ಅನುಭವಗಳು
◼ ಆಸ್ಟ್ರೇಲಿಯ: ಜಾನ್ ಎಂಬವನು ಸುಶಿಕ್ಷಿತ ವ್ಯಕ್ತಿ. ಬಾಲ್ಯದಲ್ಲಿ ಚರ್ಚಿಗೆ ಹೋಗುತ್ತಿದ್ದನು. ಆದರೆ ನಂತರ “ಕಟ್ಟಾ ನಾಸ್ತಿಕ”ನಾದ. ಒಬ್ಬ ಪಯನೀಯರ್ ಅವನಿಗೊಂದು ಕಿರುಹೊತ್ತಗೆ ಕೊಟ್ಟು ಹೋದನು. ಜಾನ್‌ಗೆ ಆಸಕ್ತಿ ಬರಿಸಲು ಆ ಪಯನೀಯರನು ಇತರ ಪ್ರಕಾಶನಗಳನ್ನು ಮತ್ತು ಸೃಷ್ಟಿ ಇಲ್ಲವೇ ಬೈಬಲ್ ಪ್ರವಾದನೆ ಬಗ್ಗೆ ಇರುವ ಲೇಖನಗಳುಳ್ಳ ಹೊಸಹೊಸ ಪತ್ರಿಕೆಗಳನ್ನು ತಂದುಕೊಡುತ್ತಿದ್ದನು. ಇವುಗಳನ್ನು ಓದಿದ ಬಳಿಕ ಜಾನ್ ಸ್ವಲ್ಪ ಬದಲಾದ. ತಾನೀಗ ‘ಆಜ್ಞೇಯತಾವಾದಿ’ (ದೇವರು ಅಸ್ತಿತ್ವದಲ್ಲಿದ್ದಾನೆ ಎನ್ನುವುದು ಗ್ರಹಿಕೆಗೆ ಮೀರಿದ ವಿಷಯವೆಂದು ನಂಬುವವನೇ ಆಜ್ಞೇಯತಾವಾದಿ) ಎಂದು ಹೇಳತೊಡಗಿದ. ನಂತರ ಆ ಪಯನೀಯರನು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಪರಿಚಯಿಸಿದ. ಪುಟ 20ರಲ್ಲಿರುವ ಪ್ಯಾರ 8 ಮತ್ತು ಪುಟ 23-24ರಲ್ಲಿರುವ ಪ್ಯಾರ 13-16ನ್ನು ಜಾನ್‌ಗೆ ತೋರಿಸಿದ. ಅದರಲ್ಲಿ ಕೊಡಲಾದ ವಚನಗಳಿಂದ ಜಾನ್ ಎಷ್ಟು ಪ್ರಭಾವಿತನಾದನೆಂದರೆ “ನಾನು ಬೈಬಲನ್ನು ಪುನಃ ಪರಿಶೀಲಿಸಿ ನೋಡಬೇಕು” ಎಂದ.
◼ ಮೆಕ್ಸಿಕೊ: ಬೈಬಲ್ ದೇವರಿಂದ ಬಂದದ್ದು ಅಂತ ತಾನು ನಂಬುವುದಿಲ್ಲ ಎಂದು ಒಬ್ಬ ವ್ಯಕ್ತಿ ಪ್ರಚಾರಕನೊಬ್ಬನಿಗೆ ಹೇಳಿದ. ಬೈಬಲ್ ದೇವರಿಂದ ಪ್ರೇರಿತ ಎಂಬದಕ್ಕೆ ಪುರಾವೆ ತೋರಿಸುತ್ತೇನೆ ಎಂದು ಪ್ರಚಾರಕ ಹೇಳಿದನು. ಕೆಲವು ಚರ್ಚೆಗಳಾದ ನಂತರ ತಾನು ಬೈಬಲಿನಿಂದ ಏನು ಕಲಿಯುತ್ತಿದ್ದನೊ ಅದರಿಂದ ಆ ವ್ಯಕ್ತಿ ಪ್ರಭಾವಿತನಾದ. ಅದರಲ್ಲೂ ಅವನು ಕಲಿತ ದೈವಿಕ ಮಟ್ಟಗಳು ಅವನ ಮನಮುಟ್ಟಿದವು. “ಮುಂಚೆ ನೀವು ನನ್ನ ಜತೆ ಬೈಬಲ್ ಓದುತ್ತಿದ್ದಾಗ ಅದರಲ್ಲಿರುವ ಬುದ್ಧಿವಾದ ಬೇರೆ ಪುಸ್ತಕಗಳಲ್ಲೂ ಇದೆ, ಇದೇನು ಮಹಾ ಎಂದು ಅನಿಸುತ್ತಿತ್ತು. ನನ್ನ ಮೇಲೆ ಅದು ಯಾವ ಪರಿಣಾಮ ಬೀರುತ್ತಿರಲಿಲ್ಲ. ಆದರೆ ಈಗ ಅದನ್ನು ಓದುವಾಗ, ವಿಶೇಷವಾಗಿ ನೈತಿಕತೆಯ ಕುರಿತ ಸಲಹೆಯನ್ನು ಓದುವಾಗ ನನ್ನ ಮನಸ್ಸಾಕ್ಷಿ ಚುಚ್ಚುತ್ತದೆ” ಎಂದು ಪ್ರಚಾರಕನಿಗೆ ಹೇಳಿದ.
◼ ಅಮೆರಿಕ: ಮಹಾನಗರದಲ್ಲಿ ವಿಶೇಷ ಸಾಕ್ಷಿಕಾರ್ಯದಲ್ಲಿ ತೊಡಗಿದ್ದಾಗ ಒಂದು ದಂಪತಿ ಟೈವಾನ್ ಮೂಲದ ಮಹಿಳೆಯೊಬ್ಬಳನ್ನು ಭೇಟಿಯಾದರು. ಈ ಮಹಿಳೆ ದೇವರನ್ನು ನಂಬುತ್ತಿದ್ದಳು ಆದರೆ ಬೈಬಲ್ ಬರೀ ಪಾಶ್ಚಾತ್ಯ ಜನರ ಪುಸ್ತಕವೆಂದು ನೆನಸುತ್ತಿದ್ದಳು. ಸಾಕ್ಷಿ ದಂಪತಿಯು ಪ್ರದರ್ಶನಕ್ಕಿಟ್ಟಿದ್ದ ಸಾಹಿತ್ಯವನ್ನು ನೋಡಲು ಬಂದಳು. ಏಕೆಂದರೆ ಆಕೆಗೆ ಸುಖಸವಲತ್ತುಗಳಿರುವ ಜೀವನ ಇದ್ದರೂ ನಿಜ ಸಂತೋಷವಿರಲಿಲ್ಲ. ಬದುಕಿನ ಉದ್ದೇಶವನ್ನು ಕಂಡುಕೊಳ್ಳಲು ಬೈಬಲ್ ಸಹಾಯಮಾಡುವುದೆಂದು ಆಕೆ ನಿರೀಕ್ಷೆಯಿಟ್ಟಿದ್ದಳು. ಆ ದಂಪತಿ ಬೈಬಲ್ ಬೋಧಿಸುತ್ತದೆ ಪುಸ್ತಕದ ಜತೆಗೆ ಒಂದು ಕಿರುಹೊತ್ತಗೆಯಿಂದ ಅಧ್ಯಯನ ಶುರುಮಾಡಿದರು. ಸ್ವಲ್ಪ ವಿಷಯಗಳನ್ನು ಚರ್ಚಿಸಿದ ನಂತರ ಆ ಮಹಿಳೆ, ಇತರ ಧಾರ್ಮಿಕ ಗ್ರಂಥಗಳಿಗೆ ಹೋಲಿಸಿದರೆ ಬೈಬಲ್ ಎಷ್ಟು ಅಪೂರ್ವವೆಂದು ಅಚ್ಚರಿ ವ್ಯಕ್ತಪಡಿಸಿದಳು. ಈಗಾಗಲೇ ನೆರವೇರಿರುವ ಬೈಬಲ್ ಪ್ರವಾದನೆಗಳ ಬಗ್ಗೆ ಚರ್ಚಿಸಿದ ಬಳಿಕ ಆಕೆಯಂದದ್ದು: “ಬೇರಾವ ಪುಸ್ತಕವೂ ಬೈಬಲಿನಷ್ಟು ನಿಖರವಾಗಿರಲು ಸಾಧ್ಯವಿಲ್ಲ!”
◼ ಜಪಾನ್: ಮನೆಯವನೊಬ್ಬನು ತನಗೆ ದೇವರಲ್ಲಿ ನಂಬಿಕೆಯಿಲ್ಲವೆಂದು ಹೇಳಿದರೂ ಪ್ರಚಾರಕನು ಅವನನ್ನು ಭೇಟಿಯಾಗುತ್ತಾ ಇದ್ದನು. ಆ ಭೇಟಿಗಳು ಚುಟುಕಾಗಿರುತ್ತಿದ್ದವು. ಅವನೊಟ್ಟಿಗೆ ಎಚ್ಚರ! ಪತ್ರಿಕೆಯಲ್ಲಿ ಬರುವ “ವಿಕಾಸವೇ? ವಿನ್ಯಾಸವೇ?” ಲೇಖನಗಳನ್ನು ಚರ್ಚಿಸುತ್ತಿದ್ದನು. ನಿಧಾನವಾಗಿ ಆ ವ್ಯಕ್ತಿಯ ದೃಷ್ಟಿಕೋನ ಬದಲಾಯಿತು. ಸೃಷ್ಟಿಕರ್ತ ಇರಬಹುದೆಂದು ಒಪ್ಪಲು ಶುರುಮಾಡಿದ. ಈಗಂತೂ ಅವನು ದೇವರಿದ್ದಾನೆಂದು ನಂಬುತ್ತಾನೆ. ಪ್ರಚಾರಕನು ಅವನೊಂದಿಗೆ ದೇವರಿಂದ ಸಿಹಿಸುದ್ದಿ! ಕಿರುಹೊತ್ತಗೆಯಿಂದ ಅಧ್ಯಯನ ಮಾಡುತ್ತಿದ್ದಾನೆ.
◼ ಕೆನಡ: ಮನೆಯಿಂದ ಹೊರಟು ತನ್ನ ಕಾರು ಬಳಿ ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ನಮ್ಮ ಸಹೋದರಿ ಇತ್ತೀಚಿನ ಪತ್ರಿಕೆಗಳನ್ನು ನೀಡಿದಳು. ಸಹೋದರಿ ಪುನಃ ಭೇಟಿಮಾಡಲು ಬಂದಾಗ ಆಕೆ ತನಗೆ ಆಸಕ್ತಿಯಿಲ್ಲ, ದೇವರಲ್ಲಿ ನಂಬಿಕೆಯಿಲ್ಲ ಅಂತ ಪದೇಪದೇ ಹೇಳುತ್ತಾ ಇದ್ದಳು. ನಮ್ಮ ಸಹೋದರಿ ಅಲ್ಲಿಗೇ ಬಿಟ್ಟುಬಿಡದೆ ಮತ್ತೆ ಭೇಟಿಯಾಗಿ ಆಕೆಗೆ ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ ಕಿರುಹೊತ್ತಗೆಯನ್ನು ಕೊಡಲು ನಿರ್ಣಯಿಸಿದಳು. ಅದನ್ನು ಕೊಡಲಿಕ್ಕೆ ಹೋದಾಗ ಆ ಸ್ತ್ರೀ ಮನೆಯಲ್ಲಿದ್ದಳು. ಆಕೆಗೆ ದೇವರಲ್ಲಿ ನಂಬಿಕೆಯಿಲ್ಲ ಅಂತ ಗೊತ್ತಿದ್ದರೂ ಅವಳೊಬ್ಬ ಒಂಟಿ ಹೆತ್ತವಳಾಗಿರುವುದರಿಂದ ಆಕೆಯ ಬಗ್ಗೆ ಯೋಚಿಸುತ್ತಾ ಇದ್ದಳೆಂದು ಹೇಳಿ ಕಿರುಹೊತ್ತಗೆಯ ಪುಟ 4, ಪ್ಯಾರ 6ನ್ನು ತೋರಿಸಿದಳು. ಒಳ್ಳೇ ಸಲಹೆಬುದ್ಧಿವಾದ ಎಲ್ಲಿ ಸಿಗುತ್ತದೆಂದು ಈ ಪ್ಯಾರದಲ್ಲಿ ತಿಳಿಸಲಾಗಿದೆ. ನಂತರ ಆಕೆಗೆ ಪಾಠ 2ನ್ನು ಓದಲು ಪ್ರೋತ್ಸಾಹಿಸಿದಳು. ಅದರಲ್ಲಿ ಮಕ್ಕಳನ್ನು ಬೆಳೆಸುವುದರ ಬಗ್ಗೆ ಸಲಹೆಗಳಿವೆ. ಆ ಮಹಿಳೆ ಕಿರುಹೊತ್ತಗೆಯನ್ನು ತುಂಬ ಸಂತೋಷದಿಂದ ಸ್ವೀಕರಿಸಿದಳು.