ಕುಟುಂಬ ಸದಸ್ಯರು ಪೂರ್ಣವಾಗಿ ಪಾಲ್ಗೊಳ್ಳುವುದಕ್ಕಾಗಿ ಸಹಕರಿಸುವ ವಿಧ —ಬೈಬಲ್ ಅಭ್ಯಾಸದಲ್ಲಿ
1 ಸತ್ಯವು, ಕುಟುಂಬ ಜೀವಿತಕ್ಕೆ ನಿಜವಾದ ಅರ್ಥವನ್ನೂ ಉದ್ದೇಶವನ್ನೂ ಕೂಡಿಸುವುದಾದರೂ, ಯೆಹೋವನಿಗೆ ಸೇವೆಸಲ್ಲಿಸುವುದರಲ್ಲಿ ಸಾಫಲ್ಯವು ತನ್ನಿಂದ ತಾನೇ ಉಂಟಾಗುವುದಿಲ್ಲ. ಆತ್ಮಿಕವಾಗಿ ಬಲವಾಗಿರುವ ಕುಟುಂಬವನ್ನು ಕಟ್ಟಲು ಸಮಯ ಮತ್ತು ಶ್ರಮವು ಬೇಕಾಗುತ್ತದೆ. ಈ ಪ್ರಯತ್ನದಲ್ಲಿ ಕುಟುಂಬ ಸದಸ್ಯರು ಒಟ್ಟುಗೂಡಿ ಕೆಲಸಮಾಡುವುದು ತುಂಬ ಅಗತ್ಯ. ಮೂರು ಭಾಗದ ಲೇಖನಮಾಲೆಯ ಈ ಪ್ರಥಮ ಲೇಖನವು, ಒಳ್ಳೆಯ ಅಧ್ಯಯನ ಹವ್ಯಾಸಗಳನ್ನು ವಿಕಸಿಸುವುದರಲ್ಲಿ ಕುಟುಂಬಗಳು ಹೇಗೆ ಸಹಕರಿಸಸಾಧ್ಯವಿದೆ ಎಂಬುದರ ಮೇಲೆ ಒತ್ತನ್ನು ಕೊಡುವುದು.
2 ಪ್ರತಿ ದಿನವೂ ಬೈಬಲನ್ನು ಓದುವ ಮೂಲಕ: “ಜ್ಞಾನವುಳ್ಳ ಮನುಷ್ಯನು ಬಲವರ್ಧಕನಾಗಿದ್ದಾನೆ” (NW) ಎಂದು ಜ್ಞಾನೋಕ್ತಿ 24:5 ಹೇಳುತ್ತದೆ. ದೇವರ ವಾಕ್ಯವನ್ನು ಕ್ರಮವಾಗಿ ಓದುವುದರಿಂದ ಗಳಿಸಿದ ಜ್ಞಾನವು, ಒಬ್ಬ ವ್ಯಕ್ತಿಗೆ ತನ್ನ ಆತ್ಮಿಕತೆಯ ಮೇಲೆ ಸೈತಾನನು ಮಾಡುವ ಆಕ್ರಮಣಗಳನ್ನು ಎದುರಿಸಿ ನಿಲ್ಲಲು ಬೇಕಾಗಿರುವ ಆಂತರಿಕ ಬಲವನ್ನು ಕೊಡುತ್ತದೆ. (ಕೀರ್ತ. 1:1, 2) ಕುಟುಂಬದೋಪಾದಿ ದಿನನಿತ್ಯವೂ ನೀವು ಒಟ್ಟಿಗೆ ಬೈಬಲನ್ನು ಓದುತ್ತೀರೋ? ದೇವಪ್ರಭುತ್ವ ಶುಶ್ರೂಷಾ ಶಾಲೆಯು, ಇಡೀ ವರ್ಷದ ಪ್ರತಿಯೊಂದು ವಾರಕ್ಕಾಗಿ “ಸಂಪೂರಕ ಬೈಬಲ್ ಅಧ್ಯಯನದ ಶೆಡ್ಯೂಲ್” ಅನ್ನು ಒದಗಿಸುತ್ತದೆ. ಈ ಶೆಡ್ಯೂಲನ್ನು ಅನುಸರಿಸಲು, ಪ್ರತಿ ದಿನ ಕೇವಲ ಹತ್ತು ನಿಮಿಷಗಳು ಬೇಕಾಗುತ್ತದೆ. ಬೆಳಗ್ಗಿನ ಉಪಾಹಾರದ ಸಮಯ, ರಾತ್ರಿಯೂಟದ ಅನಂತರ, ಅಥವಾ ಮಲಗುವ ಮುನ್ನ ಇಂತಹ ಅನುಕೂಲಕರವಾದ ಸಮಯವನ್ನು ಆಯ್ದುಕೊಳ್ಳಿರಿ. ಈ ಸಮಯದಲ್ಲಿ ಬೈಬಲನ್ನು ಓದಿರಿ ಮತ್ತು ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಕದಿಂದ ದಿನದ ವಚನವನ್ನು ಪರಿಗಣಿಸಿರಿ. ಇದನ್ನು ನಿಮ್ಮ ಕುಟುಂಬದ ಅವಿಭಾಜ್ಯ ಅಂಗವನ್ನಾಗಿ ಮಾಡಿರಿ.
3 ಪ್ರತಿ ವಾರ ಒಟ್ಟಿಗೆ ಅಧ್ಯಯನವನ್ನು ಮಾಡುವ ಮೂಲಕ: ಕುಟುಂಬದ ವಾರಪೂರ್ತಿ ಚಟುವಟಿಕೆಯಲ್ಲಿ ಕುಟುಂಬ ಬೈಬಲ್ ಅಧ್ಯಯನವು ಮುಖ್ಯ ವಿಷಯವಾಗಿರಬೇಕು. ಅಧ್ಯಯನದಲ್ಲಿ ಉತ್ಸುಕತೆಯಿಂದ ಭಾಗವಹಿಸುವ ಮೂಲಕ ಪ್ರತಿಯೊಬ್ಬ ಸದಸ್ಯನು ಅದಕ್ಕೆ ಬೆಂಬಲವನ್ನು ನೀಡಬೇಕು. ಅಭ್ಯಾಸದ ವಿಷಯವನ್ನು ಆರಿಸಿಕೊಳ್ಳುವಾಗ ಕುಟುಂಬದವರ ಅಗತ್ಯಗಳನ್ನು ಮತ್ತು ಅಧ್ಯಯನದ ದಿನ, ಸಮಯ ಮತ್ತು ಎಷ್ಟು ಸಮಯದ ತನಕ ಮಾಡಬೇಕು ಎಂಬುದರ ಬಗ್ಗೆ ಕುಟುಂಬದ ಮುಖ್ಯಸ್ಥನು ಪರ್ಯಾಲೋಚಿಸಬೇಕು. ವಾರದ ಶೆಡ್ಯೂಲಿನಲ್ಲಿ ಕುಟುಂಬ ಅಧ್ಯಯನಕ್ಕೆ ಮೊದಲ ಸ್ಥಾನವನ್ನು ಕೊಡಿರಿ. ಹೆಚ್ಚು ಪ್ರಾಮುಖ್ಯವಲ್ಲದ ವಿಷಯಗಳು ಅಡ್ಡ ಬರುವಂತೆ ಅನುಮತಿಸದಿರಿ.—ಫಿಲಿ. 1:10, 11.
4 ವ್ಯಾಪಾರದ ಸಂಬಂಧದಲ್ಲಿ ಯಾವಾಗಲೂ ಫೋನ್ ಕರೆಗಳನ್ನು ಉತ್ತರಿಸುತ್ತಿದ್ದ ಒಬ್ಬ ತಂದೆಯು, ಕುಟುಂಬದ ಅಧ್ಯಯನದ ಸಮಯದಲ್ಲಿ ಅದನ್ನು ಡಿಸ್ಕನೆಕ್ಟ್ ಮಾಡಿಬಿಡುತ್ತಿದ್ದನು. ಗಿರಾಕಿಗಳೇನಾದರೂ ತನ್ನ ಮನೆಗೆ ಬಂದಲ್ಲಿ, ಒಂದೋ ಅವರನ್ನು ಅಧ್ಯಯನದಲ್ಲಿ ಜೊತೆಗೂಡುವಂತೆ ಆಮಂತ್ರಿಸುತ್ತಿದ್ದನು ಇಲ್ಲವೇ ಅದು ಮುಗಿಯುವ ತನಕ ಕಾಯುವಂತೆ ಹೇಳುತ್ತಿದ್ದನು. ಕುಟುಂಬದ ಅಧ್ಯಯನದ ಮಧ್ಯೆ ಯಾವುದೇ ವಿಷಯವು ಅಡ್ಡಬರುವಂತೆ ಆ ತಂದೆಯು ಅನುಮತಿಸಲಿಲ್ಲ. ಇದು ಅವನ ಮಕ್ಕಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಮತ್ತು ಅವನು ವ್ಯಾಪಾರದಲ್ಲಿಯೂ ಏಳಿಗೆಯನ್ನು ಹೊಂದಿದನು.
5 ಆತ್ಮಿಕ ಚಟುವಟಿಕೆಗಳಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನು ಒಂದುಗೂಡಿ ಕೆಲಸಮಾಡುವಾಗ ಎಂತಹ ಒಂದು ಆನಂದವು ಸಿಗುತ್ತದೆ! ಅಷ್ಟುಮಾತ್ರವಲ್ಲದೆ, ಕುಟುಂಬ ಬೈಬಲ್ ಅಧ್ಯಯನದಲ್ಲಿ ಮಾಡುವ ಪ್ರಯತ್ನಗಳಲ್ಲಿನ ನಮ್ಮ ನಂಬಿಗಸ್ತಿಕೆಯು ಯೆಹೋವನ ಆಶೀರ್ವಾದವನ್ನು ತರುವುದು.—ಕೀರ್ತ. 1:3.