ವಿವಿಧಭಾಷೆಗಳ ಜನರನ್ನು ಒಟ್ಟುಗೂಡಿಸುವುದು
1 ದೇವರ ವಾಕ್ಯವು ನೆರವೇರುತ್ತಿದೆ! “ಜನಾಂಗಗಳ ವಿವಿಧಭಾಷೆಗಳವರಾದ” ಜನರು ಸತ್ಯಾರಾಧನೆಯನ್ನು ಸ್ವೀಕರಿಸುತ್ತಿದ್ದಾರೆ. (ಜೆಕ. 8:23) ಭಾರತದಲ್ಲಿರುವ ಸಕಲ ‘ಕುಲಗಳೂ ಪ್ರಜೆಗಳೂ ಭಾಷೆಗಳನ್ನಾಡುವವರೂ’ “ಮಹಾ ಸಂಕಟವನ್ನು” ಪಾರಾಗುವ ಪ್ರತೀಕ್ಷೆಯೊಂದಿಗೆ, ಯೆಹೋವನ ಮುಂದೆ ಒಂದು ಶುದ್ಧ ನಿಲುವನ್ನು ಪಡೆದುಕೊಳ್ಳಲಿಕ್ಕಾಗಿ ಯೆಹೋವನ ಸಾಕ್ಷಿಗಳು ಹೇಗೆ ಸಹಾಯಮಾಡುತ್ತಿದ್ದಾರೆ?—ಪ್ರಕ. 7:9, 14, NW.
2 ಯೆಹೋವನ ಸಂಸ್ಥೆಯು ಪ್ರತಿಕ್ರಿಯಿಸುತ್ತದೆ: ಇಡೀ ದೇಶದಲ್ಲಿರುವ ಜನರು ಸುವಾರ್ತೆಯ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತಾಗಲು, ಬೈಬಲ್ ಸಾಹಿತ್ಯವು 24 ಭಾರತೀಯ ಭಾಷೆಗಳಲ್ಲಿ ಲಭ್ಯಗೊಳಿಸಲ್ಪಡುವಂತೆ ಆಡಳಿತ ಮಂಡಲಿಯು ಏರ್ಪಾಡುಗಳನ್ನು ಮಾಡಿದೆ. ಸಾಹಿತ್ಯವನ್ನು ಇಷ್ಟೊಂದು ಭಾಷೆಗಳಲ್ಲಿ ತಯಾರಿಸಿ ಪ್ರಕಾಶಿಸುವುದು ಬೃಹತ್ತಾದ ಕೆಲಸವಾಗಿದೆ. ಇದರಲ್ಲಿ, ಅರ್ಹರಾದ ಭಾಷಾಂತರಕಾರರ ತಂಡಗಳನ್ನು ಸಂಘಟಿಸುವುದು ಮತ್ತು ಅವರು ಈ ಎಲ್ಲಾ ಭಾಷೆಗಳಲ್ಲಿ ಸಾಹಿತ್ಯವನ್ನು ಭಾಷಾಂತರಿಸಲು ಅವರಿಗೆ ಬೇಕಾದ ಸಹಾಯವನ್ನು ಒದಗಿಸುವುದು ಹಾಗೂ ಇದನ್ನು ಮುದ್ರಿಸುವುದೂ ರವಾನಿಸುವುದೂ ಒಳಗೂಡಿದೆ. ಆದರೂ, ಜನರಿಗೆ ಬೈಬಲಿನ ಜೀವದಾಯಕ ಸಂದೇಶವನ್ನು ಕೊಂಡೊಯ್ಯುವ ಒಬ್ಬೊಬ್ಬ ರಾಜ್ಯ ಪ್ರಚಾರಕನು ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ.
3 ಪಂಥಾಹ್ವಾನವನ್ನು ಸ್ವೀಕರಿಸುವುದು: ತಮ್ಮ ಸ್ವಂತ ರಾಜ್ಯದ ಹೊರಗೆ ಅನೇಕ ಮಹಾ ನಗರಗಳಲ್ಲಿ ಜೀವಿಸುತ್ತಿರುವ ಬೇರೆ ಭಾಷೆಗಳನ್ನಾಡುವ ಗಮನಾರ್ಹ ಪ್ರಮಾಣದ ಜನಸಮೂಹಗಳಿವೆ. ಈ ಜನರಿಗೆ ಸುವಾರ್ತೆಯನ್ನು ಪರಿಣಾಮಕಾರಿಯಾಗಿ ತಲಪಿಸಲಿಕ್ಕಾಗಿ ನಾವು ಇತರ ಭಾಷೆಗಳ ಸಾಹಿತ್ಯದೊಂದಿಗೆ ತಯಾರಾಗಿದ್ದೇವೋ? ದೇವರ ಸೇವಕರಲ್ಲಿ ಅನೇಕರು ಇದನ್ನು ಮಾಡುತ್ತಾರೆ, ಅಷ್ಟುಮಾತ್ರವಲ್ಲದೆ ಅವರ ಕ್ಷೇತ್ರದಲ್ಲಿ ಸಾಮಾನ್ಯವಾಗಿರುವ ಇತರ ಭಾಷೆಗಳಲ್ಲಿ ಒಂದು ಸರಳವಾದ ನಿರೂಪಣೆಯನ್ನು ಕಲಿತುಕೊಳ್ಳಲೂ ಪ್ರಯತ್ನಿಸುತ್ತಾರೆ. ಭಾರತೀಯ ಸನ್ನೆ ಭಾಷೆಯನ್ನಾಡುವವರಿಗೂ ಈ ಸಂದೇಶವನ್ನು ತಲಪಿಸಲಾಗುತ್ತಿದೆ. ಯೆಹೋವನ ಕುರಿತು ಎಂದೂ ಕೇಳಿರದ ಅಥವಾ ಬೈಬಲಿನ ಕುರಿತು ಏನೂ ತಿಳಿದಿರದಿದ್ದ ಕೆಲವರು ದೇವರ ವಾಕ್ಯದ ಸತ್ಯವನ್ನು ಸ್ವೀಕರಿಸುತ್ತಿದ್ದಾರೆ.—ರೋಮಾ. 15:21.
4 ಬೇರೆ ಭಾಷೆಗಳನ್ನಾಡುವವರು ಆಸಕ್ತಿಯನ್ನು ತೋರಿಸುವಲ್ಲಿ ನಾವದನ್ನು ಹೇಗೆ ಮುಂದುವರಿಸಿಕೊಂಡು ಹೋಗಸಾಧ್ಯವಿದೆ? ನಮ್ಮ ನಗರದಲ್ಲಿ ಆ ಭಾಷೆಯನ್ನಾಡುವ ಒಂದು ಸಭೆಯಿರುವಲ್ಲಿ, ಪ್ಲೀಸ್ ಫಾಲೋ ಅಪ್ ಫಾರ್ಮ್ (S-43) ಅನ್ನು ಉಪಯೋಗಿಸುತ್ತಾ ನಾವು ಆಸಕ್ತ ವ್ಯಕ್ತಿಯ ವಿಳಾಸವನ್ನು ಅಲ್ಲಿಗೆ ಕಳುಹಿಸಬಹುದು. ಅಂತಹ ಒಂದು ಸಭೆಯು ಇಲ್ಲದಿರುವಲ್ಲಿ, ಪ್ರಾಯಶಃ ಆ ಭಾಷೆಯನ್ನರಿತ ಒಬ್ಬ ಸ್ಥಳಿಕ ಪ್ರಚಾರಕನಿಗೆ ಅದನ್ನು ತಿಳಿಸಬಹುದು. ಇಂತಹ ಪುನರ್ಭೇಟಿಗಳನ್ನು ಮಾಡುವಂತೆ ನಮಗೆ ಕೇಳಲ್ಪಡುವಲ್ಲಿ, ನಾವು ಅದಕ್ಕಾಗಿ ಪ್ರಯಾಣಿಸಲು ಮತ್ತು ಆ ವ್ಯಕ್ತಿಯನ್ನು ಭೇಟಿಮಾಡಲು ಅಧಿಕ ಪ್ರಯತ್ನವನ್ನು ಮಾಡಬಲ್ಲೆವೋ? ಈ ರೀತಿಯಲ್ಲಿ ನಮ್ಮ ಟೆರಿಟೊರಿಯಲ್ಲಿರುವ ಎಲ್ಲಾ ಸಮಾಜಗಳ ಜನರಿಗೆ, ತಮಗೆ ಚೆನ್ನಾಗಿ ಅರ್ಥವಾಗುವಂಥ ಭಾಷೆಯಲ್ಲಿ ಸುವಾರ್ತೆಯು ಸಂಪೂರ್ಣವಾಗಿ ಘೋಷಿಸಲ್ಪಡುವುದು.—ಕೊಲೊ. 1:25.
5 ಎಲ್ಲಾ ಹಿನ್ನೆಲೆಗಳ ಮತ್ತು ಭಾಷಾಗುಂಪುಗಳ ಜನರಿಗೆ ರಾಜ್ಯ ಸಂದೇಶವು ಹಿಡಿಸುವಂಥದ್ದಾಗಿದೆ. ಅದನ್ನು ಅವರೊಂದಿಗೆ ಹಂಚಿಕೊಳ್ಳುವ ಸದವಕಾಶವು ನಮ್ಮ ಕೈತಪ್ಪಿಹೋಗದಂತೆ ನೋಡಿಕೊಳ್ಳೋಣ.