ನೀವು ಒಂದು ಉದ್ದೇಶದೊಂದಿಗೆ ಕಾರ್ಯನಡಿಸುತ್ತಿದ್ದೀರೋ?
1 ಯೆಹೋವನು ಉದ್ದೇಶವುಳ್ಳ ದೇವರಾಗಿದ್ದಾನೆ. (ಯೆಶಾ. 55:10, 11) ಆತನನ್ನು ಅನುಕರಿಸುವಂತೆ ನಮ್ಮನ್ನು ಉತ್ತೇಜಿಸಲಾಗಿದೆ. (ಎಫೆ. 5:1) ಇದು ನಾವು ನಮ್ಮ ಶುಶ್ರೂಷೆಯನ್ನು ನೆರವೇರಿಸುವ ವಿಧದಲ್ಲಿ ನಿಶ್ಚಯವಾಗಿಯೂ ತೋರಿಸಲ್ಪಡಲೇಬೇಕು. ಆದುದರಿಂದ ಈ ಪ್ರಶ್ನೆಯು ಉಚಿತವಾದದ್ದಾಗಿದೆ: “ನೀವು ಒಂದು ಉದ್ದೇಶದೊಂದಿಗೆ ಕಾರ್ಯನಡಿಸುತ್ತಿದ್ದೀರೋ?”
2 ನೀವು ಮನೆಯಿಂದ ಮನೆಗೆ ಸಾರುವುದು, ಅನೌಪಚಾರಿಕವಾಗಿ ಸಾಕ್ಷಿನೀಡುವುದು, ಮತ್ತು ಸಾಹಿತ್ಯಗಳನ್ನು ವಿತರಿಸುವುದು ಇವೆಲ್ಲ ಉದ್ದೇಶಭರಿತವಾದ ಶುಶ್ರೂಷೆಯ ಭಾಗವಾಗಿರುತ್ತವೆ. ಆದರೆ ನಮ್ಮ ನಿಯೋಗವು ಕೇವಲ ಸಾರುವುದನ್ನು ಮಾತ್ರವಲ್ಲ, ಶಿಷ್ಯರನ್ನಾಗಿ ಮಾಡುವುದನ್ನು ಸಹ ಒಳಗೊಳ್ಳುತ್ತದೆಂಬುದನ್ನು ನೆನಪಿನಲ್ಲಿಡಿರಿ. (ಮತ್ತಾ. 28:19, 20) ರಾಜ್ಯ ಸತ್ಯದ ಬೀಜಗಳನ್ನು ಬಿತ್ತಿದ ನಂತರ, ಅವುಗಳಿಗೆ ನೀರು ಹಾಯಿಸುವ ಮತ್ತು ಕ್ರಮವಾದ ಆರೈಕೆಯನ್ನು ನೀಡಲಿಕ್ಕಾಗಿ ನಾವು ಹಿಂದಿರುಗಿ ಹೋಗುವ ಅಗತ್ಯವಿದೆ. ಅದೇ ಸಮಯದಲ್ಲಿ, ಅದು ಬೆಳೆಯುವಂತೆ ಮಾಡಲು ನಾವು ಯೆಹೋವನ ಕಡೆಗೆ ನೋಡುತ್ತಿರಬೇಕು. (1 ಕೊರಿಂ. 3:6) ಪುನರ್ಭೇಟಿಗಳನ್ನು ಮಾಡುವ ಮತ್ತು ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸುವ ಕುರಿತು ನಾವು ಶುದ್ಧಾಂತಃಕರಣದಿಂದ ಕೆಲಸ ಮಾಡುವ ಅಗತ್ಯವಿದೆ.
3 ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಿರಿ: ಶುಶ್ರೂಷೆಯಲ್ಲಿ ನೀವು ಮಾಡಿರುವುದನ್ನು ಪುನಃ ಅವಲೋಕಿಸಿ, “ನಾನು ಮಾಡಲು ಹೊರಟ ಕೆಲಸವನ್ನು ಪೂರೈಸಿದ್ದೇನೆ” ಎಂದು ನಿಮಗೆ ಹೇಳಲು ಸಾಧ್ಯವಾದಾಗ ಯಾವಾಗಲೂ ಸಂತೃಪ್ತಿಯ ಭಾವನೆಯಿರುವುದು. 2 ತಿಮೊಥೆಯ 4:5ರಲ್ಲಿ (NW) ದಾಖಲಿಸಲಾದಂತೆ, ಪೌಲನು ಉತ್ತೇಜಿಸಿದ್ದು: “ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು.” ನೀವು ಕಂಡುಕೊಳ್ಳುವ ಎಲ್ಲ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುವ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸುವುದು ಇದರಲ್ಲಿ ಸೇರಿರುತ್ತದೆ. ನಿಮ್ಮ ಸಾಪ್ತಾಹಿಕ ಸೇವಾ ಕಾರ್ಯತಖ್ತೆಯಲ್ಲಿ ಪುನರ್ಭೇಟಿಗಳನ್ನು ಮಾಡುವುದಕ್ಕೆ ನಿಶ್ಚಿತವಾದ ಸಮಯವನ್ನು ಯೋಜಿಸಿರಿ. ನೀತಿಯ ಕಡೆಗೆ ಒಲವುಳ್ಳವರಾಗಿರುವ ಜನರೊಂದಿಗೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ಪ್ರಯತ್ನವನ್ನು ನಿಮ್ಮ ಗುರಿಯನ್ನಾಗಿ ಮಾಡಿ, ಅದನ್ನು ತಲುಪಲು ಕಾರ್ಯನಡೆಸಿರಿ. ಶುಶ್ರೂಷೆಯಲ್ಲಿ ಭಾಗವಹಿಸುವಾಗ ನಿಮ್ಮ ಉದ್ದೇಶವು ಇದೇ ಆಗಿರತಕ್ಕದ್ದು.
4 ತಮ್ಮ ಬೈಬಲ್ ವಿದ್ಯಾರ್ಥಿಗಳು ಸಮ್ಮೇಳನವೊಂದರಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದನ್ನು ನೋಡುವಾಗ ಪ್ರಚಾರಕರಿಗೆ ಹೇಗನಿಸಿತೆಂಬುದರ ಬಗ್ಗೆ ಅವರಿಗೆ ಕೇಳಿರಿ. ಬಹುಶಃ ದೀಕ್ಷಾಸ್ನಾನ ಪಡೆದುಕೊಂಡವರಿಗಾದಷ್ಟೇ ಆನಂದವನ್ನು ಅವರು ಅನುಭವಿಸಿದರು. ಅವರು ಒಂದು ಮಹಾ ಉದ್ದೇಶವನ್ನು ಪೂರೈಸಿದ್ದರು. ಶಿಷ್ಯರನ್ನಾಗಿ ಮಾಡುತ್ತಿರುವ ಒಬ್ಬ ಸಹೋದರಿಯು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದಳು: “ಶಿಷ್ಯರನ್ನಾಗಿ ಮಾಡುವುದೆಂದರೆ ಯೆಹೋವನಿಗಾಗಿ ಹೆಚ್ಚು ಸ್ತುತಿಗಾರರನ್ನು ಮಾಡುವುದು ಎಂದರ್ಥ. ಸತ್ಯವನ್ನು ಅಂಗೀಕರಿಸುವವರಿಗೆ ಇದು ಜೀವದ ಅರ್ಥದಲ್ಲಿದೆ. ಇತರರಿಗೆ ಸತ್ಯವನ್ನು ಕಲಿಸುವುದನ್ನು ನಾನು ತುಂಬ ಇಷ್ಟಪಡುತ್ತೇನೆ, ಇದು ಎಷ್ಟು ಸುಂದರವಾಗಿದೆ! . . . ಯೆಹೋವನನ್ನು ಪ್ರೀತಿಸತೊಡಗಿರುವವರಲ್ಲಿ ಅನೇಕರು, ನನ್ನ ಅತ್ಯಂತ ಆಪ್ತ ಸ್ನೇಹಿತರಾಗಿ ಪರಿಣಮಿಸಿದ್ದಾರೆ.”
5 ಒಬ್ಬ ವ್ಯಕ್ತಿಗೆ ಯೆಹೋವನ ಸಮರ್ಪಿತ ಸೇವಕನಾಗುವಂತೆ ನೆರವನ್ನು ನೀಡಶಕ್ತರಾಗಿರುವುದನ್ನು ಊಹಿಸಿಕೊಳ್ಳಿರಿ! ಇದು ಎಷ್ಟು ಆನಂದವನ್ನು ಕೊಡುತ್ತದೆ! ಶುಶ್ರೂಷೆಯಲ್ಲಿ ಒಂದು ಉದ್ದೇಶದೊಂದಿಗೆ ಕಾರ್ಯನಡಿಸುವುದರಿಂದ ಇಂತಹ ಪ್ರತಿಫಲವು ಸಿಗುತ್ತದೆ.—ಕೊಲೊ. 4:17.