“ಆಸ್ಪದ ಮಾಡಿಕೊಡಲಿ”
1 ಒಮ್ಮೆ, ಯೇಸು ತನ್ನ ಶಿಷ್ಯರೊಂದಿಗೆ ಮದುವೆಯ ಕುರಿತು ಮಾತಾಡುತ್ತಿರುವಾಗ, ಅವಿವಾಹಿತತನವನ್ನು ‘ಒಂದು ವರ’ ಎಂಬುದಾಗಿ ಸೂಚಿಸಿದನು. ನಂತರ ಅವನಂದದ್ದು: “ಅದಕ್ಕಾಗಿ ಆಸ್ಪದ ಮಾಡಿಕೊಡಬಲ್ಲವನು ಆಸ್ಪದ ಮಾಡಿಕೊಡಲಿ.” (ಮತ್ತಾ. 19:10-12, NW) ಕೆಲವು ವರುಷಗಳ ನಂತರ ಅಪೊಸ್ತಲ ಪೌಲನು, ಅವಿವಾಹಿತತನದ ಪ್ರಯೋಜನಗಳ ಕುರಿತು ಬರೆದನು. ಅಷ್ಟುಮಾತ್ರವಲ್ಲದೆ, ಅವಿವಾಹಿತರಾಗಿ ಉಳಿಯುವುದರಲ್ಲಿ ತನ್ನ ಮಾದರಿಯನ್ನು ಅನುಕರಿಸುವಂತೆ ಅವನು ಇತರರನ್ನು ಉತ್ತೇಜಿಸಿದನು. (1 ಕೊರಿಂ. 7:7, 38) ಇಂದು ಅನೇಕರು ಅವಿವಾಹಿತತನಕ್ಕೆ ‘ಆಸ್ಪದ ಕೊಟ್ಟಿದ್ದಾರೆ’ ಮತ್ತು ಅದರ ಪ್ರಯೋಜನಗಳಲ್ಲಿ ಆನಂದಿಸುತ್ತಿದ್ದಾರೆ. ಅದರಿಂದ ಸಿಗುವ ಕೆಲವೊಂದು ಪ್ರಯೋಜನಗಳಾವುವು?
2 “ಅಪಕರ್ಷಣೆಯಿಲ್ಲದೆ” ಸೇವೆಸಲ್ಲಿಸುವುದು: ಪೌಲನು, ಅವಿವಾಹಿತತನವು “ಅಪಕರ್ಷಣೆಯಿಲ್ಲದೆ” ಯೆಹೋವನನ್ನು ಸೇವಿಸಲು ತನಗೆ ಅವಕಾಶವನ್ನು ಒದಗಿಸಿತು ಎಂಬುದನ್ನು ತಿಳಿದುಕೊಂಡನು. ತದ್ರೀತಿಯಲ್ಲಿ ಇಂದು ಒಬ್ಬ ಅವಿವಾಹಿತ ಸಹೋದರನು, ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್‌ಗೆ ಅರ್ಹನಾಗಲು, ಪಯನೀಯರನಾಗಲು, ಇನ್ನೊಂದು ಭಾಷೆಯನ್ನು ಕಲಿಯಲು, ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗಲು, ಬೆತೆಲ್‌ನಲ್ಲಿ ಸೇವೆಸಲ್ಲಿಸಲು, ಅಥವಾ ಇನ್ನಿತರ ವಿಶೇಷ ಸೇವಾ ಸುಯೋಗಗಳಿಗೆ ತನ್ನನ್ನು ನೀಡಿಕೊಳ್ಳಲು ಸಾಧ್ಯವಿದೆ. ಆಳವಾದ ವೈಯಕ್ತಿಕ ಅಧ್ಯಯನ ಮತ್ತು ಮನನ ಮಾಡಲು ಹಾಗೂ ಹೃತ್ಪೂರ್ವಕವಾದ ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಮಾತಾಡಲು ಹೆಚ್ಚಿನ ಸಮಯ ಮತ್ತು ಸಂದರ್ಭಗಳು ಅವನಿಗೆ ದೊರಕುತ್ತವೆ. ಇತರರಿಗೆ ಸಹಾಯಮಾಡುವುದರಲ್ಲಿ ತನ್ನನ್ನು ನೀಡಿಕೊಳ್ಳಲು ಸಹ ಅವಿವಾಹಿತ ವ್ಯಕ್ತಿಗೆ ಹೆಚ್ಚು ಸಮಯವಿರುತ್ತದೆ. ಈ ಎಲ್ಲಾ ಕ್ರಿಯೆಯು ಒಬ್ಬನಿಗೆ “ವೈಯಕ್ತಿಕ ಪ್ರಯೋಜನ”ವನ್ನು ತರುತ್ತದೆ.—1 ಕೊರಿಂ. 7:32-35, NW; ಅ. ಕೃತ್ಯ. 20:35.
3 ಅಂಥ ಅಪಕರ್ಷಣೆಯಿಲ್ಲದ ಸೇವೆಯು ಹೇರಳವಾದ ಪ್ರತಿಫಲಗಳನ್ನು ಕೊಡುತ್ತದೆ. ಒಬ್ಬಾಕೆ ಅವಿವಾಹಿತ ಸಹೋದರಿಯು, 27 ವರುಷ ಕೆನ್ಯದಲ್ಲಿದ್ದ ನಂತರ ಹೀಗೆ ಬರೆಯುವುದು: “ನನಗೆ ಅನೇಕ ಸ್ನೇಹಿತರು ಮತ್ತು ಮಾಡಲಿಕ್ಕೆಂದು ಬಹಳಷ್ಟು ಕೆಲಸವೂ ಇತ್ತು! ನಾವು ವಿಷಯಗಳನ್ನು ಒಟ್ಟಾಗಿ ಮಾಡುತ್ತಿದ್ದೆವು ಮತ್ತು ಒಬ್ಬರನ್ನೊಬ್ಬರು ಭೇಟಿನೀಡುತ್ತಿದ್ದೆವು. . . . ಅವಿವಾಹಿತತನವು ಒದಗಿಸಿದ, ಯಾವುದೇ ಅಡ್ಡಿತಡೆ ಇಲ್ಲದೆ ತಿರುಗಾಡುವ ಮತ್ತು ಇನ್ನಿತರ ಸ್ವಾತಂತ್ರ್ಯವನ್ನು ಶುಶ್ರೂಷೆಯಲ್ಲಿ ನನ್ನನ್ನು ಕಾರ್ಯಮಗ್ನಳನ್ನಾಗಿ ಇಟ್ಟುಕೊಳ್ಳುವುದಕ್ಕಾಗಿ ಉಪಯೋಗಿಸಿದೆ ಮತ್ತು ಇದು ನನಗೆ ಅತ್ಯಧಿಕ ಸಂತೋಷವನ್ನೂ ತಂದಿತು.” ಅವಳು ಕೂಡಿಸಿದ್ದು: “ವರುಷಗಳು ದಾಟಿದಂತೆ ಯೆಹೋವನೊಂದಿಗಿನ ನನ್ನ ಸಂಬಂಧವು ಇನ್ನೂ ಗಾಢವಾಯಿತು.”
4 ಅದಕ್ಕಾಗಿ ಆಸ್ಪದ ಮಾಡಿಕೊಡುವುದು: ಅವಿವಾಹಿತತನದ ವರವನ್ನು ತಮ್ಮದಾಗಿಸಿಕೊಳ್ಳುವ ಉದ್ದೇಶವು “ಪರಲೋಕ ರಾಜ್ಯದ ನಿಮಿತ್ತವಾಗಿ” ಆಗಿರಬೇಕು ಎಂಬುದಾಗಿ ಯೇಸು ಹೇಳಿದನು. (ಮತ್ತಾ. 19:12) ಇತರ ಯಾವುದೇ ವರದಂತೆ, ಆನಂದ ಮತ್ತು ಪ್ರಯೋಜನಗಳನ್ನು ಪಡೆಯಬೇಕಾದರೆ ಅವಿವಾಹಿತತನದ ವರವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಬೇಕು. ಅವಿವಾಹಿತತನವು ನೀಡಬಲ್ಲ ಸುಯೋಗವನ್ನು ಸರಿಯಾಗಿ ಉಪಯೋಗಿಸುವ ಮತ್ತು ವಿವೇಕ ಹಾಗೂ ಶಕ್ತಿಗಾಗಿ ಯೆಹೋವನಲ್ಲಿ ಆತುಕೊಳ್ಳುವ ಮೂಲಕ ಅನೇಕ ಅವಿವಾಹಿತ ವ್ಯಕ್ತಿಗಳು ಈ ವರವನ್ನು ಅಂಗೀಕರಿಸಿದ್ದರ ಮೌಲ್ಯವನ್ನು ಗ್ರಹಿಸಿದ್ದಾರೆ.