ಶುಶ್ರೂಷಕರಾಗುವಂತೆ ನಿಮ್ಮ ಮಕ್ಕಳನ್ನು ತರಬೇತಿಗೊಳಿಸಿ
1. ಕೀರ್ತನೆ 148:12, 13 ಕ್ರೈಸ್ತ ಹೆತ್ತವರ ಮೇಲೆ ಯಾವ ಜವಾಬ್ದಾರಿಯನ್ನು ಹೊರಿಸುತ್ತದೆ?
1 ಎಳೆಯರು ತನ್ನನ್ನು ಸ್ತುತಿಸುವಂತೆ ಯೆಹೋವನು ಆಮಂತ್ರಿಸುತ್ತಾನೆ. (ಕೀರ್ತ. 148:12, 13) ಆದ್ದರಿಂದ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಬೈಬಲ್ ಸತ್ಯಗಳನ್ನು ಮತ್ತು ದೇವರ ನೈತಿಕ ನಿಯಮಗಳನ್ನು ಕಲಿಸುತ್ತಾರೆ ಮಾತ್ರವಲ್ಲ, ಸುವಾರ್ತೆ ಸಾರುವ ಶುಶ್ರೂಷಕರಾಗುವಂತೆಯೂ ತರಬೇತಿ ಕೊಡುತ್ತಾರೆ. ಇದನ್ನು ಅವರು ಹಂತಹಂತವಾಗಿ ಹೇಗೆ ಮಾಡಬಲ್ಲರು?
2. ಹೆತ್ತವರ ಒಳ್ಳೇ ಮಾದರಿ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರಬಲ್ಲದು?
2 ಒಳ್ಳೇ ಮಾದರಿ: ನ್ಯಾಯಸ್ಥಾಪಕ ಗಿದ್ಯೋನ ತನ್ನೊಂದಿಗಿದ್ದ 300 ಮಂದಿ ಪುರುಷರಿಗೆ “ನನ್ನನ್ನೇ ನೋಡುತ್ತಾ ನಾನು ಮಾಡುವ ಹಾಗೆ ಮಾಡಿರಿ” ಎಂದು ಹೇಳಿದನು. (ನ್ಯಾಯ. 7:17) ಮಕ್ಕಳು ತಮ್ಮ ಹೆತ್ತವರನ್ನು ನೋಡಿ ಅವರು ಮಾಡಿದ್ದನ್ನೇ ಮಾಡುವುದು ಸಹಜ. ರಾತ್ರಿಯೆಲ್ಲ ಕೆಲಸಮಾಡಿ ಹಗಲಲ್ಲಿ ವಿಶ್ರಮಿಸುವ ಒಬ್ಬ ತಂದೆ ಶನಿವಾರದಂದು ಮಾತ್ರ ಹಗಲಲ್ಲಿ ನಿದ್ರಿಸುವ ಬದಲು ತನ್ನ ದಣಿವನ್ನು ಲೆಕ್ಕಿಸದೆ ಮಕ್ಕಳನ್ನು ಶುಶ್ರೂಷೆಗೆ ಕರಕೊಂಡು ಹೋಗುತ್ತಾನೆ. ಹೀಗೆ ಶುಶ್ರೂಷೆಯೇ ಎಲ್ಲಕ್ಕಿಂತಲೂ ಮುಖ್ಯ ಎಂಬದನ್ನು ಆ ತಂದೆ ತನ್ನ ಕ್ರಿಯೆಯಿಂದ ಮಕ್ಕಳಿಗೆ ಕಲಿಸುತ್ತಾನೆ. (ಮತ್ತಾ. 6:33) ನಮ್ಮ ಆರಾಧನೆಯ ಭಾಗವಾಗಿರುವ ಪ್ರಾರ್ಥನೆ, ಬೈಬಲ್ ವಾಚನ, ಕೂಟಗಳಲ್ಲಿ ಹೇಳಿಕೆ ಕೊಡುವುದು, ಸಾರುವಿಕೆ ಮುಂತಾದವನ್ನು ನೀವು ಸಂತೋಷದಿಂದ ಮಾಡುತ್ತೀರೊ? ಇದನ್ನು ನಿಮ್ಮ ಮಕ್ಕಳು ಗಮನಿಸುವರು. ನೀವು ಪರಿಪೂರ್ಣ ಮಾದರಿ ಆಗಿರಲಿಕ್ಕಿಲ್ಲ ಖಂಡಿತ. ಆದರೆ ನೀವು ಯೆಹೋವನನ್ನು ಶ್ರದ್ಧೆಯಿಂದ ಆರಾಧಿಸುತ್ತಾ ಮಕ್ಕಳಿಗೂ ಅದನ್ನೇ ಮಾಡುವಂತೆ ಕಲಿಸುವಾಗ ಅವರು ಉತ್ತಮವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು.—ಧರ್ಮೋ. 6:6, 7; ರೋಮ. 2:21, 22.
3. ಯಾವ ಪ್ರಗತಿಪರ ಆಧ್ಯಾತ್ಮಿಕ ಗುರಿಗಳನ್ನಿಟ್ಟು ಮುಟ್ಟಲು ಹೆತ್ತವರು ಮಕ್ಕಳಿಗೆ ಸಹಾಯ ಮಾಡಬೇಕು?
3 ಪ್ರಗತಿಪರ ಗುರಿಗಳು: ಹೆತ್ತವರು ತಮ್ಮ ಮಕ್ಕಳಿಗೆ ನಡೆಯಲು, ಮಾತಾಡಲು, ಬಟ್ಟೆ ಧರಿಸಿಕೊಳ್ಳಲು ಮುಂತಾದ ವಿಷಯಗಳ ಬಗ್ಗೆ ಚಿಕ್ಕಂದಿನಿಂದ ಪಟ್ಟುಬಿಡದೆ ತರಬೇತಿ ನೀಡುತ್ತಾರೆ. ಅವರು ಬೆಳೆಯುತ್ತಿರುವಾಗ ಹೊಸ ಹೊಸ ಗುರಿಗಳನ್ನು ಅವರ ಮುಂದಿಡುತ್ತಾರೆ. ಆದರೆ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಪ್ರಾಯ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಆಧ್ಯಾತ್ಮಿಕ ಗುರಿಗಳನ್ನೂ ಇಡಲು ಮತ್ತು ಮುಟ್ಟಲು ಸಹಾಯ ಮಾಡುತ್ತಾರೆ. (1 ಕೊರಿಂ. 9:26) ನಿಮ್ಮ ಮಕ್ಕಳು ಸ್ವಂತ ಮಾತಿನಲ್ಲಿ ಹೇಳಿಕೆಗಳನ್ನು ಕೊಡಲು ಮತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ತಮಗೆ ನೇಮಿತವಾದ ಭಾಷಣಗಳನ್ನು ಸ್ವತಃ ತಯಾರಿಸಲು ಕಲಿಸುತ್ತಿದ್ದೀರೋ? (ಕೀರ್ತ. 35:18) ಶುಶ್ರೂಷೆಯ ಬೇರೆಬೇರೆ ವೈಶಿಷ್ಟ್ಯಗಳಲ್ಲಿ ಪಾಲ್ಗೊಳ್ಳುವಂತೆ ತರಬೇತಿ ಕೊಡುತ್ತಿದ್ದೀರೋ? ದೀಕ್ಷಾಸ್ನಾನ ಪಡೆಯುವ ಮತ್ತು ಪೂರ್ಣ ಸಮಯದ ಸೇವೆಯ ಗುರಿಯನ್ನು ಅವರ ಮುಂದಿಟ್ಟಿದ್ದೀರೋ? ಉತ್ತೇಜನ ನೀಡುವಂಥ ಸಂತೋಷಭರಿತ, ಹುರುಪಿನ ಶುಶ್ರೂಷಕರ ಸಹವಾಸ ಮಾಡುವಂತೆ ಮಕ್ಕಳಿಗೆ ಸಹಾಯ ಮಾಡುತ್ತಿದ್ದೀರೋ?—ಜ್ಞಾನೋ. 13:20.
4. ಎಳೇ ಪ್ರಾಯದಿಂದಲೇ ಶುಶ್ರೂಷೆಯಲ್ಲಿ ತರಬೇತಿ ಪಡೆಯುವ ಮಕ್ಕಳಿಗೆ ಹೇಗೆ ಪ್ರಯೋಜನವಾಗುತ್ತದೆ?
4 “ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ” ಎಂದನು ಕೀರ್ತನೆಗಾರ. (ಕೀರ್ತ. 71:17) ನಿಮ್ಮ ಮಕ್ಕಳನ್ನು ಶುಶ್ರೂಷಕರನ್ನಾಗಿ ಮಾಡಲು ಎಳೇ ಪ್ರಾಯದಲ್ಲೇ ತರಬೇತಿ ಆರಂಭಿಸಿ. ಹೀಗೆ ಆಧ್ಯಾತ್ಮಿಕ ಬುನಾದಿಯನ್ನು ಹಾಕಲು ನೀವು ಅವರಿಗೆ ಸಹಾಯ ಮಾಡಿದರೆ ಅವರು ದೊಡ್ಡವರಾದಾಗಲೂ ಅದು ಖಂಡಿತ ಪ್ರಯೋಜನ ತರುವುದು.—ಜ್ಞಾನೋ. 22:6.