ಒಬ್ಬ ಯೆಹೂದಿ ವ್ಯಕ್ತಿಗೆ ನೀವು ಏನನ್ನು ಹೇಳುವಿರಿ?
1 ಪ್ರಥಮ ಶತಮಾನದಲ್ಲಿ, “ಇಸ್ರಾಯೇಲ್ ಜನ”ರಲ್ಲಿ ಅನೇಕರು ಯೇಸು ಮತ್ತು ಅವನ ಅಪೊಸ್ತಲರ ಸಾರುವಿಕೆಗೆ ಗಣ್ಯತಾಪೂರ್ವಕವಾಗಿ ಪ್ರತಿಕ್ರಿಯಿಸಿದರು. (ಅ.ಕೃ. 10:36) ಆ ಸಮಯದಲ್ಲಿ ನಡೆದಂತೆಯೇ, ಇಂದು ಸಹ ಅನೇಕ ಯಥಾರ್ಥ ಯೆಹೂದ್ಯರು ಇಸ್ರೇಲ್ನಲ್ಲಿ ಮಾತ್ರವೇ ಅಲ್ಲ, ಅಮೆರಿಕ, ಭಾರತ, ರಷ್ಯ ಮತ್ತು ಇತರ ದೇಶಗಳಲ್ಲಿಯೂ ಸತ್ಯವನ್ನು ಪೂರ್ಣಹೃದಯದಿಂದ ಸ್ವೀಕರಿಸುತ್ತಿದ್ದಾರೆ. ಯೆಹೂದಿ ಜನರಿಗೆ ಸಾಕ್ಷಿನೀಡುವುದರಲ್ಲಿ ನೀವು ಹೆಚ್ಚು ಸಫಲರಾಗಲು ಬಯಸುತ್ತೀರೋ? ಧರ್ಮನಿಷ್ಠರಾಗಿರುವ ಮತ್ತು ಧರ್ಮನಿಷ್ಠರಾಗಿರದ ಯೆಹೂದ್ಯರಿಗೆ ಸಮಯೋಚಿತ ನಯದೊಂದಿಗೆ ಸಾಕ್ಷಿಯನ್ನು ನೀಡುವುದರಲ್ಲಿ ಈ ಕೆಳಗಿನ ಸಲಹೆಗಳು ನಿಮಗೆ ಸಹಾಯಮಾಡುವವು.
2 ಧರ್ಮನಿಷ್ಠ ಯೆಹೂದ್ಯರಿಗೆ ಸಾಕ್ಷಿನೀಡುವುದು: ಅನೇಕವೇಳೆ ಧರ್ಮನಿಷ್ಠ ಯೆಹೂದ್ಯರು ನಿರ್ದಿಷ್ಟ ಬೋಧನೆಗಳ ಅರ್ಥವನ್ನು ತಿಳಿದುಕೊಳ್ಳಲು ಅಲ್ಲ, ಬದಲಾಗಿ ರಬ್ಬಿಗಳ ಸಂಪ್ರದಾಯಗಳನ್ನು ಪಾಲಿಸುವುದರ ಕುರಿತು ಹೆಚ್ಚು ಆಸಕ್ತರಾಗಿರುತ್ತಾರೆ ಎಂಬುದು ನಮಗೆ ತಿಳಿದಿರಬೇಕು. ಶಾಸ್ತ್ರವಚನಗಳಿಗಿರುವಷ್ಟೇ ಅಧಿಕಾರ ಸಂಪ್ರದಾಯಕ್ಕಿದೆಯೆಂಬ ಅಭಿಪ್ರಾಯ ಸಾಮಾನ್ಯವಾಗಿ ಅವರಿಗೆ ಇರುತ್ತದೆ. ಆದುದರಿಂದ, ಅವರು ಬೈಬಲಿನ ಗಾಢವಾದ ವಿಷಯಗಳನ್ನು ಚರ್ಚಿಸುವುದರಲ್ಲಿ ಆಸಕ್ತರಾಗಿರಲಿಕ್ಕಿಲ್ಲ. ಅಲ್ಲದೆ, ಬೈಬಲ್ ಕ್ರೈಸ್ತರಿಗಾಗಿರುವ ಒಂದು ಗ್ರಂಥವಾಗಿದೆ ಎಂದು ಅವರು ನೆನಸುತ್ತಾರೆ. ಈ ಕಾರಣಕ್ಕಾಗಿ, ಸಾಮಾನ್ಯವಾಗಿ ಬೈಬಲನ್ನು ಸೂಚಿಸಿ ಮಾತಾಡುವಾಗ, “ಹೀಬ್ರು ಶಾಸ್ತ್ರವಚನಗಳು,” “ಟೋರಾ,” ಅಥವಾ “ಶಾಸ್ತ್ರವಚನಗಳು” ಎಂಬ ಪದಗಳನ್ನು ಉಪಯೋಗಿಸುವುದು ಅತ್ಯುತ್ತಮ. ವಿಶೇಷವಾಗಿ ಯೆಹೂದಿ ಜನರಿಗಾಗಿಯೇ ತಯಾರಿಸಲ್ಪಟ್ಟಿರುವ ಒಂದು ಅತ್ಯುತ್ತಮ ಪ್ರಕಾಶನವು ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್) ಎಂಬ ಶೀರ್ಷಿಕೆಯ ಬ್ರೋಷರ್ ಆಗಿದೆ.
3 ಯಾವ ವಿಷಯಗಳು ಧರ್ಮನಿಷ್ಠ ಯೆಹೂದ್ಯರ ಆಸಕ್ತಿಯನ್ನು ಕೆರಳಿಸಬಹುದು? ಒಬ್ಬನೇ ದೇವರಿದ್ದಾನೆ ಮತ್ತು ಆತನು ಮಾನವನ ಬಗ್ಗೆ ಅತೀವ ಆಸಕ್ತಿಯನ್ನು ತೋರಿಸುತ್ತಾನೆಂದು ಅವರು ನಂಬುತ್ತಾರೆ. ದೇವರು ಮಾನವ ವ್ಯವಹಾರಗಳಲ್ಲಿ ಕೈಹಾಕುತ್ತಾನೆಂಬುದನ್ನು ಸಹ ಅವರು ನಂಬುತ್ತಾರೆ. ನೀವಿಬ್ಬರೂ ಸಮ್ಮತಿಸುವ ಒಂದು ವಿಷಯವನ್ನು ಆಧಾರದಂತೆ ಉಪಯೋಗಿಸಲಿಕ್ಕಾಗಿ ನೀವು ಈ ಅಂಶಗಳನ್ನು ಉಪಯೋಗಿಸಬಹುದು. ಇದಕ್ಕೆ ಕೂಡಿಸಿ, ಅನೇಕ ಯೆಹೂದ್ಯರಿಗೆ IIನೆಯ ವಿಶ್ವ ಯುದ್ಧದಲ್ಲಿ ತಮ್ಮ ಜನರು ಅನುಭವಿಸಿದ ಕಷ್ಟಾನುಭವಗಳ ತೀಕ್ಷ್ಣವಾದ ಅರಿವಿದೆ. ದೇವರು ಇಂತಹ ಅನ್ಯಾಯವನ್ನು ಯಾಕೆ ಅನುಮತಿಸಿದನು ಮತ್ತು ದುಷ್ಟತನವು ಯಾವಾಗ ಅಂತ್ಯಗೊಳ್ಳಲಿದೆ ಎಂಬುದರ ಕುರಿತು ಅವರು ಚಿಂತಿಸುತ್ತಾರೆ. ಉದಾಹರಣೆಗಾಗಿ, ನಮ್ಮ ಸಹೋದರರು ಕಗ್ಗೊಲೆಯ ಸಮಯದಲ್ಲಿ ಏನನ್ನು ಅನುಭವಿಸಿದರೊ ಅದಕ್ಕೆ ಸೂಚಿಸುತ್ತಾ ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲು ನಾವು ಸುಸಜ್ಜಿತರಾಗಿದ್ದೇವೆ.
4 ಮನೆಯವನ ಆಸಕ್ತಿಯು ಕುಗ್ಗಿಹೋಗದಂತೆ ಮಾಡಲು, ನಮ್ಮ ಸಂಭಾಷಣೆಯಲ್ಲಿ ಮೆಸ್ಸೀಯನು ಯಾರೆಂಬ ವಿಷಯವನ್ನು ಬಲು ಬೇಗನೆ ತರದಿರುವುದು ಅತ್ಯುತ್ತಮ. ಅದರ ಬದಲು, ಇಸ್ರಾಯೇಲಿನ ಇತಿಹಾಸದಲ್ಲಿ ಮೋಶೆಯು ನಿರ್ವಹಿಸಿದ ಪಾತ್ರದ ಕುರಿತು ನೀವು ಚರ್ಚಿಸಬಹುದು ಮತ್ತು ಮೋಶೆಯ ಬೋಧನೆಗಳು ಇಂದು ಕಾರ್ಯೋಚಿತವಾಗಿವೆ ಎಂಬುದನ್ನು ಅವನು ನಂಬುತ್ತಾನೋ ಎಂದು ನೀವು ಮನೆಯವನಿಗೆ ಕೇಳಬಹುದು. ಮೆಸ್ಸೀಯನು ಯಾರೆಂಬುದನ್ನು ಚರ್ಚಿಸುವುದು ಸೂಕ್ತವೆಂದು ನಿಮಗೆ ತೋರುವಾಗ, ನೀವು ಮೊದಲು ಧರ್ಮೋಪದೇಶಕಾಂಡ 18:15ನ್ನು ಓದಬಹುದು. ಅಲ್ಲಿ ಹೀಗೆ ತಿಳಿಸಲಾಗುತ್ತದೆ: “ನಿಮ್ಮ ದೇವರಾದ ಯೆಹೋವನು ನಿಮ್ಮ ಸಹೋದರರಲ್ಲಿ ನನ್ನಂಥ ಪ್ರವಾದಿಯನ್ನು [ನಿಮಗೆ] ಏರ್ಪಡಿಸುವನು; ಅವನಿಗೇ ನೀವು ಕಿವಿಗೊಡಬೇಕು.” ಮೋಶೆಯು ತನ್ನಂತಿರುವ ಪ್ರವಾದಿಯ ಬಗ್ಗೆ ಮಾತಾಡಿದಾಗ ಅವನ ಮನಸ್ಸಿನಲ್ಲಿ ಏನಿತ್ತೆಂಬುದನ್ನು ನೀವು ಮನೆಯವನಿಗೆ ಕೇಳಬಹುದು. ಅನಂತರ, ಯುದ್ಧವಿಲ್ಲದ ಒಂದು ಲೋಕವು (ಇಂಗ್ಲಿಷ್) ಎಂಬ ಬ್ರೋಷರಿನ ಪುಟ 14, ಪ್ಯಾರಗ್ರಾಫ್ 17 ಮತ್ತು 18ರಲ್ಲಿರುವ ಕೆಲವು ವಿಷಯಗಳನ್ನು ಆವರಿಸಿರಿ.
5 ಧರ್ಮನಿಷ್ಠರಾಗಿರದ ಯೆಹೂದ್ಯರು ವಿಷಯಗಳನ್ನು ಭಿನ್ನವಾಗಿ ವೀಕ್ಷಿಸುತ್ತಾರೆ: ತಾನೊಬ್ಬ ಯೆಹೂದಿಯೆಂದು ಹೇಳಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ಯೆಹೂದಿಮತದ ಬೋಧನೆಗಳನ್ನು ಸ್ವೀಕರಿಸುವುದಿಲ್ಲ. ಅನೇಕ ಯೆಹೂದ್ಯರು ತಮ್ಮ ನೋಟದಲ್ಲಿ ಲೌಕಿಕರಾಗಿರುತ್ತಾರೆ. ಇವರು ಯೆಹೂದಿ ಧರ್ಮವನ್ನು ಆಚರಿಸುವುದಕ್ಕಿಂತಲೂ ಹೆಚ್ಚಾಗಿ, ತಮ್ಮದೇ ಆದ ಒಂದು ಭಿನ್ನ ಯೆಹೂದಿ ಧಾರ್ಮಿಕ ವ್ಯವಸ್ಥೆ, ಸಂಸ್ಕೃತಿ, ಸಂಪ್ರದಾಯ ಮತ್ತು ಶಿಕ್ಷಣವನ್ನು ಪ್ರವರ್ಧಿಸಲು ಹೆಚ್ಚು ಆಸಕ್ತರಾಗಿರುತ್ತಾರೆ. ಧರ್ಮನಿಷ್ಠರಾಗಿರದ ಕೆಲವು ಯೆಹೂದ್ಯರು ಆಜ್ಞೇಯತಾವಾದಿಗಳು ಆಗಿರುತ್ತಾರೆ, ಮತ್ತು ಇನ್ನೂ ಕೆಲವರು ನಾಸ್ತಿಕರು ಸಹ ಆಗಿರುತ್ತಾರೆ. ಆರಂಭದಲ್ಲಿ, ಹೀಬ್ರು ಶಾಸ್ತ್ರವಚನಗಳಿಂದ ಅನೇಕ ವಚನಗಳನ್ನು ಉಲ್ಲೇಖಿಸುವುದರಿಂದ ಹೆಚ್ಚನ್ನು ಪೂರೈಸಲು ಆಗುವುದಿಲ್ಲ. ಧಾರ್ಮಿಕ ವ್ಯಕ್ತಿಯಾಗಿರದ ಒಬ್ಬ ವ್ಯಕ್ತಿಯೊಂದಿಗೆ ನೀವು ಯಾವ ರೀತಿಯಲ್ಲಿ ಚರ್ಚಿಸುವಿರೋ, ಅದೇ ರೀತಿಯಲ್ಲಿ ಇಲ್ಲಿಯೂ ಸಂಭಾಷಣೆಯನ್ನು ಆರಂಭಿಸುವುದು ಹೆಚ್ಚು ಉಪಯುಕ್ತವಾಗಿರುವುದು. ಉದಾಹರಣೆಗೆ, ಬೈಬಲು ನಮ್ಮ ದಿನಗಳಿಗೆ ಹೇಗೆ ಪ್ರಾಯೋಗಿಕವಾಗಿದೆ ಎಂಬುದನ್ನು ನೀವು ವಿವರಿಸಬಹುದು. ಬೈಬಲ್ ದೇವರಿಂದ ಪ್ರೇರಿತವಾಗಿದೆಯೆಂಬುದನ್ನು ಮನೆಯವನು ನಂಬದಿರುವುದಾದರೆ, ಯುದ್ಧವಿಲ್ಲದ ಒಂದು ಲೋಕವು (ಇಂಗ್ಲಿಷ್) ಎಂಬ ಬ್ರೋಷರಿನಲ್ಲಿ ವಿಶೇಷವಾಗಿ ಪುಟ 3ರಲ್ಲಿ “ಬೈಬಲ್—ದೇವರಿಂದ ಪ್ರೇರಿತವಾಗಿದೆಯೋ?” ಎಂಬ ಶೀರ್ಷಿಕೆಯ ಭಾಗದಲ್ಲಿರುವ ಕೆಲವು ವಿಷಯಗಳನ್ನು ಚರ್ಚಿಸುವುದು ಸಹಾಯಕಾರಿಯಾಗಿರಬಹುದು.
6 ಒಬ್ಬ ಯೆಹೂದಿ ವ್ಯಕ್ತಿಗೆ ಸಾಕ್ಷಿಯನ್ನು ನೀಡುವಾಗ, ನೀವು ಹೀಗನ್ನಬಹುದು:
◼“ನಮ್ಮಲ್ಲಿ ಅನೇಕರಿಗೆ ಮರಣದಲ್ಲಿ ಪ್ರಿಯ ವ್ಯಕ್ತಿಯೊಬ್ಬನನ್ನು ಕಳೆದುಕೊಂಡಿರುವ ದುಃಖಕರ ಅನುಭವವಿದೆ. ನಾವು ಸಾಯುವಾಗ ನಮಗೆ ಏನು ಸಂಭವಿಸುತ್ತದೆ ಎಂದು ನೀವು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಆಮೇಲೆ ಯುದ್ಧವಿಲ್ಲದ ಒಂದು ಲೋಕವು ಎಂಬ ಬ್ರೋಷರಿನ ಪುಟ 22ರಲ್ಲಿ ಕಂಡುಬರುವ “ಮರಣ ಮತ್ತು ಪ್ರಾಣ—ಇವುಗಳು ಏನಾಗಿವೆ?” ಎಂಬ ಶೀರ್ಷಿಕೆಯುಳ್ಳ ರೇಖಾಚೌಕದ ಕಡೆಗೆ ಮನೆಯವನ ಗಮನವನ್ನು ತಿರುಗಿಸಿರಿ. ಮರಣಾನಂತರದ ಜೀವಿತದ ಬಗ್ಗೆ ಬೈಬಲು ಏನು ಹೇಳುತ್ತದೆ ಮತ್ತು ರಬ್ಬಿಗಳು ಏನನ್ನು ಕಲಿಸುತ್ತಾರೆಂಬುದನ್ನು ಆ ರೇಖಾಚೌಕದಲ್ಲಿ ಹೋಲಿಸಲಾಗಿದೆ. ಆಮೇಲೆ ಪುಟ 23ರಲ್ಲಿರುವ ಪ್ಯಾರಗ್ರಾಫ್ 17ಕ್ಕೆ ತಿರುಗಿಸಿರಿ ಮತ್ತು ಶಾಸ್ತ್ರವಚನಗಳ ಪ್ರಕಾರ ಸತ್ತವರು ಭೂಮಿಯ ಮೇಲೆ ಪ್ರಮೋದನವನದ ಜೀವಿತಕ್ಕೆ ಎಬ್ಬಿಸಲ್ಪಡುವರು ಎಂಬುದನ್ನು ತೋರಿಸಿರಿ. ಬ್ರೋಷರನ್ನು ನೀಡಿರಿ. ಪುನರ್ಭೇಟಿಗಾಗಿ ತಯಾರಿಮಾಡುತ್ತಾ, ಪೂರ್ವಜನಾದ ಯೋಬನು ಪುನರುತ್ಥಾನದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದನು ಎಂಬ ವಿಷಯವನ್ನು ನೀವು ತಿಳಿಸಬಹುದು. ಪ್ಯಾರಗ್ರಾಫ್ 17ರ ಕೊನೆಯಲ್ಲಿ ಉಲ್ಲೇಖಿಸಲ್ಪಟ್ಟಿರುವ ವಚನಗಳನ್ನು ಸೂಚಿಸಿರಿ ಮತ್ತು ನೀವು ಪುನಃ ಒಮ್ಮೆ ಬಂದು ಅವುಗಳನ್ನು ವಿವರಿಸುವಿರೆಂದು ಹೇಳಿರಿ.
7 ಮತ್ತಾಯ, ಮಾರ್ಕ, ಲೂಕ, ಯೋಹಾನ ಮತ್ತು ಅಪೊಸ್ತಲರ ಕೃತ್ಯಗಳ ಪುಸ್ತಕಗಳಲ್ಲಿ ಸತ್ಯವನ್ನು ಆಲಿಸಿ, ಅದಕ್ಕನುಸಾರವಾಗಿ ಕ್ರಿಯೆಗೈದ ಯೆಹೂದ್ಯರ ಅನುಭವಗಳು ದಾಖಲಿಸಲ್ಪಟ್ಟಿವೆ. ಯೆಹೋವನು ನಿತ್ಯಜೀವದ ದಾರಿಯನ್ನು ಈಗಲೂ ತೆರೆದಿಟ್ಟಿದ್ದಾನೆ. ಅನೇಕ ಯಥಾರ್ಥ ಯೆಹೂದ್ಯರು ಸತ್ಯ ದೇವರಾದ ಯೆಹೋವನ ಕುರಿತು ಇನ್ನೂ ಹೆಚ್ಚನ್ನು ಕಲಿತುಕೊಳ್ಳಬಹುದು ಮತ್ತು ಅವರು ಕೂಡ ದೇವರ ಹೊಸ ಲೋಕದಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳಬಹುದು.—ಮೀಕ 4:1-4.