ಯಜಮಾನನ ಸ್ವತ್ತುಗಳ ಕಾಳಜಿವಹಿಸುವುದು
1 ಬೈಬಲ್ ಸಮಯಗಳಲ್ಲಿ, ಒಬ್ಬ ಮನೆವಾರ್ತೆಗಾರನಿಗೆ ಬಹಳಷ್ಟು ಭರವಸೆಯ ಸ್ಥಾನವಿತ್ತು. ಅಬ್ರಹಾಮನು ತನ್ನ ಮನೆವಾರ್ತೆಗಾರನಿಗೆ ತನ್ನ ಮಗನಾದ ಇಸಾಕನಿಗಾಗಿ ಒಬ್ಬ ಹೆಂಡತಿಯನ್ನು ಹುಡುಕುವ ಕೆಲಸವನ್ನು ಕೊಟ್ಟನು. (ಆದಿ. 24:1-4) ಕಾರ್ಯತಃ ಆ ಮನೆವಾರ್ತೆಗಾರನು ಅಬ್ರಹಾಮನ ವಂಶಾವಳಿಯ ಮುಂದುವರಿಯುವಿಕೆಯನ್ನು ಖಚಿತಪಡಿಸಲು ಜವಾಬ್ದಾರನಾಗಿದ್ದನು. ಎಂತಹ ಒಂದು ಜವಾಬ್ದಾರಿ! “ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಲ್ಲವೇ” ಎಂದು ಅಪೊಸ್ತಲ ಪೌಲನು ಹೇಳಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!—1 ಕೊರಿಂ. 4:2.
ಕ್ರೈಸ್ತ ಮನೆವಾರ್ತೆಯ ಕೆಲಸ
2 ಬೈಬಲಿನಲ್ಲಿ ಕ್ರೈಸ್ತ ಶುಶ್ರೂಷೆಯ ಕೆಲವು ಅಂಶಗಳನ್ನು ಮನೆವಾರ್ತೆಯ ಕೆಲಸಗಳಾಗಿ ವರ್ಣಿಸಲಾಗಿದೆ. ಉದಾಹರಣೆಗೆ, ಅಪೊಸ್ತಲ ಪೌಲನು ಎಫೆಸದವರಿಗೆ, “ನಿಮಗೋಸ್ಕರ ನಿರ್ವಹಿಸುವದಕ್ಕಾಗಿ ದೇವರು ನನಗೆ ಕೃಪೆಯಾಗಿ ಕೊಟ್ಟ ಕೆಲಸ [“ಮನೆವಾರ್ತೆಯ ಕೆಲಸ,” NW]”ದ ಕುರಿತು ಮಾತಾಡಿದನು. (ಎಫೆ. 3:2; ಕೊಲೊ. 1:25) ಜನಾಂಗಗಳಿಗೆ ಸುವಾರ್ತೆಯನ್ನು ಕೊಂಡೊಯ್ಯುವ ತನ್ನ ನೇಮಕವನ್ನು ಅವನು, ನಂಬಿಗಸ್ತಿಕೆಯಿಂದ ನಿರ್ವಹಿಸಬೇಕಾದ ಒಂದು ಮನೆವಾರ್ತೆಯ ಕೆಲಸವಾಗಿ ವೀಕ್ಷಿಸಿದನು. (ಅ. ಕೃ. 9:15; 22:21) ಅಪೊಸ್ತಲ ಪೇತ್ರನು ತನ್ನ ಅಭಿಷಿಕ್ತ ಸಹೋದರರಿಗೆ ಹೀಗೆ ಬರೆದನು: “ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ. ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.” (1 ಪೇತ್ರ 4:9, 10; ಇಬ್ರಿ. 13:16) ಆ ಪ್ರಥಮ ಶತಮಾನದ ಕ್ರೈಸ್ತರು ಭೌತಿಕ ವಿಧದಲ್ಲಿ ಏನ್ನೆಲ್ಲ ಪಡೆದಿದ್ದರೊ ಅದು, ಯೆಹೋವನ ಕೃಪಾವರದ ಪರಿಣಾಮದಿಂದಾಗಿತ್ತು. ಆದುದರಿಂದ ಅವರು ಆ ವಸ್ತುಗಳ ಮನೆವಾರ್ತೆಗಾರರಾಗಿದ್ದರು, ಮತ್ತು ಅವುಗಳನ್ನು ಕ್ರೈಸ್ತೋಚಿತ ವಿಧದಲ್ಲಿ ಉಪಯೋಗಿಸಬೇಕಾಗಿತ್ತು.
3 ಇಂದು, ಯೆಹೋವನ ಸಾಕ್ಷಿಗಳು ಅದೇ ರೀತಿಯ ದೃಷ್ಟಿಕೋನವನ್ನು ಪಡೆದವರಾಗಿದ್ದಾರೆ. ಅವರು ತಮ್ಮನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡಿದ್ದಾರೆ ಮತ್ತು ತಮ್ಮಲ್ಲಿ ಇರುವುದೆಲ್ಲವನ್ನು—ತಮ್ಮ ಜೀವಿತಗಳು, ತಮ್ಮ ಶಾರೀರಿಕ ಬಲ, ತಮ್ಮ ಭೌತಿಕ ಸ್ವತ್ತುಗಳನ್ನು—‘ವಿವಿಧ ವಿಧಗಳಲ್ಲಿ ವ್ಯಕ್ತಪಡಿಸಲ್ಪಟ್ಟ ದೇವರ ಕೃಪಾವರದ’ ಫಲಗಳಾಗಿ ವೀಕ್ಷಿಸುತ್ತಾರೆ. ಉತ್ತಮ ಮನೆವಾರ್ತೆಗಾರರೋಪಾದಿ, ಈ ವಿಷಯಗಳನ್ನು ಅವರು ಯಾವ ರೀತಿಯಲ್ಲಿ ಬಳಸುತ್ತಾರೊ ಅದಕ್ಕಾಗಿ ತಾವು ಯೆಹೋವ ದೇವರಿಗೆ ಜವಾಬ್ದಾರರೆಂದು ಭಾವಿಸಿಕೊಳ್ಳುತ್ತಾರೆ. ಇದಕ್ಕೆ ಕೂಡಿಸಿ, ಅವರಿಗೆ ಸುವಾರ್ತೆಯ ಜ್ಞಾನವು ಕೊಡಲ್ಪಟ್ಟಿದೆ. ಇದು ಸಹ, ಅವರಿಂದ ಸಾಧ್ಯವಾದಷ್ಟು ಅತ್ಯುತ್ತಮ ವಿಧದಲ್ಲಿ ಬಳಸಲು ಅಪೇಕ್ಷಿಸುವ ಒಂದು ನಂಬಿಕೆಯ ಹೊಣೆಯಾಗಿದೆ: ಯೆಹೋವನ ನಾಮವನ್ನು ಘನಪಡಿಸಿ, ಇತರರು ಸತ್ಯದ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡುವುದೇ.—ಮತ್ತಾ. 28:19, 20; 1 ತಿಮೊ. 2:3, 4; 2 ತಿಮೊ. 1:13, 14.
4 ಮನೆವಾರ್ತೆಗಾರರೋಪಾದಿ ಯೆಹೋವನ ಸಾಕ್ಷಿಗಳು ತಮ್ಮ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತಾರೆ? ವಾರ್ಷಿಕ ವರದಿಯು ತೋರಿಸುವುದೇನೆಂದರೆ, ಕಳೆದ ವರ್ಷವಷ್ಟೇ ಲೋಕವ್ಯಾಪಕವಾಗಿ ಅವರು “ಪರಲೋಕ ರಾಜ್ಯದ ಈ ಸುವಾರ್ತೆ”ಯನ್ನು ಸಾರುತ್ತಾ, ಒಂದು ಶತಕೋಟಿಗಿಂತಲೂ ಹೆಚ್ಚಿನ ತಾಸುಗಳನ್ನು ವ್ಯಯಿಸಿದರು, ಮತ್ತು ಆಸಕ್ತ ಜನರೊಂದಿಗೆ 45,00,000ಕ್ಕಿಂತಲೂ ಹೆಚ್ಚಿನ ಮನೆ ಬೈಬಲ್ ಅಭ್ಯಾಸಗಳನ್ನು ನಡೆಸಿದರು. (ಮತ್ತಾ. 24:14) ಲೋಕವ್ಯಾಪಕ ಕೆಲಸ ಮತ್ತು ಸ್ಥಳಿಕ ರಾಜ್ಯ ಸಭಾಗೃಹಗಳನ್ನು ಬೆಂಬಲಿಸುತ್ತಾ ಅವರು ನೀಡಿದ ಉದಾರಭಾವದ ಕಾಣಿಕೆಗಳಿಂದ, ಸಂಚರಣ ಮೇಲ್ವಿಚಾರಕರಿಗೆ ಮತ್ತು ಇತರರಿಗೆ ಅವರು ತೋರಿಸಿದ ಅತಿಥಿಸತ್ಕಾರದಿಂದ, ಮತ್ತು ಸಶಸ್ತ್ರ ಸಂಕ್ಷೋಭೆಗಳಿಗೆ ಬಲಿಪಶುಗಳಾದಂತಹ ಭಾರಿ ಅಗತ್ಯದಲ್ಲಿರುವ ಜನರಿಗೆ ಅವರು ತೋರಿಸಿದ ಅಸಾಧಾರಣ ದಯೆಯಿಂದಾಗಿಯೂ, ಅವರು ಯೆಹೋವನ ಮನೆವಾರ್ತೆಗಾರರೋಪಾದಿ ತಮ್ಮ ನಂಬಿಗಸ್ತಿಕೆಯನ್ನು ತೋರಿಸಿದ್ದಾರೆ. ಒಂದು ಗುಂಪಿನೋಪಾದಿ, ಸತ್ಯ ಕ್ರೈಸ್ತರು ಯಜಮಾನನ ಸ್ವತ್ತುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದಾರೆ.
“ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು”
5 ಮನೆವಾರ್ತೆಯ ಕೆಲಸವು ವ್ಯಕ್ತಿಗತ ಮಟ್ಟದಲ್ಲಿ ಮಾತ್ರವಲ್ಲ ಸಂಘಟನಾತ್ಮಕ ಮಟ್ಟದಲ್ಲಿಯೂ ಇರುತ್ತದೆ. ಭೂಮಿಯ ಮೇಲಿದ್ದ ಅಭಿಷಿಕ್ತ ಕ್ರೈಸ್ತ ಸಭೆಯನ್ನು ಯೇಸು, “ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು” ಎಂದು ಕರೆದನು. (ಲೂಕ 12:42) ಈ “ನಂಬಿಗಸ್ತ ಮನೆವಾರ್ತೆಯವನ” ಜವಾಬ್ದಾರಿಯು, ‘ಆಹಾರ ಸರಬರಾಯಿಗಳನ್ನು’ ಒದಗಿಸುವುದು ಮತ್ತು ಅಂತಾರಾಷ್ಟ್ರೀಯ ಸುವಾರ್ತೆಯ ಸಾರುವಿಕೆಯಲ್ಲಿ ನಾಯಕತ್ವವನ್ನು ವಹಿಸುವುದಾಗಿದೆ. (ಪ್ರಕ. 12:17) ಇದಕ್ಕೆ ಸಂಬಂಧಿಸಿ, ಆಡಳಿತ ಮಂಡಲಿಯಿಂದ ಪ್ರತಿನಿಧಿಸಲ್ಪಡುವ ನಂಬಿಗಸ್ತ ಮನೆವಾರ್ತೆಯ ವರ್ಗವು, ಲೋಕವ್ಯಾಪಕ ಕೆಲಸಕ್ಕಾಗಿ ಹಣಕಾಸಿನ ಕಾಣಿಕೆಗಳು ಯಾವ ವಿಧದಲ್ಲಿ ಬಳಸಲ್ಪಡುತ್ತವೊ ಅದಕ್ಕೆ ಜಾವಾಬ್ದಾರವಾಗಿದೆ. ಅಂತಹ ಎಲ್ಲ ದಾನಗಳು ನಂಬಿಕೆಯ ಆಧಾರದ ಮೇಲೆ ಮಾಡಲ್ಪಟ್ಟಿವೆ, ಮತ್ತು ಅವು ಸಂಕಲ್ಪಿಸಲ್ಪಟ್ಟ ಉದ್ದೇಶಕ್ಕಾಗಿ ಬಳಸಲ್ಪಡುತ್ತವೆ ಮತ್ತು ಅವು ವಿವೇಕಯುತವಾಗಿ, ಮಿತವಾಗಿ, ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಲು ಈ “ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು” ಜವಾಬ್ದಾರನಾಗಿದ್ದಾನೆ.
6 ಕಾಣಿಕೆಯಾಗಿ ನೀಡಲ್ಪಟ್ಟ ನಿಧಿಗಳ ವಿವೇಕಪ್ರದ ಉಪಯೋಗದ ಒಂದು ಉದಾಹರಣೆಯು, 20ನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳ ಮುದ್ರಣಾ ಚಟುವಟಿಕೆಯ ಬೆಳವಣಿಗೆಯಲ್ಲಿ ಕಂಡುಬರುತ್ತದೆ. ಬೈಬಲ್ಗಳು ಅಲ್ಲದೆ ಬೈಬಲ್ ಸಾಹಿತ್ಯವು—ಪತ್ರಿಕೆಗಳು, ಪುಸ್ತಕಗಳು, ಬ್ರೋಷರುಗಳು, ಪುಸ್ತಿಕೆಗಳು, ಕಿರುಹೊತ್ತಗೆಗಳು, ಮತ್ತು ರಾಜ್ಯ ವಾರ್ತೆಗಳು—ಈ “ಕಡೇ ದಿವಸ”ಗಳಲ್ಲಿ “ಸುವಾರ್ತೆಯ” ಹಬ್ಬಿಸುವಿಕೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿವೆ. (ಮಾರ್ಕ 13:10; 2 ತಿಮೊ. 3:1) ಮತ್ತು ಕಾವಲಿನಬುರುಜು ಪತ್ರಿಕೆಯು, “ದೇವರ ಮನೆಯವ”ರಿಗೂ ಅವರ ಸಂಗಾತಿಗಳಾದ “ಬೇರೆ ಕುರಿಗಳ ಮಹಾ ಸಮೂಹ”ದವರಿಗೂ, “ಹೊತ್ತುಹೊತ್ತಿಗೆ ಆಹಾರ” ಸರಬರಾಯಿ ಮಾಡುವುದರಲ್ಲಿ ಪ್ರಧಾನ ಸಾಧನವಾಗಿ ಪರಿಣಮಿಸಿದೆ.—ಮತ್ತಾ. 24:45; ಎಫೆ. 2:19; ಪ್ರಕ. 7:9; ಯೋಹಾ. 10:16.
7 ಆರಂಭದಲ್ಲಿ ಯೆಹೋವನ ಸಾಕ್ಷಿಗಳ ಎಲ್ಲ ಸಾಹಿತ್ಯವು ವ್ಯಾಪಾರಿ ಮುದ್ರಣಕಾರರಿಂದ ಮುದ್ರಿಸಲ್ಪಟ್ಟಿತು. ಆದರೆ 1920ಗಳಲ್ಲಿ, ಯೆಹೋವನ ಸೇವಕರು ಸ್ವತಃ ಮುದ್ರಣ ಮಾಡುವಲ್ಲಿ ಅದು ಹೆಚ್ಚು ಪರಿಣಾಮಕಾರಿಯೂ ಮಿತವ್ಯಯದ್ದಾಗಿಯೂ ಇರುವುದೆಂದು ನಿರ್ಣಯಿಸಲಾಯಿತು. 1920ರಲ್ಲಿ ಚಿಕ್ಕದಾಗಿ ಆರಂಭಗೊಂಡ ಮದ್ರಣ ಕೆಲಸವು, ಕ್ರಮೇಣ ಬಹಳ ದೊಡ್ಡದಾಗುತ್ತಾ, ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿ ವೃದ್ಧಿಯಾಯಿತು. 1967ರಷ್ಟಕ್ಕೆ, ಮುದ್ರಣಾ ಸೌಕರ್ಯಗಳು ನಗರದ ನಾಲ್ಕು ಬ್ಲಾಕ್ಗಳನ್ನು ಆವರಿಸಿದವು. ಇತರ ದೇಶಗಳಲ್ಲೂ ಮುದ್ರಣವನ್ನು ಆರಂಭಿಸಲಾಗಿತ್ತು, ಆದರೆ ಹೆಚ್ಚಿನ ದೇಶಗಳಲ್ಲಿ IIನೆಯ ಜಾಗತಿಕ ಯುದ್ಧದ ಕಾರಣ ಅವು ತಡೆಗಟ್ಟಲ್ಪಟ್ಟಿದ್ದವು.
8 ಅಮೆರಿಕದಲ್ಲಿದ್ದ ಮುದ್ರಣಾ ಕಾರ್ಯವು ಎಷ್ಟು ವ್ಯಾಪಕವಾಗಿ ವೃದ್ಧಿಯಾದರೂ, ಇಡೀ ಲೋಕದ ಸರಬರಾಯಿಯನ್ನು ಪೂರೈಸಲು ಅದಕ್ಕೆ ಸಾಧ್ಯವಾಗಲಿಲ್ಲ. ಆದುದರಿಂದ, ಯುದ್ಧಾನಂತರದ ವರ್ಷಗಳಲ್ಲಿ, ಮುದ್ರಣಾ ಕಾರ್ಯಗಳು ಇತರ ಅನೇಕ ದೇಶಗಳಲ್ಲಿ ಸ್ಥಾಪಿಸಲ್ಪಟ್ಟವು ಇಲ್ಲವೆ ಈಗಾಗಲೇ ಕಾರ್ಯನಡಿಸುತ್ತಿದ್ದವು. ಇವುಗಳಲ್ಲಿ, ಇಂಗ್ಲೆಂಡ್, ಕೆನಡ, ಗ್ರೀಸ್, ಡೆನ್ಮಾರ್ಕ್, ದಕ್ಷಿಣ ಆಫ್ರಿಕ, ಪಶ್ಚಿಮ ಜರ್ಮನಿ ಮತ್ತು ಸ್ವಿಟ್ಸರ್ಲೆಂಡ್ ಸೇರಿದ್ದವು. 1970ಗಳ ಆದಿಭಾಗದಲ್ಲಿ, ಆಸ್ಟ್ರೇಲಿಯ, ಘಾನ, ಜಪಾನ್, ಬ್ರೆಸಿಲ್, ನೈಜೀರಿಯ, ಫಿನ್ಲೆಂಡ್, ಮತ್ತು ಫಿಲಿಪ್ಪೀನ್ಸ್ ಈ ಪಟ್ಟಿಗೆ ಸೇರಿಸಲ್ಪಟ್ಟಿದ್ದವು. ಇವುಗಳಲ್ಲಿ ಕೆಲವು ದೇಶಗಳು ಬೌಂಡ್ ಪುಸ್ತಕಗಳನ್ನೂ ತಯಾರಿಸಿದವು. 1970ರ ಆದಿಭಾಗದಲ್ಲೇ, ಗಿಲ್ಯಡ್ ಮಿಷನೆರಿಗಳಿಗೆ ಮುದ್ರಣಾ ಕೌಶಲಗಳಲ್ಲಿ ತರಬೇತಿ ನೀಡಿ, ಮುದ್ರಣಾ ಕೆಲಸದಲ್ಲಿ ಸ್ಥಳಿಕ ಸಹೋದರರಿಗೆ ಸಹಾಯಮಾಡುವಂತೆ ಆ ದೇಶಗಳಿಗೆ ಕಳುಹಿಸಲಾಯಿತು.
9 ಪತ್ರಿಕೆಗಳನ್ನು ಮುದ್ರಿಸುತ್ತಿದ್ದ ದೇಶಗಳ ಸಂಖ್ಯೆಯು, 1980ಗಳಲ್ಲಿ 51ರ ಉಚ್ಚಮಟ್ಟವನ್ನು ತಲಪಿತು.a ಇದೆಲ್ಲವು ಯಜಮಾನನ ಸ್ವತ್ತುಗಳ ಎಂತಹ ಅತ್ಯುತ್ತಮ ಉಪಯೋಗವಾಗಿ ಪರಿಣಮಿಸಿತು! ರಾಜ್ಯ ಕೆಲಸದ ಬೆಳವಣಿಗೆಯ ಎಂತಹ ಪ್ರಬಲವಾದ ಪ್ರಮಾಣ! ‘ತಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಿದ’ ಯೆಹೋವನ ಲಕ್ಷಗಟ್ಟಲೆ ವ್ಯಕ್ತಿಗತ ಸಾಕ್ಷಿಗಳ ಉದಾರಭಾವದ ಬೆಂಬಲಕ್ಕೆ ಎಂತಹ ಶಕ್ತಿಶಾಲಿಯಾದ ಪುರಾವೆ! (ಜ್ಞಾನೋ. 3:9) ಹೀಗೆ, ಯಾವ ವಿವಿಧ ವಿಧಗಳಲ್ಲಿ ಯೆಹೋವನು ಅವರನ್ನು ಆಶೀರ್ವದಿಸಿದ್ದನೊ ಅವುಗಳ ಉತ್ತಮ ಮನೆವಾರ್ತೆಗಾರರಾಗಿ ಅವರು ತಮ್ಮನ್ನು ತೋರ್ಪಡಿಸಿಕೊಂಡರು.
ಕೇಂದ್ರೀಕರಣದಲ್ಲಿ ಬದಲಾವಣೆ
10 ಮುದ್ರಣಾ ತಂತ್ರಜ್ಞಾನದಲ್ಲಿ ಮಹಾ ಬೆಳವಣಿಗೆಗಳು, 1970ಗಳಲ್ಲಿ ಹಾಗೂ 1980ಗಳ ಆದಿಭಾಗದಲ್ಲಿ ಮಾಡಲ್ಪಟ್ಟವು ಮತ್ತು ಯೆಹೋವನ ಸಾಕ್ಷಿಗಳು ನವೀನ ಮುದ್ರಣಾ ತಂತ್ರಗಳನ್ನು ಅಳವಡಿಸಿಕೊಂಡರು. ಈ ಮೊದಲು, ಅವರು ಮುದ್ರಣದ ಸಾಂಪ್ರದಾಯಿಕ ಉಬ್ಬಚ್ಚು (ಲೆಟರ್ಪ್ರೆಸ್) ಶೈಲಿಯನ್ನು ಬಳಸಿದ್ದರು. ಅವರು ಹೆಚ್ಚು ಆಧುನಿಕವಾದ ಆಫ್ಸೆಟ್ ಮುದ್ರಣವನ್ನು ಉಪಯೋಗಿಸಲು ತೊಡಗಿದಂತೆ, ಇದು ಕ್ರಮೇಣ ಬದಲಾಯಿತು. ಫಲಸ್ವರೂಪವಾಗಿ, ಹಳೆಯು ಉಬ್ಬಚ್ಚುಗಳಿಂದ ಸಾಧ್ಯವಾದ ಎರಡು ಬಣ್ಣ (ಕಪ್ಪು ಹಾಗೂ ಮತ್ತೊಂದು ಬಣ್ಣ)ದ ಚಿತ್ರಗಳ ಬದಲಿಗೆ, ವರ್ಣರಂಜಿತ ಚಿತ್ರಗಳಿರುವ ಸುಂದರ ಪ್ರಕಾಶನಗಳು ತಯಾರಿಸಲ್ಪಡುತ್ತಿವೆ. ಅಲ್ಲದೆ, ಕಂಪ್ಯೂಟರ್ ತಂತ್ರಜ್ಞಾನವು ಇಡೀ ಪ್ರೀಪ್ರೆಸ್ ಕಾರ್ಯಾಚರಣೆಯನ್ನು (ಮುದ್ರಣಕ್ಕಾಗಿರುವ ಸಿದ್ಧತೆಯನ್ನು) ಬದಲಾಯಿಸಿತು. ಯೆಹೋವನ ಸಾಕ್ಷಿಗಳು ಮಲ್ಟಿಲ್ಯಾಂಗ್ವೆಜ್ ಇಲೆಕ್ಟ್ರಾನಿಕ್ ಫೋಟೊಟೈಪ್ಸೆಟ್ಟಿಂಗ್ ಸಿಸ್ಟಮ್ (ಮೆಪ್ಸ್) ಎಂದು ಕರೆಯಲ್ಪಡುವ ಒಂದು ಕಂಪ್ಯೂಟರೀಕೃತ ವ್ಯವಸ್ಥೆಯನ್ನು ವಿಕಸಿಸಿದರು. ಅದೇ ವ್ಯವಸ್ಥೆಯು ಈಗ 370ಕ್ಕಿಂತಲೂ ಹೆಚ್ಚಿನ ವಿಭಿನ್ನ ಭಾಷೆಗಳಲ್ಲಿನ ಮುದ್ರಣಕ್ಕೆ ಸಹಾಯ ಮಾಡುತ್ತದೆ. ಇಷ್ಟೊಂದು ಭಾಷೆಗಳಲ್ಲಿ ಕಾರ್ಯನಡೆಸುವ ಅದರ ಸಾಮರ್ಥ್ಯಕ್ಕೆ ಬೇರೆ ಯಾವ ವಾಣಿಜ್ಯ ಕಾರ್ಯಕ್ರಮವು ಸರಿಸಾಟಿಯಾಗಿರುವುದಿಲ್ಲ.
11 ಮೆಪ್ಸ್ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ ಮೇಲ್ನಂತಹ ಇತರ ನವೀನತೆಗಳ ಬಳಕೆಯ ಸಹಾಯದಿಂದ, ಸರಿಯಾದ ಸಮಯಕ್ಕೆ ಆತ್ಮಿಕ ಆಹಾರವನ್ನು ತಯಾರಿಸುವುದರಲ್ಲಿ ಮತ್ತೊಂದು ಮಹಾ ಅಭಿವೃದ್ಧಿ ಮಾಡಲಾಯಿತು. ಈ ಮೊದಲು, ಹಳೆಯ ತಂತ್ರಜ್ಞಾನವನ್ನು ಉಪಯೋಗಿಸುವ ಸಮಯದಲ್ಲಿ, ಇಂಗ್ಲಿಷ್ ಭಾಷೆಯ ಪತ್ರಿಕೆಗಳಲ್ಲಿ ಮೂಡಿಬಂದ ಮಾಹಿತಿಯು ಕೆಲವು ತಿಂಗಳುಗಳು ಇಲ್ಲವೆ ಒಂದು ವರ್ಷದ ನಂತರವೂ ಇಂಗ್ಲಿಷೇತರ ಭಾಷೆಯ ಪತ್ರಿಕೆಗಳಲ್ಲಿ ಬರುತ್ತಿತ್ತು. ಈಗ, ಕಾವಲಿನಬುರುಜು ಪತ್ರಿಕೆಯು 115 ವಿಭಿನ್ನ ಭಾಷೆಗಳಲ್ಲಿ ಮತ್ತು ಎಚ್ಚರ! ಪತ್ರಿಕೆಯು 62 ಭಾಷೆಗಳಲ್ಲಿ ಏಕಕಾಲಿಕವಾಗಿ ಬರುತ್ತವೆ. ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸಾಪ್ತಾಹಿಕ ಕಾವಲಿನಬುರುಜು ಅಧ್ಯಯನಕ್ಕೆ ಹಾಜರಾಗುವ 95 ಪ್ರತಿಶತಕ್ಕಿಂತಲೂ ಹೆಚ್ಚಿನವರು, ಏಕಕಾಲದಲ್ಲಿ ಅದೇ ವಿಷಯವನ್ನು ಪರಿಗಣಿಸುತ್ತಾರೆ ಎಂಬುದನ್ನು ಇದು ಅರ್ಥೈಸುತ್ತದೆ. ಇದೆಂತಹ ಆಶೀರ್ವಾದವಾಗಿದೆ! ಆ ಎಲ್ಲ ಹೊಸ ತಂತ್ರಜ್ಞಾನದಲ್ಲಿ ಬಂಡವಾಳ ಹೂಡಲು, ಇದು ನಿಶ್ಚಯವಾಗಿಯೂ ಯಜಮಾನನ ಸ್ವತ್ತುಗಳ ಉತ್ತಮ ಉಪಯೋಗವಾಗಿತ್ತು!
ಭಿನ್ನವಾದ ಸಂಘಟನಾತ್ಮಕ ಅಗತ್ಯಗಳು
12 ಈ ಹೊಸ ಮುದ್ರಣಾ ವ್ಯವಸ್ಥೆಗಳು, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಮುದ್ರಣಾ ಕಾರ್ಯಾಚರಣೆಗಳ ಸಂಘಟನಾತ್ಮಕ ಅಗತ್ಯಗಳನ್ನು ಬದಲಾಯಿಸಿದವು. ವೆಬ್ ಆಫ್ಸೆಟ್ ಯಂತ್ರಗಳು ಹಳೆಯ ಉಬ್ಬಚ್ಚುಗಳಿಗಿಂತ ಹೆಚ್ಚು ವೇಗವಾಗಿದ್ದರೂ, ಅವು ಬಹಳ ದುಬಾರಿಯಾಗಿಯೂ ಇವೆ. ಬರಹ, ಭಾಷಾಂತರ, ಚಿತ್ರದ ಕೆಲಸ, ಮತ್ತು ಗ್ರಾಫಿಕ್ಸ್ನಂತಹ ಮುದ್ರಣಕ್ಕೆ ಸಂಬಂಧಿಸಿದ ಕೆಲಸವನ್ನು ಬೆಂಬಲಿಸುವ ಕಂಪ್ಯೂಟರ್ ವ್ಯವಸ್ಥೆಗಳು, ಹಳೆಯ ವ್ಯವಸ್ಥೆಗಳಿಗಿಂತ ಹೆಚ್ಚಿನ ಸಾಧ್ಯತೆಗಳನ್ನು ನೀಡುವುದರ ಜೊತೆಗೆ ಹೆಚ್ಚು ದುಬಾರಿಯಾಗಿವೆ. ಆದಕಾರಣ 51 ಬೇರೆ ಬೇರೆ ದೇಶಗಳಲ್ಲಿ ಪತ್ರಿಕೆಗಳನ್ನು ಮುದ್ರಿಸುವುದು ಇನ್ನು ಮುಂದೆ ಮಿತವ್ಯಯದ್ದಾಗಿಲ್ಲ ಎಂಬುದು ಬೇಗನೆ ಸುಸ್ಪಷ್ಟವಾಯಿತು. ಆದಕಾರಣ 1990ಗಳಲ್ಲಿ, “ನಂಬಿಗಸ್ತ ಮನೆವಾರ್ತೆಯವನು” ಸನ್ನಿವೇಶವನ್ನು ಮತ್ತೊಮ್ಮೆ ಪರಿಶೀಲಿಸಿದನು. ತೀರ್ಮಾನವು ಏನಾಗಿತ್ತು?
13 ಮುದ್ರಣಾ ಕೆಲಸವು ಒಟ್ಟುಗೂಡಿಸಲ್ಪಡುವುದಾದರೆ, ಯೆಹೋವನ ಸಾಕ್ಷಿಗಳು ಮತ್ತು ಅವರ ಮಿತ್ರರಿಂದ ಕಾಣಿಕೆಯಾಗಿ ನೀಡಲ್ಪಟ್ಟ ‘ಅಮೂಲ್ಯ ವಸ್ತುಗಳು’ ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸಲ್ಪಡುವವೆಂದು ಅಧ್ಯಯನಗಳು ಸೂಚಿಸಿದವು. ಆದುದರಿಂದ ಮುದ್ರಣಾ ಬ್ರಾಂಚುಗಳ ಸಂಖ್ಯೆಯು ಕ್ರಮೇಣ ಕಡಿಮೆಮಾಡಲ್ಪಟ್ಟಿತು. ಈ ಮೊದಲು ತಮ್ಮ ಸ್ವಂತ ಮುದ್ರಣವನ್ನು ನಿರ್ವಹಿಸುತ್ತಿದ್ದ ಕೆಲವು ದೇಶಗಳನ್ನೂ ಸೇರಿಸಿ, ಪೂರ್ವ ಹಾಗೂ ಪಶ್ಚಿಮ ಯೂರೋಪ್ನ ಅನೇಕ ದೇಶಗಳ ಪತ್ರಿಕೆಗಳು ಹಾಗೂ ಸಾಹಿತ್ಯದ ಮುದ್ರಣವನ್ನು ಜರ್ಮನಿ ದೇಶವು ವಹಿಸಿಕೊಂಡಿದೆ. ಇಟಲಿ ದೇಶವು, ಆಫ್ರಿಕದ ಭಾಗಗಳಿಗೆ ಮತ್ತು ಗ್ರೀಸ್ ಹಾಗೂ ಆ್ಯಲ್ಬೇನಿಯವನ್ನು ಸೇರಿಸಿ ಆಗ್ನೇಯ ಯೂರೋಪಿಗೆ ಸಾಹಿತ್ಯವನ್ನು ಸರಬರಾಜುಮಾಡುತ್ತದೆ. ಆಫ್ರಿಕದಲ್ಲಿ, ಪತ್ರಿಕೆಯ ಮುದ್ರಣವು, ನೈಜೀರಿಯ ಹಾಗೂ ದಕ್ಷಿಣ ಆಫ್ರಿಕಕ್ಕೆ ಸೀಮಿತಗೊಳಿಸಲ್ಪಟ್ಟಿದೆ. ಲೋಕದಾದ್ಯಂತ ತದ್ರೀತಿಯ ಒಟ್ಟುಗೂಡಿಸುವಿಕೆ ಸಂಭವಿಸಿತು.
ತೂಗಿನೋಡಬೇಕಾದ ಅಂಶಗಳು
14 ಜುಲೈ 1998ರೊಳಗಾಗಿ, ಆಸ್ಟ್ರಿಯ, ಗ್ರೀಸ್, ಡೆರ್ನ್ಮಾಕ್, ನೆದರ್ಲೆಂಡ್ಸ್, ಫ್ರಾನ್ಸ್, ಮತ್ತು ಸ್ವಿಟ್ಸರ್ಲೆಂಡ್ ಅನ್ನು ಸೇರಿಸಿ ಯೂರೋಪಿನ ಅನೇಕ ದೇಶಗಳಲ್ಲಿ, ಪತ್ರಿಕೆಗಳ ಮುದ್ರಣವು ನಿಲ್ಲಿಸಲ್ಪಟ್ಟಿರುವುದು. ಯೂರೋಪಿನಲ್ಲಿ ಮುದ್ರಣದ ಹೊರೆಯು, ಇಟಲಿ, ಜರ್ಮನಿ, ಫಿನ್ಲೆಂಡ್, ಬ್ರಿಟನ್, ಸ್ಪೆಯ್ನ್, ಮತ್ತು ಸ್ವೀಡನ್ನಿಂದ ಹೊರಲ್ಪಡುವುದು. ಯಾವ ದೇಶಗಳು ಮುದ್ರಣಾ ಸ್ಥಳಗಳಾಗಿ ಮುಂದುವರಿಯುವವು, ಮತ್ತು ಯಾವ ದೇಶಗಳು ಮುದ್ರಿಸುವುದನ್ನು ನಿಲ್ಲಿಸುವವೆಂದು ಹೇಗೆ ತೀಮಾರ್ನಿಸಲಾಯಿತು? ಯಜಮಾನನ ಸ್ವತ್ತುಗಳನ್ನು ವಿವೇಕಯುತವಾಗಿ ನೋಡಿಕೊಳ್ಳುವ ಆಜ್ಞೆಗನುಸಾರ, “ನಂಬಿಗಸ್ತ ಮನೆವಾರ್ತೆಯವನು” ಜಾಗರೂಕವಾಗಿ ಪ್ರತಿಯೊಂದು ಸ್ಥಳದಲ್ಲಿ ಆಗಬಹುದಾದ ಮುದ್ರಣಾ ವೆಚ್ಚವನ್ನು ಅಲ್ಲದೆ ಸಂಬಂಧಪಟ್ಟ ವಿತರಣಾ ವೆಚ್ಚಗಳನ್ನು ಪರೀಕ್ಷಿಸಿ ನೋಡಿದನು. ಎಲ್ಲೆಲ್ಲಿ ಸಾಹಿತ್ಯವನ್ನು ಅತ್ಯಂತ ಅನುಕೂಲಕರವಾದ ನ್ಯಾಯಬದ್ಧ ಪರಿಸ್ಥಿತಿಗಳ ಕೆಳಗೆ ಮುದ್ರಿಸಿ, ವಿತರಿಸಸಾಧ್ಯವಿದೆ ಎಂಬುದನ್ನು ನೋಡಲು, ಅವನು ಪ್ರತಿಯೊಂದು ದೇಶದ ನಿಯಮಗಳನ್ನು ಪರೀಕ್ಷಿಸಿ ನೋಡಿದನು.
15 ಕೆಲವು ದೇಶಗಳಲ್ಲಿ ಮುದ್ರಣವು ನಿಲ್ಲಿಸಲ್ಪಟ್ಟು, ಇತರ ದೇಶಗಳಲ್ಲಿ ಒಟ್ಟುಗೂಡಿಸಲ್ಪಟ್ಟದ್ದರ ಪ್ರಧಾನ ಕಾರಣವು ಪ್ರಾಯೋಗಿಕತೆಯಾಗಿತ್ತು. ಇತರ ಹಲವಾರು ದೇಶಗಳಿಗಾಗಿ ಒಂದು ದೇಶವು ಸಾಹಿತ್ಯವನ್ನು ಮುದ್ರಿಸುವ ಸಂಗತಿಯು, ಹೆಚ್ಚು ಅನುಕೂಲಕರವೂ ದುಬಾರಿಯಾದ ಸಲಕರಣೆಗಳ ಉತ್ತಮ ಬಳಕೆಯೂ ಆಗಿದೆ. ಎಲ್ಲಿ ವೆಚ್ಚಗಳು ಕಡಿಮೆಯಾಗಿದ್ದು, ಸಾಮಗ್ರಿಗಳು ಲಭ್ಯವಾಗಿದ್ದು, ರವಾನೆಯ ಸೌಕರ್ಯಗಳು ಒಳ್ಳೆಯದಾಗಿ ಇವೆಯೊ, ಅಲ್ಲಿ ಈಗ ಮುದ್ರಣವು ಮಾಡಲ್ಪಡುತ್ತದೆ. ಹೀಗೆ, ಯಜಮಾನನ ಸ್ವತ್ತುಗಳು ಯೋಗ್ಯವಾಗಿ ಬಳಸಲ್ಪಡುತ್ತಿವೆ. ಒಂದು ದೇಶದಲ್ಲಿ ಮುದ್ರಣವನ್ನು ನಿಲ್ಲಿಸುವುದು, ಅಲ್ಲಿ ನಡೆಯುತ್ತಿರುವ ಸಾರುವ ಕೆಲಸವನ್ನು ನಿಲ್ಲಿಸಲಾಗುತ್ತದೆ ಎಂಬುದನ್ನು ನಿಶ್ಚಯವಾಗಿಯೂ ಅರ್ಥೈಸಲಾರದು. ಮುದ್ರಿತ ವಿಷಯದ ಹೇರಳವಾದ ಸರಬರಾಯಿಯು ಇನ್ನೂ ಲಭ್ಯವಿರುವುದು, ಮತ್ತು ಆ ದೇಶಗಳಲ್ಲಿನ ಯೆಹೋವನ ನೂರಾರು ಸಾವಿರ ಸಾಕ್ಷಿಗಳು, ಹುರುಪಿನಿಂದ ತಮ್ಮ ನೆರೆಯವರಿಗೆ “ಶಾಂತಿಯ ಸುವಾರ್ತೆ”ಯನ್ನು ಸಾರುತ್ತಾ ಇರುವರು. (ಎಫೆ. 2:17) ಇನ್ನೂ ಹೆಚ್ಚಾಗಿ, ಆರ್ಥಿಕ ಲಾಭಗಳಲ್ಲದೆ, ಈ ಪುನರ್ಸಂಘಟನೆಯು ಬೇರೆ ಪ್ರಯೋಜನಗಳಲ್ಲಿಯೂ ಫಲಿಸಿದೆ.
16 ಒಂದು ಪ್ರಯೋಜನವು ಯಾವುದೆಂದರೆ, ಗ್ರೀಸ್, ಡೆರ್ನ್ಮಾಕ್, ನೆದರ್ಲೆಂಡ್ಸ್, ಮತ್ತು ಸ್ವಿಟ್ಸರ್ಲೆಂಡ್ನ ಆಧುನಿಕ ಯುಂತ್ರಗಳಲ್ಲಿ ಹೆಚ್ಚಿನವು, ನೈಜೀರಿಯ ಮತ್ತು ಫಿಲಿಪ್ಪೀನ್ಸ್ಗೆ ಕಳುಹಿಸಲ್ಪಟ್ಟವು. ಯೂರೋಪಿಯನ್ ದೇಶಗಳಲ್ಲಿನ ಕುಶಲ ಕಾರ್ಯನಿರ್ವಾಹಕರು, ಆ ಯುಂತ್ರಗಳೊಂದಿಗೆ ಹೋಗುವ ಮತ್ತು ಅವುಗಳ ನಿರ್ವಹಣೆಯಲ್ಲಿ ಸ್ಥಳಿಕ ನಿರ್ವಾಹಕರಿಗೆ ತರಬೇತಿ ನೀಡುವ ಆಮಂತ್ರಣವನ್ನು ಸ್ವೀಕರಿಸಿದರು. ಆದಕಾರಣ, ಇತರ ದೇಶಗಳು ಈಗಾಗಲೇ ಪಡೆದುಕೊಂಡಿದ್ದ ಅದೇ ಉನ್ನತ ಗುಣಮಟ್ಟದ ಪತ್ರಿಕೆಗಳನ್ನು ಆ ದೇಶಗಳೂ ಪಡೆದುಕೊಳ್ಳುತ್ತಿವೆ.
17 ಮತ್ತೊಂದು ಪ್ರಯೋಜನವನ್ನು ಪರಿಗಣಿಸಿರಿ: ಎಲ್ಲಿ ಮುದ್ರಣವು ಮುಂದುವರಿಯುತ್ತದೊ ಆ ಕೊಂಚ ದೇಶಗಳು ಮಾತ್ರ ಪತ್ರಿಕೆಗಳನ್ನು ಮುದ್ರಿಸುವ ವೆಚ್ಚವನ್ನು ಈಗ ಹೊರುತ್ತವೆ. ಫಲಸ್ವರೂಪವಾಗಿ, ಎಲ್ಲಿ ಮುದ್ರಣವನ್ನು ನಿಲ್ಲಿಸಲಾಗಿದೆಯೊ ಆ ದೇಶಗಳಲ್ಲಿ, ರಾಜ್ಯ ಸಭಾಗೃಹಗಳನ್ನು ಕಟ್ಟುವುದು ಮತ್ತು ಬಡ ದೇಶಗಳಲ್ಲಿರುವ ನಮ್ಮ ಸಹೋದರರ ಅಗತ್ಯಗಳ ಕಡೆಗೆ ಕಾಳಜಿವಹಿಸುವಂತಹ ಬೇರೆ ಉದ್ದೇಶಗಳಿಗಾಗಿ ಸಂಪನ್ಮೂಲಗಳು ಈಗ ಲಭ್ಯವಿವೆ. ಹೀಗೆ, ಯಜಮಾನನ ಸ್ವತ್ತುಗಳ ಜಾಗರೂಕ ಬಳಕೆಯು, ಕೊರಿಂಥದವರಿಗೆ ಪೌಲನು ಬರೆದ ಮಾತುಗಳು, ಅಂತಾರಾಷ್ಟ್ರೀಯ ಪ್ರಮಾಣದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅನ್ವಯಿಸಲ್ಪಡಸಾಧ್ಯ ಎಂಬುದನ್ನು ಅರ್ಥೈಸುತ್ತದೆ: “ಇತರರಿಗೆ ಕಷ್ಟಪರಿಹಾರವೂ ನಿಮಗೆ ಕಷ್ಟವೂ ಉಂಟಾಗಬೇಕೆಂಬದು ನನ್ನ ತಾತ್ಪರ್ಯವಲ್ಲ; . . . ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುತ್ತದೆ. . . . ಹೀಗೆ ಸಮಾನತ್ವವುಂಟಾಗುವದು.”—2 ಕೊರಿಂ. 8:13, 14.
18 ಈ ಒಟ್ಟುಗೂಡಿಸುವಿಕೆಯ ಪರಿಣಾಮವಾಗಿ, ಲೋಕದ ಸುತ್ತಲೂ ಇರುವ ಯೆಹೋವನ ಸಾಕ್ಷಿಗಳು, ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಹತ್ತಿರಕ್ಕೆ ಸೆಳೆಯಲ್ಪಟ್ಟಿದ್ದಾರೆ. ಡೆರ್ನ್ಮಾಕ್ನಲ್ಲಿದ್ದ ಸಾಕ್ಷಿಗಳು ತಮ್ಮ ಸ್ವಂತ ಪತ್ರಿಕೆಗಳನ್ನು ಮುದ್ರಿಸುತ್ತಿದ್ದರೂ, ಈಗ ಜರ್ಮನಿಯಲ್ಲಿ ಅದು ಮುದ್ರಿತವಾಗುವುದರಿಂದ ಅದು ಅವರಿಗೊಂದು ಸಮಸ್ಯೆಯಾಗಿರುವುದಿಲ್ಲ. ತಮ್ಮ ಜರ್ಮನ್ ಸಹೋದರರ ಸೇವೆಗೆ ಅವರು ಕೃತಜ್ಞರಾಗಿದ್ದಾರೆ. ಡೆರ್ನ್ಮಾಕ್ಗಾಗಿ ಅಥವಾ ರಷ್ಯ, ಯುಕ್ರೇನ್, ಮತ್ತು ಇತರ ದೇಶಗಳಿಗಾಗಿ ಬೈಬಲ್ ಸಾಹಿತ್ಯವನ್ನು ಒದಗಿಸಲು, ತಮ್ಮ ಕಾಣಿಕೆಗಳು ಬಳಸಲ್ಪಡುತ್ತಿರುವ ನಿಜಾಂಶಕ್ಕೆ ಜರ್ಮನಿಯಲ್ಲಿರುವ ಯೆಹೋವನ ಸಾಕ್ಷಿಗಳು ಅಸಮಾಧಾನಪಡುತ್ತಾರೊ? ಖಂಡಿತವಾಗಿಯೂ ಇಲ್ಲ! ಆ ದೇಶಗಳಲ್ಲಿರುವ ತಮ್ಮ ಸಹೋದರರ ಕಾಣಿಕೆಗಳು ಬೇರೆ ಆವಶ್ಯಕ ಉದ್ದೇಶಗಳಿಗಾಗಿ ಈಗ ಉಪಯೋಗಿಸಲ್ಪಡಸಾಧ್ಯವಿದೆ ಎಂಬುದನ್ನು ತಿಳಿದು ಅವರು ಸಂತೋಷಿಸುತ್ತಾರೆ.
ಸ್ವತ್ತುಗಳ ಕಾಳಜಿವಹಿಸುವುದು
19 ಲೋಕದಾದ್ಯಂತ ಯೆಹೋವನ ಸಾಕ್ಷಿಗಳ ಪ್ರತಿಯೊಂದು ರಾಜ್ಯ ಸಭಾಗೃಹದಲ್ಲಿ, “ಸೊಸೈಟಿಯ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು—ಮತ್ತಾಯ 24:14” ಎಂಬುದಾಗಿ ಬರೆಯಲ್ಪಟ್ಟಿರುವ ಒಂದು ಕಾಣಿಕೆ ಪೆಟ್ಟಿಗೆಯು ಇರುತ್ತದೆ. ಈ ಪೆಟ್ಟಿಗೆಗಳಲ್ಲಿ ಹಾಕಲ್ಪಡುವ ವಿನಂತಿಸಲ್ಪಡದ ಕಾಣಿಕೆಗಳು, ಅಗತ್ಯವಿರುವಲ್ಲಿ ಉಪಯೋಗಿಸಲ್ಪಡಲಿಕ್ಕಾಗಿವೆ. ಕಾಣಿಕೆಗಳು ಹೇಗೆ ಉಪಯೋಗಿಸಲ್ಪಡುತ್ತವೆ ಎಂಬುದು “ನಂಬಿಗಸ್ತ ಮನೆವಾರ್ತೆಯವ”ನಿಂದ ತೀರ್ಮಾನಿಸಲ್ಪಡುತ್ತದೆ. ಆದಕಾರಣ, ಒಂದು ಸಭೆಯ ಕಾಣಿಕೆಯ ಪೆಟ್ಟಿಗೆಯಲ್ಲಿರುವ ಹಣವು, ನೂರಾರು ಕಿಲೊಮೀಟರುಗಳಷ್ಟು ದೂರದಲ್ಲಿರುವ ಮತ್ತೊಂದು ಸಭೆಯ ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ಬೆಂಬಲಿಸಬಹುದು. ಚಂಡಮಾರುತಗಳು, ಸುಂಟರಗಾಳಿಗಳು, ಭೂಕಂಪಗಳು, ಮತ್ತು ಆಂತರಿಕ ಯುದ್ಧಗಳಂತಹ ಪರಿಸ್ಥಿತಿಗಳಿಂದಾಗಿ ಕಷ್ಟಾನುಭವಿಸುತ್ತಿರುವ ಜೊತೆ ವಿಶ್ವಾಸಿಗಳಿಗೆ ತುರ್ತು ಸಹಾಯನೀಡಲು ಈ ಕಾಣಿಕೆಗಳು ಉಪಯೋಗಿಸಲ್ಪಡುತ್ತವೆ. ಮತ್ತು ಅಂತಹ ಕಾಣಿಕೆಗಳು, ದೇಶದಾದ್ಯಂತ ವಿಶೇಷ ಪೂರ್ಣ ಸಮಯದ ಸೇವೆಯಲ್ಲಿರುವವರಿಗೆ ಬೆಂಬಲ ನೀಡಲು ಉಪಯೋಗಿಸಲ್ಪಡುತ್ತವೆ.
20 ಒಂದು ಸಾಮಾನ್ಯ ನಿಯಮದಂತೆ, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ, ಹಣಕಾಸಿನ ವಿಷಯಗಳು ತಿಂಗಳಿಗೊಮ್ಮೆ ಮಾತ್ರ ತಿಳಿಸಲ್ಪಡುತ್ತವೆ—ಅದೂ ಕೆಲವೇ ನಿಮಷಗಳಿಗಾಗಿ. ರಾಜ್ಯ ಸಭಾಗೃಹಗಳಲ್ಲಿ ಇಲ್ಲವೆ ಸಮ್ಮೇಳನಗಳಲ್ಲಿ ಹಣ ಕೂಡಿಸುವ ತಟ್ಟೆಗಳನ್ನು ದಾಟಿಸಲಾಗುವುದಿಲ್ಲ. ಹಣಕೊಡುವಂತೆ ವ್ಯಕ್ತಿಗಳಿಗೆ ಮನವಿಗಳನ್ನು ಕಳುಹಿಸಲಾಗುವುದಿಲ್ಲ. ಆರ್ಥಿಕ ಸಹಾಯ ಕೋರುವವರನ್ನು ಕರೆಸಲಾಗುವುದಿಲ್ಲ. ಸಾಧಾರಣವಾಗಿ, ಲೋಕವ್ಯಾಪಕ ಕೆಲಸವನ್ನು ಬೆಂಬಲಿಸುವ ಸಲುವಾಗಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಗೆ ಕಾಣಿಕೆಗಳನ್ನು ನೀಡಲು ಬಯಸುವವರು, ಅದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ವಿವರಿಸುತ್ತಾ, ಪ್ರತಿವರ್ಷ ಕಾವಲಿನಬುರುಜು ಪತ್ರಿಕೆಯಲ್ಲಿ ಕೇವಲ ಒಂದು ಲೇಖನವಿರುತ್ತದೆ. ಎಚ್ಚರ! ಪತ್ರಿಕೆಯಲ್ಲಿ ಸೊಸೈಟಿಯ ಹಣಕಾಸಿನ ಕುರಿತಾದ ಕ್ರಮವಾದ ಉಲ್ಲೇಖವು ಇರುವುದಿಲ್ಲ. ಹಾಗಾದರೆ ಸುವಾರ್ತೆಯನ್ನು ಸಾರುವ ಬೃಹತ್ತಾದ ಈ ಲೋಕವ್ಯಾಪಕ ಕೆಲಸ, ಅಗತ್ಯವಾದ ರಾಜ್ಯ ಸಭಾಗೃಹಗಳ ಕಟ್ಟುವಿಕೆ, ವಿಶೇಷವಾದ ಪೂರ್ಣ ಸಮಯದ ಸೇವೆಯಲ್ಲಿರುವವರ ಪರಾಮರಿಕೆ ಮತ್ತು ಅಗತ್ಯದಲ್ಲಿರುವ ಕ್ರೈಸ್ತರಿಗೆ ಸಹಾಯ ನೀಡುವಿಕೆಯು ಹೇಗೆ ಸಾಧಿಸಲ್ಪಟ್ಟಿತು? ಯೆಹೋವನು ಅದ್ಭುತಕರವಾದ ವಿಧದಲ್ಲಿ, ಉದಾರಭಾವದ ಮನೋಭಾವದೊಂದಿಗೆ ಆಶೀರ್ವದಿಸಿದ್ದಾನೆ. (2 ಕೊರಿಂ. 8:2) ‘ತಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸು’ವುದರಲ್ಲಿ ಪಾಲು ಹೊಂದಿರುವ ಎಲ್ಲರಿಗೆ ಉಪಕಾರ ಹೇಳಲು, ನಾವು ಈ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತೇವೆ. ಆ “ನಂಬಿಗಸ್ತ ಮನೆವಾರ್ತೆಯವನು” ಯಜಮಾನನ ಸ್ವತ್ತುಗಳ ಕಾಳಜಿವಹಿಸುತ್ತಾ ಇರುವನೆಂಬ ವಿಷಯದಲ್ಲಿ ನಾವು ಖಚಿತರಾಗಿರಸಾಧ್ಯವಿದೆ. ಮತ್ತು ಈ ಲೋಕವ್ಯಾಪಕ ಕೆಲಸದ ವಿಸ್ತರಣೆಗಾಗಿ ಮಾಡಲ್ಪಟ್ಟಿರುವ ಈ ಎಲ್ಲ ಏರ್ಪಾಡುಗಳನ್ನು ಯೆಹೋವನು ಆಶೀರ್ವದಿಸುತ್ತಾ ಇರುವನೆಂದು ನಾವು ಪ್ರಾರ್ಥಿಸುತ್ತೇವೆ.
[ಪಾದಟಿಪ್ಪಣಿ]
a ಇವುಗಳಲ್ಲಿ ಏಳು ದೇಶಗಳ ಮುದ್ರಣವು, ವ್ಯಾಪಾರಿ ಕಂಪನಿಗಳಿಂದ ಮಾಡಲ್ಪಟ್ಟಿತು.