ಸರಳವಾದ ನಿರೂಪಣೆಯೇ ಅತ್ಯುತ್ತಮ
1 ಅನೇಕವೇಳೆ ಎಳೆಯ ಪ್ರಚಾರಕರು ಯಾರೊಂದಿಗೆ ರಾಜ್ಯದ ಸಂದೇಶವನ್ನು ಹಂಚಿಕೊಳ್ಳುತ್ತಾರೋ ಅವರ ಗಮನವನ್ನು ಸೆರೆಹಿಡಿಯುತ್ತಾರೆ. ಹೀಗೇಕೆ? ಒಂದು ಕಾರಣವೇನೆಂದರೆ, ಅವರು ಉಪಯೋಗಿಸುವ ಅಭಿವ್ಯಕ್ತಿಗಳು ತುಂಬ ಸರಳವಾಗಿರುತ್ತವೆ. ಪರಿಣಾಮಕಾರಿಯಾಗಿ ಸಾಕ್ಷಿಕೊಡಬೇಕಾದರೆ ಪ್ರಸ್ತಾವನೆಯು ಆಡಂಬರದ ಮಾತುಗಳಿಂದ ಕೂಡಿರಬೇಕು ಎಂಬುದಾಗಿ ಕೆಲವು ಪ್ರಚಾರಕರು ನೆನಸಬಹುದು. ಆದರೆ, ಸರಳವೂ ಸ್ಪಷ್ಟವೂ ಆಗಿರುವ ನಿರೂಪಣೆಗಳೇ ಉತ್ತಮ ಫಲಿತಾಂಶಗಳನ್ನು ಕೊಡುತ್ತವೆಂದು ಅನುಭವಗಳು ತೋರಿಸುತ್ತವೆ.
2 ಯೇಸು, ದೇವರ ರಾಜ್ಯದ ಕುರಿತಾಗಿ ಸರಳವಾದ ಮತ್ತು ಮುಚ್ಚುಮರೆಯಿಲ್ಲದ ರೀತಿಯಲ್ಲಿ ಘೋಷಿಸಿದನು. ತನ್ನ ಶಿಷ್ಯರು ಸಹ ಹಾಗೆಯೇ ಮಾಡುವಂತೆ ಅವನು ಅವರನ್ನು ತರಬೇತುಗೊಳಿಸಿದನು. (ಮತ್ತಾ. 4:17; 10:5-7; ಲೂಕ 10:1, 9) ಆತನು, ತನ್ನ ಕೇಳುಗರ ಗಮನವನ್ನು ಸೆರೆಹಿಡಿದು, ಅವರ ಹೃದಯವನ್ನು ಸ್ಪರ್ಶಿಸುವಂತಹ ಸರಳವಾದ ಪೀಠಿಕೆಗಳನ್ನು, ಪ್ರಶ್ನೆಗಳನ್ನು ಮತ್ತು ದೃಷ್ಟಾಂತಗಳನ್ನು ಉಪಯೋಗಿಸಿದನು. (ಯೋಹಾ. 4:7-14) ಆದುದರಿಂದ, ನಾವು ಕೂಡ ಜನರಿಗೆ ಸುಲಭವಾಗಿ ಅರ್ಥವಾಗುವ ನಿರೂಪಣೆಗಳನ್ನು ನೀಡುವುದರಲ್ಲಿ ಅವನನ್ನು ಅನುಕರಿಸೋಣ.
3 “ರಾಜ್ಯದ ಸುವಾರ್ತೆ”ಯೇ ನಾವು ಘೋಷಿಸಬೇಕಾಗಿರುವ ಸಂದೇಶವಾಗಿದೆ. (ಮತ್ತಾ. 24:14) ರಾಜ್ಯವನ್ನು ನಿಮ್ಮ ಮುಖ್ಯ ವಿಷಯವನ್ನಾಗಿ ಉಪಯೋಗಿಸುವುದಾದರೆ ನಿಮ್ಮ ನಿರೂಪಣೆಯು ಸರಳವಾಗಿರುವುದು. ನಿಮ್ಮ ಕೇಳುಗರಿಗೆ ಸಂಬಂಧಪಡುವ ವಿಷಯಗಳ ಕುರಿತು ಮಾತನಾಡಿರಿ. ಅನೇಕವೇಳೆ ಮಹಿಳೆಯರು ರಾಜಕೀಯ ವಿಷಯಗಳಿಗಿಂತ ತಮ್ಮ ಕುಟುಂಬದ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ಒಬ್ಬ ತಂದೆಗೆ ತನ್ನ ನೌಕರಿ ಮತ್ತು ತನ್ನ ಕುಟುಂಬದ ಸುರಕ್ಷೆಯೇ ಮುಖ್ಯ ಚಿಂತೆಯಾಗಿರುತ್ತದೆ. ಯುವಜನರು ತಮ್ಮ ಭವಿಷ್ಯದ ಕುರಿತು ಹೆಚ್ಚು ಆಸಕ್ತರಾಗಿರುತ್ತಾರೆ, ವೃದ್ಧ ವ್ಯಕ್ತಿಗಳು ಉತ್ತಮ ಆರೋಗ್ಯ ಮತ್ತು ತಮ್ಮ ಭದ್ರತೆಯ ಕುರಿತು ಆಸಕ್ತರಾಗಿರುತ್ತಾರೆ. ಜನರು ದೂರದೂರದ ದೇಶಗಳಲ್ಲಿ ನಡೆಯುವ ಘಟನೆಗಳಿಗಿಂತ ತಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಕುರಿತು ಹೆಚ್ಚು ಚಿಂತಿತರಾಗಿರುತ್ತಾರೆ. ಸಾಮಾನ್ಯ ಅಭಿರುಚಿಯ ವಿಷಯಗಳ ಕುರಿತು ಸಂಭಾಷಿಸಿದ ನಂತರ ದೇವರ ರಾಜ್ಯದ ಆಳ್ವಿಕೆಯ ಕೆಳಗೆ ವಿಧೇಯ ಮಾನವಕುಲವು ಅನುಭವಿಸಲಿರುವ ಆಶೀರ್ವಾದಗಳ ಕಡೆಗೆ ಗಮನವನ್ನು ಸೆಳೆಯಿರಿ. ಸರಳವಾದ, ತುಂಬ ಜಾಗ್ರತೆಯಿಂದ ಆಯ್ಕೆಮಾಡಿದ ಕೆಲವು ಮಾತುಗಳೊಂದಿಗೆ ಒಂದು ವಚನವನ್ನು ತೋರಿಸುವುದು ನಿಮ್ಮ ಕೇಳುಗರ ಆಸಕ್ತಿಯನ್ನು ಕೆರಳಿಸುವ ಅತ್ಯುತ್ತಮ ಮಾರ್ಗವಾಗಿರುವುದು.
4 ನೀವು ಸಂಭಾಷಣೆಯನ್ನು ಹೀಗೆ ಹೇಳುವ ಮೂಲಕ ಆರಂಭಿಸಬಹುದು:
▪ “ವಾಸಿಮಾಡಲಾಗದ ಎಷ್ಟೋ ಕಾಯಿಲೆಗಳಿಂದ ಮಾನವಕುಲವು ನರಳುತ್ತಿದೆ ಎಂಬುದನ್ನು ನೀವು ಖಂಡಿತವಾಗಿಯೂ ಒಪ್ಪಿಕೊಳ್ಳುವಿರಿ. ಆದರೆ, ಎಲ್ಲ ರೀತಿಯ ಕಾಯಿಲೆಗಳೊಂದಿಗೆ ಮರಣವನ್ನೂ ತೆಗೆದುಹಾಕುವೆನೆಂದು ದೇವರು ವಾಗ್ದಾನಿಸಿದ್ದಾನೆ ಎಂಬುದು ನಿಮಗೆ ಗೊತ್ತಿದೆಯೇ?” ಮನೆಯವರ ಪ್ರತಿಕ್ರಿಯೆಗಾಗಿ ಅವಕಾಶಕೊಡಿ, ನಂತರ ಪ್ರಕಟನೆ 21:3, 4ನ್ನು ಓದಿ.
5 ಸರಳವಾದ ಹಾಗೂ ಸ್ಪಷ್ಟವಾದ ನಿರೂಪಣೆಗಳೊಂದಿಗೆ, ನಿಮ್ಮ ಕ್ಷೇತ್ರದಲ್ಲಿರುವ ಹೆಚ್ಚೆಚ್ಚು ಜನರಿಗೆ ಯೆಹೋವನ ಕುರಿತು ಮತ್ತು ನಿತ್ಯಜೀವವನ್ನು ಅನುಭವಿಸುವ ಪ್ರತೀಕ್ಷೆಯ ಕುರಿತು ಕಲಿಯಲು ಸಹಾಯಮಾಡುತ್ತಾ, ಅವರ ಹೃದಮನಸ್ಸುಗಳನ್ನು ನೀವು ತಲಪುವಂತಾಗಲಿ.—ಯೋಹಾ. 17:3.