ನಿಮಗೆ ‘ಶರೀರದಲ್ಲಿ ಒಂದು ಶೂಲ’ವಿದೆಯೊ?
1 ಸುವಾರ್ತೆಯನ್ನು ಸಾರಲಿಕ್ಕಾಗಿರುವ ನಮ್ಮ ನೇಮಕವನ್ನು ಸಾಧ್ಯವಾದಷ್ಟು ಉತ್ತಮವಾಗಿ ಪೂರೈಸಲು ನಾವು ತೀವ್ರವಾಗಿ ಬಯಸುತ್ತೇವೆ. ನಮ್ಮ ಪ್ರಿಯ ಸಹೋದರ ಸಹೋದರಿಯರಲ್ಲಿ ಅನೇಕರಾದರೊ, ಗಂಭೀರವಾದ ಶಾರೀರಿಕ ಕಾಯಿಲೆಗಳು ಇಲ್ಲವೆ ದೌರ್ಬಲ್ಯಗಳು—ಅವರು ಮಾಡಬಯಸುವಷ್ಟು ಹೆಚ್ಚನ್ನು ಮಾಡುವುದಕ್ಕೆ ತೊಂದರೆಯನ್ನು ಉಂಟುಮಾಡುತ್ತಾ—ಅಡ್ಡಬರುವುದರಿಂದ, ಪೂರ್ಣವಾಗಿ ಭಾಗವಹಿಸುವುದು ಕಷ್ಟಕರವಾಗಿದೆಯೆಂದು ಕಂಡುಕೊಳ್ಳುತ್ತಾರೆ. ವಿಶೇಷವಾಗಿ, ತಮ್ಮ ಸುತ್ತಲೂ ಇರುವ ಇತರರು ಶುಶ್ರೂಷೆಯಲ್ಲಿ ಬಹಳಷ್ಟು ಕ್ರಿಯಾಶೀಲರಾಗಿರುವುದನ್ನು ನೋಡುವಾಗ, ನಿರಾಶೆಯ ಭಾವನೆಗಳನ್ನು ನಿಭಾಯಿಸುವುದು ಅವರಿಗೆ ಒಂದು ಸವಾಲಾಗಿರಬಹುದು.—1 ಕೊರಿಂ. 9:16.
2 ಅನುಕರಿಸಲಿಕ್ಕಾಗಿರುವ ಒಂದು ಮಾದರಿ: ಅಪೊಸ್ತಲ ಪೌಲನು ‘ಶರೀರದಲ್ಲಿನ ಒಂದು ಶೂಲ’ದೊಂದಿಗೆ ಹೆಣಗಾಡಬೇಕಾಗಿತ್ತು. ತನ್ನನ್ನು ಹೊಡೆಯುತ್ತಾ ಇದ್ದ “ಸೈತಾನನ ದೂತರಲ್ಲಿ ಒಬ್ಬನು” ಎಂಬುದಾಗಿ ಅವನು ವರ್ಣಿಸಿದ ಆ ಸಂಕಟಕರ ತಡೆಯನ್ನು ಇಲ್ಲವಾಗಿಸುವಂತೆ, ಅವನು ಯೆಹೋವನಲ್ಲಿ ಮೂರು ಬಾರಿ ಬೇಡಿಕೊಂಡನು. ಆದರೂ, ಅದರ ಎದುರಿನಲ್ಲಿಯೂ ಪೌಲನು ಅದನ್ನು ತಾಳಿಕೊಂಡು, ತನ್ನ ಶುಶ್ರೂಷೆಯಲ್ಲಿ ಮುಂದೆ ಸಾಗಿದನು. ಅವನು ಸ್ವಾನುಕಂಪಪಟ್ಟುಕೊಳ್ಳಲಿಲ್ಲ ಅಥವಾ ಸದಾ ಗೊಣಗುವವನಾಗಿರಲಿಲ್ಲ. ಅವನು ತನ್ನಿಂದಾದುದೆಲ್ಲವನ್ನೂ ಮಾಡಿದನು. ನಿಭಾಯಿಸಿಕೊಂಡದ್ದರಲ್ಲಿ ಅವನ ಯಶಸ್ಸಿನ ಗುಟ್ಟು, ದೇವರಿಂದ ಬಂದ ಈ ಆಶ್ವಾಸನೆಯಾಗಿತ್ತು: “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.” ಪೌಲನು ತನ್ನ ಸನ್ನಿವೇಶವನ್ನು ಅಂಗೀಕರಿಸಿಕೊಳ್ಳುವ ಮತ್ತು ತಾಳಿಕೊಳ್ಳುವ ಸಲುವಾಗಿ, ಯೆಹೋವನ ಮೇಲೆ ಮತ್ತು ಪವಿತ್ರಾತ್ಮನ ಮೇಲೆ ಆತುಕೊಳ್ಳಲು ಕಲಿತುಕೊಂಡಂತೆ, ಅವನ ಬಲಹೀನತೆಯು ಬಲವಾಗಿ ಪರಿಣಮಿಸಿತು.—2 ಕೊರಿಂ. 12:7-10.
3 ನೀವು ತಾಳಿಕೊಳ್ಳಸಾಧ್ಯವಿರುವ ವಿಧ: ದೇವರ ಕಡೆಗಿನ ನಿಮ್ಮ ಸೇವೆಯ ಮೇಲೆ ಮಾನವ ದೌರ್ಬಲ್ಯವು ಇತಿಮಿತಿಗಳನ್ನು ಹೇರುತ್ತದೊ? ಹಾಗಿರುವಲ್ಲಿ, ಪೌಲನ ದೃಷ್ಟಿಕೋನವನ್ನು ಅನುಕರಿಸಿರಿ. ನಿಮ್ಮ ಅನಾರೋಗ್ಯ ಇಲ್ಲವೆ ದೌರ್ಬಲ್ಯಕ್ಕೆ, ವಿಷಯಗಳ ಈ ವ್ಯವಸ್ಥೆಯಲ್ಲಿ ಶಾಶ್ವತವಾದ ಪರಿಹಾರವಿಲ್ಲದಿದ್ದಾಗ್ಯೂ, ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು “ಬಲಾಧಿಕ್ಯ”ವನ್ನು ಒದಗಿಸುವ ಯೆಹೋವನಲ್ಲಿ ನೀವು ನಿಮ್ಮ ಪೂರ್ಣ ಭರವಸೆಯನ್ನು ಇಡಬಲ್ಲಿರಿ. (2 ಕೊರಿಂ. 4:7) ನಿಮ್ಮನ್ನು ಪ್ರತ್ಯೇಕಿಸಿಕೊಳ್ಳದೆ, ಸಭೆಯಲ್ಲಿ ಲಭ್ಯವಿರುವ ಸಹಾಯದ ಲಾಭವನ್ನು ಪಡೆದುಕೊಳ್ಳಿರಿ. (ಜ್ಞಾನೋ. 18:1) ಮನೆ ಮನೆಯ ಕೆಲಸದಲ್ಲಿ ಭಾಗವಹಿಸುವುದು ಕಷ್ಟಕರವೆಂದು ನೀವು ಕಂಡುಕೊಳ್ಳುವುದಾದರೆ, ಅನೌಪಚಾರಿಕ ಇಲ್ಲವೆ ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡಲು ಪ್ರಾಯೋಗಿಕವಾದ ವಿಧಗಳಿಗಾಗಿ ಹುಡುಕಿರಿ.
4 ನೀವು ನಿಮ್ಮ ಶುಶ್ರೂಷೆಯಲ್ಲಿ ಮಾಡಶಕ್ತರಾಗಿರುವುದನ್ನು ಶರೀರದಲ್ಲಿನ ಒಂದು ಶೂಲವು ತಡೆಯಬಹುದಾದರೂ, ಶುಶ್ರೂಷೆಯಲ್ಲಿ ನಿಮಗೆ ಯಾವ ಭಾಗವೂ ಇಲ್ಲವೆಂದು ಭಾವಿಸಿಕೊಳ್ಳುವ ಅಗತ್ಯವಿಲ್ಲ. ಪೌಲನಂತೆ, ನೀವು ಕೂಡ ನಿಮ್ಮ ಬಲ ಹಾಗೂ ಪರಿಸ್ಥಿತಿಗಳು ಅನುಮತಿಸುವಂತಹದ್ದನ್ನು ಮಾಡುತ್ತಾ, “ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿಸ”ಸಾಧ್ಯವಿದೆ. (ಅ. ಕೃ. 20:24) ನಿಮ್ಮ ಶುಶ್ರೂಷೆಯನ್ನು ನೆರವೇರಿಸಲಿಕ್ಕಾಗಿ ನೀವು ಪ್ರಯಾಸಪಡುವಾಗ, ಯೆಹೋವನು ಬಹಳ ಪ್ರಸನ್ನಗೊಳ್ಳುತ್ತಾನೆಂಬುದು ನಿಮಗೆ ತಿಳಿದಿರಲಿ.—ಇಬ್ರಿ. 6:10.