ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು ಅವುಗಳಿಗೆ ಲಕ್ಷ್ಯ ನೀಡುವಂತೆ ಹಾರ್ದಿಕ ವಿನಂತಿ
ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು (ಇಂಗ್ಲಿಷ್) ಎಂಬ ವಿಡಿಯೋದಲ್ಲಿ ಚಿತ್ರಿಸಲ್ಪಟ್ಟಿರುವ ಬೈಬಲ್ ಡ್ರಾಮದಿಂದ ಕಲಿತ ಪಾಠಗಳಿಗೆ ಲಕ್ಷ್ಯ ನೀಡುವ ಮೂಲಕ, ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವ ನಮ್ಮ ದೃಢನಿರ್ಧಾರವನ್ನು ನಾವೆಲ್ಲರೂ ಇನ್ನಷ್ಟು ಬಲಗೊಳಿಸಸಾಧ್ಯವಿದೆ. ಈ ವಿಡಿಯೋವನ್ನು ನೋಡುವ ಮೊದಲು, ದಯವಿಟ್ಟು ಅರಣ್ಯಕಾಂಡ 25ನೆಯ ಅಧ್ಯಾಯವನ್ನು ಮತ್ತು ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಪುಸ್ತಕದ ಸಂಪುಟ 2, 419ನೆಯ ಪುಟದ 3-5ನೆಯ ಪ್ಯಾರಗ್ರಾಫ್ಗಳಲ್ಲಿರುವ ಹಿನ್ನೆಲೆ ಮಾಹಿತಿಯನ್ನು ಓದಿರಿ. ನಂತರ ಈ ಪ್ರಶ್ನೆಗಳನ್ನು ಉತ್ತರಿಸಿರಿ: ಮೋವಾಬ್ಯರು ಯಾರಾಗಿದ್ದರು, ಮತ್ತು ಅವರ ವಿರುದ್ಧ ಯುದ್ಧವನ್ನು ಮಾಡಬಾರದು ಎಂದು ಯೆಹೋವನು ಮೋಶೆಗೆ ಏಕೆ ಹೇಳಿದನು? (ಧರ್ಮೋ. 2:9) ಇಸ್ರಾಯೇಲ್ ಜನಾಂಗವನ್ನು ನಾಶಗೊಳಿಸುವುದಕ್ಕಾಗಿ ಮೋವಾಬ್ಯರನ್ನು ಉಪಯೋಗಿಸಲು ಬಿಳಾಮನು ಹೇಗೆ ಸಂಚುಹೂಡಿದನು? ಇನ್ನೇನು ವಾಗ್ದತ್ತ ದೇಶವನ್ನು ಪ್ರವೇಶಿಸಲಿದ್ದಾಗಲೇ ಒಂದು ಅತ್ಯಾವಶ್ಯಕವಾದ ಪರೀಕ್ಷೆಯಲ್ಲಿ ಅನೇಕ ಇಸ್ರಾಯೇಲ್ಯರು ಸೋತುಹೋದರೆಂಬುದನ್ನು ನಾವೇಕೆ ಮರೆಯಬಾರದು?—1 ಕೊರಿಂ. 10:11, 12.
ಎಚ್ಚರಿಕೆಯ ಉದಾಹರಣೆಗಳು ವಿಡಿಯೋವನ್ನು ನೋಡುತ್ತಿರುವಾಗ, ಒಂದುವೇಳೆ ನಾವು ದೇವರಿಗೆ ನಂಬಿಗಸ್ತರಾಗಿ ಕಂಡುಬಂದು ಆತನ ಅನುಗ್ರಹವನ್ನು ಆನಂದಿಸಬೇಕಾಗಿರುವಲ್ಲಿ, ಇಂದು ನಾವು ಗಂಭೀರವಾದ ಗಮನವನ್ನು ಕೊಡಬೇಕಾಗಿರುವ ಜೀವಿತದ ಮುಂದಿನ ನಾಲ್ಕು ಕ್ಷೇತ್ರಗಳ ಕುರಿತು ಆಲೋಚಿಸಿರಿ. (1) ಮನೋಭಾವ: ಇಸ್ರಾಯೇಲ್ಯರಲ್ಲಿ ಕೆಲವರು ಹೇಗೆ ಯೆಹೋವನ ಕಡೆಗೆ ಮತ್ತು ಆತನ ಏರ್ಪಾಡುಗಳ ಕಡೆಗೆ ತಪ್ಪಾದ ಮನೋಭಾವವನ್ನು ತೋರಿಸಿದ್ದರು? ಇದಕ್ಕೆ ಬದಲಾಗಿ ನಾವು ಯಾವ ಮನೋಭಾವವನ್ನು ತೋರಿಸಲು ಶ್ರಮಿಸತಕ್ಕದ್ದು? (2) ಸಹವಾಸ: ಯಾವ ಕಾರಣಕ್ಕಾಗಿ ಇಸ್ರಾಯೇಲ್ಯರು ಮೋವಾಬ್ಯರೊಂದಿಗೆ ಗೆಳೆತನವನ್ನು ಮಾಡಬಾರದೆಂದು ಯೆಹೋವನು ಅಪೇಕ್ಷಿಸಿದನು? (ವಿಮೋ. 34:12; ಜ್ಞಾನೋ. 13:20) ನಾವು ತುಂಬ ವಿವೇಕಯುತವಾದ ರೀತಿಯಲ್ಲಿ ಮಿತ್ರರನ್ನು ಆಯ್ಕೆಮಾಡಬೇಕು ಏಕೆ? (3) ನೈತಿಕತೆ: ಕೆಟ್ಟ ಸಹವಾಸವು ಸುಮಾರು 23,000 ಇಸ್ರಾಯೇಲ್ಯರನ್ನು ಯಾವ ಗಂಭೀರವಾದ ಪಾಪಕ್ಕೆ ಮುನ್ನಡಿಸಿತು? (1 ಕೊರಿಂ. 10:8) ಇಂದು, ದೇವಜನರಲ್ಲಿ ಕೆಲವರು ಅನೈತಿಕತೆಯಲ್ಲಿ ಒಳಗೂಡುವಂತೆ ಯಾವುದು ಪ್ರಚೋದಿಸಿದೆ, ಆದರೆ ನಾವು ನಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಬಲ್ಲೆವು? (4) ಆರಾಧನೆ: ತಮ್ಮ ಆರಾಧನೆಯ ಶುದ್ಧತೆಯ ವಿಷಯದಲ್ಲಿ ಇಸ್ರಾಯೇಲ್ಯರು ಹೇಗೆ ಪರೀಕ್ಷೆಗೊಳಗಾದರು? ಇಂದು ವಿಗ್ರಹಾರಾಧನೆಯ ಯಾವ ಸೂಕ್ಷ್ಮ ರೂಪಕ್ಕೆ ಕೆಲವರು ಬಲಿಬೀಳಬಹುದು, ಆದರೆ ನಾವದರಿಂದ ಹೇಗೆ ದೂರವಿರಬಲ್ಲೆವು?—ಕೊಲೊ. 3:5.
ಡ್ರಾಮದಲ್ಲಿ, ಯಾಮೀನನು ತೋರಿಸಿದ ನೈತಿಕ ಸಮಗ್ರತೆಗಾಗಿ ಅವನು ಹೇಗೆ ಆಶೀರ್ವದಿಸಲ್ಪಟ್ಟನು? ಈ ವಿಡಿಯೋದ ಮೂಲಕ, ಎಲ್ಲಾ ಸತ್ಕ್ರೈಸ್ತರಿಗೆ ಆಡಳಿತ ಮಂಡಲಿಯು ಯಾವ ಹಾರ್ದಿಕ ವಿನಂತಿಯನ್ನು ಮಾಡುತ್ತಿದೆ? ನೀವು ಒಬ್ಬ ಕುಟುಂಬದ ತಲೆಯಾಗಿರುವಲ್ಲಿ, ನಿಮ್ಮ ಮನೆವಾರ್ತೆಯವರು ಈ ಕಾರ್ಯಕ್ರಮವನ್ನು ಪುನಃ ಪುನಃ ನೋಡುವುದು ವಿವೇಕಯುತವಾಗಿರುವುದು ಎಂದು ನಿಮಗೇಕೆ ಅನಿಸುತ್ತದೆ?