ಹೆತ್ತವರೇ—ಶೈಶವಾವಸ್ಥೆಯಿಂದಲೇ ನಿಮ್ಮ ಮಕ್ಕಳನ್ನು ತರಬೇತುಗೊಳಿಸಿ
1 “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು [ತರಬೇತುಗೊಳಿಸು]; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋ. 22:6) ಹೆತ್ತವರಾದ ನೀವು, ನಿಮ್ಮ ಮಕ್ಕಳು ಸತ್ಯದ ಮಾರ್ಗದಿಂದ ‘ಓರೆಯಾಗ’ಬಾರದು ಎಂದು ಬಯಸುವುದಾದರೆ, ಈ ರೀತಿಯ ತರಬೇತಿಯನ್ನು ಯಾವಾಗ ಆರಂಭಿಸಬೇಕು? ಶೈಶವದಿಂದಲೇ!
2 ತಿಮೊಥೆಯನ ಆತ್ಮಿಕ ಶಿಕ್ಷಣವು “ಶೈಶವಾವಸ್ಥೆಯಿಂದ” ನೀಡಲ್ಪಟ್ಟಿತ್ತೆಂದು ಪೌಲನು ಹೇಳಿದಾಗ, ಇದು ಅವನು ಶಿಶುವಾಗಿದ್ದಂದಿನಿಂದ ಆರಂಭಿಸಲ್ಪಟ್ಟಿತು ಎಂಬುದನ್ನು ಅರ್ಥೈಸಿತೆಂಬುದು ಸುಸ್ಪಷ್ಟ. (2 ತಿಮೊ. 3:14, 15, NW) ಇದರಿಂದಾಗಿ ತಿಮೊಥೆಯನು ಒಬ್ಬ ಅತಿ ಶ್ರೇಷ್ಠ ಆತ್ಮಿಕ ಮನುಷ್ಯನಾಗಿ ಪರಿಣಮಿಸಿದನು. (ಫಿಲಿ. 2:19-22) ಹೆತ್ತವರಾದ ನೀವು ಕೂಡ, ನಿಮ್ಮ ಮಕ್ಕಳು ‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವರಾಗಲು’ ಬೇಕಾದ ತರಬೇತಿ ನೀಡುವುದನ್ನು “ಶೈಶವಾವಸ್ಥೆಯಿಂದ” ಆರಂಭಿಸಬೇಕು.—1 ಸಮು. 2:21.
3 ಅವರು ಬೆಳೆಯಲಿಕ್ಕಾಗಿ ಬೇಕಾಗಿರುವ ನೀರನ್ನು ಒದಗಿಸಿರಿ: ಸಸಿಗಳು ಭವ್ಯವಾದ ಮರಗಳಾಗಿ ಬೆಳೆಯಲಿಕ್ಕಾಗಿ ಅವುಗಳಿಗೆ ಸತತವಾದ ನೀರಿನ ಸರಬರಾಯಿಯು ಅತ್ಯಗತ್ಯವಾಗಿರುವಂತೆಯೇ, ಎಲ್ಲ ಪ್ರಾಯದ ಮಕ್ಕಳು ದೇವರ ಪ್ರೌಢ ಸೇವಕರಾಗಿ ಬೆಳೆಯಲು ಅವರು ಬೈಬಲ್ ಸತ್ಯದ ನೀರಿನಿಂದ ಸಂಪೂರ್ಣವಾಗಿ ನೆನೆಸಲ್ಪಡುವುದು ಅತ್ಯಾವಶ್ಯಕವಾಗಿದೆ. ಮಕ್ಕಳಿಗೆ ಸತ್ಯವನ್ನು ಬೋಧಿಸಲು ಮತ್ತು ಯೆಹೋವನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳಲು ಅವರಿಗೆ ಸಹಾಯಮಾಡಬಹುದಾದ ಪ್ರಧಾನ ವಿಧವು, ಕ್ರಮವಾದ ಕೌಟುಂಬಿಕ ಬೈಬಲ್ ಅಧ್ಯಯನವೇ ಆಗಿದೆ. ಆದರೆ ಹೆತ್ತವರೇ, ಪ್ರತಿಯೊಂದು ಮಗುವಿನ ಗಮನಾವಧಿಯನ್ನು ಪರಿಗಣಿಸಿರಿ. ಎಳೆಯ ಮಕ್ಕಳಿಗೆ, ಕೆಲವು ದೀರ್ಘಾವಧಿಯ ಅಧ್ಯಯನಗಳಿಗಿಂತ ಆಗಿಂದಾಗ್ಗಿನ ಸಂಕ್ಷಿಪ್ತವಾದ ಬೋಧನಾ ಅವಧಿಗಳು ಹೆಚ್ಚು ಪರಿಣಾಮಕಾರಿಯಾಗಿರುವವು.—ಧರ್ಮೋ. 11:18, 19.
4 ನಿಮ್ಮ ಮಕ್ಕಳಲ್ಲಿರುವ ಕಲಿಯುವ ಸಾಮರ್ಥ್ಯವನ್ನು ಎಂದಿಗೂ ಕಡಿಮೆ ಅಂದಾಜುಮಾಡಬೇಡಿ. ಅವರಿಗೆ ಬೈಬಲ್ ವ್ಯಕ್ತಿಗಳ ಕುರಿತಾದ ಕಥೆಗಳನ್ನು ಹೇಳಿರಿ. ಅವರು ಬೈಬಲ್ ದೃಶ್ಯಗಳ ಚಿತ್ರಗಳನ್ನು ಬಿಡಿಸಲಿ ಅಥವಾ ಬೈಬಲ್ ಘಟನೆಗಳನ್ನು ನಟಿಸಿ ತೋರಿಸಲಿ. ನಮ್ಮ ವಿಡಿಯೋಗಳ ಮತ್ತು ಬೈಬಲ್ ಡ್ರಾಮಗಳನ್ನು ಸೇರಿಸಿ ಇತರ ಆಡಿಯೋಕ್ಯಾಸೆಟ್ಗಳ ಸದುಪಯೋಗವನ್ನು ಮಾಡಿರಿ. ನಿಮ್ಮ ಕೌಟುಂಬಿಕ ಅಧ್ಯಯನವನ್ನು ನಿಮ್ಮ ಮಕ್ಕಳ ಪ್ರಾಯ ಮತ್ತು ಕಲಿಯುವ ಸಾಮರ್ಥ್ಯಗಳಿಗೆ ತಕ್ಕಂತೆ ಸರಿಹೊಂದಿಸಿ. ಪ್ರಾರಂಭಿಕ ತರಬೇತಿಯು ಮೂಲಭೂತವಾಗಿದ್ದು ಚಿಕ್ಕ ಪ್ರಮಾಣಗಳಲ್ಲಿರುವುದು; ಆದರೆ ಒಂದು ಮಗುವು ದೊಡ್ಡವನಾಗಿ ಬೆಳೆಯುತ್ತಾ ಹೋಗುವಾಗ, ಅವನ ತರಬೇತಿಯು ಹೆಚ್ಚು ವಿಸ್ತಾರವಾದದ್ದೂ ಪ್ರಗತಿಪರವಾದದ್ದೂ ಆಗಬೇಕು. ಬೈಬಲ್ ಉಪದೇಶವನ್ನು ಸಜೀವವಾದದ್ದಾಗಿಯೂ ವೈವಿಧ್ಯವುಳ್ಳದ್ದಾಗಿಯೂ ಮಾಡಿರಿ. ನಿಮ್ಮ ಮಕ್ಕಳಲ್ಲಿ ದೇವರ ವಾಕ್ಯಕ್ಕಾಗಿ ಒಂದು ‘ಬಯಕೆಯನ್ನು’ ಉಂಟುಮಾಡಲು ನೀವು ಬಯಸುವುದರಿಂದ, ಅಧ್ಯಯನವನ್ನು ಸಾಧ್ಯವಿರುವಷ್ಟು ಆಸಕ್ತಿಕರವಾದದ್ದಾಗಿ ಮಾಡಿರಿ.—1 ಪೇತ್ರ 2:2.
5 ಸಭೆಯಲ್ಲಿ ಅವರನ್ನು ಒಳಗೂಡಿಸಿ: ನಿಮ್ಮ ಮಕ್ಕಳು ಸಭೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತೆ ಅವರಿಗಾಗಿ ಪ್ರಗತಿಪರವಾದ ಗುರಿಗಳನ್ನು ಇಡಿರಿ. ಅವರ ಮೊದಲ ಗುರಿಯು ಏನಾಗಿರಬಹುದು? ಇಬ್ಬರು ಎಳೆಯ ಮಕ್ಕಳ ಹೆತ್ತವರು ಹೇಳಿದ್ದು: “ಮಕ್ಕಳಿಬ್ಬರೂ ರಾಜ್ಯ ಸಭಾಗೃಹದಲ್ಲಿ ಶಾಂತರಾಗಿ ಕುಳಿತುಕೊಳ್ಳುವ ತರಬೇತಿಯನ್ನು ಪಡೆಯತೊಡಗಿದರು.” ತರುವಾಯ, ಮಕ್ಕಳು ಕೂಟಗಳಲ್ಲಿ ಹೇಳಿಕೆಗಳನ್ನು ತಮ್ಮ ಸ್ವಂತ ಮಾತುಗಳಲ್ಲಿ ನೀಡುವಂತೆ ಮಾಡಿರಿ, ಮತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಗವಹಿಸುವುದನ್ನು ಅವರ ಗುರಿಯನ್ನಾಗಿ ಮಾಡಿರಿ. ಕ್ಷೇತ್ರ ಸೇವೆಯಲ್ಲಿ ತಲಪಬೇಕಾಗಿರುವ ಒಳ್ಳೆಯ ಗುರಿಗಳು, ಮನೆಯಿಂದ ಮನೆಯ ಸೇವೆಯಲ್ಲಿ ಒಂದು ಟ್ರ್ಯಾಕ್ಟನ್ನು ನೀಡುವುದು, ಒಂದು ಶಾಸ್ತ್ರವಚನವನ್ನು ಓದುವುದು, ಒಂದು ಪತ್ರಿಕಾ ನಿರೂಪಣೆಯನ್ನು ನೀಡುವುದು, ಮತ್ತು ಮನೆಯವರನ್ನು ಅರ್ಥಭರಿತ ಸಂಭಾಷಣೆಗಳಲ್ಲಿ ಒಳಗೂಡಿಸುವುದು ಆಗಿರಬಹುದು.
6 ಒಂದು ಉತ್ಸಾಹಭರಿತ ಮಾದರಿಯನ್ನು ಇಡಿರಿ: ನೀವು ಯೆಹೋವನ ಕುರಿತು ಮಾತಾಡುವುದನ್ನು ಮತ್ತು ಆತನಿಗೆ ಪ್ರಾರ್ಥನೆ ಮಾಡುವುದನ್ನು ನಿಮ್ಮ ಮಕ್ಕಳು ದಿನಾಲೂ ಕೇಳಿಸಿಕೊಳ್ಳುತ್ತಾರೋ? ನೀವು ಆತನ ವಾಕ್ಯವನ್ನು ಅಧ್ಯಯನ ಮಾಡುವುದನ್ನು, ಕೂಟಗಳಿಗೆ ಹಾಜರಾಗುವುದನ್ನು, ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ಮತ್ತು ದೇವರ ಚಿತ್ತದಲ್ಲಿ ಸಂತೋಷವನ್ನು ಕಂಡುಕೊಳ್ಳುವುದನ್ನು ಅವರು ನೋಡುತ್ತಾರೋ? (ಕೀರ್ತ. 40:8) ಅವರು ಈ ವಿಷಯಗಳನ್ನು ಮಾಡುವುದು ಮತ್ತು ನೀವೂ ಅವರೊಂದಿಗೆ ಒಟ್ಟುಗೂಡಿ ಮಾಡುವುದು ಪ್ರಾಮುಖ್ಯವಾಗಿದೆ. ಆರು ಮಕ್ಕಳನ್ನು ಬೆಳೆಸಿದ್ದ ತನ್ನ ತಾಯಿಯ ಕುರಿತು ಬೆಳೆದ ಮಗಳೊಬ್ಬಳು ಹೇಳಿದ್ದು: “ನಮ್ಮನ್ನು ಬಹಳಷ್ಟು ಪ್ರಭಾವಿಸಿದ್ದು ತಾಯಿಯ ಸ್ವಂತ ಮಾದರಿಯೇ—ಅದು ಶಬ್ದಗಳಿಗಿಂತ ಗಟ್ಟಿಯಾಗಿ ಮಾತಾಡಿತು.” ನಾಲ್ಕು ಮಕ್ಕಳ ತಾಯಿಯೊಬ್ಬಳು ಹೇಳಿದ್ದು: “‘ಯೆಹೋವನು ಪ್ರಥಮನಾಗಿದ್ದಾನೆ’ ಎಂಬುದು ಒಂದು ಸಾಮಾನ್ಯ ವಾಕ್ಸರಣಿಯಾಗಿರಲಿಲ್ಲ, ಬದಲಿಗೆ ನಾವು ನಮ್ಮ ಜೀವಿತಗಳನ್ನು ಜೀವಿಸಿದ ರೀತಿಯಾಗಿತ್ತು.”
7 ಹೆತ್ತವರೇ, ನಿಮ್ಮ ಮಕ್ಕಳಿಗೆ ದೇವರ ವಾಕ್ಯದ ಸತ್ಯವನ್ನು ಬೋಧಿಸುತ್ತಾ, ಪ್ರಗತಿಪರ ಗುರಿಗಳನ್ನು ಇಡುತ್ತಾ, ಮತ್ತು ಸಾಧ್ಯವಿರುವಷ್ಟು ಅತ್ಯುತ್ತಮವಾದ ಮಾದರಿಯನ್ನು ಒದಗಿಸುತ್ತಾ ಅವರ ತರಬೇತಿಯನ್ನು ಆದಿಯಲ್ಲಿಯೇ ಆರಂಭಿಸಿ. ಈ ವಿಷಯಗಳನ್ನು ಮಾಡಿದ್ದಕ್ಕಾಗಿ ನೀವು ಅನಂತರ ಸಂತೋಷಪಡುವಿರಿ!