ಬೈಬಲ್ ಅಧ್ಯಯನವನ್ನು ಪ್ರಸ್ತಾಪಿಸಲು ಸದಾ ಸಿದ್ಧರಾಗಿರಿ
1. ಮತ್ತಾಯ 28:19, 20ರಲ್ಲಿ ಯೇಸು ಕೊಟ್ಟಿರುವ ನೇಮಕವನ್ನು ಪೂರೈಸಲು ಏನು ಮಾಡಬೇಕು?
1 ‘ಜನರನ್ನು ಶಿಷ್ಯರನ್ನಾಗಿ ಮಾಡುವ, ಅವರಿಗೆ ಬೋಧಿಸುವ’ ನೇಮಕವನ್ನು ಯೇಸು ನಮಗೆ ಕೊಟ್ಟನು. (ಮತ್ತಾ. 28:19, 20) ಹೀಗಿರುವುದರಿಂದ ಬೈಬಲ್ ಅಧ್ಯಯನದ ಏರ್ಪಾಡನ್ನು ಪ್ರಸ್ತಾಪಿಸಲು ನಾವು ಸದಾ ಸಿದ್ಧರಾಗಿರಬೇಕು. ಇದನ್ನು ಮಾಡಲು ಮುಂದಿನ ಸಲಹೆಗಳು ಸಹಾಯಕಾರಿ ಆಗಿರಬಲ್ಲವು.
2. ನಾವು ಯಾರಿಗೆಲ್ಲ ಬೈಬಲ್ ಅಧ್ಯಯನವನ್ನು ಪ್ರಸ್ತಾಪಿಸಬಹುದು?
2 ಅದನ್ನು ಪ್ರಸ್ತಾಪಿಸಿರಿ: ನಾವು ಹೆಚ್ಚು ಜನರಿಗೆ ಬೈಬಲ್ ಅಧ್ಯಯನವನ್ನು ಪ್ರಸ್ತಾಪಿಸುವಾಗ ಹೆಚ್ಚು ಅಧ್ಯಯನ ಸಿಗುವ ಸಾಧ್ಯತೆಗಳಿವೆ. (ಪ್ರಸಂ. 11:6) ನಮ್ಮ ಸಂದೇಶದಲ್ಲಿ ಆಸಕ್ತಿ ತೋರಿಸಿದ ಎಲ್ಲರೊಂದಿಗೆ ಬೈಬಲ್ ಅಧ್ಯಯನವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ್ದೀರೊ? ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಸಭೆಯೊಂದು ಇಡೀ ತಿಂಗಳು ತೀವ್ರ ಪ್ರಯತ್ನ ಮಾಡಿತು. ಇದರ ಫಲವಾಗಿ ಆ ಸಭೆಯವರು 42 ಹೊಸ ಬೈಬಲ್ ಅಧ್ಯಯನಗಳನ್ನು ಆರಂಭಿಸಿದರು. ಅವರ ಸಂತೋಷವನ್ನು ಊಹಿಸಬಲ್ಲಿರಾ? ನೀವು ಪುನರ್ಭೇಟಿಮಾಡುವ ಆಸಕ್ತ ಜನರಿಗೆ ಬೈಬಲ್ ಅಧ್ಯಯನದ ಏರ್ಪಾಡಿನ ಬಗ್ಗೆ ತಿಳಿದಿದೆಯೆಂದು ಊಹಿಸಬೇಡಿ. ಆದುದರಿಂದ ನೀವು ಮುಂದಿನ ಬಾರಿ ಅವರನ್ನು ಭೇಟಿಮಾಡುವಾಗ ಬೈಬಲ್ ಅಧ್ಯಯನದ ಬಗ್ಗೆ ಯಾಕೆ ತಿಳಿಸಬಾರದು? ಒಂದುವೇಳೆ ಅವರದಕ್ಕೆ ಈ ಸಲ ಒಪ್ಪದಿದ್ದರೂ ಪರವಾಗಿಲ್ಲ, ಅವರ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನವನ್ನು ಮುಂದುವರಿಸಿ. ನಿಮ್ಮ ನೆರೆಯವರಿಗೆ, ಸಂಬಂಧಿಕರಿಗೆ, ಸಹೋದ್ಯೋಗಿಗಳಿಗೆ, ಸಹಪಾಠಿಗಳಿಗೆ ಬೈಬಲ್ ಅಧ್ಯಯನವನ್ನು ಪ್ರಸ್ತಾಪಿಸಿದ್ದೀರಾ? ತಮ್ಮ ಬಂಧುಮಿತ್ರರಲ್ಲಿ ಯಾರಾದರೂ ಬೈಬಲ್ ಅಧ್ಯಯನ ಮಾಡಲಿಚ್ಛಿಸುತ್ತಾರೋ ಎಂದು ನಿಮ್ಮ ಬೈಬಲ್ ವಿದ್ಯಾರ್ಥಿಗಳಿಗೂ ಕೇಳಬಹುದು.
3. ಅಧ್ಯಯನಗಳನ್ನು ಆರಂಭಿಸಲು ನಮ್ಮ ಬಳಿ ಯಾವ ಉತ್ತಮ ಸಹಾಯಕವಿದೆ? ನಾವದನ್ನು ಯಾವಾಗೆಲ್ಲ ಬಳಸಬಹುದು?
3 ಉತ್ತಮ ಸಹಾಯಕ: ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟ್ ಒಂದು ಉತ್ತಮ ಸಹಾಯಕ. ಸುವಾರ್ತೆಯಲ್ಲಿ ನಿಜವಾಗಿಯೂ ಆಸಕ್ತರಾಗಿರುವವರಿಗೆ ನೀವದನ್ನು ಕೊಡಬಹುದು. ಪುನರ್ಭೇಟಿ ಮಾಡುವಾಗಲೂ ಬಳಸಬಹುದು. ಕ್ಷೇತ್ರ ಸೇವೆಯಲ್ಲಿ ಭಾಗವಹಿಸುತ್ತಿರುವಾಗ, ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವಾಗ, ಶಾಪ್ಪಿಂಗ್ ಮಾಡುವಾಗ, ಕೆಲಸದ ಸ್ಥಳದಲ್ಲಿ ನೀವದನ್ನು ಬಳಸಬಹುದಲ್ಲವೇ? ಆ ಟ್ರ್ಯಾಕ್ಟ್ನ ಕೊನೆ ಪುಟ ಬೈಬಲ್ ಅಧ್ಯಯನದ ಏರ್ಪಾಡಿನ ಬಗ್ಗೆ ಚುಟುಕಾಗಿ ವಿವರಿಸುತ್ತಾ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಪರಿಚಯಿಸುತ್ತದೆ.
4. ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಎಂಬ ಟ್ರ್ಯಾಕ್ಟನ್ನು ಬಳಸಿ ಹೇಗೆ ಅಧ್ಯಯನ ಆರಂಭಿಸಬಹುದು?
4 ಟ್ರ್ಯಾಕ್ಟನ್ನು ಆಸಕ್ತ ವ್ಯಕ್ತಿಯ ಕೈಗಿತ್ತು ಮೊದಲ ಪುಟದಲ್ಲಿರುವ ಪ್ರಶ್ನೆಗಳಿಗೆ ಬೊಟ್ಟುಮಾಡಿ ಹೀಗೆ ಕೇಳಿ: “ಇವುಗಳಲ್ಲಿ ಯಾವ ಪ್ರಶ್ನೆಗೆ ಉತ್ತರ ತಿಳಿಯಲು ಇಷ್ಟಪಡುತ್ತೀರಿ?” ಬಳಿಕ ಆ ಪ್ರಶ್ನೆಗೆ ಉತ್ತರವನ್ನು ಟ್ರ್ಯಾಕ್ಟ್ನಿಂದಲೇ ಅವರೊಂದಿಗೆ ಪರಿಗಣಿಸಿರಿ. ಅನಂತರ, ನಮ್ಮ ಬೈಬಲ್ ಅಧ್ಯಯನ ಏರ್ಪಾಡಿನ ಬಗ್ಗೆ ಕೊನೆ ಪುಟದಲ್ಲಿರುವ ವಿಷಯವನ್ನು ಓದಿರಿ ಇಲ್ಲವೆ ಸಾರಾಂಶವಾಗಿ ಹೇಳಿ. ನೀವೀಗ ಚರ್ಚಿಸಿದ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿ ಎಲ್ಲಿದೆಯೆಂದು ತೋರಿಸಿ, ಪುಸ್ತಕವನ್ನು ಅವರಿಗೆ ನೀಡಿ. ಚರ್ಚೆಯನ್ನು ಮುಂದುವರಿಸಲಿಕ್ಕಾಗಿ ಪುನಃ ಅವರನ್ನು ಭೇಟಿಮಾಡಲು ಏರ್ಪಾಡು ಮಾಡಿ.
5. ಬೈಬಲ್ ಅಧ್ಯಯನವನ್ನು ಪ್ರಸ್ತಾಪಿಸಲು ನಾವೇಕೆ ಸದಾ ಸಿದ್ಧರಾಗಿರಬೇಕು?
5 ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆಂದು ತಿಳಿಯಲು ತವಕಿಸುತ್ತಿರುವ ಜನರು ಈಗಲೂ ನಮ್ಮ ಟೆರಿಟೊರಿಯಲ್ಲಿದ್ದಾರೆ. ಆದರೆ ಧಾರ್ಮಿಕ ಸಂಗತಿಗಳ ವಿಷಯದಲ್ಲಿ ಟೆರಿಟೊರಿಯ ಜನರ ಮನನೋಯಿಸದಿರಲು ನಾವು ಜಾಣ್ಮೆ, ವಿವೇಚನೆ ಬಳಸಬೇಕು. ಬೈಬಲ್ ಅಧ್ಯಯನವನ್ನು ಪ್ರಸ್ತಾಪಿಸಲು ಸದಾ ಸಿದ್ಧರಾಗಿರೋಣ. ಈ ಮೂಲಕ ಇತರರು ಜೀವದ ಮಾರ್ಗಕ್ಕೆ ಬರುವಂತೆ ಸಹಾಯಮಾಡುವ ಆನಂದವನ್ನು ನಮ್ಮದಾಗಿಸುವ ಅವಕಾಶಗಳು ಹೆಚ್ಚುವವು.—ಮತ್ತಾ. 7:13, 14.