. ಅಸ್ಥಿಗತ ಆರೋಗ್ಯ ಸಮಸ್ಯೆಗಳಿದ್ದ ವ್ಯಕ್ತಿಗಳು ಒಂಟಿಗರಾಗಿ ಬಿಡಲ್ಪಟ್ಟು, ಅಸ್ವಸ್ಥರಾದಾಗ ಅಧಿವೇಶನಗಳಲ್ಲಿ ಸಮಸ್ಯೆಗಳು ಎದ್ದಿವೆ. ವಿಶೇಷ ಆರೋಗ್ಯ ಸಮಸ್ಯೆಗಳಿರುವ ಕೆಲವರಿಗೆ, ತಮಗೆ ನೆರವು ನೀಡಸಾಧ್ಯವಿರುವ ಕುಟುಂಬ ಸದಸ್ಯರು ಇಲ್ಲದಿದ್ದಲ್ಲಿ, ಅವರ ಸಭಾ ಹಿರಿಯರಿಗೆ ಪರಿಸ್ಥಿತಿಯ ಕುರಿತಾಗಿ ತಿಳಿಸುವ ಅಗತ್ಯವಿದೆ ಮತ್ತು ಅವರು ಸಹಾಯಮಾಡಲು ಅಗತ್ಯವಿರುವ ಏರ್ಪಾಡುಗಳನ್ನು ಮಾಡುವರು. ಪರಿಸರಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು ಅಥವಾ ಅಲರ್ಜಿಗಳಿರುವವರಿಗೆ, ಅಧಿವೇಶನಗಳಲ್ಲಿ ವಿಶೇಷವಾದ ಕೋಣೆಗಳ ಏರ್ಪಾಡುಗಳನ್ನು ಮಾಡುವುದು ಅಸಾಧ್ಯ.
21 ಅಧಿವೇಶನದಲ್ಲಿ ಆಹಾರ: ಹಾಜರಾಗುವ ಪ್ರತಿಯೊಬ್ಬ ವ್ಯಕ್ತಿಯು, ಮಧ್ಯಾಹ್ನದ ಅಲ್ಪಾವಧಿಯ ವಿರಾಮದಲ್ಲಿ ಆಹಾರವನ್ನು ಖರೀದಿಸಲಿಕ್ಕಾಗಿ ಹೊರಗೆ ಹೋಗುವ ಬದಲಿಗೆ, ತನ್ನ ಸ್ವಂತ ಆಹಾರವನ್ನು ತರಬೇಕು. ಪೌಷ್ಠಿಕರವಾದ ಮತ್ತು ಒಯ್ಯಲು ಸುಲಭವಾಗಿರುವ ಒಂದು ಲಘು ಉಪಾಹಾರವು ಸಾಕಾಗಬಹುದು. ಜುಲೈ 1995ರ ನಮ್ಮ ರಾಜ್ಯದ ಸೇವೆಯು, ಏನನ್ನು ತರಬಹುದು ಎಂಬುದಕ್ಕೆ ಕೆಲವು ಸೂಚನೆಗಳನ್ನು ಕೊಡುತ್ತದೆ. ಗಾಜಿನ ಕಂಟೇನರ್ಗಳು ಮತ್ತು ಮದ್ಯಪಾನೀಯಗಳನ್ನು ಅಧಿವೇಶನದ ಸೌಕರ್ಯಗಳೊಳಗೆ ತರಲು ಅನುಮತಿಸಲಾಗುವುದಿಲ್ಲ. ಆಹಾರದ ಕೂಲರ್ಗಳು ಅಥವಾ ಚೀಲಗಳು, ನಿಮ್ಮ ಆಸನದ ಕೆಳಗೆ ಇಡಲು ಸಾಧ್ಯವಾಗುವಷ್ಟು ಚಿಕ್ಕದ್ದಾಗಿರಬೇಕು. ಸಭಿಕರಲ್ಲಿ ಕೆಲವರು, ಕಾರ್ಯಕ್ರಮದ ಸಮಯದಲ್ಲಿ ತಿನ್ನುತ್ತಿರುವುದನ್ನು ಅಥವಾ ಕುಡಿಯುತ್ತಿರುವುದನ್ನು ಗಮನಿಸಲಾಗಿದೆ. ಇದು ಆ ಸಂದರ್ಭಕ್ಕಾಗಿ ಅಗೌರವವನ್ನು ತೋರಿಸುತ್ತದೆ.
22 1998ರ “ದೇವರ ಜೀವನ ಮಾರ್ಗ” ಅಧಿವೇಶನವು ಬೇಗನೆ ಆರಂಭವಾಗಲಿರುವುದರಿಂದ, ನಾವು ಎಷ್ಟು ಸಂತೋಷಿತರಾಗಿದ್ದೇವೆ! ಹಾಜರಾಗಲಿಕ್ಕಾಗಿ ಎಲ್ಲ ಏರ್ಪಾಡುಗಳನ್ನು ನೀವು ಮಾಡಿದ್ದೀರೊ? ನಿಮಗೆ ಒಂದು ಸುರಕ್ಷಿತ ಪ್ರಯಾಣವಿರಲಿ ಮತ್ತು ನೀವು ಮನೆಗೆ ಹಿಂದಿರುಗುವಾಗ, ಚೈತನ್ಯಗೊಳಿಸಲ್ಪಟ್ಟವರೂ, ಯೆಹೋವನ ಅಮೂಲ್ಯ ಸೇವೆಯಲ್ಲಿ ಮುಂದೊತ್ತಲು ಹಾಗೂ ನಿಮ್ಮ ನಿತ್ಯ ಆಶೀರ್ವಾದಕ್ಕಾಗಿ ದೇವರ ಜೀವನ ಮಾರ್ಗವನ್ನು ಬೆನ್ನಟ್ಟುತ್ತಾ ಇರಲು ದೃಢಮನಸ್ಸುಳ್ಳವರು ಆಗಿರುವಂತಾಗಲಿ.
[ಪುಟ 6ರಲ್ಲಿರುವಚೌಕ]
ಅಧಿವೇಶನದ ಮರುಜ್ಞಾಪನಗಳು
▪ ದೀಕ್ಷಾಸ್ನಾನ: ಶನಿವಾರ ಬೆಳಗ್ಗೆ ಕಾರ್ಯಕ್ರಮವು ಆರಂಭವಾಗುವ ಮುಂಚೆ, ದೀಕ್ಷಾಸ್ನಾನದ ಅಭ್ಯರ್ಥಿಗಳು ನಿರ್ದಿಷ್ಟವಾಗಿ ನಮೂದಿಸಲ್ಪಟ್ಟ ವಿಭಾಗದಲ್ಲಿ ಕುಳಿತುಕೊಂಡಿರತಕ್ಕದ್ದು. ದೀಕ್ಷಾಸ್ನಾನ ಪಡೆದುಕೊಳ್ಳಲು ಯೋಜಿಸುವ ಪ್ರತಿಯೊಬ್ಬರು ಸಭ್ಯವಾದ ಒಂದು ಸ್ನಾನದ ಉಡುಪು ಮತ್ತು ಒಂದು ಟವಲನ್ನು ತರತಕ್ಕದ್ದು. ಈ ಹಿಂದೆ ಕೆಲವರು ಅಯೋಗ್ಯವಾದ ಉಡುಗೆಯನ್ನು ತೊಟ್ಟುಕೊಂಡಿದ್ದಾರೆ ಮತ್ತು ಅದು ಸಂದರ್ಭದ ಮಹತ್ವವನ್ನು ಕುಂದಿಸಿತು. ದೀಕ್ಷಾಸ್ನಾನದ ಅಭ್ಯರ್ಥಿಗಳೊಂದಿಗೆ ನಮ್ಮ ಶುಶ್ರೂಷೆ ಪುಸ್ತಕದಿಂದ ಪ್ರಶ್ನೆಗಳನ್ನು ಪುನರ್ವಿಮರ್ಶಿಸುವ ಸಭಾ ಹಿರಿಯರು, ಪ್ರತಿಯೊಬ್ಬನಿಗೂ ಈ ಅಂಶಗಳು ಅರ್ಥವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಬ್ಬನ ಸಮರ್ಪಣೆಯ ಚಿಹ್ನೆಯಾಗಿರುವ ದೀಕ್ಷಾಸ್ನಾನವು, ಯೆಹೋವನ ಮತ್ತು ಆ ವ್ಯಕ್ತಿಯ ನಡುವಿನ ಒಂದು ಆಪ್ತ ಮತ್ತು ವೈಯಕ್ತಿಕವಾದ ವಿಷಯವಾಗಿದೆ. ಹೀಗಿರುವುದರಿಂದ ಅಭ್ಯರ್ಥಿಗಳು ದೀಕ್ಷಾಸ್ನಾನ ಪಡೆದುಕೊಳ್ಳುವಾಗ, ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದು ಅಥವಾ ಕೈಗಳನ್ನು ಹಿಡಿದುಕೊಳ್ಳುವುದು ಅನುಚಿತವಾಗಿದೆ.
▪ ಬ್ಯಾಡ್ಜ್ ಕಾರ್ಡ್ಗಳು: ಅಧಿವೇಶನ ನಗರದಲ್ಲಿ ಮತ್ತು ಅಧಿವೇಶನದ ಸ್ಥಳಕ್ಕೆ ಹೋಗುವಾಗ ಮತ್ತು ಹಿಂದಿರುಗಿ ಪ್ರಯಾಣಿಸುವಾಗ, 1998ರ ಬ್ಯಾಡ್ಜ್ ಕಾರ್ಡನ್ನು ದಯವಿಟ್ಟು ಎಲ್ಲ ಸಮಯದಲ್ಲಿ ಧರಿಸಿಕೊಂಡಿರಿ. ಇದು ಅನೇಕವೇಳೆ ನಮಗೆ ಒಂದು ಉತ್ತಮ ಸಾಕ್ಷಿಯನ್ನು ನೀಡಲು ಅವಕಾಶಗಳನ್ನು ಒದಗಿಸುತ್ತದೆ. ಬ್ಯಾಡ್ಜ್ ಕಾರ್ಡುಗಳು ಮತ್ತು ಹೋಲ್ಡರುಗಳು ಅಧಿವೇಶನದಲ್ಲಿ ಲಭ್ಯವಿರುವುದಿಲ್ಲ. ಅದುದರಿಂದ ಅವುಗಳನ್ನು ನಿಮ್ಮ ಸಭೆಯ ಮುಖಾಂತರವೇ ಪಡೆಯತಕ್ಕದ್ದು. ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಕಾರ್ಡುಗಳನ್ನು ಕೇಳಲಿಕ್ಕಾಗಿ, ಅಧಿವೇಶನಕ್ಕೆ ಇನ್ನೇನು ಕೆಲವೇ ದಿನಗಳಿರುವ ತನಕ ಕಾಯಬೇಡಿರಿ. ನಿಮ್ಮ ಪ್ರಸ್ತುತ ಮೆಡಿಕಲ್ ಡಿರೆಕ್ಟಿವ್/ರಿಲೀಸ್ ಕಾರ್ಡನ್ನು ಕೊಂಡೊಯ್ಯಲು ನೆನಪಿಡಿರಿ.
▪ ರೂಮಿಂಗ್: ಈ ಸಂಬಂಧದಲ್ಲಿ ಒಂದು ಸಮಸ್ಯೆಯನ್ನು ನೀವು ಎದುರಿಸುವುದಾದರೆ, ನಿಮಗೆ ಸಹಾಯ ಮಾಡಲು ಸಾಧ್ಯವಾಗುವಂತೆ ಆ ವಿಷಯವನ್ನು ಕೂಡಲೇ ಪರಿಹರಿಸಲಿಕ್ಕಾಗಿ ಅಧಿವೇಶನದ ರೂಮಿಂಗ್ ಇಲಾಖೆಯವರ ಗಮನಕ್ಕೆ ತರಲು ದಯವಿಟ್ಟು ಹಿಂಜರಿಯದಿರಿ. ನೀವು ಇನ್ನೂ ಅಧಿವೇಶನದಲ್ಲಿ ಇರುವಾಗಲೇ, ಇದನ್ನು ಮಾಡಿರಿ. ಪ್ರತಿಯೊಂದು ಸಭೆಯ ಸೆಕ್ರಿಟರಿಯು, ರೂಮ್ ವಿನಂತಿ ಫಾರ್ಮ್ಗಳನ್ನು ತಡವಿಲ್ಲದೆ ಸೂಕ್ತವಾದ ಅಧಿವೇಶನದ ಮುಖ್ಯಕಾರ್ಯಾಲಯ ವಿಳಾಸಕ್ಕೆ ಸರಿಯಾಗಿ ಕಳುಹಿಸಬೇಕು. ವಸತಿ ಸೌಕರ್ಯವನ್ನು ನೀವು ರದ್ದುಮಾಡಬೇಕಾಗಿದ್ದಲ್ಲಿ, ಕೋಣೆಯನ್ನು ಪುನಃ ನೇಮಿಸಸಾಧ್ಯವಾಗುವಂತೆ ದಯವಿಟ್ಟು ಕೂಡಲೇ ಅಧಿವೇಶನದ ರೂಮಿಂಗ್ ಇಲಾಖೆಗೆ ಅದನ್ನು ತಿಳಿಸಿರಿ.
▪ ಸ್ವಯಂ ಸೇವೆ: ಅಧಿವೇಶನದ ಇಲಾಖೆಗಳಲ್ಲೊಂದರಲ್ಲಿ ನೆರವು ನೀಡಲಿಕ್ಕಾಗಿ ನೀವು ಸ್ವಲ್ಪ ಸಮಯವನ್ನು ಬದಿಗಿರಿಸಬಲ್ಲಿರೊ? ಕೇವಲ ಕೆಲವೊಂದು ತಾಸುಗಳ ಮಟ್ಟಿಗಾದರೂ, ನಮ್ಮ ಸಹೋದರರ ಸೇವೆ ಮಾಡುವುದು ತುಂಬ ಸಹಾಯಕಾರಿಯಾಗಿರಸಾಧ್ಯವಿದೆ ಮತ್ತು ವೈಯಕ್ತಿಕ ಸಂತೃಪ್ತಿಯನ್ನು ತರುತ್ತದೆ. ನೀವು ಸಹಾಯ ಮಾಡಬಲ್ಲಿರಾದರೆ, ಅಧಿವೇಶನದ ಸ್ವಯಂ ಸೇವಕರ ಇಲಾಖೆಗೆ ದಯವಿಟ್ಟು ವರದಿಮಾಡಿರಿ. 16 ವರ್ಷ ಪ್ರಾಯಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ಸಹ, ಹೆತ್ತವರೊಬ್ಬರ ಅಥವಾ ಇತರ ಜವಾಬ್ದಾರ ವಯಸ್ಕನ ಮಾರ್ಗದರ್ಶನದ ಕೆಳಗೆ ಕೆಲಸಮಾಡುವ ಮೂಲಕ ಉತ್ತಮ ನೆರವನ್ನು ನೀಡಬಲ್ಲರು.
▪ ಎಚ್ಚರಿಕೆಯ ಮಾತುಗಳು: ನಿಮ್ಮ ವಾಹನಕ್ಕೆ ಎಲ್ಲ ಸಮಯದಲ್ಲಿ ಬೀಗಹಾಕಲ್ಪಟ್ಟಿರುವುದನ್ನು ಖಚಿತಪಡಿಸಿಕೊಳ್ಳಿರಿ, ಮತ್ತು ಯಾರಾದರೂ ಕದಿಯುವಂತೆ ಪ್ರಲೋಭಿಸುವ ಯಾವುದೇ ವಸ್ತುವನ್ನು ದೃಷ್ಟಿಗೆಬೀಳುವಂತಹ ಸ್ಥಳದಲ್ಲಿ ಇಡಬೇಡಿರಿ. ಕಳ್ಳರು ಮತ್ತು ಜೇಬುಗಳ್ಳರು ದೊಡ್ಡ ಒಟ್ಟುಗೂಡುವಿಕೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ನಿಮ್ಮ ಆಸನಗಳ ಮೇಲೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ಬಿಡುವುದು ವಿವೇಕವುಳ್ಳದ್ದಾಗಿರುವುದಿಲ್ಲ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬನೂ ಒಬ್ಬ ಕ್ರೈಸ್ತನಾಗಿದ್ದಾನೆಂದು ನೀವು ಖಚಿತರಾಗಿರಸಾಧ್ಯವಿಲ್ಲ. ಯಾವುದೇ ದುಷ್ಪ್ರೇರಣೆಗೆ ಯಾಕೆ ಅವಕಾಶ ಕೊಡಬೇಕು? ಮಕ್ಕಳನ್ನು ಆಕರ್ಷಿಸಲಿಕ್ಕಾಗಿ ಹೊರಗಿನ ಕೆಲವು ವ್ಯಕ್ತಿಗಳಿಂದ ಮಾಡಲ್ಪಟ್ಟ ಪ್ರಯತ್ನಗಳ ಕುರಿತು ವರದಿಗಳು ಬಂದಿವೆ. ಎಲ್ಲ ಸಮಯಗಳಲ್ಲಿ ನಿಮ್ಮ ಮಕ್ಕಳ ಮೇಲೆ ನಿಗಾವಹಿಸಿರಿ.
ಕೆಲವು ಹೋಟೇಲುಗಳಲ್ಲಿ ಲಭ್ಯವಿರುವ ಟೆಲಿವಿಷನ್ ಮತ್ತು ವಿಡಿಯೊ ಸೌಕರ್ಯಗಳು, ತುಚ್ಛವಾದ, ಲಂಪಟವರ್ಣನೆಯ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತವೆ. ಕೋಣೆಯಲ್ಲಿ ಮೇಲ್ವಿಚಾರಣೆಯಿಲ್ಲದೆ ಟಿವಿಯನ್ನು ಉಪಯೋಗಿಸುವಂತೆ ಮಕ್ಕಳನ್ನು ಅನುಮತಿಸಬೇಡಿ.
ಅಧಿವೇಶನದ ಯಾವುದೇ ವಿಷಯಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲಿಕ್ಕಾಗಿ, ಅಧಿವೇಶನದ ಸಭಾಂಗಣದ ನಿರ್ವಾಹಕ ಮಂಡಲಿಗೆ ದಯವಿಟ್ಟು ಫೋನ್ ಮಾಡಬೇಡಿ ಅಥವಾ ಪತ್ರ ಬರೆಯಬೇಡಿ. ಮಾಹಿತಿಯು ಹಿರಿಯರಿಂದ ದೊರಕದಿರುವುದಾದರೆ, ದಯವಿಟ್ಟು ಮೇ 1998ರ ನಮ್ಮ ರಾಜ್ಯದ ಸೇವೆಯ 5ನೆಯ ಪುಟದಲ್ಲಿ ಕಂಡುಬರುವ, ನಿರ್ದಿಷ್ಟ ಅಧಿವೇಶನವೊಂದರ ವಿಳಾಸಕ್ಕೆ ನೀವು ಬರೆಯಬಹುದು. ನೀವು ಕೊಯಮತ್ತೂರು ಅಥವಾ ಮದುರೈ ಅಧಿವೇಶನಗಳನ್ನು ಹಾಜರಾಗಲು ಯೋಜಿಸುತ್ತಿರುವುದಾದರೆ, ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ 7ನೆಯ ಪುಟದಲ್ಲಿ, ಅಧಿವೇಶನದ ಮುಖ್ಯಕಾರ್ಯಾಲಯಗಳ ವಿಳಾಸಗಳು ಕೊಡಲ್ಪಟ್ಟಿವೆ.