ನೀವು ಯಾವುದಕ್ಕೆ ಆದ್ಯತೆ ನೀಡುತ್ತೀರಿ?
1 ಅನೇಕ ಧಾರ್ಮಿಕ ಸಂಸ್ಥೆಗಳು, ಐಹಿಕ ವಿದ್ಯಾಭ್ಯಾಸಕ್ಕಾಗಿ ಅಥವಾ ವೈದ್ಯಕೀಯ ಆವಶ್ಯಕತೆಗಳಿಗಾಗಿ ಸೌಕರ್ಯಗಳನ್ನು ಒದಗಿಸುವಂಥ ಧರ್ಮಾರ್ಥವಾದ ಕೆಲಸಗಳನ್ನು ಮಾಡುವುದಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತವೆ. ಆದರೆ ಯೆಹೋವನ ಸಾಕ್ಷಿಗಳು “ಪರೋಪಕಾರವನ್ನೂ ಧರ್ಮಮಾಡುವದನ್ನೂ” ಮರೆಯದಿರುವುದಾದರೂ, ಅವರು ಜನರಿಗೆ ಆತ್ಮಿಕವಾಗಿ ಸಹಾಯಮಾಡಲು ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.—ಇಬ್ರಿ. 13:16.
2 ಪ್ರಥಮ ಶತಮಾನದ ಮಾದರಿ: ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸು ಅನೇಕ ಸತ್ಕಾರ್ಯಗಳನ್ನು ಮಾಡಿದನಾದರೂ, ಸತ್ಯಕ್ಕಾಗಿ ಸಾಕ್ಷಿ ನೀಡುವುದೇ ಅವನ ಪ್ರಮುಖ ಕೆಲಸವಾಗಿತ್ತು. (ಲೂಕ 4:43; ಯೋಹಾ. 18:37; ಅ. ಕೃ. 10:38) “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ಅವರಿಗೆ ಉಪದೇಶ ಮಾಡಿರಿ” ಎಂದು ಅವನು ತನ್ನ ಹಿಂಬಾಲಕರಿಗೆ ಅಪ್ಪಣೆಕೊಟ್ಟನು. (ಮತ್ತಾ. 28:19, 20) ಮತ್ತು ತನ್ನಲ್ಲಿ ನಂಬಿಕೆಯಿಡುವವರು, ತಾನು ಆರಂಭಿಸಿದಂಥ ಕೆಲಸವನ್ನು ಇನ್ನೂ ವ್ಯಾಪಕವಾದ ಮಟ್ಟದಲ್ಲಿ ಮುಂದುವರಿಸಿಕೊಂಡು ಹೋಗುವರು ಎಂದು ಅವನು ಸೂಚಿಸಿದನು. (ಯೋಹಾ. 14:12) ಯೇಸು ಸಾರುವ ಕೆಲಸಕ್ಕೆ ಆದ್ಯತೆಯನ್ನು ನೀಡಿದನು, ಏಕೆಂದರೆ ಜನರು ರಕ್ಷಣೆಯ ಮಾರ್ಗವನ್ನು ತಿಳಿದುಕೊಳ್ಳುವಂತೆ ಇದು ಸಹಾಯಮಾಡುತ್ತದೆ.—ಯೋಹಾ. 17:3.
3 ಅಪೊಸ್ತಲ ಪೌಲನು ತನ್ನ ಸಾರುವ ಚಟುವಟಿಕೆಯನ್ನು ಒಂದು “ಆವಶ್ಯಕತೆ”ಯಾಗಿ, ಅವನಿಂದ ಅಲಕ್ಷಿಸಲು ಸಾಧ್ಯವಿಲ್ಲದಿರುವಂಥ ಒಂದು ಅಗತ್ಯವಾಗಿ ಪರಿಗಣಿಸಿದನು. (1 ಕೊರಿಂ. 9:16, 17, NW) ಅವನು ತನ್ನ ಶುಶ್ರೂಷೆಯನ್ನು ಪೂರೈಸಲು ಅಗತ್ಯವಾಗಿರುವ ಯಾವುದೇ ರೀತಿಯ ತ್ಯಾಗವನ್ನು ಮಾಡಲು, ಯಾವುದೇ ಪರೀಕ್ಷೆಯನ್ನು ತಾಳಿಕೊಳ್ಳಲು, ಅಥವಾ ಯಾವುದೇ ಕಷ್ಟವನ್ನು ಅನುಭವಿಸಲು ಮನಃಪೂರ್ವಕವಾಗಿ ಸಿದ್ಧನಿದ್ದನು. (ಅ. ಕೃ. 20:22-24) ಅಪೊಸ್ತಲ ಪೇತ್ರನೂ ಅವನ ಸಂಗಡಿಗರೂ ಇದೇ ರೀತಿಯ ಮನೋಭಾವವನ್ನು ತೋರಿಸಿದರು. ಸೆರೆವಾಸ ಮತ್ತು ಹೊಡೆತಗಳ ಎದುರಿನಲ್ಲಿಯೂ ಅವರು “ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.”—ಅ. ಕೃ. 5:40-42.
4 ನಮ್ಮ ಕುರಿತಾಗಿ ಏನು? ರಾಜ್ಯದ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ನಾವು ಆದ್ಯತೆಯನ್ನು ನೀಡುತ್ತೇವೋ? ಯೇಸುವಿನಂತೆ, “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿ”ರುವ ಜನರಿಗಾಗಿ ನಿಜವಾದ ಚಿಂತೆಯನ್ನು ತೋರಿಸುತ್ತೇವೋ? (ಮತ್ತಾ. 9:36) ಸದ್ಯದ ಲೋಕ ಘಟನೆಗಳು ಮತ್ತು ಬೈಬಲ್ ಪ್ರವಾದನೆಯು, ಈ ದುಷ್ಟ ವ್ಯವಸ್ಥೆಗಾಗಿರುವ ಸಮಯವು ಬೇಗನೆ ಗತಿಸಿಹೋಗುತ್ತಾ ಇದೆ ಎಂಬುದನ್ನು ಸ್ಪಷ್ಟವಾಗಿ ರುಜುಪಡಿಸುತ್ತದೆ! ಸಾರುವ ಕೆಲಸದ ಪ್ರಾಮುಖ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ಹುರುಪಿನಿಂದ ಸಾರುತ್ತಾ ಹೋಗುವಂತೆ ನಮ್ಮನ್ನು ಪ್ರಚೋದಿಸುವುದು.
5 ನಿಮ್ಮ ಸನ್ನಿವೇಶಗಳನ್ನು ತೂಗಿನೋಡಿರಿ: ವೈಯಕ್ತಿಕ ಸನ್ನಿವೇಶಗಳು ಆಗಿಂದಾಗ್ಗೆ ಬದಲಾಗುವುದರಿಂದ, ಸಾರುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲಿಕ್ಕಾಗಿ ನಾವು ಹೊಂದಾಣಿಕೆಗಳನ್ನು ಮಾಡಸಾಧ್ಯವಿದೆಯೋ ಎಂಬುದನ್ನು ಅನೇಕಾವರ್ತಿ ಪರಿಗಣಿಸುವುದು ಒಳ್ಳೇದಾಗಿದೆ. ಒಬ್ಬ ಸಹೋದರಿಯು 1950ಗಳಲ್ಲಿ, 60ಗಳಲ್ಲಿ, ಮತ್ತು 70ಗಳಲ್ಲಿ ಒಬ್ಬ ರೆಗ್ಯುಲರ್ ಪಯನೀಯರರಾಗಿ ಸೇವೆಮಾಡುತ್ತಿದ್ದರು. ಆದರೆ ಆರೋಗ್ಯದ ಸಮಸ್ಯೆಯ ಕಾರಣ ಅದನ್ನು ಅವರು ನಿಲ್ಲಿಸುವುದು ಅಗತ್ಯವಾಗಿತ್ತು. ಆದರೂ, ಸಕಾಲದಲ್ಲಿ ಅವರ ಆರೋಗ್ಯವು ಉತ್ತಮಗೊಂಡಿತು. ಇತ್ತೀಚಿಗೆ ಅವರು ತಮ್ಮ ಸನ್ನಿವೇಶಗಳನ್ನು ಪುನಃ ತೂಗಿನೋಡಿದರು ಮತ್ತು ತಾನು ಮತ್ತೆ ಪಯನೀಯರ್ ಸೇವೆಯನ್ನು ಮಾಡಬೇಕೆಂದು ನಿರ್ಧರಿಸಿದರು. 90ರ ಪ್ರಾಯದಲ್ಲಿ ಅವರು ಪಯನೀಯರ್ ಸೇವಾ ಶಾಲೆಗೆ ಹಾಜರಾಗಿದ್ದಕ್ಕಾಗಿ ಎಷ್ಟು ಸಂತೋಷಪಟ್ಟರು! ನಿಮ್ಮ ಕುರಿತಾಗಿ ಏನು? ನಿಮ್ಮ ನಿವೃತ್ತಿ ಸಮಯವು ಸಮೀಪಿಸಿದೆಯೋ ಅಥವಾ ಪದವಿಯನ್ನು ಪಡೆಯುವ ಸಮಯವು ಸಮೀಪಿಸುತ್ತಿದೆಯೋ? ನಿಮ್ಮ ಬದಲಾದ ಸನ್ನಿವೇಶಗಳು ನೀವು ಪಯನೀಯರ್ ಸೇವೆಯನ್ನು ಮಾಡುವಂತೆ ಅನುಮತಿಸಬಹುದೋ?
6 ಮಾರ್ಥಳು “ಅನೇಕ ಕೆಲಸಗಳನ್ನು ಮಾಡುವ ಮೂಲಕ ಅಪಕರ್ಷಣೆಗೊಳಗಾಗಿದ್ದದ್ದನ್ನು” (NW) ಯೇಸು ಗಮನಿಸಿದಾಗ, ಅವಳು ವಿಷಯಗಳನ್ನು ಸರಳವಾಗಿಡುವಲ್ಲಿ ಹೆಚ್ಚಿನ ಪ್ರತಿಫಲಗಳನ್ನು ಪಡೆದುಕೊಳ್ಳಸಾಧ್ಯವಿದೆ ಎಂದು ಅವನು ಅವಳಿಗೆ ದಯಾಭಾವದಿಂದ ಸಲಹೆ ನೀಡಿದನು. (ಲೂಕ 10:40-42) ನಿಮ್ಮ ಜೀವನವನ್ನು ನೀವು ಸರಳೀಕರಿಸಬಲ್ಲಿರೋ? ಪತಿಪತ್ನಿಯರಿಬ್ಬರೂ ಐಹಿಕವಾಗಿ ಉದ್ಯೋಗಸ್ಥರಾಗಿರುವುದು ನಿಜವಾಗಿಯೂ ಅಗತ್ಯವಾಗಿದೆಯೋ? ಹೊಂದಾಣಿಕೆಗಳು ಮಾಡಲ್ಪಡುವಲ್ಲಿ, ಕುಟುಂಬವು ಒಂದೇ ಆದಾಯದ ಸಹಾಯದಿಂದ ಬದುಕಬಲ್ಲದೋ? ಶುಶ್ರೂಷೆಯಲ್ಲಿ ಹೆಚ್ಚಿನ ಮಟ್ಟಿಗೆ ಪಾಲ್ಗೊಳ್ಳಲಿಕ್ಕಾಗಿ ಹೊಂದಾಣಿಕೆಗಳನ್ನು ಮಾಡುವ ಮೂಲಕ ಅನೇಕರು ಆತ್ಮಿಕವಾಗಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
7 ಯೇಸುವಿನಿಂದ ಹಾಗೂ ಅಪೊಸ್ತಲರಿಂದ ಇಡಲ್ಪಟ್ಟ ಮಾದರಿಯನ್ನು ನಾವೆಲ್ಲರೂ ಅನುಸರಿಸೋಣ! ರಾಜ್ಯದ ಸುವಾರ್ತೆಯನ್ನು ಸಾರುವ ಅತ್ಯಾವಶ್ಯಕ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲಿಕ್ಕಾಗಿ ನಾವು ಮಾಡುವ ಯಥಾರ್ಥ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವಿರುವುದು ಎಂಬ ಖಾತ್ರಿ ನಮಗಿರಸಾಧ್ಯವಿದೆ.—ಲೂಕ 9:57-62.