ಬೈಬಲಿನ ದೃಷ್ಟಿಕೋನ
ಅವಿವಾಹಿತ ಸ್ಥಿತಿಯು ಒಂದು ವರವಾಗಿರುವಾಗ
‘ನಾನು ಏಕಾಂಗಿಯೂ, ಅತಿ ಒಂಟಿಗಳೂ ಆಗಿದ್ದೇನೆ,’ಎಂದು 22 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸ್ನಾನಿತಳಾಗಿರುವ ಮತ್ತು ಕಳೆದ ಮೂರು ವರ್ಷಗಳಿಂದ ವಿಧವೆಯಾಗಿರುವ ಒಬ್ಬ ಕ್ರೈಸ್ತ ಮಹಿಳೆ ಪ್ರಲಾಪಿಸುತ್ತಾಳೆ. ‘ನಾನೊಂದು ಜೊತೆಗಾಗಿ ನಿರೀಕ್ಷಿಸುತ್ತಿದ್ದೇನೆ. ಕಾರ್ಯಮಗ್ನತೆ ನೆರವಾಗುತ್ತದೆ. ಸ್ನೇಹಿತರಿರುವುದು ಸಹಾಯಕರ. ಆದರೆ ನನಗೆ ಪ್ರಣಯಪ್ರೇಮದ ಮತ್ತು ಸಂತೋಷದ ಅಗತ್ಯವಿದೆಯೆಂದೂ ಅನಿಸುತ್ತದೆ—ವಿವಾಹಿತಳಾಗಿರಲು ನಾನು ಬಯಸುತ್ತೇನೆ.’
ವಿವಾಹಿತರಾಗಿರಲು ನೀವು ಯಥಾರ್ಥವಾಗಿ ಇಚ್ಛಿಸುವಾಗ, ಆದರೆ ಜೊತೆಗಾಗಿ ನಿಮ್ಮ ಹುಡುಕುವಿಕೆಯು ಸಾಫಲ್ಯವನ್ನು ಹೊಂದದಾಗ, ಅವಿವಾಹಿತತನವು ಒಂದು ವರವಾಗಿ ಕಾಣುವುದು ಕಷ್ಟಕರ—ಅದು ನಿಮ್ಮನ್ನು ಬಳಲಿದವರೂ ಖಿನ್ನರೂ ಆಗಿರಿಸುವ ನಕಾರಾತ್ಮಕ ಭಾವಾವೇಶಗಳ ಒಂದು ಬಂಧನಕ್ಕೆ ಶಿಕ್ಷಿಸಲ್ಪಟ್ಟಂತಹ ಭಾವನೆಯನ್ನು ಕೊಡಬಹುದು. ಅಥವಾ ನಿಮಗೆ ಈಗಾಗಲೆ ನಿಮ್ಮದಾದ ಒಂದು ಕುಟುಂಬವಿದ್ದರೂ ನೀವು ಒಂಟಿಗರಾಗಿರುವಲ್ಲಿ, ನಿಮ್ಮ ಮಕ್ಕಳ ಎಲ್ಲ ಆವಶ್ಯಕತೆಗಳನ್ನು ಒದಗಿಸುವ ಜವಾಬ್ದಾರಿ ನಿಮ್ಮೊಬ್ಬರ ಮೇಲೆಯೆ ಬೀಳಬಹುದು.
ಆದುದರಿಂದ, ನಿಮ್ಮ ಒಂಟಿಗ ಸ್ಥಿತಿಯನ್ನು ಒಂದು ವರವಾಗಿ ನೀವು ನೋಡಲಿಕ್ಕಿಲ್ಲ. ಬೇರೆ ಕೆಲವರಾದರೊ ಅವಿವಾಹಿತ ಸ್ಥಿತಿಯನ್ನು ಅತಿ ಅಮೂಲ್ಯ ವಿಷಯವಾಗಿ ಪರಿಗಣಿಸುತ್ತಾರೆ, ಮತ್ತು ಅವರು ಒಂಟಿಗರಾಗಿ ಜೀವಿಸಲು ಆರಿಸಿಕೊಳ್ಳುತ್ತಾರೆ. ಹೀಗೆ ಅವಿವಾಹಿತ ಸ್ಥಿತಿಯು ಒಂದು ವರವಾಗಿದೆಯೆ, ಮತ್ತು ಹಾಗಿರುವಲ್ಲಿ, ಯಾವಾಗ ಮತ್ತು ಏಕೆ? ಬೈಬಲು ಏನನ್ನುತ್ತದೆ?
ಸಂತೋಷಕ್ಕೆ ತಡೆಗಟ್ಟೊ?
ಮದುವೆಯು ಒಂದು ಮಹಾ ಸಂತೋಷದ ಮೂಲವಾಗಿರಬಲ್ಲದು. (ಜ್ಞಾನೋಕ್ತಿ 5:18, 19) ಕೆಲವರಿಗೆ “ದೇವಾಲಯದ ಇಕ್ಕೆಲದ ಹಜಾರದ ನಡುವೆ [ಮದುವೆಗಾಗಿ] ನಡೆದು ಹೋಗುವುದೊಂದೆ ಸಂತೋಷದ ಮತ್ತು ಸಂತೃಪ್ತಿಯ ಮಾರ್ಗವೆಂಬ ಮನವರಿಕೆ” ಎಂದು ಲಾಸ್ ಆ್ಯಂಜೆಲಿಸ್ ಟೈಮ್ಸ್ ಹೇಳುತ್ತದೆ. ಮದುವೆಯ ಪ್ರಮಾಣ ಪತ್ರವೊಂದೆ ಸಂತೋಷವನ್ನು ಪಡೆದುಕೊಳ್ಳುವ ಮಾರ್ಗವೊ?
ಲಾಸ್ ಆ್ಯಂಜೆಲಿಸ್ ಟೈಮ್ಸ್ಗೆ ಅನುಸಾರ, ಒಬ್ಬ ಮಾನಸಿಕ ಆರೋಗ್ಯ ಪಂಡಿತೆಯಾದ ರೂತ್ ಲ್ಯೂಬಾನ್ ಹೇಳುವುದು: “ಸ್ತ್ರೀಯರು [ಮತ್ತು ಪುರುಷರು] ತಮ್ಮನ್ನು ಒಬ್ಬ ಪುರುಷನು [ಅಥವಾ ಸ್ತ್ರೀ] ಒಂಟಿ ಜೀವನದಿಂದ ಬಿಡಿಸುವನೆಂಬ ನಿರೀಕ್ಷೆಯಲ್ಲಿ ತಮ್ಮ ಜೀವನ ನಡಿಸುವುದನ್ನು ನಿಲ್ಲಿಸುವಾಗ, ತಾವೆಷ್ಟು ಸಂತೃಪ್ತಿಯನ್ನು ಕಂಡುಕೊಳ್ಳಬಲ್ಲರೆಂಬುದರಿಂದ ಆಶ್ಚರ್ಯಗೊಳ್ಳುವರು.” ಹೌದು, ಅವಿವಾಹಿತ ಸ್ಥಿತಿಯು ಒಂದು ಸಂತೋಷದ, ಸಂತೃಪ್ತಿಯ ಜೀವನ ನಡಿಸುವುದಕ್ಕೆ ತಡೆಗಟ್ಟಲ್ಲ. ವಿವಾಹ ವಿಚ್ಛೇದವಾದ ಅನೇಕರು ಮದುವೆಯು ಯಾಂತ್ರಿಕವಾಗಿಯೆ ಸಂತೋಷಕ್ಕೆ ದಾರಿಯಲ್ಲವೆಂದು ಭರವಸೆಯಿಂದ ತಿಳಿಯಪಡಿಸುವರು. ನಿಜ ಸಂತೋಷವು ದೇವರೊಂದಿಗೆ ಸುಸಂಬಂಧದ ಫಲವಾಗಿ ಸಿಗುತ್ತದೆ. ಹೀಗೆ ಕ್ರೈಸ್ತನೊಬ್ಬನು ಅವಿವಾಹಿತನಿರಲಿ ಅಥವಾ ವಿವಾಹಿತನಿರಲಿ, ಅವನು ಸಂತೋಷದಿಂದಿರಬಲ್ಲನು.—ಕೀರ್ತನೆ 84:12; 119:1, 2.
ಸ್ವಯಂ-ಪ್ರಚೋದಿತ ಎಡರುಗಳನ್ನು ಪ್ರಸ್ತಾಪಿಸುವುದಲ್ಲದೆ, ಸಂತೋಷಕ್ಕೆ ಇನ್ನೊಂದು ಸಂಭಾವ್ಯ ತಡೆಗಟ್ಟಾದ—ಸಾಮಾಜಿಕ ಒತ್ತಡವನ್ನು, ಮಾರಿ ಎಡ್ವರ್ಡ್ಸ್ ಮತ್ತು ಎ್ಯಲನೊರ್ ಹೂವರ್ ಎಂಬವರು ಚ್ಯಾಲೆಂಜ್ ಆಫ್ ಬೀಇಂಗ್ ಸಿಂಗ್ಲ್ (ಅವಿವಾಹಿತರಾಗಿರುವ ಪಂಥಾಹ್ವಾನ) ಎಂಬ ತಮ್ಮ ಪುಸ್ತಕದಲ್ಲಿ ವಾಚಕರ ಗಮನಕ್ಕೆ ತರುತ್ತಾರೆ. “ನಿಮಗೆ ಮದುವೆಯಾಗದಿದ್ದಲ್ಲಿ ನೀವೊಂದು ಆಳವಾದ, ಗೂಢ ಮಾನಸಿಕ ಕಾಯಿಲೆಯನ್ನು ಅನುಭವಿಸುತ್ತೀರೆಂಬ ಭಾವನೆಯಿರುತ್ತದೆ. . . . ನಿಮ್ಮಲ್ಲಿ ಏನಾದರೂ ದೋಷವಿದೆಯೆಂಬುದು ಖಂಡಿತ” ಎಂದು ಅವರನ್ನುತ್ತಾರೆ.
ಸದುದ್ದೇಶವುಳ್ಳ ಮಿತ್ರರು ಸಹ, ‘ನಿನಗೆ ಮದುವೆಯಾಗುವುದು ಯಾವಾಗ?’ ಅಥವಾ ‘ನಿನ್ನಂತಹ ಸುಂದರ ಪುರುಷನು ಒಬ್ಬ ಹೆಂಡತಿಯನ್ನಿನ್ನೂ ಕಂಡುಕೊಂಡಿಲ್ಲ ಹೇಗೆ?’ ಎಂದು ಕಾಡುತ್ತಾ ಕೇಳುವ ಮೂಲಕ ಅವಿವಾಹಿತ ಜನರ ಮೇಲೆ ಮಹತ್ತಾದ ಒತ್ತಡವನ್ನು ಬುದ್ಧಿಪೂರ್ವಕವಲ್ಲದೆ ಹಾಕಬಲ್ಲರು. ಇಂತಹ ಮಾತುಗಳು ವಿನೋದದಲ್ಲಿ ನುಡಿಯಲ್ಪಡಬಹುದಾದರೂ, ಅವು ‘ಕತ್ತಿ ತಿವಿದ ಹಾಗೆ’ ನೋವಿನ ಅನಿಸಿಕೆಗಳನ್ನು ಅಥವಾ ಪೇಚಾಟವನ್ನು ಉಂಟುಮಾಡಬಹುದು.—ಜ್ಞಾನೋಕ್ತಿ 12:18.
ಪ್ರತಿಯೊಬ್ಬನ ವರ
ಅಪೊಸ್ತಲ ಪೌಲನು ಮಿಷನೆರಿಯಾಗಿ ಸಂಚಾರಮಾಡಿದ ಸಮಯದಲ್ಲಿ ಅವನು ಅವಿವಾಹಿತನಾಗಿದ್ದನು. ಇದು ಮದುವೆಯನ್ನು ಅವನು ವಿರೋಧಿಸಿದ ಕಾರಣದಿಂದಲೊ? ಅಲ್ಲವೆ ಅಲ್ಲ. ಅಪೊಸ್ತಲ ಪೌಲನು ಒಂಟಿಯಾಗಿದ್ದನು ಏಕೆಂದರೆ “ಸುವಾರ್ತೆಗೋಸ್ಕರ” ಅವನು ಅವಿವಾಹಿತನಾಗಿ ಉಳಿಯಲು ಆರಿಸಿಕೊಂಡನು.—1 ಕೊರಿಂಥ 7:7; 9:23.
ಮದುವೆಯಾಗದೆ ಉಳಿಯುವ ಶಕ್ತಿಯು ಅಪೊಸ್ತಲ ಪೌಲನಿಗಿತ್ತಾದರೂ, ಪ್ರತಿಯೊಬ್ಬನೂ ತನ್ನಂತಿರಲು ಸಾಧ್ಯವಿಲ್ಲವೆಂಬುದನ್ನು ಅವನು ಒಪ್ಪಿಕೊಂಡನು. ಅವನಂದದ್ದು: “ಒಬ್ಬನು ಒಂದು ವಿಧವಾಗಿ ಮತ್ತೊಬ್ಬನು ಇನ್ನೊಂದು ವಿಧವಾಗಿ ದೇವರಿಂದ ವರವನ್ನು ಹೊಂದಿಕೊಂಡಿದ್ದಾರೆ.”—1 ಕೊರಿಂಥ 7:7.
ಅವಿವಾಹಿತ ಸ್ಥಿತಿಯು ನೀವು ನಡೆಯಲು ಉದ್ದೇಶಿಸಿದ್ದ ಮಾರ್ಗವಲ್ಲದಿದ್ದರೂ ಅದು ಸಂತೋಷಕ್ಕೆ ದಾರಿಯಾಗಿ ಪರಿಣಮಿಸಬಲ್ಲದು. ಯೆಹೋವನಿಂದ ಪಡೆದ ಅನೇಕ ವರಗಳಲ್ಲಿ ಮದುವೆಯು ಒಳಗೂಡಿರುತ್ತದೆ ನಿಶ್ಚಯ. ಆದರೆ ನೀವದಕ್ಕೆ “ಎಡೆ ಮಾಡ”ಬಲ್ಲಿರಾದರೆ—ಅವಿವಾಹಿತ ಸ್ಥಿತಿಯು ಸಹ ಒಂದು “ವರ”ವಾಗಿರಲು ಸಾಧ್ಯವಿದೆ ಎಂದು ಬೈಬಲ್ ಸೂಚಿಸುತ್ತದೆ. (ಮತ್ತಾಯ 19:11, 12; NW; 1 ಕೊರಿಂಥ 7:36-39) ಹಾಗಾದರೆ, ಅವಿವಾಹಿತತನದ ಕೆಲವು ಪ್ರಯೋಜನಗಳಾವುವು?
ವಿವಾಹಿತ ದಂಪತಿಗಳು ತಮ್ಮ ಜೊತೆಗಳನ್ನು “ಮೆಚ್ಚಿಸುವ” ಕುರಿತು ಚಿಂತಿಸುತ್ತಾರೆಂದೂ, ಆದರೆ ಅವಿವಾಹಿತರಾದರೊ “ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸು”ತ್ತಾರೆಂದು ಪೌಲನು ಹೇಳಿದನು. ಇದು ಅವಿವಾಹಿತ ಸ್ಥಿತಿಯ ಅತಿ ಮಹತ್ತಾದ ಪ್ರಯೋಜನಗಳಲ್ಲೊಂದನ್ನು—ಯೆಹೋವನ ಸೇವೆಯನ್ನು “ಅಪಕರ್ಷಣೆಯಿಲ್ಲದೆ” ಮಾಡುವ ಸುಸಂದರ್ಭವನ್ನು ಎತ್ತಿಹೇಳುತ್ತದೆ.—1 ಕೊರಿಂಥ 7:32-35, NW.
ಅವಿವಾಹಿತ ವ್ಯಕ್ತಿಯು ಪೂರ್ಣವಾಗಿ ಅಪಕರ್ಷಣೆಗಳಿಲ್ಲದೇ ಜೀವಿಸುತ್ತಾನೆಂದು ಬೈಬಲು ಹೇಳುವುದಿಲ್ಲ. ಆದರೂ ಒಬ್ಬಂಟಿಗನಾಗಿ ಜೀವಿಸುವ ವ್ಯಕ್ತಿಗಾದರೊ ಸಾಮಾನ್ಯವಾಗಿ ಕುಟುಂಬ ಪರಾಮರಿಕೆ ಮಾಡುವ ವ್ಯಕ್ತಿಗಿಂತ ಕಡಿಮೆ ಅಪಕರ್ಷಣೆಗಳಿರುತ್ತವೆ, ಯಾಕಂದರೆ ಒಂದು ನಿರ್ಣಯವನ್ನು ಮಾಡುವಾಗ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿರುವ ವ್ಯಕ್ತಿ ಅವನೊಬ್ಬನೆ ಆಗಿರುವುದರಿಂದಲೇ. ಉದಾಹರಣೆಗೆ, ಅಬ್ರಹಾಮನು ಖಾರಾನನ್ನು ಬಿಟ್ಟು ಕಾನಾನ್ ದೇಶಕ್ಕೆ ಹೋಗುವಂತೆ ದೇವರು ಮಾರ್ಗದರ್ಶಿಸಿದಾಗ, “ಅವನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತಾನೂ ಲೋಟನೂ ಖಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ ದಾಸ ದಾಸಿಯರನ್ನೂ ತೆಗೆದುಕೊಂಡು ಹೋಗಿ ಕಾನಾನ್ ದೇಶಕ್ಕೆ ಸೇರಿದನು” ಎಂದು ಬೈಬಲು ಹೇಳುತ್ತದೆ. (ಆದಿಕಾಂಡ 12:5) ಅಬ್ರಹಾಮನ ಕುಟುಂಬ ಪರಿಸ್ಥಿತಿಯು ಅವನನ್ನು ತಡೆಯಲಿಲ್ಲವಾದರೂ, ಅಂತಹ ಒಂದು ಕಾರ್ಯಕ್ಕಾಗಿ ತನ್ನ ಮನೆವಾರ್ತೆಯನ್ನು ಏರ್ಪಡಿಸಲು ಅವನು ಗಣನೀಯ ಸಮಯವನ್ನು ಕಳೆದನೆಂಬದಕ್ಕೆ ಸಂಶಯವಿಲ್ಲ.
ಅಬ್ರಹಾಮನ ಪ್ರಯಾಣವನ್ನು ಅಪೊಸ್ತಲ ಪೌಲನ ಸಂಚಾರಕ್ಕೆ ಹೋಲಿಸಿರಿ. ಪೌಲ ಮತ್ತು ಸೀಲರು ಥೆಸಲೊನೀಕ ಪಟ್ಟಣದಲ್ಲಿ ಸುವಾರ್ತೆಯನ್ನು ಸಾರುತ್ತಿದ್ದಾಗ, ಕೆರಳಿದ ದೊಂಬಿಯೊಂದು ಅವರಿಗೆ ಎದುರಾಗಿ ಎದ್ದಿತು. ಕೂಡಲೆ ಅದೇ ರಾತ್ರಿ ಸಹೋದರರು ಪೌಲ ಮತ್ತು ಸೀಲ ಇಬ್ಬರನ್ನೂ ಬೆರೋಯಕ್ಕೆ ಕಳುಹಿಸಿಕೊಟ್ಟರು. ಇನ್ನೊಂದು ಸಂದರ್ಭದಲ್ಲಿ, ತ್ರೋವದಲ್ಲಿ, “ಮಕೆದೋನ್ಯಕ್ಕೆ ಬಂದು [ಅವರಿಗೆ] ನೆರವಾಗಬೇಕು” ಎಂಬ ದರ್ಶನವನ್ನು ಪೌಲನು ಪಡೆದನು. ಅವನು ದರ್ಶನವನ್ನು ಕಂಡ ಕೂಡಲೆ ಮಕೆದೋನ್ಯಕ್ಕೆ ಹೊರಟುಹೋದನು. ಪತ್ನಿಯಿಲ್ಲದಿರುವಿಕೆಯು ಪೌಲನಿಗೆ ಕೊಂಚ ಕಾಲಾವಧಿಯೊಳಗೆ ಪ್ರಯಾಣಬೆಳೆಸುವ ಮಹಾ ಸ್ವಾತಂತ್ರ್ಯವನ್ನು ಅನುಮತಿಸಿತು, ಒಂದು ಕುಟುಂಬದೊಂದಿಗೆ ಅದು ಹೆಚ್ಚು ಕಷ್ಟಕರವಾಗಿರುತ್ತಿತ್ತು.—ಅ. ಕೃತ್ಯಗಳು 16:8-10; 17:1-15.
ಅವಿವಾಹಿತ ಸ್ಥಿತಿಯು ನೀಡುವ ಇನ್ನೊಂದು ಪ್ರಯೋಜನವು ವ್ಯಕ್ತಿಪರ ಆಯ್ಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ. ನೀವು ಒಂಟಿಯಾಗಿ ಜೀವಿಸುವಾಗ, ವಾಸಮಾಡುವ ಸ್ಥಳ, ಏನು ತಿನ್ನುವುದು ಮತ್ತು ಎಷ್ಟು ಹೊತ್ತಿಗೆ ಮಲಗಲು ಹೋಗುವುದು ಎಂಬುದನ್ನು ಸಹ ನಿರ್ಣಯಿಸುವುದು ಸಾಮಾನ್ಯವಾಗಿ ಹೆಚ್ಚು ಸುಲಭ. ಈ ಸ್ವಾತಂತ್ರ್ಯವು ಆತ್ಮಿಕ ಚಟುವಟಿಕೆಗಳಿಗೆ ಸಹ ವಿಸ್ತರಿಸುತ್ತದೆ. ದೇವರ ವಾಕ್ಯದ ವೈಯಕ್ತಿಕ ಅಧ್ಯಯನಕ್ಕೆ, ಬಹಿರಂಗ ಶುಶ್ರೂಷೆಗೆ, ಮತ್ತು ಬೇರೆ ಜನರಿಗೆ ಸಹಾಯ ಕೊಡುವುದಕ್ಕಾಗಿ ಸಂದರ್ಭಗಳನ್ನು ಬಳಸುವುದಕ್ಕೆ ಹೆಚ್ಚು ಸಮಯವು ದೊರಕುತ್ತದೆ.
ಆದುದರಿಂದ, ನೀವು ಅವಿವಾಹಿತರಾಗಿ ಇರುವುದು ಆಯ್ಕೆಯಿಂದಾಗಿರಲಿ ಇಲ್ಲವೆ ಪರಿಸ್ಥಿತಿಗಳಿಂದಾಗಿರಲಿ, ನಿಮ್ಮ ಸಮಯವನ್ನು ವಿವೇಕದಿಂದ ಉಪಯೋಗಿಸಿಕೊಳ್ಳಲು ದೃಢ ನಿಶ್ಚಯಮಾಡಿರಿ. ನಿಮ್ಮ ಅವಿವಾಹಿತತನವು ಇತರರಿಗೆ ಸಹಾಯಿಸುವುದರಲ್ಲಿ ವ್ಯಯಿಸಲ್ಪಡುವಾಗ, ಅಧಿಕ ಸಂತೋಷದ ಜೀವನವು ನಿಮ್ಮದಾಗುವುದು. (ಅ. ಕೃತ್ಯಗಳು 20:35) ವಿವಾಹವನ್ನು ನೀವು ಅಪೇಕ್ಷಿಸುವಲ್ಲಿ, ನಕಾರಾತ್ಮಕ ಭಾವವೇಶಗಳಿಂದ ನಿಮ್ಮನ್ನು ಬಂಧಿಸಿಕೊಳ್ಳಬೇಡಿರಿ ಅಥವಾ ಮದುವೆಯ ಜೊತೆಯಾಗಿ ನೀವು ಅಪೇಕ್ಷಿಸುವ ಆ ವ್ಯಕ್ತಿಯು ನಿಮ್ಮ ಜೀವನದಲ್ಲಿ ಇನ್ನೂ ಬಾರದಿರುವುದರಿಂದ, ನೀವು ಅಪೂರ್ಣ ವ್ಯಕ್ತಿಯಾಗಿದ್ದೀರೊ ಎಂಬಂತೆ ನಿಮ್ಮ ಜೀವನವನ್ನು ಜೀವಿಸದಿರ್ರಿ. ದೇವರ ಸೇವೆಯಲ್ಲಿ ನಿಮ್ಮನ್ನು ಕಾರ್ಯಮಗ್ನರಾಗಿಡಿರಿ, ಮತ್ತು ಪೌಲನಂದಂತೆ, ಅವಿವಾಹಿತ ಸ್ಥಿತಿಯು ಒಂದು ವರವಾಗಿರಬಲ್ಲದೆಂಬುದನ್ನು ನೀವು ಕಂಡುಕೊಳ್ಳಬಹುದು.