ರಾಜ್ಯ ಸಭಾಗೃಹ ನಿರ್ಮಾಣಕ್ಕಾಗಿರುವ ಅಗತ್ಯದೊಂದಿಗೆ ಸಮಗತಿಯಲ್ಲಿರುವುದು
1 ಲೋಕವ್ಯಾಪಕವಾಗಿರುವ ಕ್ಷೇತ್ರದ ಕಡೆಗೆ ನಾವು ನೋಡುವಾಗ, ಯೆಹೋವನ ಭೂಸಂಸ್ಥೆಯಿಂದ ಅನುಭವಿಸಲ್ಪಡುತ್ತಿರುವ ಭಾರಿ ಹೆಚ್ಚಳವನ್ನು ನೋಡುವುದು ಹೃದಯೋಲ್ಲಾಸ ತರುವಂತಹದ್ದಾಗಿದೆ. ಕಳೆದ ವರ್ಷ, ಭಾರತವೊಂದರಲ್ಲಿಯೇ ಸುಮಾರು 25 ಹೊಸ ಸಭೆಗಳು ರಚಿಸಲ್ಪಟ್ಟವು, ಅದೇ ಸಮಯದಲ್ಲಿ ಲೋಕವ್ಯಾಪಕವಾಗಿ ಒಟ್ಟು 3,288 ಸಭೆಗಳು ಕೂಡಿಸಲ್ಪಟ್ಟವು. ಈ ಎಲ್ಲ ಅಭಿವೃದ್ಧಿಯೊಂದಿಗೆ, ಹೆಚ್ಚು ರಾಜ್ಯ ಸಭಾಗೃಹಗಳ ಅಗತ್ಯವಿದೆ ಎಂಬುದು ಆಶ್ಚರ್ಯಕರವಾದ ವಿಷಯವೇನೂ ಅಲ್ಲ.
2 ರೀಜನಲ್ ಬಿಲ್ಡಿಂಗ್ ಕಮಿಟಿಗಳು: ರಾಜ್ಯ ಸಭಾಗೃಹ ನಿರ್ಮಾಣ ಕಾರ್ಯಕ್ರಮದ ವೇಗವನ್ನು ಹೆಚ್ಚಿಸುವ ಒಂದು ಮಾಧ್ಯಮದೋಪಾದಿ, ಈಗ ಸೊಸೈಟಿಯು ಎರಡು ರೀಜನಲ್ ಬಿಲ್ಡಿಂಗ್ ಕಮಿಟಿಗಳನ್ನು ನೇಮಿಸಿದೆ. ಒಂದು ತಮಿಳುನಾಡು ಸರ್ಕಿಟ್ಗಳಲ್ಲಿನ ಸಭೆಗಳಿಗೆ ನೆರವನ್ನೀಯಲಿಕ್ಕಾಗಿ, ಮತ್ತು ಇನ್ನೊಂದು ಕೇರಳ ಸರ್ಕಿಟ್ಗಳಲ್ಲಿರುವ ಸಭೆಗಳಿಗೆ ನೆರವನ್ನೀಯಲಿಕ್ಕಾಗಿಯೇ. ಈ ಎರಡು ರೀಜನಲ್ ಕಮಿಟಿಗಳಿಗೆ, ರಾಜ್ಯ ಸಭಾಗೃಹ ಕಾರ್ಯಯೋಜನೆಗಳ—ಹೊಸ ಕಟ್ಟಡಗಳ ಕಾರ್ಯಯೋಜನೆಯೇ ಆಗಲಿ ನವೀಕರಣ ಯೋಜನೆಯೇ ಆಗಲಿ—ಮೇಲ್ವಿಚಾರಣೆಯ ಕೆಲಸವು ವಹಿಸಲ್ಪಟ್ಟಿದೆ. ರಾಜ್ಯ ಸಭಾಗೃಹ ನಿರ್ಮಾಣಕ್ಕಾಗಿರುವ ಇಡೀ ಏರ್ಪಾಡು, ಲೋಕದಲ್ಲಿ ತೀರ ಸಾಮಾನ್ಯವಾಗಿ ತೋರಿಸಲ್ಪಡುವ ಮನೋಭಾವಕ್ಕೆ ವಿರುದ್ಧವಾಗಿರುವ, ಕೊಡುವಿಕೆ ಹಾಗೂ ಸ್ವತ್ಯಾಗದ ಕ್ರೈಸ್ತ ಮನೋಭಾವದ ಮೂಲಕ ಪೂರೈಸಲ್ಪಡುತ್ತದೆ.—2 ತಿಮೊ. 3:2, 4.
3 ನಿರ್ಮಾಣ ಯೋಜನೆಗಳನ್ನು ಪುನರ್ವಿಮರ್ಶಿಸುವುದರಲ್ಲಿ ನೆರವು ನೀಡಲಿಕ್ಕಾಗಿ, ಸೊಸೈಟಿಯು ರೀಜನಲ್ ಕಮಿಟಿಗಳಿಗೆ ಮಾರ್ಗದರ್ಶನೆಗಳನ್ನು ಒದಗಿಸಿದೆ. ಹೀಗೆ, ಸಾಧಾರಣ ರೀತಿಯ ಹಾಗೂ ಕಾರ್ಯಾತ್ಮಕವಾದ ಮತ್ತು ಸಮರ್ಪಿತ ಸಂಪನ್ಮೂಲಗಳನ್ನು ವಿವೇಕಯುತವಾಗಿ ಉಪಯೋಗಿಸುವ ಒಂದು ರಾಜ್ಯ ಸಭಾಗೃಹವನ್ನು ಯೋಜಿಸುವ ವಿಷಯದಲ್ಲಿ ಸ್ಥಳಿಕ ಹಿರಿಯರಿಗೆ ಸಹಾಯ ಮಾಡಲಿಕ್ಕಾಗಿ ಈ ಕಮಿಟಿಗಳು ಸಜ್ಜುಗೊಳಿಸಲ್ಪಟ್ಟಿವೆ. ರೀಜನಲ್ ಬಿಲ್ಡಿಂಗ್ ಕಮಿಟಿಗಳಲ್ಲಿ ಸೇವೆಸಲ್ಲಿಸಲು ನೇಮಕವಾಗಿರುವ ಅನುಭವಸ್ಥ ಹಿರಿಯರ ಅವಲೋಕನಗಳಿಂದ ಸಂಪೂರ್ಣವಾಗಿ ಪ್ರಯೋಜನಪಡೆದುಕೊಳ್ಳುತ್ತಾ, ಹಿರಿಯರ ಮಂಡಲಿಗಳು ಎಲ್ಲ ಅಂಶಗಳನ್ನು ಜಾಗರೂಕತೆಯಿಂದ ತೂಗಿನೋಡುವುದು ಒಳಿತಾಗಿರುವುದು.—ಲೂಕ 14: 28-30.
4 ನಿರ್ಮಾಣ ವೆಚ್ಚಗಳನ್ನು ಕನಿಷ್ಠ ಪ್ರಮಾಣದಲ್ಲಿಡುವುದು: ಸ್ಥಳಿಕ ಸಭೆಗಾಗಿ, ಒಬ್ಬ ಸಮರ್ಥ ಹಿರಿಯನ ಮೇಲ್ವಿಚಾರಣೆಯ ಕೆಳಗೆ ಒಂದು ಖರೀದಿಸುವ ಇಲಾಖೆಯನ್ನು ಸಂಸ್ಥಾಪಿಸುವಂತೆ, ರೀಜನಲ್ ಬಿಲ್ಡಿಂಗ್ ಕಮಿಟಿಗಳು ನಿರ್ದೇಶಿಸಲ್ಪಟ್ಟಿವೆ. ಈ ಇಲಾಖೆಯಲ್ಲಿ ಕೆಲಸಮಾಡುತ್ತಿರುವ ಸಹೋದರರು, ಹೋಲಿಕೆ ಮಾಡಿ ಖರೀದಿಸುವಿಕೆ ಮತ್ತು ಸ್ಪರ್ಧಾತ್ಮಕ ಹರಾಜಿನ ಬೆಲೆಯ ಮೂಲಕ ಅನುಕೂಲಕರವಾದ ಬೆಲೆಗಳನ್ನು ಹುಡುಕುವ ಸಲುವಾಗಿ, ಲಭ್ಯವಿರುವ ಬೆಲೆಗಳನ್ನು ಶ್ರದ್ಧಾಪೂರ್ವಕವಾಗಿ ಅನ್ವೇಷಿಸುತ್ತಾರೆ. ಈ ರೀತಿಯಲ್ಲಿ, ಯಾವ ಸರಬರಾಜುದಾರರನ್ನು ಉಪಯೋಗಿಸಬೇಕು ಹಾಗೂ ಯಾವ ಸಾಮಗ್ರಿಗಳನ್ನು ಖರೀದಿಸಬೇಕು ಎಂಬ ವಿಷಯದಲ್ಲಿ ಒಂದು ನಿರ್ಧಾರವನ್ನು ಮಾಡಸಾಧ್ಯವಿದೆ.
5 ತಮ್ಮ ರಾಜ್ಯ ಸಭಾಗೃಹ ಕಾರ್ಯಯೋಜನೆಯನ್ನು ಪೂರ್ಣಗೊಳಿಸಲಿಕ್ಕಾಗಿ ಕೆಲವು ಸಭೆಗಳಿಗೆ ಇನ್ನೂ ಹೆಚ್ಚಿನ ಹಣಕಾಸಿನ ಸಹಾಯದ ಅಗತ್ಯವಿರುತ್ತದೆ. ಸೊಸೈಟಿಯಿಂದ ಮುಂಗಡ ಹಣವನ್ನು ಕೇಳಿಕೊಳ್ಳುವ ಮೊದಲು, (1) ಪ್ರಸ್ತುತ ಅಗತ್ಯಗಳು ಹಾಗೂ ಭವಿಷ್ಯತ್ತಿನ ಬೆಳವಣಿಗೆಗೆ ಸ್ಥಳಾವಕಾಶವನ್ನು ಒದಗಿಸುವಷ್ಟು ದೊಡ್ಡದಾಗಿರುವ ಆಸ್ತಿಯ ಖರೀದಿ ಹಾಗೂ ನಿರ್ಮಾಣ ವೆಚ್ಚಗಳಿಗೆ ನೆರವನ್ನೀಯಲಿಕ್ಕಾಗಿ ಆರಂಭದಲ್ಲಿ ಎಷ್ಟು ಹಣವನ್ನು ಕಾಣಿಕೆಯಾಗಿ ನೀಡುವುದು, (2) ಒಳಗೂಡಿರುವ ಸಭೆಯೊಂದಿಗೆ ಸಹವಾಸಿಸುತ್ತಿರುವವರಿಂದ ಸ್ಥಳಿಕವಾಗಿ ಎಷ್ಟು ಹಣವನ್ನು ಕಡವಾಗಿ ತೆಗೆದುಕೊಳ್ಳಸಾಧ್ಯವಿದೆ, ಮತ್ತು (3) ಸಭಾ ಕಾರ್ಯಾಚರಣೆಯ ಖರ್ಚುಗಳನ್ನು ಭರ್ತಿಮಾಡಲು ಹಾಗೂ ಸೊಸೈಟಿಯಿಂದ ಪಡೆದುಕೊಂಡಿರುವಂತಹ ಯಾವುದೇ ಮುಂಗಡ ಹಣವನ್ನು ಹಿಂದಿರುಗಿಸಲು, ತಿಂಗಳಿಗೆ ಎಷ್ಟು ಹಣವನ್ನು ಕಾಣಿಕೆಯಾಗಿ ಕೊಡುವುದು ಎಂಬ ವಿಷಯಗಳನ್ನು ನಿರ್ಧರಿಸಲಿಕ್ಕಾಗಿ, ಹಿರಿಯರು ಸ್ಥಳಿಕವಾಗಿ ಒಂದು ಸಮೀಕ್ಷೆಯನ್ನು ನಡೆಸಬೇಕು. ಈ ಸಮೀಕ್ಷೆಯು ನಡೆಸಲ್ಪಡುವಾಗ, ಅದರಲ್ಲಿ ಒಳಗೂಡಿರುವವರ ಹೆಸರುಗಳನ್ನು ಸ್ಲಿಪ್ಗಳ ಮೇಲೆ ನಮೂದಿಸಬಾರದು.
6 ರಾಜ್ಯ ಸಭಾಗೃಹದ ವಿನ್ಯಾಸವನ್ನು ಸರಳವಾಗಿಡಿರಿ: ರಾಜ್ಯ ಸಭಾಗೃಹಗಳನ್ನು ಪ್ರಮಾಣೀಕರಿಸುವುದರಲ್ಲಿ ನೆರವು ನೀಡಲಿಕ್ಕಾಗಿ, 100, 150 ಮತ್ತು 250 ವ್ಯಕ್ತಿಗಳಿಗೆ ಆಸನ ವ್ಯವಸ್ಥೆಯನ್ನು ಒದಗಿಸುವ, ಮೂರು ದರ್ಜೆಯ ರಾಜ್ಯ ಸಭಾಗೃಹ ವಿನ್ಯಾಸಗಳು ಸೊಸೈಟಿಯ ಬಳಿ ಇವೆ. ಭವಿಷ್ಯತ್ತಿನ ಬೆಳವಣಿಗೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದು, ಆ ಆವಶ್ಯಕತೆಯನ್ನು ಪೂರೈಸಲಿಕ್ಕಾಗಿ, ಸ್ನೇಹಿತರ ಮೇಲಾಗಲಿ ಇಲ್ಲವೆ ಸೊಸೈಟಿಯ ರಾಜ್ಯ ಸಭಾಗೃಹ ನಿಧಿಯ ಸಂಪನ್ಮೂಲಗಳ ಮೇಲಾಗಲಿ ಅನಗತ್ಯವಾದ ಹೊರೆಯನ್ನು ಹೊರಿಸದೆ, ಹಿರಿಯರು ಈ ಮೂಲಭೂತ ವಿನ್ಯಾಸಗಳಿಂದ ತಮ್ಮ ಆಯ್ಕೆಯನ್ನು ಮಾಡಸಾಧ್ಯವಿದೆ.
7 ಒಂದು ವಿನ್ಯಾಸವನ್ನು ಆರಿಸಿಕೊಳ್ಳುವುದಕ್ಕೆ ಮೊದಲು, ಸಭಾ ಹಿರಿಯರು ರೀಜನಲ್ ಕಮಿಟಿಯನ್ನು ಸಂಪರ್ಕಿಸಿ, ಸೊಸೈಟಿಯು ಒದಗಿಸಿರುವ ಯೋಜನೆಗಳನ್ನು ಒಂದು ಮಾರ್ಗದರ್ಶಿಯಾಗಿ ಉಪಯೋಗಿಸುತ್ತಾ, ಆ ಕಟ್ಟಡದ ಇಡೀ ರಚನೆಯನ್ನು ಚರ್ಚಿಸಬೇಕು. ಎಲ್ಲಿ ಇದುವರೆಗೆ ರೀಜನಲ್ ಬಿಲ್ಡಿಂಗ್ ಕಮಿಟಿಯು ಇನ್ನೂ ನೇಮಿಸಲ್ಪಟ್ಟಿಲ್ಲವೋ ಅಲ್ಲಿ, ತಮ್ಮ ರಾಜ್ಯ ಸಭಾಗೃಹ ಕಾರ್ಯಯೋಜನೆಯ ವಿಷಯದಲ್ಲಿ ಯಾವುದೇ ಹೆಜ್ಜೆಗಳನ್ನು ತೆಗೆದುಕೊಳ್ಳುವ ಮುಂಚೆ, ಹಿರಿಯರು ಸೊಸೈಟಿಯನ್ನು ಸಂಪರ್ಕಿಸಬೇಕು.
8 ಸ್ವಯಂಸೇವಕರು ಒಂದು ಒಳ್ಳೆಯ ಕೆಲಸಕ್ಕೆ ಬೆಂಬಲ ಕೊಡುತ್ತಾರೆ: ರಾಜ್ಯ ಸಭಾಗೃಹ ನಿರ್ಮಾಣ ಕಾರ್ಯದಲ್ಲಿ ಸಹಾಯ ಮಾಡುವ ಅನೇಕ ಸ್ವಯಂಸೇವಕರಿಗೆ ಸೊಸೈಟಿಯು ಆಭಾರಿಯಾಗಿದೆ. ಆದರೂ, ಇನ್ನೂ ಅನೇಕ ಸ್ವಯಂಸೇವಕರು ಬೇಕಾಗಿದ್ದಾರೆ ಎಂದು ರೀಜನಲ್ ಬಿಲ್ಡಿಂಗ್ ಕಮಿಟಿಗಳು ವರದಿಸುತ್ತವೆ. ರಾಜ್ಯಾಭಿರುಚಿಗಳ ಬೆಂಬಲಿಸುವಿಕೆಯಲ್ಲಿ ಇದು ಅತ್ಯಗತ್ಯವಾದ ಸೇವೆಯಾಗಿದೆ.—1 ಕೊರಿಂ. 15:58.
9 ಒಬ್ಬನು ಹೇಗೆ ಸ್ವಯಂಸೇವೆಗೆ ನೀಡಿಕೊಳ್ಳುತ್ತಾನೆ? ವಿನಂತಿಯ ಮೇರೆಗೆ ಸೊಸೈಟಿಯು ಹಿರಿಯರಿಗೆ ರಾಜ್ಯ ಸಭಾಗೃಹ ನಿರ್ಮಾಣ ಕೆಲಸಗಾರರ ಪ್ರಶ್ನಾವಳಿಯ ಸರಬರಾಯಿಯನ್ನು ಒದಗಿಸುತ್ತದೆ. ತದನಂತರ ಈ ಫಾರ್ಮ್ಗಳು ಅರ್ಹ ಕೆಲಸಗಾರರಿಗೆ ದೊರಕುವಂತೆ ಮಾಡಲ್ಪಡುತ್ತವೆ. ಸೂಕ್ತವಾದ ಕೌಶಲಗಳಿರುವ, ಸಭೆಯಲ್ಲಿ ಒಂದು ಒಳ್ಳೆಯ ನಿಲುವಿನಲ್ಲಿರುವ ದೀಕ್ಷಾಸ್ನಾನಿತ ಪ್ರಚಾರಕರು ಸ್ವಯಂಸೇವೆಗೆ ಉತ್ತೇಜಿಸಲ್ಪಡುತ್ತಾರೆ. ನಿರ್ಮಾಣ ಹಾಗೂ ನಿರ್ಮಾಣಕಾರ್ಯಕ್ಕೆ ಸಂಬಂಧಿಸದ ಕೌಶಲಗಳೂ ಅಗತ್ಯವಾಗಿವೆ. ತಮ್ಮ ಸಭೆಯಲ್ಲಿರುವ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಸೆಕ್ರಿಟರಿಯಿಂದ ಸ್ವಯಂಸೇವಕರು ಅಗತ್ಯವಾದ ಫಾರ್ಮ್ಗಳನ್ನು ಪಡೆದುಕೊಂಡು, ಕಸಬಿನವರೋಪಾದಿ ಅಥವಾ ಆಹಾರ ಇಲಾಖೆ, ಸುರಕ್ಷಣೆ, ಸಾಮಗ್ರಿಗಳ ನಿರ್ವಹಣೆ, ಅಕೌಂಟಿಂಗ್, ಹಾಗೂ ಕಾನೂನುಸಮ್ಮತವಾದ ಕಾಗದಪತ್ರಗಳನ್ನು ಅಂಗೀಕೃತವಾಗಿಸುವಂತಹ ಇನ್ನಿತರ ಕ್ಷೇತ್ರದಲ್ಲಿನ ತಮ್ಮ ಅನುಭವಗಳನ್ನು ಸೂಚಿಸಸಾಧ್ಯವಿದೆ.
10 ಹಾಗೂ, ಒಂದು ರಾಜ್ಯ ಸಭಾಗೃಹವು ಸಮೀಪದಲ್ಲಿಯೇ ಕಟ್ಟಲ್ಪಡುತ್ತಿರುವಾಗ, ನಿಮ್ಮ ಸಭೆಯಲ್ಲಿ ನಿರ್ಮಾಣ ಕೌಶಲಗಳಿರದ ಪ್ರಚಾರಕರು, ಸಾಮಾನ್ಯ ಕೆಲಸಗಾರರ ತಂಡದ ಭಾಗದೋಪಾದಿ ನೆರವನ್ನೀಯುವ ಅವಕಾಶವನ್ನು ಹೊಂದಿರಬಹುದು. ಈ ಕೆಲಸಗಾರರು ಸ್ವಯಂಸೇವಕರ ಪ್ರಶ್ನಾವಳಿಯನ್ನು ಭರ್ತಿಮಾಡುವುದಿಲ್ಲ. ಆವಶ್ಯಕತೆಯನ್ನು ತಿಳಿಸಲಾಗುತ್ತದೆ, ಮತ್ತು ನಿರ್ಮಾಣ ಕಾರ್ಯಯೋಜನೆಯಲ್ಲಿ ಒಳಗೂಡಿರುವ ಸಭೆಯಲ್ಲಿನ ಹಿರಿಯರ ಮೂಲಕವಾಗಿ ಹಾಗೂ ನೆರೆಹೊರೆಯಲ್ಲಿರುವ ಸಭೆಗಳಲ್ಲಿರುವ ಹಿರಿಯರ ಮೂಲಕವಾಗಿ ಏಕ-ಕಾಲಿಕ ಆಧಾರದ ಮೇಲೆ ಮಾತ್ರ ಏರ್ಪಾಡುಗಳು ಮಾಡಲ್ಪಡುತ್ತವೆ.
[ಪುಟ 4ರಲ್ಲಿರುವಚೌಕ]
ಒಂದು ರಾಜ್ಯ ಸಭಾಗೃಹವನ್ನು ಪಡೆದುಕೊಳ್ಳಲಿಕ್ಕಾಗಿರುವ ಹೆಜ್ಜೆಗಳು:
(1) ಕಾರ್ಯಯೋಜನೆಗಾಗಿ ಹಾಗೂ ಒಂದು ಸಭಾ ಟ್ರಸ್ಟನ್ನು ರಚಿಸಲಿಕ್ಕಾಗಿ ಟ್ರಸ್ಟಿಗಳನ್ನು ನೇಮಿಸಲಿಕ್ಕಾಗಿ ಸಭೆಯಿಂದ ಠರಾವು ಮಂಜೂರುಮಾಡಲ್ಪಡುತ್ತದೆ
(2) ಹಿರಿಯರ ಮಂಡಲಿಯು ಒಂದು ಸ್ಥಳಿಕ ಬಿಲ್ಡಿಂಗ್ ಕಮಿಟಿಯನ್ನು ನೇಮಿಸುತ್ತದೆ; ಅದರಲ್ಲಿ ಇಬ್ಬರು ಅಥವಾ ಮೂವರು ಹಿರಿಯರು ಸೇರಿದ್ದು, ವ್ಯಾಪಾರ/ಕಟ್ಟಡ ರಚನೆಯ ಅನುಭವವುಳ್ಳವರಿಗೆ ಆದ್ಯತೆಯಿದೆ
(3) ರಾಜ್ಯ ಸಭಾಗೃಹ ವಿನ್ಯಾಸದ ಆಯ್ಕೆಗಾಗಿ, ಸ್ಥಳಿಕ ಬಿಲ್ಡಿಂಗ್ ಕಮಿಟಿಯು, ರೀಜನಲ್ ಬಿಲ್ಡಿಂಗ್ ಕಮಿಟಿಯನ್ನು ಅಥವಾ ಸೊಸೈಟಿಯನ್ನು ಸಂಪರ್ಕಿಸುತ್ತದೆ
(4) ಆಯ್ಕೆಮಾಡಲ್ಪಟ್ಟ ವಿನ್ಯಾಸವನ್ನು ಸಮ್ಮತಿಸಲಿಕ್ಕಾಗಿ ಸೊಸೈಟಿಗೆ ಕಳುಹಿಸಲಾಗುತ್ತದೆ ಮತ್ತು ಮಂಜೂರಾತಿಗಾಗಿ ಸ್ಥಳಿಕ ಅಧಿಕಾರಿಗಳಿಗೆ ಒಪ್ಪಿಸಲಿಕ್ಕಾಗಿ ಅದು ಹಿಂದಿರುಗಿಸಲ್ಪಡುತ್ತದೆ
(5) ಕಾರ್ಯಯೋಜನೆಗಾಗಿ ಲಭ್ಯವಿರುವ ನಿಧಿಗಳನ್ನು ಹಿರಿಯರು ನಿರ್ಧರಿಸುತ್ತಾರೆ. (ನಿಮಗೆ ಹಣಕಾಸಿನ ಸಹಾಯದ ಅಗತ್ಯವಿರುವಲ್ಲಿ, ಸೊಸೈಟಿಗೆ ಬರೆಯಿರಿ)
(6) ಸ್ಥಳಿಕ ಬಿಲ್ಡಿಂಗ್ ಕಮಿಟಿಯು, ಅಧಿಕಾಂಶ ಪ್ರಚಾರಕರಿಗೆ ಮಧ್ಯಭಾಗದಲ್ಲಿರುವ ಆಸ್ತಿಯನ್ನು ನೋಡಿ, ಖರೀದಿಸಿ, ಅದನ್ನು ಟ್ರಸ್ಟ್ನ ಹೆಸರಿನಲ್ಲಿ ಅಧಿಕೃತವಾಗಿ ರೆಜಿಸ್ಟರ್ ಮಾಡುತ್ತದೆ
(7) ರಾಜ್ಯ ಸಭಾಗೃಹ ಕಾರ್ಯಯೋಜನೆಯನ್ನು ಪೂರ್ಣಗೊಳಿಸಲಿಕ್ಕಾಗಿ, ರೀಜನಲ್ ಬಿಲ್ಡಿಂಗ್ ಕಮಿಟಿ ಹಾಗೂ ಸ್ಥಳಿಕ ಬಿಲ್ಡಿಂಗ್ ಕಮಿಟಿಗಳು ಒಟ್ಟುಗೂಡಿ ಕಾರ್ಯನಡಿಸುತ್ತವೆ
[ಪುಟ 4ರಲ್ಲಿರುವಚೌಕ]
ಆಸ್ತಿಯ ತೀರ್ಮಾನವನ್ನು ಮಾಡಲಿಕ್ಕಾಗಿರುವ ತಾಳೆಪಟ್ಟಿ
ಒಂದು ಜಮೀನು (ಪ್ಲಾಟ್)
ಗಾತ್ರ (ಪ್ರಸ್ತುತ ಅಗತ್ಯ ಹಾಗೂ ಭವಿಷ್ಯತ್ತಿನ ಅಭಿವೃದ್ಧಿಗೆ ಸಾಕಷ್ಟು ದೊಡ್ಡದಾಗಿದೆಯೊ?)
ಆಕಾರ (ಇಡೀ ಪ್ರದೇಶವನ್ನು ಉಪಯೋಗಿಸುವುದು ಕಷ್ಟಕರವೊ?)
ಮಣ್ಣು (ಅದು ನಿಮ್ಮ ಕಟ್ಟಡಕ್ಕೆ ಒಳ್ಳೆಯ ಆಧಾರ ಕೊಟ್ಟೀತೊ?)
ನೀರು (ನೆರೆ ಬರುವ ಅಪಾಯವಿದೆಯೊ? ಹೊಲಸನ್ನು ಸಂಸ್ಕರಿಸುವ ಕೊಳವು ಸೋರುವುದೋ?)
ನೆರೆಹೊರೆಯವರು (ನೀವು ಅಲ್ಲಿ ಕಟ್ಟಡವನ್ನು ಕಟ್ಟುವುದನ್ನು ಅವರು ಅಪೇಕ್ಷಿಸುತ್ತಾರೊ?)
ಸಾರ್ವಜನಿಕ ಉಪಯೋಗ ಹಾಗೂ ಸೇವೆಗಳು
ಲಭ್ಯತೆ (ಚರಂಡಿ ವ್ಯವಸ್ಥೆ, ನೀರು, ಗ್ಯಾಸ್, ವಿದ್ಯುಚ್ಛಕ್ತಿ, ಫೋನ್)
ಕಸ ಮತ್ತು ಕೊಳೆಯ ಸಂಗ್ರಹ
ಪೊಲೀಸ್ ಹಾಗೂ ಅಗ್ನಿ ಸುರಕ್ಷೆ
ಕ್ರಮವಾದ ಅಂಚೆ ಸೇವೆ
ಶಾಲೆಗಳು ಸಮೀಪದಲ್ಲಿವೆಯೊ? ಹೆಸರುವಾಸಿಯಾಗಿವೆಯೊ?
ನೆರೆಹೊರೆ
ಜೀವನದ ಗುಣಮಟ್ಟ (ಮೇಲ್ಮಟ್ಟದ್ದೊ, ಕೆಳಮಟ್ಟದ್ದೊ, ಸ್ಥಾಯಿಯೊ?)
ಪರಿಸರೀಯ ಸ್ಥಿತಿಗಳು (ಹೆದ್ದಾರಿಗಳು, ಫ್ಯಾಕ್ಟರಿಗಳು ಇವೆಯೊ?)
ಸ್ಥಳದ ನೆಲೆ
ಆ ಸ್ಥಳಕ್ಕೆ ಸಾರ್ವಜನಿಕ ಸಂಚಾರ ವ್ಯವಸ್ಥೆ ಇದೆಯೊ?
ಮಿತಿನಿಯಮಗಳು
ನಿಮ್ಮ ಜಮೀನಿಗೆ ಅಡ್ಡಿತಡೆಯಿಲ್ಲದ ಹಕ್ಕುಪತ್ರವನ್ನು ನೀವು ಪಡೆದುಕೊಳ್ಳಬಲ್ಲಿರೊ? (ಒಬ್ಬ ವಕೀಲನನ್ನು ಸಂಪರ್ಕಿಸಿರಿ)
ಕಾನೂನುಬದ್ಧವಾದ ದಸ್ತಾವೇಜು ನಿರ್ಬಂಧಗಳಿವೆಯೊ?
ವಿವಿಧ ಉದ್ದೇಶಗಳಿಗಾಗಿರುವ ಕ್ಷೇತ್ರಗಳ ವಿಂಗಡಣೆ (ಸೋನಿಂಗ್) ನಿರ್ಬಂಧಗಳಿವೆಯೊ? (ಪ್ರತಿಬಂಧಗಳು, ಗಾತ್ರ)
ನೀವು ಮಾಮೂಲು ಹಕ್ಕುಗಳು ಹಾಗೂ ಹಾದಿಯ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕೊ?
ಹಣಕಾಸುಗಳು
ನೀವು ಆಸ್ತಿಯನ್ನು ಖರೀದಿಸಸಾಧ್ಯವಿದೆಯೊ?
ನಿಮಗೆ ಸಾಲದ ಅಗತ್ಯವಿರುವುದೊ?
ಅಗೋಚರ ವೆಚ್ಚಗಳು ಸೇರಿವೆಯೊ?
(ವಿಶೇಷವಾದ ಕಂದಾಯಗಳು, ಪಾವತಿಮಾಡಿರದ ತೆರಿಗೆಗಳು ಇವೆಯೊ?)
ನಿಮ್ಮ ತೆರಿಗೆಗಳು ಹೇಗಿರುವವು?
[ಪುಟ 4ರಲ್ಲಿರುವಚೌಕ]
ನಿರ್ಮಾಣ ಕೋಡ್ಗಳಿಂದ ಆವರಿಸಲ್ಪಟ್ಟ ಪ್ರಾತಿನಿಧಿಕ ಕ್ಷೇತ್ರಗಳು
ಸೋನಿಂಗ್ ನಿರ್ಬಂಧಗಳು
ಸೋನಿಂಗ್ ಜಿಲ್ಲೆಗಳನ್ನು ನಿರ್ಧರಿಸುವುದು
ಕಟ್ಟಡಗಳನ್ನು ಉಪಯೋಗಿಸಸಾಧ್ಯವಿರುವ ವಿಧ
ಒಂದು ಕಟ್ಟಡಕ್ಕಾಗಿ ಉಪಯೋಗಿಸಲು ಯೋಗ್ಯವಾಗಿರುವ ಜಮೀನಿನ ಪ್ರತಿಶತ (ಸಾಂದ್ರತೆ)
ಕಟ್ಟಡದ ಗರಿಷ್ಠ ಗಾತ್ರ
ಗರಿಷ್ಠ ಎತ್ತರ
ರಸ್ತೆ ಹಾಗೂ ನೆರೆಹೊರೆಯಿಂದ ಇರುವ ದೂರ
ಪಾರ್ಕಿಂಗ್ ನಿರ್ಬಂಧಗಳು
ಕನಿಷ್ಠ ಪ್ಲಾಟ್-ಗಾತ್ರದ ಆವಶ್ಯಕತೆಗಳು
“ನೆರೆಹೊರೆಯ ಸ್ವರೂಪ”ವನ್ನು ಕಾಪಾಡಿಕೊಳ್ಳಲು ಅಥವಾ ಬದಲಾಯಿಸಲು ಉಪಯೋಗಿಸಸಾಧ್ಯವಿದೆ
ಬಿಲ್ಡಿಂಗ್ ಕೋಡ್
ಅಗ್ನಿ ಸುರಕ್ಷೆ
ಸುರಕ್ಷಿತವಾದ ಹೊರದಾರಿ (ನಿರ್ಗಮ)
ಭಾವೀ ಅಪಾಯಕರವಾದ ಕಟ್ಟಡದ ಸೌಕರ್ಯಗಳನ್ನು ನಿರ್ವಹಿಸುವುದು
ಜನಸಂದಣಿಗಾಗಿ ವಿನ್ಯಾಸಿಸುವುದು (ಸಾರ್ವಜನಿಕ ಕಟ್ಟಡಗಳು)
ರಚನೆಗೆ ಸಂಬಂಧವಾದ ಸುರಕ್ಷಣೆ
ಸಾಕಷ್ಟು ಬೆಳಕು ಹಾಗೂ ವಾಯುಸಂಚಾರ
ನೈರ್ಮಲ್ಯ ಸಂಬಂಧವಾದ ಕೊಳಾಯಿ ವ್ಯವಸ್ಥೆ
ಅಗ್ನಿನಿರೋಧಕ ಸಲಕರಣೆ
ನಿರ್ಮಾಣದ ಸಮಯದಲ್ಲಿ ಸುರಕ್ಷಣೆ
ಪ್ರಧಾನ ಉದ್ದೇಶವು, ಜೀವವನ್ನು ಸಂರಕ್ಷಿಸುವುದು ಮತ್ತು ಕಟ್ಟಡದಲ್ಲಿ ವಾಸಮಾಡುವವರ ಕ್ಷೇಮವೇ ಆಗಿದೆ.
[ಪುಟ 4ರಲ್ಲಿರುವಚಿತ್ರ]
ನ್ಯೂನ
[ಪುಟ 4ರಲ್ಲಿರುವಚಿತ್ರ]
ಉತ್ತಮ
[ಪುಟ 4ರಲ್ಲಿರುವಚಿತ್ರ]
ಅತ್ಯುತ್ತಮ