ಹೆತ್ತವರೇ—ನಿಮ್ಮ ಮಕ್ಕಳಿಗಾಗಿ ಒಂದು ಒಳ್ಳೆಯ ಮಾದರಿಯನ್ನಿಡಿರಿ
1 “ಧರ್ಮಿಯ ತಂದೆಯು [ಮತ್ತು ತಾಯಿಯು] ಅತಿ ಸಂತೋಷಪಡುವನು” ಎಂದು ದೇವರ ವಾಕ್ಯವು ನಮಗೆ ಹೇಳುತ್ತದೆ. (ಜ್ಞಾನೋ. 23:24, 25) ತಮ್ಮ ಮಕ್ಕಳಿಗೆ ಒಳ್ಳೆಯ ಮಾದರಿಯನ್ನಿಟ್ಟಿರುವ ಹೆತ್ತವರಿಗೆ ಇದು ಎಂತಹ ಒಂದು ಆಶೀರ್ವಾದ! ಬ್ರಾಂಚ್ ಕಮಿಟಿಯ ಸದಸ್ಯನೊಬ್ಬನು ತನ್ನ ಹೆತ್ತವರ ಕುರಿತು ಹೀಗಂದನು: “ಸತ್ಯವು ಅವರ ಇಡೀ ಜೀವಿತವಾಗಿತ್ತು ಮತ್ತು ಅದನ್ನು ನಾನು ನನ್ನ ಇಡೀ ಜೀವಿತವನ್ನಾಗಿಯೂ ಮಾಡಲು ಬಯಸಿದೆ.” ಮಕ್ಕಳು ತಮ್ಮ ಹೆತ್ತವರಲ್ಲಿ ಏನನ್ನು ನೋಡತಕ್ಕದ್ದು?
2 ಶಿಷ್ಟಾಚಾರ ಮತ್ತು ಆಳವಾದ ಗೌರವ: ತಮ್ಮ ಮಕ್ಕಳಲ್ಲಿ ಹಿತಕರವಾದ ಗುಣಗಳನ್ನು ಬೇರೂರಿಸುವುದು ಹೆತ್ತವರ ಜವಾಬ್ದಾರಿಯಾಗಿರುತ್ತದೆ. ಮಕ್ಕಳು ಶಿಷ್ಟಾಚಾರಗಳನ್ನು ಕೇವಲ ಬಾಯಿಮಾತಿನ ಉಪದೇಶದಿಂದಲ್ಲ ಬದಲಾಗಿ ಗಮನಿಸುವ ಮೂಲಕ ಮತ್ತು ಅನುಕರಿಸುವ ಮೂಲಕ ಕಲಿತುಕೊಳ್ಳುತ್ತಾರೆ. ಆದುದರಿಂದ ನೀವು ಯಾವ ಶಿಷ್ಟಾಚಾರಗಳನ್ನು ಪ್ರದರ್ಶಿಸುತ್ತೀರಿ? “ನನ್ನನ್ನು ಕ್ಷಮಿಸಬೇಕು,” “ದಯವಿಟ್ಟು” ಮತ್ತು “ಉಪಕಾರ” ಎಂದು ನೀವು ಹೇಳುತ್ತಿರುವುದನ್ನು ನಿಮ್ಮ ಮಕ್ಕಳು ಕೇಳಿಸಿಕೊಳ್ಳುತ್ತಾರೋ? ಕುಟುಂಬದಲ್ಲಿ, ನೀವು ಒಬ್ಬರಿನ್ನೊಬ್ಬರನ್ನು ಆಳವಾದ ಗೌರವದಿಂದ ಉಪಚರಿಸುತ್ತೀರೋ? ಇತರರು ಮಾತಾಡುವಾಗ ನೀವು ಗಮನಕೊಟ್ಟು ಕೇಳಿಸಿಕೊಳ್ಳುತ್ತೀರೋ? ಮಕ್ಕಳು ನಿಮ್ಮೊಂದಿಗೆ ಮಾತಾಡುವಾಗ ನೀವು ಆಲಿಸುತ್ತೀರೋ? ಈ ಒಳ್ಳೆಯ ಗುಣಗಳನ್ನು ರಾಜ್ಯ ಸಭಾಗೃಹದಲ್ಲಿ ಮಾತ್ರವಲ್ಲ ನಿಮ್ಮ ಮನೆಯ ಏಕಾಂತದಲ್ಲಿಯೂ ಪ್ರದರ್ಶಿಸುತ್ತೀರೊ?
3 ಬಲವಾದ ಆತ್ಮಿಕತೆ ಮತ್ತು ಹುರುಪುಳ್ಳ ಚಟುವಟಿಕೆ: ಪೂರ್ಣ ಸಮಯದ ಸೇವೆಯಲ್ಲಿ 50ಕ್ಕಿಂತಲೂ ಹೆಚ್ಚಿನ ವರ್ಷಗಳನ್ನು ಕಳೆದಿರುವ ಒಬ್ಬ ಸಹೋದರನು ಜ್ಞಾಪಿಸಿಕೊಳ್ಳುವುದು: “ನನ್ನ ತಂದೆತಾಯಿಯರು ಕೂಟಗಳಿಗೆ ಗಣ್ಯತೆಯನ್ನು ತೋರಿಸುವುದರಲ್ಲಿ ಮತ್ತು ತಮ್ಮ ಶುಶ್ರೂಷೆಯಲ್ಲಿ ಹುರುಪನ್ನು ತೋರಿಸುವುದರಲ್ಲಿ ಅತ್ಯುತ್ತಮ ಮಾದರಿಯಾಗಿದ್ದರು.” ನಿಮ್ಮ ಮನೆಯವರ ಆತ್ಮಿಕತೆಯನ್ನು ಕಾಪಾಡುವುದರ ಕುರಿತು ನೀವು ಚಿಂತಿತರಾಗಿದ್ದೀರೆಂಬುದನ್ನು ನಿಮ್ಮ ಮಕ್ಕಳಿಗೆ ನೀವು ಹೇಗೆ ತೋರಿಸಿಕೊಡುತ್ತೀರಿ? ನೀವು ದಿನದ ವಚನವನ್ನು ಒಟ್ಟಿಗೆ ಪರಿಗಣಿಸುತ್ತೀರೋ? ನಿಮಗೆ ಕ್ರಮದ ಕುಟುಂಬ ಅಭ್ಯಾಸವು ಇದೆಯೋ? ಬೈಬಲ್ ಮತ್ತು ಸೊಸೈಟಿಯ ಪ್ರಕಾಶನಗಳನ್ನು ನೀವು ಓದುವುದನ್ನು ನಿಮ್ಮ ಮಕ್ಕಳು ನೋಡುತ್ತಾರೋ? ಕುಟುಂಬದ ಪರವಾಗಿ ನೀವು ಪ್ರಾರ್ಥಿಸುವಾಗ ನೀವು ಯಾವುದರ ಬಗ್ಗೆ ಪ್ರಾರ್ಥಿಸುವುದನ್ನು ಅವರು ಆಲಿಸುತ್ತಾರೆ? ಸತ್ಯದ ಕುರಿತು ಮತ್ತು ಸಭೆಯ ಕುರಿತು ಸಕಾರಾತ್ಮಕ ವಿಷಯಗಳನ್ನು ಚರ್ಚಿಸುತ್ತಾ, ನಿಮ್ಮ ಮಕ್ಕಳನ್ನು ಆತ್ಮಿಕವಾಗಿ ಕಟ್ಟುವಂತಹ ಸಂಭಾಷಣೆಯಲ್ಲಿ ಅವರನ್ನು ತೊಡಗಿಸುತ್ತೀರೊ? ಒಂದು ಕುಟುಂಬವಾಗಿ ಎಲ್ಲ ಕೂಟಗಳನ್ನು ಹಾಜರಾಗಲು ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ನೀವು ಆತುರದಿಂದಿರುತ್ತೀರೋ?
4 ಹೆತ್ತವರೇ, ನಿಮ್ಮ ಮಕ್ಕಳ ಮುಂದೆ ನೀವು ಇಡುತ್ತಿರುವ ಮಾದರಿಯ ಕುರಿತಾಗಿ ಚಿಂತನೆ ಮಾಡಿರಿ. ಅದನ್ನು ಒಂದು ಅತ್ಯುತ್ಕೃಷ್ಟ ಮಾದರಿಯನ್ನಾಗಿ ಮಾಡಿರಿ, ಮತ್ತು ಆಗ ಮಕ್ಕಳು ಅದನ್ನು ತಮ್ಮ ಜೀವನದುದ್ದಕ್ಕೂ ಅತ್ಯಮೂಲ್ಯವೆಂದೆಣಿಸುವರು. ಈಗ ತನ್ನ 70ರ ಪ್ರಾಯದಲ್ಲಿರುವ ಒಬ್ಬ ಸಂಚರಣ ಮೇಲ್ವಿಚಾರಕನ ಪತ್ನಿಯು ಹೀಗೆ ಹೇಳಿದಳು: “ನನ್ನ ಪ್ರೀತಿಯ ಕ್ರೈಸ್ತ ಹೆತ್ತವರ ಉತ್ತಮ ಮಾದರಿಯಿಂದ ನಾನು ಇನ್ನೂ ಪ್ರಯೋಜನ ಪಡೆದುಕೊಳ್ಳುತ್ತಿದ್ದೇನೆ. ಮತ್ತು ಬರಲಿರುವ ಸಕಲ ಯುಗಗಳಲ್ಲೂ ಅದನ್ನು ಯೋಗ್ಯವಾಗಿ ಉಪಯೋಗಿಸುವ ಮೂಲಕ ಈ ಪರಂಪರೆಗಾಗಿ ನನ್ನ ಪೂರ್ಣ ಗಣ್ಯತೆಯನ್ನು ನಾನು ರುಜುಪಡಿಸುವೆನೆಂಬುದೇ ಯಥಾರ್ಥವಾದ ನನ್ನ ಪ್ರಾರ್ಥನೆಯಾಗಿದೆ.”