ನಿಮ್ಮ ಶುಶ್ರೂಷೆಯಲ್ಲಿ ‘ಅತ್ಯಾಸಕ್ತಿಯಿಂದ ನಿರತರಾಗಿರಿ’
1 ಅಪೊಸ್ತಲ ಪೌಲನು ಕೊರಿಂಥದಲ್ಲಿದ್ದಾಗ ಗುಡಾರಗಳನ್ನು ಮಾಡುವ ಕೆಲಸದಲ್ಲಿ ತೊಡಗಿದ್ದನು ಎಂಬುದನ್ನು ನಾವು ಬೈಬಲಿನಲ್ಲಿ ಓದುವಾಗ ಇದು ಸಾರುವುದಕ್ಕಾಗಿರುವ ಅವನ ಅವಕಾಶವನ್ನು ಸೀಮಿತಗೊಳಿಸಿತು ಎಂದು ನಾವು ನೆನಸಬಹುದು. ಆದರೆ, ಅ. ಕೃತ್ಯಗಳು 18:5 ಹೇಳುವುದು: “ಪೌಲನು ದೇವರ ವಾಕ್ಯವನ್ನು ಬೋಧಿಸುವದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ [“ಅತ್ಯಾಸಕ್ತಿಯಿಂದ ನಿರತನಾಗಿ,” NW] ಯೇಸುವೇ ಬರಬೇಕಾದ ಕ್ರಿಸ್ತನೆಂದು ಯೆಹೂದ್ಯರಿಗೆ ಖಂಡಿತವಾಗಿ ಸಾಕ್ಷಿಹೇಳಿದನು.” ಸಾರುವ ಕೆಲಸದಲ್ಲಿ ಪೌಲನು ಏಕೆ ಇಷ್ಟೊಂದು ನಿರತನಾಗಿದ್ದನು? ಕೊರಿಂಥದಲ್ಲಿ ಅನೇಕರು ಈಗಾಗಲೇ ವಿಶ್ವಾಸಿಗಳಾಗಿದ್ದರೂ, ಆ ನಗರದಲ್ಲಿ ಇನ್ನೂ ಅನೇಕರನ್ನು ಶಿಷ್ಯರನ್ನಾಗಿ ಮಾಡಬೇಕಾಗಿದೆ ಎಂಬ ಸಂಗತಿಯನ್ನು ಕರ್ತನು ದೃಢಪಡಿಸಿದ್ದನು. (ಅ. ಕೃ. 18:8-11) ನಮ್ಮ ಶುಶ್ರೂಷೆಯಲ್ಲಿ ಅತ್ಯಾಸಕ್ತಿಯಿಂದ ನಿರತರಾಗಿರಲು ನಮಗೂ ಇದೇ ರೀತಿಯ ಕಾರಣವಿದೆಯೇ? ಹೌದು, ಅನೇಕ ಜನರನ್ನು ಕಂಡುಕೊಂಡು, ಅವರಿಗೆ ಸತ್ಯವನ್ನು ಕಲಿಸಸಾಧ್ಯವಿದೆ.
2 ಏಪ್ರಿಲ್ ತಿಂಗಳಿನಲ್ಲಿ ಸೇವೆಯಲ್ಲಿ ಹೆಚ್ಚು ಸಮಯ ಕಳೆಯಿರಿ: ಪ್ರತಿ ತಿಂಗಳು ಸುವಾರ್ತೆಯನ್ನು ಸಾರುವುದರಲ್ಲಿ ಕಾರ್ಯಮಗ್ನರಾಗಿರುವುದು ನಿಮ್ಮ ಗುರಿಯಾಗಿರಬಹುದು. ಆದರೆ, ಕೆಲವು ತಿಂಗಳುಗಳು ನಾವು ಈ ಚಟುವಟಿಕೆಯಲ್ಲಿ ‘ಅತ್ಯಾಸಕ್ತಿಯಿಂದ ನಿರತರಾಗಿರಲು’ ಹೆಚ್ಚಿನ ಅವಕಾಶಗಳನ್ನು ಕೊಡುತ್ತವೆ. ಅವುಗಳಲ್ಲಿ, ಜ್ಞಾಪಕಾಚರಣೆಯ ಸಮಯದ ಪರಮಾವಧಿಯಾಗಿರುವ ಏಪ್ರಿಲ್ ತಿಂಗಳು ಒಂದಾಗಿದೆ. ಈ ಬೇಸಗೆ ಕಾಲದಲ್ಲಿ ನಿಮ್ಮ ಸೇವೆಯನ್ನು ಹೆಚ್ಚಿಸಲು ಇಲ್ಲವೇ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ನಿಮ್ಮ ಪರಿಸ್ಥಿತಿಗಳು ಅನುಮತಿಸಿವೆಯೊ? ಇದನ್ನು ಮಾಡುತ್ತಿರುವ ಅನೇಕ ಪ್ರಚಾರಕರು ಸಮೃದ್ಧವಾಗಿ ಆಶೀರ್ವದಿಸಲ್ಪಡುತ್ತಿದ್ದಾರೆ. (2 ಕೊರಿಂ. 9:6) ನಿಮ್ಮಿಂದ ಸಾಧ್ಯವಾದದ್ದೆಲ್ಲವನ್ನೂ ನೀವು ಮಾಡುತ್ತಿರುವುದಾದರೆ, ನಿಮ್ಮ ಮನಃಪೂರ್ವಕ ಸೇವೆಯಿಂದ ಯೆಹೋವನಿಗೆ ಸಂತೋಷವಾಗುತ್ತಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. (ಲೂಕ 21:2-4) ನಿಮ್ಮ ಪರಿಸ್ಥಿತಿಯು ಹೇಗೇ ಇರಲಿ, ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಶುಶ್ರೂಷೆಯಲ್ಲಿ “ಅತ್ಯಾಸಕ್ತಿಯಿಂದ ನಿರತ”ರಾಗುವ ಗುರಿಯನ್ನು ನಿಮ್ಮದಾಗಿಸಿಕೊಳ್ಳಿ. ಮತ್ತು ತಿಂಗಳ ಕೊನೆಯಲ್ಲಿ ನಿಮ್ಮ ಕ್ಷೇತ್ರಸೇವೆಯ ವರದಿಯನ್ನು ಹಾಕಲು ಮರೆಯದಿರಿ. ಹೀಗೆ, ನಿಮ್ಮ ಪ್ರಯಾಸವನ್ನು ಯೆಹೋವನ ಉಳಿದ ಜನರ ಸೇವೆಯೊಂದಿಗೆ ಕೂಡಿಸಲಾಗುವುದು.
3 ಜ್ಞಾಪಕಾಚರಣೆಗೆ ಹಾಜರಾದ ಹೊಸಬರನ್ನು ಸಂದರ್ಶಿಸಿ: ಕಳೆದ ವರ್ಷ ಭಾರತದಲ್ಲಿ ಜ್ಞಾಪಕಾಚರಣೆಗೆ ಹಾಜರಾದವರ ಸಂಖ್ಯೆಯು 49,120 ಆಗಿತ್ತು. ಈ ವರ್ಷದ ಒಟ್ಟು ಹಾಜರಿ ಎಷ್ಟು ಎಂಬುದನ್ನು ಇನ್ನೂ ನೋಡಬೇಕು. ಆದರೂ, ಹೆಚ್ಚು ದೊಡ್ಡದಾದ ‘ಕೊಯ್ಲಿನ’ (NW) ಸಾಧ್ಯತೆಗಳಿವೆ ಎಂಬುದನ್ನು ವರದಿಗಳು ಸೂಚಿಸುತ್ತವೆ. (ಮತ್ತಾ. 9:37, 38) ಆದುದರಿಂದ, ಜ್ಞಾಪಕಾಚರಣೆಗೆ ಹಾಜರಾದ ಆಸಕ್ತ ಜನರಿಗೆ ಆತ್ಮಿಕವಾಗಿ ಸಹಾಯಮಾಡಲು ಅವರನ್ನು ಆದಷ್ಟು ಬೇಗ ಸಂದರ್ಶಿಸುವ ಏರ್ಪಾಡುಗಳನ್ನು ಮಾಡಿರಿ. ಅಂಥ ಭೇಟಿಗಳನ್ನು ಮುಂದೆಹಾಕುವುದು, ‘ಸೈತಾನನು ಬಂದು ಅವರ ಮನಸ್ಸಿನಲ್ಲಿ ಬಿತ್ತಿದ್ದನ್ನು ತೆಗೆದುಹಾಕಲು’ ಅವಕಾಶ ಮಾಡಿಕೊಡುವುದು. (ಮತ್ತಾ. 13:19) ತಡಮಾಡದೇ ಸಂದರ್ಶಿಸುವುದು ನಿಮ್ಮ ಶುಶ್ರೂಷೆಯಲ್ಲಿ ನೀವು ನಿಜವಾಗಿಯೂ “ಅತ್ಯಾಸಕ್ತಿಯಿಂದ ನಿರತ”ರಾಗಿದ್ದೀರಿ ಎಂಬುದನ್ನು ತೋರಿಸುವುದು.
4 ನಿಷ್ಕ್ರಿಯರಾಗಿರುವವರಿಗೆ ಸಹಾಯಮಾಡುವುದನ್ನು ಮುಂದುವರಿಸಿರಿ: ನಿಷ್ಕ್ರಿಯ ಪ್ರಚಾರಕರಿಗೆ ಸಹಾಯಮಾಡುವ ವಿಶೇಷ ಪ್ರಯತ್ನವು ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾಯಿತು. ಕೆಲವರಿಗೆ ಇನ್ನೂ ಕುರಿಪಾಲನಾ ಭೇಟಿಗಳು ಮಾಡಲ್ಪಡದಿರುವಲ್ಲಿ ಹಿರಿಯರು ಅವರನ್ನು ಏಪ್ರಿಲ್ ತಿಂಗಳು ಕೊನೆಗೊಳ್ಳುವ ಮೊದಲೇ ಭೇಟಿಮಾಡುವ ಏರ್ಪಾಡುಗಳನ್ನು ಮಾಡಬೇಕು. ಆ ವ್ಯಕ್ತಿಯ ಸಮಸ್ಯೆಯ ಹಿಂದಿರುವ ಕಾರಣವನ್ನು ಮತ್ತು ಪುನಃ ಕ್ರಿಯಾಶೀಲನಾಗಿ ಯೆಹೋವನ ಸೇವೆಮಾಡಲು ಯಾವ ರೀತಿಯಲ್ಲಿ ಅತ್ಯುತ್ತಮ ಸಹಾಯನೀಡಬಹುದು ಎಂಬುದನ್ನು ಕಂಡುಹಿಡಿಯಲು ಹಿರಿಯರು ಪ್ರಯತ್ನಿಸುವರು. ಈ ಪ್ರೀತಿಪರ ಸಹಾಯವು, “ದೇವರ ಮಂದೆಯನ್ನು” ಕಾಯುವ ಕುರುಬರೋಪಾದಿ ತಮಗಿರುವ ಜವಾಬ್ದಾರಿಯನ್ನು ಹಿರಿಯರು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸುವುದು. (1 ಪೇತ್ರ 5:2; ಅ. ಕೃ. 20:28) ನಿಷ್ಕ್ರಿಯರಾಗಿರುವವರನ್ನು ಸಾಮಾನ್ಯವಾಗಿ ಬಾಧಿಸುತ್ತಿರಬಹುದಾದ ಐದು ಸಮಸ್ಯೆಗಳಲ್ಲಿ ಯಾವುದಾದರೊಂದನ್ನು ಹಿರಿಯರು ನಿರ್ವಹಿಸುತ್ತಿರುವಾಗ, ಸೆಪ್ಟೆಂಬರ್ 15, 1993ರ ಕಾವಲಿನಬುರುಜು ಪತ್ರಿಕೆಯ 22-3ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಅತ್ಯುತ್ತಮ ಸಲಹೆಗಳನ್ನು ಉಪಯೋಗಿಸಸಾಧ್ಯವಿದೆ. ಇದರ ಪರಿಣಾಮವಾಗಿ, ಏಪ್ರಿಲ್ ತಿಂಗಳಿನಲ್ಲಿ ಕ್ಷೇತ್ರಸೇವೆಯಲ್ಲಿ ಭಾಗವಹಿಸುವಂತೆ ಈಗಲೂ ಕೆಲವರನ್ನು ಪುನಃ ಸಕ್ರಿಯಗೊಳಿಸಸಾಧ್ಯವಿದೆ.
5 ಇನ್ನೂ ಹೆಚ್ಚು ಮಂದಿ ಅಸ್ನಾನಿತ ಪ್ರಚಾರಕರಾಗುವಂತೆ ಸಹಾಯಮಾಡಿರಿ: ನಿಮ್ಮ ಮಕ್ಕಳು ಸುವಾರ್ತೆಯ ಹೊಸ ಪ್ರಚಾರಕರಾಗಲು ಅರ್ಹರಾಗಿದ್ದಾರೋ? ನೀವು ಬೈಬಲ್ ಅಭ್ಯಾಸಮಾಡುತ್ತಿರುವ ಇತರರ ಕುರಿತೇನು? ಅಂಥವರು ಹಿರಿಯರಿಂದ ಸಮ್ಮತಿಯನ್ನು ಪಡೆದಿರುವಲ್ಲಿ, ಪ್ರಚಾರಕಾರ್ಯವನ್ನು ಆರಂಭಿಸಲು ಏಪ್ರಿಲ್ ತಕ್ಕ ಸಮಯವಾಗಿರುವುದಿಲ್ಲವೋ? ಒಬ್ಬ ವ್ಯಕ್ತಿಯು ಪ್ರಗತಿಯನ್ನು ಮಾಡುತ್ತಿರುವುದಾದರೆ ಮತ್ತು ಅಪೇಕ್ಷಿಸು ಬ್ರೋಷರನ್ನು ಹಾಗೂ ಜ್ಞಾನ ಪುಸ್ತಕವನ್ನು ಅಭ್ಯಸಿಸಿರುವುದಾದರೆ, “ನಿನ್ನ ರಾಜ್ಯವು ಬರಲಿ” ಎಂಬ ಪುಸ್ತಕದಲ್ಲಿ ಬೈಬಲ್ ಅಭ್ಯಾಸವನ್ನು ಮುಂದುವರಿಸಬಹುದು. ಸತ್ಯದ ಹೆಚ್ಚಿನ ಒಳನೋಟವನ್ನು ಪಡೆದುಕೊಳ್ಳುವಂತೆ, ಅಸ್ನಾನಿತ ಪ್ರಚಾರಕನಾಗಿ ಅರ್ಹನಾಗುವಂತೆ ಮತ್ತು ಯೆಹೋವನ ಸಮರ್ಪಿತ ಹಾಗೂ ದೀಕ್ಷಾಸ್ನಾನ ಪಡೆದ ಸಾಕ್ಷಿಯಾಗುವಂತೆ ವಿದ್ಯಾರ್ಥಿಗೆ ಸಹಾಯಮಾಡುವುದೇ ನಿಮ್ಮ ಗುರಿಯಾಗಿದೆ.—ಎಫೆ. 3:17-19; 1 ತಿಮೊ. 1:12; 1 ಪೇತ್ರ 3:21.
6 ನಿಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಸತತವಾದ ಹಾಗೂ ನಿಜವಾದ ಆಸಕ್ತಿಯನ್ನು ತೋರಿಸುವುದು ತಾನೇ, ಅವರು ಕೊನೆಯಲ್ಲಿ ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳಲು ಸಹಾಯಮಾಡಬಹುದು. ಬೈಬಲ್ ಅಭ್ಯಾಸವನ್ನು ಮಾಡಲು ಸಂತೋಷದಿಂದ ಒಪ್ಪಿಕೊಂಡ ವಯಸ್ಸಾದ ದಂಪತಿಯನ್ನು ಸಾಕ್ಷಿಯೊಬ್ಬನು ಸಂದರ್ಶಿಸಿದನು. ಆದರೆ ಆ ದಂಪತಿಯು ಅಭ್ಯಾಸವನ್ನು ಮೂರು ವಾರಗಳ ವರೆಗೆ ಮುಂದೂಡಿದರು. ಕೊನೆಗೂ ಅಭ್ಯಾಸವನ್ನು ಪ್ರಾರಂಭಿಸಲಾಯಿತು. ನಂತರ, ಅವರು ಒಂದು ವಾರ ಅಭ್ಯಾಸವನ್ನು ಮಾಡಿ, ಮುಂದಿನ ವಾರ ಅಭ್ಯಾಸವನ್ನು ರದ್ದುಗೊಳಿಸುತ್ತಿದ್ದರು. ಆದರೂ ಕೊನೆಗೆ ಹೆಂಡತಿಯು ದೀಕ್ಷಾಸ್ನಾನದ ವರೆಗೆ ಪ್ರಗತಿಯನ್ನು ಮಾಡಿದಳು. “ಅವರು ದೀಕ್ಷಾಸ್ನಾನವನ್ನು ಪಡೆದುಕೊಂಡ ನಂತರ, ಆಕೆಯ ಕಂಗಳು ಆನಂದಬಾಷ್ಪದಿಂದ ತುಂಬಿದ್ದವು. ಅದನ್ನು ನೋಡಿ ನನ್ನ ಮತ್ತು ನನ್ನ ಹೆಂಡತಿಯ ಕಂಗಳು ಸಹ ಆನಂದಬಾಷ್ಪದಿಂದ ತುಂಬಿದವು” ಎಂದು ಆ ಸಹೋದರನು ಮರುಜ್ಞಾಪಿಸಿಕೊಳ್ಳುತ್ತಾನೆ. ಹೌದು, ಸುವಾರ್ತೆಯನ್ನು ಸಾರುವುದರಲ್ಲಿ ‘ಅತ್ಯಾಸಕ್ತಿಯಿಂದ ನಿರತರಾಗಿರುವುದು’ ತುಂಬ ಸಂತೋಷವನ್ನು ತರುತ್ತದೆ.
7 ನಾವು ಅಂತ್ಯಕಾಲದ ಕೊನೆಯ ಭಾಗದಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಬೈಬಲ್ ಪ್ರವಾದನೆ ಮತ್ತು ಲೋಕ ಘಟನೆಗಳು ಸೂಚಿಸುತ್ತವೆ. ದೇವಜನರೆಲ್ಲರೂ ಸುವಾರ್ತೆಯನ್ನು ಇತರರಿಗೆ ತಿಳಿಸುವುದರಲ್ಲಿ “ಅತ್ಯಾಸಕ್ತಿಯಿಂದ ನಿರತ”ರಾಗುವ ಸಮಯವು ಇದೇ. “ಕರ್ತನ ಸೇವೆಯಲ್ಲಿ” ಮಾಡುವ ಅಂತಹ ಪ್ರಯಾಸವು ಖಂಡಿತವಾಗಿಯೂ “ನಿಷ್ಫಲವಾಗುವದಿಲ್ಲ” ಎಂದು ಅಪೊಸ್ತಲ ಪೌಲನು ಆಶ್ವಾಸನೆ ನೀಡುತ್ತಾನೆ.—1 ಕೊರಿಂ. 15:58.