ನಮ್ಮ ಶುಶ್ರೂಷೆ—ನಿಜ ಪ್ರೀತಿಯ ಒಂದು ಅಭಿವ್ಯಕ್ತಿ
1 ನಮ್ಮ ಶುಶ್ರೂಷೆಯ ಮೂಲಕ, ನಾವು ಎರಡು ಅತಿ ಶ್ರೇಷ್ಠ ಆಜ್ಞೆಗಳಿಗೆ ನಮ್ಮ ವಿಧೇಯತೆಯನ್ನು ಪ್ರದರ್ಶಿಸುತ್ತೇವೆ. (ಮತ್ತಾ. 22:37-39) ಯೆಹೋವನಿಗಾಗಿರುವ ನಮ್ಮ ಪ್ರೀತಿಯು, ನಾವು ಆತನ ಕುರಿತಾಗಿ ಸಕಾರಾತ್ಮಕವಾಗಿ ಮಾತಾಡುವಂತೆ ಪ್ರಚೋದಿಸುತ್ತದೆ. ನಮ್ಮ ನೆರೆಯವರಿಗಾಗಿರುವ ನಮ್ಮ ಪ್ರೀತಿಯು, ಅವರು ದೇವರ ಚಿತ್ತ ಹಾಗೂ ಉದ್ದೇಶಗಳ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಅವರನ್ನು ಉತ್ತೇಜಿಸಲು ನಮ್ಮನ್ನು ಪ್ರಚೋದಿಸುತ್ತದೆ. ಈ ಜ್ಞಾನವನ್ನು ಪಡೆದುಕೊಳ್ಳುವುದರಿಂದ ಅವರು ನಮ್ಮಂತೆಯೇ ಯೆಹೋವನನ್ನು ಪ್ರೀತಿಸಲಾರಂಭಿಸಿ, ನಿತ್ಯ ಜೀವದ ಬಹುಮಾನಕ್ಕಾಗಿ ತಮ್ಮನ್ನು ಅರ್ಹರನ್ನಾಗಿ ಮಾಡಿಕೊಳ್ಳಸಾಧ್ಯವಿದೆ. ಹಾಗಾದರೆ, ನಮ್ಮ ಶುಶ್ರೂಷೆಯ ಮೂಲಕ ನಾವು ಯೆಹೋವನ ನಾಮವನ್ನು ಗೌರವಿಸುತ್ತೇವೆ ಮತ್ತು ನಮ್ಮ ನೆರೆಯವರೊಂದಿಗೆ ಅತ್ಯಮೂಲ್ಯವಾದ ರಾಜ್ಯ ನಿರೀಕ್ಷೆಯನ್ನು ಹಂಚಿಕೊಳ್ಳುತ್ತೇವೆ. ಹೌದು, ನಮ್ಮ ಶುಶ್ರೂಷೆಯು ದೇವರಿಗಾಗಿ ಮತ್ತು ಮನುಷ್ಯನಿಗಾಗಿ ನಿಜ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ.
2 ನಮ್ಮ ಪ್ರೀತಿಯು ನಾವು ಎಲ್ಲ ರೀತಿಯ ಜನರೊಂದಿಗೆ, ಎಲ್ಲ ರೀತಿಯ ಸನ್ನಿವೇಶಗಳಲ್ಲಿ ಮಾತಾಡುವಂತೆ ಪ್ರೇರಿಸುತ್ತದೆ. (1 ಕೊರಿಂ. 9:21-23) ದೃಷ್ಟಾಂತಿಸಲು: ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ, ಕ್ರೈಸ್ತ ಹಿರಿಯನೊಬ್ಬನು ಒಬ್ಬ ರೋಮನ್ ಕ್ಯಾಥೊಲಿಕ್ ಪಾದ್ರಿಯ ಪಕ್ಕದಲ್ಲಿ ಕುಳಿತುಕೊಂಡನು. ಕೆಲವೊಂದು ಜಾಣ್ಮೆಯ ಪ್ರಶ್ನೆಗಳನ್ನು ಕೇಳುವ ಮೂಲಕ ಹಿರಿಯನು ಆ ಪಾದ್ರಿಯನ್ನು ಮಾತಿಗೆಳೆದನು, ಮತ್ತು ಅನಂತರ ಚರ್ಚೆಯನ್ನು ರಾಜ್ಯದ ಕಡೆಗೆ ನಿರ್ದೇಶಿಸಿದನು. ಆ ಪಾದ್ರಿಯು ವಿಮಾನದಿಂದ ಇಳಿಯುವ ಮುಂಚೆ, ಅವನು ನಮ್ಮ ಪುಸ್ತಕಗಳಲ್ಲಿ ಎರಡನ್ನು ಸ್ವೀಕರಿಸಿದ್ದನು. ತನ್ನ ನೆರೆಯವನ ಕಡೆಗೆ ಆ ಹಿರಿಯನು ತೋರಿಸಿದ ನಿಜ ಪ್ರೀತಿಯ ಅಭಿವ್ಯಕ್ತಿಗೆ ಎಂತಹ ಒಂದು ಉತ್ತಮ ಫಲಿತಾಂಶ!
3 ನಿಜ ಪ್ರೀತಿಯು ನಮ್ಮನ್ನು ಸಾರುವಂತೆ ಪ್ರಚೋದಿಸುತ್ತದೆ: ಆಕ್ಸಿಲಿಯರಿ ಮತ್ತು ಪೂರ್ಣ ಸಮಯದ ಪಯನೀಯರ್ ಕೆಲಸದಲ್ಲಿ ಒಳಗೂಡುವವರು, ದೇವರಿಗಾಗಿ ಮತ್ತು ನೆರೆಯವನಿಗಾಗಿ ನಿಜ ಪ್ರೀತಿಯನ್ನು ನಿಶ್ಚಯವಾಗಿಯೂ ವ್ಯಕ್ತಪಡಿಸುತ್ತಿದ್ದಾರೆ. ಪಯನೀಯರರು ಇತರರನ್ನು ಆತ್ಮಿಕವಾಗಿ ಸಹಾಯಮಾಡಲು ಸತತವಾಗಿ ತಮ್ಮ ಸಮಯ ಮತ್ತು ಶಕ್ತಿಸಾಮರ್ಥ್ಯವನ್ನು ತ್ಯಾಗಮಾಡುತ್ತಿರುತ್ತಾರೆ. ಹೀಗೆ ಮಾಡುವಂತೆ ಅವರನ್ನು ಯಾವುದು ಪ್ರಚೋದಿಸುತ್ತದೆ? ಒಬ್ಬ ಪಯನೀಯರಳು ಹೇಳಿದ್ದು: “ಪ್ರೀತಿಯು ದೇವರ ಆತ್ಮದ ಒಂದು ಫಲವಾಗಿದೆಯೆಂದು ನನಗೆ ತಿಳಿದಿದೆ. ಅದಿಲ್ಲದಿರುತ್ತಿದ್ದರೆ ನಾನು ಒಬ್ಬ ಪಯನೀಯರಳಾಗಿ ಸಫಲಳಾಗುವುದಂತೂ ಬಿಡಿ, ನಾನು ಸತ್ಯದಲ್ಲೇ ಇರುತ್ತಿರಲಿಲ್ಲ. ಪ್ರೀತಿಯು ನನಗೆ ಜನರ ಪ್ರಜ್ಞೆಯುಳ್ಳವಳಾಗಿರಲು, ಅವರ ಅಗತ್ಯಗಳ ಅರಿವುಳ್ಳವಳಾಗಿರುವಂತೆ ಮಾಡುತ್ತದೆ ಮತ್ತು ಜನರು ಆ ಪ್ರೀತಿಗೆ ಪ್ರತಿಕ್ರಿಯೆ ತೋರಿಸುತ್ತಾರೆಂಬುದನ್ನು ನಾನು ಗಣ್ಯಮಾಡುತ್ತೇನೆ.” ಯೇಸು ಜನರಿಗಾಗಿ ಅಂತಹ ಪ್ರೀತಿಯನ್ನು ಪ್ರದರ್ಶಿಸಿದನು. ಒಮ್ಮೆ ಅವನು ಮತ್ತು ಅವನ ದಣಿದಿದ್ದ ಶಿಷ್ಯರು ‘ಸ್ವಲ್ಪ ದಣುವಾರಿಸಿಕೊಳ್ಳಲು’ ಒಂದು ಸ್ಥಳಕ್ಕೆ ಹೋಗುತ್ತಿದ್ದಾಗ, ಜನರ ಗುಂಪುಗಳು ಅವರಿಗಿಂತ ಮುಂಚೆ ಅಲ್ಲಿ ತಲಪಿದವು. ಯೇಸು ಏನು ಮಾಡಿದನು? ‘ಅವರಿಗಾಗಿ ಕನಿಕರಪಟ್ಟು, ಅವರಿಗೆ ಬಹಳ ಉಪದೇಶಮಾಡಲು’ ಅವನು ತನ್ನ ವೈಯಕ್ತಿಕ ಅಗತ್ಯಗಳನ್ನು ಬದಿಗಿರಿಸಿದನು.—ಮಾರ್ಕ 6:30-34.
4 ನಾವು ನೀಡುವಂತಹ ಸುವಾರ್ತೆಯನ್ನು ಜನರು ತಿರಸ್ಕರಿಸುವಾಗಲೂ, ನಾವು ಆಂತರಿಕ ಆನಂದವನ್ನು ಅನುಭವಿಸುತ್ತೇವೆ. ಯಾಕಂದರೆ ಪ್ರೀತಿಯಿಂದ ಪ್ರಚೋದಿತರಾಗಿ, ರಕ್ಷಣೆಯನ್ನು ಪಡೆದುಕೊಳ್ಳಲು ಅವರಿಗೆ ಸಹಾಯಮಾಡಲಿಕ್ಕಾಗಿ ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇವೆಂಬುದು ನಮಗೆ ತಿಳಿದಿದೆ. ಕಟ್ಟಕಡೆಗೆ ಕ್ರಿಸ್ತನು ನಮ್ಮೆಲ್ಲರ ತೀರ್ಪುಮಾಡುವಾಗ, ‘ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುವ’ (NW) ಮೂಲಕ ನಾವು ನಿಜ ಪ್ರೀತಿಯನ್ನು ಪ್ರದರ್ಶಿಸಿದ್ದೇವೆಂಬ ಕಾರಣಕ್ಕಾಗಿ ತುಂಬ ಸಂತೋಷಿಸುವೆವು.—2 ತಿಮೊ. 4:5.