ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿ ನೀವು ಸೇವೆಮಾಡಬಲ್ಲಿರೋ?
1 ಎಲ್ಲಿ ಹೆಚ್ಚಿನ ರಾಜ್ಯ ಘೋಷಕರ ಅಗತ್ಯವಿದೆಯೋ ಅಲ್ಲಿಗೆ ಸ್ಥಳಾಂತರಿಸುವುದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೋ? ಒಂದುವೇಳೆ ಆಮಂತ್ರಿಸಲ್ಪಟ್ಟರೆ, ‘ಬಂದು ನೆರವಾಗಲು’ ಪೌಲನಂತೆಯೇ ಪ್ರತಿಕ್ರಿಯಿಸುವಿರೋ? (ಅ. ಕೃ. 16:9, 10) ಅನೇಕ ಸಭೆಗಳಲ್ಲಿ, ಆತ್ಮಿಕವಾಗಿ ಪ್ರೌಢರಾಗಿರುವ ಕುಟುಂಬಗಳು, ಟೆರಿಟೊರಿಯನ್ನು ಆವರಿಸಲಿಕ್ಕಾಗಿ ಪಯನೀಯರರು ಅಥವಾ ಮುಂದಾಳತ್ವ ವಹಿಸಲು ಅರ್ಹ ಹಿರಿಯರು ಮತ್ತು ಶುಶ್ರೂಷಾ ಸೇವಕರ ಅಗತ್ಯವಿದೆ. ಟೆರಿಟೊರಿಯು ಚಿಕ್ಕ ಚಿಕ್ಕ ಊರುಗಳಿಂದ ಕೂಡಿರುವ ದೊಡ್ಡ ಗ್ರಾಮೀಣ ಕ್ಷೇತ್ರವಾಗಿರಬಹುದು. ಅತಿ ಹತ್ತಿರವಿರುವ ರಾಜ್ಯ ಸಭಾಗೃಹ ಪ್ರಾಯಶಃ ಅನೇಕ ಕಿಲೊಮೀಟರ್ಗಳಷ್ಟು ದೂರದಲ್ಲಿರಬಹುದು. ಐಹಿಕ ಕೆಲಸವು ಮಿತವಾಗಿರಬಹುದು. ಹವಾಮಾನವು ಎಲ್ಲಾ ಸಮಯಗಳಲ್ಲಿ ಅನುಕೂಲಕರವಾಗಿ ಇಲ್ಲದಿರಬಹುದು. ಇಂತಹ ಪಂಥಾಹ್ವಾನವನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರೋ? ಇದರಲ್ಲಿ ನೀವು ಹೇಗೆ ಯಶಸ್ವಿಯಾಗಸಾಧ್ಯವಿದೆ?
2 ನಂಬಿಕೆ ಮತ್ತು ಭರವಸೆಯ ಅಗತ್ಯವಿದೆ: ದೇವರ ಮಾರ್ಗದರ್ಶನಕ್ಕನುಸಾರ ಅಬ್ರಾಮನು ತನ್ನ ಸ್ವದೇಶವಾದ ಊರ್ ಅನ್ನು ಬಿಟ್ಟು, 1,000 ಕಿಲೊಮೀಟರ್ಗಳಷ್ಟು ದೂರದಲ್ಲಿರುವ ಖಾರಾನ್ಗೆ ತನ್ನ ಹೆಂಡತಿ, ಸೋದರಳಿಯ ಮತ್ತು ವಯಸ್ಸಾದ ತಂದೆಯಾದ ತೆರಹನೊಂದಿಗೆ ಪ್ರಯಾಣಿಸಿದನು. (ಆದಿ. 11:31, 32; ನೆಹೆ. 9:7) ತೆರಹನು ಸತ್ತ ಮೇಲೆ, ಈಗ 75 ವರ್ಷ ಪ್ರಾಯದವನಾಗಿದ್ದ ಅಬ್ರಾಮನಿಗೆ ಯೆಹೋವನು, ಖಾರಾನನ್ನು ಮತ್ತು ತನ್ನ ಸಂಬಂಧಿಕರನ್ನು ಬಿಟ್ಟು ತಾನು ತೋರಿಸುವೆನೆಂದು ಹೇಳಿದ ದೇಶಕ್ಕೆ ಹೋಗುವಂತೆ ಆಜ್ಞಾಪಿಸಿದನು. ಅಬ್ರಾಮ, ಸಾರಯಳು, ಮತ್ತು ಲೋಟರು ‘ಹೊರಟರು.’ (ಆದಿ. 12:1, 4, 5) ಅಬ್ರಾಮನು ಎಲ್ಲಿ ಹೆಚ್ಚಿನ ಶುಶ್ರೂಷಕರ ಅಗತ್ಯವಿದೆಯೋ ಅಲ್ಲಿ ಹೋಗಿ ಸೇವೆಮಾಡಲಿಕ್ಕಾಗಿ ಸ್ಥಳಾಂತರಿಸಲಿಲ್ಲ ಎಂಬುದೇನೊ ನಿಜ. ಆದರೆ ಅವನ ಸ್ಥಳಾಂತರವು ಏನನ್ನೋ ಅವಶ್ಯಪಡಿಸಿತು. ಏನನ್ನು?
3 ಇಂತಹ ಕೆಲಸದಲ್ಲಿ ಕೈಹಾಕಲು ಅಬ್ರಾಮನಿಗೆ ನಂಬಿಕೆ ಮತ್ತು ಭರವಸೆಯ ಆವಶ್ಯಕತೆಯಿತ್ತು. ಅವನ ಆಲೋಚನಾ ರೀತಿ ಹಾಗೂ ಜೀವನ ಶೈಲಿಯು ಬದಲಾಗಬೇಕಿತ್ತು. ಅವನು ತನ್ನ ಸಂಬಂಧಿಕರಿಂದ ಸಿಗುವ ಭದ್ರತೆಯನ್ನು ಬಿಟ್ಟುಹೋಗಬೇಕಿತ್ತು. ಆದರೆ ತನ್ನನ್ನು ಮತ್ತು ತನ್ನ ಮನೆವಾರ್ತೆಯನ್ನು ನೋಡಿಕೊಳ್ಳುವಂತೆ ಅವನು ಯೆಹೋವನಲ್ಲಿ ಭರವಸವಿಟ್ಟನು. ತದ್ರೀತಿಯಲ್ಲೇ, ಇಂದು ಅನೇಕರು ಯೆಹೋವನಲ್ಲಿ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
4 ಅಲ್ಪಾವಧಿಯ ನೇಮಕಗಳು: ನೇಮಿಸಲ್ಪಡದಿರುವಂತಹ ಟೆರಿಟೊರಿಯಲ್ಲಿ ಕೆಲಸ ಮಾಡುವುದರಿಂದ ಸಿಗುವ ಸಮೃದ್ಧವಾದ ಆಶೀರ್ವಾದಗಳಲ್ಲಿ ನೀವು ಎಂದಾದರೂ ಆನಂದಿಸಿದ್ದೀರೋ? ಇಂತಹ ಟೆರಿಟೊರಿಯಲ್ಲಿ ಕೆಲಸಮಾಡಿರುವವರಿಗೆ, ತುಂಬ ದೂರ ದೂರ ಪ್ರಯಾಣಿಸಬೇಕಾಗುತ್ತಿತ್ತು. ಅವರ ಪ್ರಯತ್ನವು ಸಾರ್ಥಕವಾಯಿತೋ?
5 ಯೂಟಾಗೆ ಹೋದ ಕ್ಯಾಲಿಫೋರ್ನಿಯದ ಒಬ್ಬ ಸಹೋದರನು ಬರೆದದ್ದು: “ವಿರಳವಾಗಿ ಸೇವೆಮಾಡಿರುವ ಟೆರಿಟೊರಿಗೆ ಒಂದು ಗುಂಪನ್ನು ಕರೆದೊಯ್ಯಬೇಕೆಂಬ ಅಭಿಪ್ರಾಯದೊಂದಿಗೆ ಸಹೋದರರು ನನ್ನನ್ನು ಪ್ರಥಮ ಬಾರಿ ಸಮೀಪಿಸಿದಾಗ, ನಾನು ಹಿಂಜರಿದೆ. ಆದರೆ ನಾನು ಈ ನೇಮಕವನ್ನು ಸ್ವೀಕರಿಸಲು ನಿರ್ಧರಿಸಿದೆ. ನಾನು ಇದರ ಬಗ್ಗೆ ಎಂದಿಗೂ ವಿಷಾದಿಸಿಲ್ಲ. ಆದರೆ ಇದು ನನ್ನ ಜೀವನವನ್ನೇ ಬದಲಾಯಿಸಿದೆ. ಈ ಪ್ರಯಾಣದಲ್ಲಿ ಭಾಗಿಯಾಗಲು ಸಿಕ್ಕಿದ ಸುಯೋಗಕ್ಕಾಗಿ ನಾನು ಪ್ರತಿ ದಿನ ಯೆಹೋವನಿಗೆ ಉಪಕಾರ ಸಲ್ಲಿಸುತ್ತೇನೆ.” ಟೆನಸಿಗೆ ಹೋದ ಫ್ಲಾರಿಡದ ಒಬ್ಬ ಸಹೋದರನು, ತಾನು ಸತ್ಯದಲ್ಲಿದ್ದ 20 ವರ್ಷಗಳಲ್ಲಿ ಇದೇ ಅತಿ ಅವಿಸ್ಮರಣೀಯ ಅನುಭವವಾಗಿತ್ತು ಎಂದು ಹೇಳಿದನು! ಪಶ್ಚಿಮ ವರ್ಜಿನಿಯಕ್ಕೆ ಹೋದ ಕನೆಟಿಕಟ್ನ ಒಬ್ಬ ಹದಿವಯಸ್ಕನು ಹೇಳಿದ್ದು: “ನನ್ನ ಜೀವಿತದ ಅತ್ಯುತ್ತಮವಾದ ಅನುಭವವು ಇದೇ ಆಗಿತ್ತು!” ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿ ಹೋಗಿ ಕೊಂಚ ಕಾಲ ಸೇವೆಮಾಡುವುದು ಕೂಡ ಶುಶ್ರೂಷೆಗಾಗಿರುವ ತಮ್ಮ ಗಣ್ಯತೆಯನ್ನು ಗಾಢಗೊಳಿಸಿದೆ ಎಂದು ಅಧಿಕಾಂಶ ಪ್ರಚಾರಕರು ಒಪ್ಪಿಕೊಳ್ಳುತ್ತಾರೆ. ಇದನ್ನು ಮಾಡಿರುವವರೊಂದಿಗೆ ಮಾತಾಡಿ. ಅವರು ಆತ್ಮಿಕವಾಗಿ ಉತ್ತೇಜಿಸಲ್ಪಟ್ಟರು ಮತ್ತು ಇನ್ನೊಂದು ಅವಕಾಶವು ಸಿಗುವಲ್ಲಿ ಅವರು ಅದನ್ನು ಪುನಃ ಮಾಡುವ ಸಂಭವವಿದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ.
6 ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿ ಹೋಗಿ ತಾತ್ಕಾಲಿಕವಾಗಿ ಸೇವೆಮಾಡುವ ನೇಮಕವನ್ನು ಅಂಗೀಕರಿಸುವುದು ಮತ್ತೊಂದು ಉದ್ದೇಶವನ್ನು ಪೂರೈಸುತ್ತದೆ. ಹೀಗೆ ಮಾಡುವವರು, ದೇಶದ ಇನ್ನೊಂದು ಭಾಗಕ್ಕೆ ಸ್ಥಳಾಂತರಿಸಲು ತಮಗೆ “ಎಷ್ಟು ಖರ್ಚು ಹಿಡಿದೀತು” ಎಂಬುದನ್ನು ಲೆಕ್ಕಿಸಲಿಕ್ಕಾಗಿ ಉಪಯುಕ್ತವಾದ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.—ಲೂಕ 14:28.
7 ಅಂತ್ಯವು ಬರುವ ಮುನ್ನ “ಸರ್ವಲೋಕದಲ್ಲಿ” ಸುವಾರ್ತೆಯು ಸಾರಲ್ಪಡಬೇಕೆಂಬ ವಿಷಯದಲ್ಲಿ ಯೆಹೋವನು ದೃಢನಿರ್ಧಾರವುಳ್ಳವನಾಗಿದ್ದಾನೆ. (ಮತ್ತಾ. 24:14) ಇದನ್ನು ತಿಳಿದವರಾಗಿದ್ದು, ನಿಮಗೆ ಸಾಧ್ಯವಿರುವಲ್ಲಿ ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಅಲ್ಲಿಗೆ ಸ್ಥಳಾಂತರಿಸಲು ಮನಸ್ಸುಳ್ಳವರಾಗಿರುವಿರೋ? ಅನೇಕ ಕ್ಷೇತ್ರಗಳಲ್ಲಿ ಹೆಚ್ಚಿನ ರಾಜ್ಯ ಪ್ರಚಾರಕರ ಅಗತ್ಯವಿದೆ.
8 ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಅಲ್ಲಿಗೆ ಸ್ಥಳಾಂತರಿಸುವುದು: ನೀವು ನಿವೃತ್ತಿ ಪಡೆದಿದ್ದೀರೋ? ಸ್ಥಿರವಾದ ವರಮಾನ ನಿಮಗಿದೆಯೋ? ಇಲ್ಲದಿದ್ದರೆ, ನೀವು ಸ್ವಉದ್ಯೋಗವನ್ನು ಏರ್ಪಡಿಸಬಲ್ಲಿರೋ? ಯಾವುದೇ ಸ್ಥಳದಲ್ಲಿ ಟೆಲಿಫೋನ್ ಅಥವಾ ಕಂಪ್ಯೂಟರ್ನ ಮೂಲಕ ಕೆಲಸಮಾಡಿ ನೀವು ಜೀವನೋಪಾಯ ಮಾಡಬಲ್ಲಿರೋ? ನೀವು ಬೇರೆ ಕಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲದಿರುವಲ್ಲಿ, ಕುಟುಂಬದ ಒಬ್ಬ ಸದಸ್ಯನು ಬೇರೆಲ್ಲಿಯಾದರೂ ಸೇವೆಮಾಡುವಂತೆ ಅವನನ್ನು ನೀವು ಬೆಂಬಲಿಸಬಲ್ಲಿರೋ?
9 ಪ್ರಾರ್ಥನಾಪೂರ್ವಕ ಪರಿಗಣನೆಯ ನಂತರ, ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಅಲ್ಲಿಗೆ ಸ್ಥಳಾಂತರಿಸಲು ನೀವು ಸಮರ್ಥರಾಗಿದ್ದೀರಿ ಎಂದು ನಿಮಗೆ ಅನಿಸುವುದಾದರೆ, ಈ ವಿಷಯವನ್ನು ನಿಮ್ಮ ಕುಟುಂಬದೊಂದಿಗೆ ಮತ್ತು ಸಭೆಯ ಹಿರಿಯರೊಂದಿಗೆ ಚರ್ಚಿಸಿರಿ. ನಂತರ ಒಂದು ಪತ್ರವನ್ನು ಸಿದ್ಧಪಡಿಸಿ, ಅದನ್ನು ನಿಮ್ಮ ಹಿರಿಯರಿಗೆ ಕೊಡಿರಿ. ಅವರು ಅದನ್ನು ಬ್ರಾಂಚ್ ಆಫೀಸಿಗೆ ಕಳುಹಿಸುವ ಮುನ್ನ ತಮ್ಮ ವೀಕ್ಷಣೆಗಳನ್ನು ಹಾಗೂ ಶಿಫಾರಸ್ಸುಗಳನ್ನು ಒಳಗೂಡಿಸಬಹುದು.
10 ನಿಮ್ಮ ಪತ್ರದಲ್ಲಿ ನೀವು ಏನೆಲ್ಲ ಸೇರಿಸಬೇಕು? ನಿಮ್ಮ ಪ್ರಾಯ, ದೀಕ್ಷಾಸ್ನಾನದ ತಾರೀಖು, ಸಭೆಯಲ್ಲಿ ನಿರ್ವಹಿಸುತ್ತಿರುವ ಜವಾಬ್ದಾರಿಗಳು, ವೈವಾಹಿಕ ಸ್ಥಿತಿ, ಮತ್ತು ನಿಮಗೆ ಚಿಕ್ಕ ಮಕ್ಕಳಿದ್ದಾರೋ ಎಂಬ ವಿಷಯಗಳನ್ನು ಸೇರಿಸಬೇಕು. ನಿಮ್ಮ ವೈಯಕ್ತಿಕ ಅಗತ್ಯಗಳಿಗನುಸಾರವಾಗಿ, ನೀವು ಸೇವೆಮಾಡಲು ಬಯಸುವ ರಾಜ್ಯಗಳನ್ನು ಹೆಸರಿಸಿ. ದೃಷ್ಟಾಂತಕ್ಕಾಗಿ, ಎಲ್ಲಿ ಬಿಸಿಲು ಮತ್ತು ತೇವಾಂಶವು ಅಧಿಕವಾಗಿದೆಯೋ ಅಲ್ಲಿ ನೀವು ಜೀವಿಸಬಲ್ಲಿರೋ? ನೀವು ಶೀತಲ ಚಳಿಗಾಲಗಳನ್ನು ತಾಳಿಕೊಳ್ಳಬಲ್ಲಿರೋ? ನೀವು ಎತ್ತರ ಪ್ರದೇಶಗಳಲ್ಲಿ ಜೀವಿಸಬಲ್ಲಿರೋ? ನೀವು ಯಾವುದೇ ದೇಶೀಯ ಭಾಷೆಗಳನ್ನು ಮಾತಾಡುತ್ತೀರೋ?
11 ನಿಮಲ್ಲಿ ಹುರುಪು ಮತ್ತು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವ ಸ್ವಭಾವವಿದೆಯೋ? ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಅಲ್ಲಿ ಸೇವೆಮಾಡುವಂತೆ ನಿಮ್ಮ ಪರಿಸ್ಥಿತಿಗಳು ನಿಮ್ಮನ್ನು ಅನುಮತಿಸುತ್ತವೋ? ಅನುಮತಿಸುವಲ್ಲಿ, ಸ್ವತ್ಯಾಗದ ಆತ್ಮವನ್ನು ಪ್ರದರ್ಶಿಸುತ್ತಾ ತನ್ನಲ್ಲಿ ಭರವಸೆಯಿಡುವವರ ಮೇಲೆ ಯೆಹೋವನು ನಿರಂತರವಾಗಿ ಹೇಗೆ ಸಮೃದ್ಧವಾದ ಆಶೀರ್ವಾದಗಳನ್ನು ಸುರಿಸುತ್ತಾನೆ ಎಂಬುದನ್ನು ಗಮನಿಸಿರಿ!—ಕೀರ್ತ. 34:8; ಮಲಾ. 3:10.