ಇತರರಲ್ಲಿ ನಿತ್ಯಜೀವದ ನಿರೀಕ್ಷೆಯನ್ನು ತುಂಬಿಸಿರಿ
1 ವಯಸ್ಸಾಗುವ ಕಾರ್ಯಗತಿಯನ್ನು ನಿಧಾನಿಸಲು ಮತ್ತು ತನ್ನ ಜೀವನಾಯುಷ್ಯವನ್ನು ಹೆಚ್ಚಿಸಲಿಕ್ಕಾಗಿ ಮನುಷ್ಯನು ಮಾರ್ಗಗಳನ್ನು ಹುಡುಕಿದ್ದಾನಾದರೂ, ವೃದ್ಧಾಪ್ಯ ಮತ್ತು ಮರಣಗಳು ಈಗಲೂ ತಪ್ಪಿಸಿಕೊಳ್ಳಲಾಗದವುಗಳಾಗಿವೆ. ಮನುಷ್ಯರು ಏಕೆ ವೃದ್ದರಾಗಿ ಸಾಯುತ್ತಾರೆ ಹಾಗೂ ವೃದ್ಧಾಪ್ಯದ ಧ್ವಂಸಕಾರಿ ಪರಿಣಾಮಗಳು ವಿಪರ್ಯಸ್ತಗೊಳಿಸಲ್ಪಡುವುದು ಮತ್ತು ಮರಣವು ನಿರ್ಮೂಲಗೊಳಿಸಲ್ಪಡುವುದು ಹೇಗೆ ಎಂಬುದನ್ನು ಬೈಬಲ್ ವಿವರಿಸಿರುವುದಕ್ಕಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ. ಈ ಸತ್ಯಗಳು ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಲ್ಲಿ ಮನಗಾಣಿಸುವಂತಹ ವಿಧದಲ್ಲಿ ಸಾದರಪಡಿಸಲ್ಪಟ್ಟಿವೆ. ಜೀವಮರಣಗಳ ಕುರಿತಾದ ತಬ್ಬಿಬ್ಬುಗೊಳಿಸುವ ಪ್ರಶ್ನೆಗಳನ್ನು ಆ ಪುಸ್ತಕವು ಸ್ಪಷ್ಟವಾಗಿ ಉತ್ತರಿಸುತ್ತಾ, ಪ್ರಮೋದವನವು ಪುನಃಸ್ಥಾಪಿಸಲ್ಪಡುವ ಸಮಯಕ್ಕೆ ಓದುಗನನ್ನು ನಿರ್ದೇಶಿಸುತ್ತದೆ.
2 ಮಾರ್ಚ್ ತಿಂಗಳಿನಲ್ಲಿ, ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ಗುರಿಯೊಂದಿಗೆ ನಾವು ಜ್ಞಾನ ಪುಸ್ತಕವನ್ನು ನೀಡುವೆವು. (ಮತ್ತಾ. 28:19, 20) ಅನಂತರ, ರಾಜ್ಯ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸಿರುವವರೆಲ್ಲರನ್ನು ನಾವು ಪುನಃ ಸಂದರ್ಶಿಸುವೆವು. ಈ ರೀತಿಯಲ್ಲಿ ನಾವು ಇತರರಲ್ಲಿ ನಿತ್ಯಜೀವದ ನಿರೀಕ್ಷೆಯನ್ನು ತುಂಬಿಸಬಹುದು. (ತೀತ 1:2) ಇದನ್ನು ಪೂರೈಸಲು, ಮುಂದಿನ ಸಲಹೆಗಳು ಸಹಾಯಕಾರಿಯಾಗಿರುವುದನ್ನು ನೀವು ಕಂಡುಕೊಳ್ಳಬಹುದು.
3 ಪ್ರಥಮ ಭೇಟಿಯನ್ನು ಮಾಡುವಾಗ, ನೀವು ಈ ಪ್ರಶ್ನೆಯನ್ನು ಕೇಳಬಹುದು:
◼“ಮನುಷ್ಯರು ದೀರ್ಘವಾದ ಜೀವನಕ್ಕಾಗಿ ಏಕೆ ಹಾತೊರೆಯುತ್ತಾರೆಂದು ನೀವು ಎಂದಾದರೂ ಕುತೂಹಲಪಟ್ಟಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೌದ್ಧರು, ಕ್ರೈಸ್ತರು, ಹಿಂದೂಗಳು, ಮುಸ್ಲಿಮರು ಮತ್ತು ಇತರರೆಲ್ಲರಿಗೆ ಮರಣದ ನಂತರ ಒಂದು ಜೀವನದ ನಿರೀಕ್ಷೆಯಿದೆ.” ಜ್ಞಾನ ಪುಸ್ತಕವನ್ನು “ನಾವು ವೃದ್ಧರಾಗುವುದೂ ಸಾಯುವುದೂ ಏಕೆ?” ಎಂಬ 6ನೆಯ ಅಧ್ಯಾಯಕ್ಕೆ ತೆರೆದು, 3ನೆಯ ಪ್ಯಾರಗ್ರಾಫನ್ನು ಓದಿರಿ. ಉದ್ಧೃತ ಶಾಸ್ತ್ರವಚನಗಳ ಕುರಿತು ಪರ್ಯಾಲೋಚಿಸಿರಿ. ಪ್ಯಾರಗ್ರಾಫ್ನ ಕೊನೆಯಲ್ಲಿರುವ ಎರಡು ಪ್ರಶ್ನೆಗಳಿಗೆ ಸೂಚಿಸುತ್ತಾ, ಅದರ ಉತ್ತರಗಳನ್ನು ಸ್ವತಃ ನೋಡಲು ಬಯಸುವನೊ ಎಂದು ಮನೆಯವನನ್ನು ಕೇಳಿರಿ. ಅವನದನ್ನು ಅಪೇಕ್ಷಿಸುವುದಾದರೆ, ಮುಂದಿನ ಕೆಲವು ಪ್ಯಾರಗ್ರಾಫ್ಗಳನ್ನು ಚರ್ಚಿಸುತ್ತಾ ಮುಂದುವರಿಯಿರಿ. ಒಂದು ಅಭ್ಯಾಸವು ಆರಂಭಿಸಲ್ಪಡುತ್ತಿದೆ! ಇಲ್ಲದಿದ್ದಲ್ಲಿ, ಆ ಪುಸ್ತಕವನ್ನು ಅವನಿಗೆ ನೀಡಿರಿ ಮತ್ತು ಉತ್ತರಗಳನ್ನು ಚರ್ಚಿಸಲಿಕ್ಕಾಗಿ ಪುನಃ ಸಂದರ್ಶಿಸಲು—ಒಂದು ಅಥವಾ ಎರಡು ದಿನಗಳೊಳಗೆ ಹೋಗುವುದು ಹೆಚ್ಚು ಉತ್ತಮ—ಯೋಜನೆಗಳನ್ನು ಮಾಡಿರಿ.
4 “ಜ್ಞಾನ” ಪುಸ್ತಕದ ಕೊಡಿಕೆಯನ್ನು ಅನುಸರಿಸಿಕೊಂಡು ಹೋಗುವಾಗ, ನೀವು ಹೀಗೆ ಹೇಳಸಾಧ್ಯವಿದೆ:
◼“ಮರಣದ ಕುರಿತಾಗಿ ನಾವು ಉತ್ತರಿಸದೆ ಬಿಟ್ಟಂತಹ ಎರಡು ಪ್ರಶ್ನೆಗಳನ್ನು ಪರಿಗಣಿಸಲು ನಾನು ಹಿಂದಿರುಗಿದ್ದೇನೆ.” ಆ ಪ್ರಶ್ನೆಗಳ ಕುರಿತಾಗಿ ಮನೆಯವನಿಗೆ ನೆನಪುಹುಟ್ಟಿಸಿರಿ. ಅನಂತರ, ಅಧ್ಯಾಯ 6ರಲ್ಲಿ “ಕುಟಿಲವಾದೊಂದು ಒಳಸಂಚು” ಎಂಬ ಉಪಶೀರ್ಷಿಕೆಯ ಕೆಳಗಿರುವ ಮಾಹಿತಿಯನ್ನು ಚರ್ಚಿಸಿರಿ. ಪರಿಸ್ಥಿತಿಗಳ ಮೇಲೆ ಅವಲಂಬಿಸಿ, ಅಭ್ಯಾಸವನ್ನು ಮುಂದುವರಿಸಿರಿ ಅಥವಾ ಮುಂದಿನ ಅಭ್ಯಾಸ ಅವಧಿಗಾಗಿ ತಳಪಾಯವನ್ನು ಇಡಲಿಕ್ಕಾಗಿ ಪ್ಯಾರಗ್ರಾಫ್ 7ರಲ್ಲಿರುವ ಕೊನೆಯ ಪ್ರಶ್ನೆಯನ್ನು ಉಪಯೋಗಿಸಿರಿ. ಹಿಂದಿರುಗಿ ಹೋಗಲು ನಿಶ್ಚಿತ ಯೋಜನೆಗಳನ್ನು ಮಾಡಿರಿ. ಮನೆಯವನಿಗೆ ಒಂದು ಕರಪತ್ರವನ್ನು ಕೊಟ್ಟು, ಸಭಾ ಕೂಟಗಳು ಹೇಗೆ ನಡಿಸಲ್ಪಡುತ್ತವೆಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ. ಹಾಜರಾಗುವಂತೆ ಅವನನ್ನು ಹೃತ್ಪೂರ್ವಕವಾಗಿ ಆಮಂತ್ರಿಸಿರಿ.
5 ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಅಥವಾ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ, ಹೀಗೆ ಹೇಳುವ ಮೂಲಕ ನೀವು ಒಂದು ಸಂಭಾಷಣೆಯನ್ನು ಆರಂಭಿಸಬಹುದು:
◼“ನಮಗಾಗಿ ಮತ್ತು ಭೂಮಿಗಾಗಿ ಭವಿಷ್ಯತ್ತಿನಲ್ಲಿ ಏನು ಕಾದಿದೆಯೆಂದು ನೀವು ಎಂದಾದರೂ ಕುತೂಹಲಪಟ್ಟಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲು ಭವಿಷ್ಯತ್ತನ್ನು ಒಂದೇ ಶಬ್ದದಲ್ಲಿ ಸಾರಾಂಶಿಸುತ್ತದೆ—ಪ್ರಮೋದವನ! ಆರಂಭದಲ್ಲಿ ದೇವರು, ಭೂಮಿಯ ಒಂದು ಭಾಗವನ್ನು ಒಂದು ಸುಂದರ ಪ್ರಮೋದವನವಾಗಿ ಮಾಡಿ, ತಾನು ಸೃಷ್ಟಿಸಿದ ಮಾನವ ದಂಪತಿಗಳನ್ನು ಅದರಲ್ಲಿರಿಸಿದನು ಎಂದು ಅದು ವಿವರಿಸುತ್ತದೆ. ಅವರು ಇಡೀ ಭೂಮಿಯನ್ನು ಜನರಿಂದ ತುಂಬಿಸಿ, ಕ್ರಮೇಣವಾಗಿ ಅದನ್ನು ಒಂದು ಪ್ರಮೋದವನವಾಗಿ ರೂಪಾಂತರಿಸಬೇಕಿತ್ತು. ಅದು ಹೇಗಿದ್ದಿರಬಹುದಿತ್ತೆಂಬುದರ ಕುರಿತಾದ ಈ ವರ್ಣನೆಯನ್ನು ಗಮನಿಸಿರಿ.” ಜ್ಞಾನ ಪುಸ್ತಕವನ್ನು 8ನೆಯ ಪುಟಕ್ಕೆ ತೆರೆಯಿರಿ, ಮತ್ತು “ಪ್ರಮೋದವನದಲ್ಲಿ ಜೀವನ” ಎಂಬ ಉಪಶೀರ್ಷಿಕೆಯ ಕೆಳಗಿರುವ 9ನೆಯ ಪ್ಯಾರಗ್ರಾಫನ್ನು ಓದಿರಿ. ಅನಂತರ 10ನೆಯ ಪ್ಯಾರಗ್ರಾಫ್ನಲ್ಲಿರುವ ಅಂಶಗಳನ್ನು ಚರ್ಚಿಸಿರಿ, ಮತ್ತು ಉದ್ಧರಿಸಲ್ಪಟ್ಟ ಶಾಸ್ತ್ರವಚನವಾದ, ಯೆಶಾಯ 55:10, 11ನ್ನು ಓದಿರಿ. ಪುನಃಸ್ಥಾಪಿಸಲ್ಪಟ್ಟ ಪ್ರಮೋದವನದಲ್ಲಿ ಜೀವನವು ಹೇಗಿರುವುದೆಂಬ ಚರ್ಚೆಯನ್ನು ಮುಂದುವರಿಸಲು ಮತ್ತು 11-16ನೆಯ ಪ್ಯಾರಗ್ರಾಫ್ಗಳನ್ನು ಜೊತೆಯಾಗಿ ಆವರಿಸಲು ಸಿದ್ಧರಿದ್ದೀರೆಂದು ಹೇಳಿರಿ. ಅಥವಾ ಆ ವ್ಯಕ್ತಿಯು ಅದನ್ನು ತನ್ನಷ್ಟಕ್ಕೆ ಓದುವಂತೆ ಪ್ರೋತ್ಸಾಹಿಸಿ, ಪುನಃ ಭೇಟಿಯಾಗಿ ಅದನ್ನು ಚರ್ಚಿಸಲಿಕ್ಕಾಗಿ ಏರ್ಪಾಡುಮಾಡಿರಿ.
6 ಆರಂಭದಲ್ಲಿ ಒಂದು ಅಭ್ಯಾಸವು ಆರಂಭಿಸಲ್ಪಡದಿದ್ದಲ್ಲಿ, ಹೀಗೆ ಹೇಳುವ ಮೂಲಕ ಪುನರ್ಭೇಟಿಯಲ್ಲಿ ನೀವದನ್ನು ಮಾಡಲು ಪ್ರಯತ್ನಿಸಸಾಧ್ಯವಿದೆ:
◼“ನಮ್ಮ ಹಿಂದಿನ ಸಂಭಾಷಣೆಯಲ್ಲಿ ನಾವು ಚರ್ಚಿಸಿದಂತೆ, ಇಡೀ ಭೂಮಿಯು ಒಂದು ಪ್ರಮೋದವನವಾಗಿ ರೂಪಾಂತರಿಸಲ್ಪಡಬೇಕೆಂಬುದು ದೇವರ ಉದ್ದೇಶವಾಗಿದೆ. ಪ್ರಮೋದವನವು ಹೇಗಿರುವುದು? ಎಂಬ ಪ್ರಶ್ನೆಯನ್ನು ಅದು ಎಬ್ಬಿಸುತ್ತದೆ.” ಜ್ಞಾನ ಪುಸ್ತಕವನ್ನು 1ನೆಯ ಅಧ್ಯಾಯಕ್ಕೆ ತೆರೆಯಿರಿ, ಮತ್ತು “ಪುನಃಸ್ಥಾಪಿತ ಪ್ರಮೋದವನದಲ್ಲಿ ಜೀವನ” ಎಂಬ ಉಪಶೀರ್ಷಿಕೆಯ ಕೆಳಗಿರುವ 11-16ನೆಯ ಪ್ಯಾರಗ್ರಾಫ್ಗಳನ್ನು ಅಭ್ಯಾಸಿಸಿರಿ. ತದನಂತರ, 4-5ನೆಯ ಪುಟಗಳಲ್ಲಿರುವ ಚಿತ್ರವನ್ನು ತೋರಿಸಿರಿ ಮತ್ತು ಆ ವ್ಯಕ್ತಿಯು ಇಂತಹ ಸುಂದರವಾದ ಪರಿಸರಗಳಲ್ಲಿ ಜೀವಿಸಲು ಇಷ್ಟಪಡುತ್ತಾನೋ ಎಂದು ಕೇಳಿರಿ. ಅನಂತರ 10ನೆಯ ಪುಟದಲ್ಲಿರುವ 17ನೆಯ ಪ್ಯಾರಗ್ರಾಫ್ನ ಪ್ರಥಮ ವಾಕ್ಯವನ್ನು ಓದಿರಿ. ಪರಿಸ್ಥಿತಿಗಳ ಮೇಲೆ ಹೊಂದಿಕೊಂಡು, ಅಭ್ಯಾಸವನ್ನು ಮುಂದುವರಿಸಿರಿ ಅಥವಾ ನಿಮ್ಮ ಮುಂದಿನ ಭೇಟಿಯಲ್ಲಿ, ಪುನಃಸ್ಥಾಪಿತ ಪ್ರಮೋದವನದಲ್ಲಿ ಜೀವಿಸಲಿಕ್ಕಾಗಿ ಒಬ್ಬನಿಗೆ ಏನು ಅಗತ್ಯವಿದೆಯೆಂಬುದನ್ನು ನೀವು ವಿವರಿಸುವಿರೆಂದು ಹೇಳಿರಿ. ಒಂದು ಕರಪತ್ರವನ್ನು ಕೊಟ್ಟು, ಕೂಟದ ಕಾಲತಖ್ತೆಯನ್ನು ವಿವರಿಸಿರಿ, ಮತ್ತು ಆ ವ್ಯಕ್ತಿಯು ರಾಜ್ಯ ಸಭಾಗೃಹಕ್ಕೆ ಹಾಜರಾಗುವಂತೆ ಆದರದಿಂದ ಆಮಂತ್ರಿಸಿರಿ.
7 ಜ್ಞಾನ ಪುಸ್ತಕವು, ದೇವರಿಂದ ವಾಗ್ದಾನಿಸಲ್ಪಟ್ಟಿರುವ “ನಿತ್ಯಜೀವ”ವನ್ನು ಇತರರಿಗೆ ಪ್ರಕಟಪಡಿಸುವುದರಲ್ಲಿ ಉಪಯೋಗಿಸಲು ಒಂದು ಉತ್ಕೃಷ್ಟವಾದ ಸಾಧನವಾಗಿದೆ. ಜನರೊಂದಿಗೆ ನೀವು ಬೈಬಲ್ ಅಭ್ಯಾಸಗಳನ್ನು ನಡಿಸುವುದು, “ಸುಳ್ಳಾಡದ” ದೇವರಿಂದ ಪ್ರೇರಿಸಲ್ಪಟ್ಟಿರುವ ಈ ಭವ್ಯ ನಿರೀಕ್ಷೆಯನ್ನು ಅವರಲ್ಲಿ ತುಂಬಿಸಬಲ್ಲದು.