ಅನೌಪಚಾರಿಕವಾಗಿ ಸಾಕ್ಷಿನೀಡುವ ಮೂಲಕ ಯೆಹೋವನನ್ನು ಸ್ತುತಿಸಿರಿ
1 ಪ್ರತಿ ದಿನ ಯೆಹೋವನ ನಿಷ್ಠಾವಂತ ಸೇವಕರು ಆತನನ್ನು ಸ್ತುತಿಸಲಿಕ್ಕಾಗಿರುವ ಅವಕಾಶಗಳಿಗಾಗಿ ಹುಡುಕುತ್ತಿರುತ್ತಾರೆ. (ಕೀರ್ತ. 96:2, 3; ಇಬ್ರಿ. 13:15) ನಾವಿದನ್ನು ಮಾಡಸಾಧ್ಯವಿರುವ ಒಂದು ವಿಧವು ಅನೌಪಚಾರಿಕವಾಗಿ ಸಾಕ್ಷಿನೀಡುವ ಮೂಲಕವೇ ಆಗಿದೆ. ಇಂದು ಯೆಹೋವನ ಅನೇಕ ಆರಾಧಕರು, ಅನೌಪಚಾರಿಕ ಸಾಕ್ಷಿಕಾರ್ಯದ ಮೂಲಕ ಯಾರೋ ಒಬ್ಬರು ತಮಗೆ ರಾಜ್ಯದ ಸಂದೇಶವನ್ನು ಪರಿಚಯಿಸಿದ್ದಕ್ಕಾಗಿ ತುಂಬ ಕೃತಜ್ಞರಾಗಿದ್ದಾರೆ.
2 ಒಬ್ಬ ವ್ಯಕ್ತಿಗೆ ಅನೌಪಚಾರಿಕವಾಗಿ ಸಾಕ್ಷಿಯನ್ನು ನೀಡುವುದು, ಅನೇಕವೇಳೆ ಇತರರೂ ರಾಜ್ಯದ ಸಂದೇಶಕ್ಕೆ ಕಿವಿಗೊಡುವಂತೆ ಮಾರ್ಗವನ್ನು ತೆರೆಯುತ್ತದೆ. ಉದಾಹರಣೆಗೆ, ಯಾಕೋಬನು ತೆಗೆಸಿದ ಬಾವಿಯ ಬಳಿ ಸಮಾರ್ಯದ ಸ್ತ್ರೀಯೊಬ್ಬಳೊಂದಿಗಿನ ಯೇಸುವಿನ ಸಂಭಾಷಣೆಯು, ಇನ್ನೂ ಅನೇಕರು ಸುವಾರ್ತೆಯಲ್ಲಿ ಆಸಕ್ತಿಯನ್ನು ವಹಿಸುವಂತೆ ಮಾಡಿತು. (ಯೋಹಾ. 4:6-30, 39-42) ಪೌಲನೂ ಸೀಲನೂ ಫಿಲಿಪ್ಪಿಯಲ್ಲಿ ಸೆರೆಗೆ ಹಾಕಲ್ಪಟ್ಟಾಗ, ಅವರು ಸೆರೆಯ ಯಜಮಾನನಿಗೆ ಸುವಾರ್ತೆಯನ್ನು ಸಾರಿದರು ಮತ್ತು ಆ ಮನುಷ್ಯನ ಇಡೀ ಮನೆವಾರ್ತೆಯು ಸತ್ಯವನ್ನು ಸ್ವೀಕರಿಸಿತು.—ಅ. ಕೃ. 16:25-34.
3 ಸದವಕಾಶಗಳು: ಅನೌಪಚಾರಿಕವಾಗಿ ಸಾಕ್ಷಿಯನ್ನು ನೀಡಲು ನಿಮಗೆ ಯಾವ ಸದವಕಾಶಗಳಿವೆ? ಕೆಲವರು ಷಾಪಿಂಗ್ ಮಾಡುತ್ತಿರುವಾಗ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿರುವಾಗ, ಅಥವಾ ವೈದ್ಯರನ್ನು ಭೇಟಿಯಾಗಲು ಕಾಯುತ್ತಿರುವಾಗ ಅನೌಪಚಾರಿಕ ಸಾಕ್ಷಿಯನ್ನು ನೀಡಿದ್ದಾರೆ. ಇನ್ನಿತರರು ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಬಿಡುವಿನ ಸಮಯದಲ್ಲಿ ಸಾಕ್ಷಿಯನ್ನು ಕೊಡಲು ಶಕ್ತರಾಗಿದ್ದಾರೆ. ಎಲ್ಲರಿಗೂ ಕಾಣುವಂಥ ಸ್ಥಳದಲ್ಲಿ ನಮ್ಮ ಬೈಬಲ್ ಪ್ರಕಾಶನಗಳನ್ನು ಇಟ್ಟಿರುವುದು ತಾನೇ ಇತರರು ನಮ್ಮ ನಂಬಿಕೆಗಳ ಕುರಿತು ವಿಚಾರಿಸುವಂತೆ ಅವರನ್ನು ಪ್ರಚೋದಿಸಬಹುದು.—1 ಪೇತ್ರ 3:15.
4 ಹೇಗೆ ಆರಂಭಿಸುವುದು? ತುಂಬ ನಾಚಿಕೆ ಸ್ವಭಾವದವಳಾಗಿದ್ದ ಏಳು ವರ್ಷ ಪ್ರಾಯದ ಒಬ್ಬ ಹುಡುಗಿಯು, ಎಲ್ಲರಿಗೂ ಸಾರುವುದು ಎಷ್ಟೊಂದು ಪ್ರಾಮುಖ್ಯವಾದ ವಿಷಯವಾಗಿದೆ ಎಂಬುದನ್ನು ರಾಜ್ಯ ಸಭಾಗೃಹದಲ್ಲಿ ಕೇಳಿಸಿಕೊಂಡಿದ್ದಳು. ಆದುದರಿಂದ, ಅವಳು ತನ್ನ ತಾಯಿಯೊಂದಿಗೆ ಅಂಗಡಿಗೆ ಹೋಗುವಾಗ ಎರಡು ಬ್ರೋಷರ್ಗಳನ್ನು ತನ್ನ ಬ್ಯಾಗ್ನಲ್ಲಿ ಇಟ್ಟುಕೊಂಡಳು. ಅವಳ ತಾಯಿಯು ಕೌಂಟರ್ನ ಬಳಿ ಕಾರ್ಯಮಗ್ನಳಾಗಿದ್ದಾಗ, ಈ ಹುಡುಗಿ ಒಬ್ಬ ಸ್ತ್ರೀಗೆ ಒಂದು ಬ್ರೋಷರನ್ನು ನೀಡಿದಳು, ಮತ್ತು ಆ ಸ್ತ್ರೀಯು ಅದನ್ನು ಸಂತೋಷದಿಂದ ಸ್ವೀಕರಿಸಿದಳು. ಒಬ್ಬ ಅಪರಿಚಿತ ವ್ಯಕ್ತಿಯನ್ನು ಸಮೀಪಿಸಲಿಕ್ಕಾಗಿ ಹೇಗೆ ಧೈರ್ಯಬಂತೆಂದು ತಾಯಿಯು ಅವಳನ್ನು ಕೇಳಿದಾಗ, ನಾಚಿಕೆ ಸ್ವಭಾವದ ಈ ಹುಡುಗಿಯು ಹೇಳಿದ್ದು: “ನಾನು ರೆಡಿ, ಒನ್, ಟೂ, ತ್ರೀ ಎಂದು ಹೇಳಿದೆ! ಆಮೇಲೆ ಅವರನ್ನು ಸಮೀಪಿಸಿದೆ!”
5 ಅನೌಪಚಾರಿಕವಾಗಿ ಸಾಕ್ಷಿನೀಡುವಾಗ, ನಮಗೆಲ್ಲರಿಗೂ ಈ ಹುಡುಗಿಯಂಥಹದ್ದೇ ಹುರುಪಿನ ಆವಶ್ಯಕತೆಯಿದೆ. ನಮಗೆ ಸಹಾಯವು ಯಾವುದರಿಂದ ದೊರಕೀತು? ಮಾತಾಡಲಿಕ್ಕಾಗಿ ಬೇಕಾಗಿರುವ ಧೈರ್ಯಕ್ಕಾಗಿ ಪ್ರಾರ್ಥಿಸಿರಿ. (1 ಥೆಸ. 2:2) ಒಂದು ಸಂಭಾಷಣೆಯನ್ನು ಆರಂಭಿಸಲು ನೀವು ಉಪಯೋಗಿಸಸಾಧ್ಯವಿರುವ ಒಂದು ಪ್ರಶ್ನೆಯನ್ನೋ ಆಸಕ್ತಿಭರಿತವಾಗಿರುವಂಥ ಒಂದು ವಿಷಯದ ಕುರಿತಾದ ಹೇಳಿಕೆಯನ್ನೋ ಸಿದ್ಧಪಡಿಸಿಕೊಳ್ಳಿರಿ. ತದನಂತರ ಯೆಹೋವನು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನೆಂಬ ಭರವಸೆ ನಿಮಗಿರಲಿ.—ಲೂಕ 12:11, 12.
6 ನಾವು ಪ್ರತಿ ದಿನವೂ ಭೇಟಿಯಾಗುವಂಥ ಜನರಿಗೆ ಅನೌಪಚಾರಿಕವಾಗಿ ಸಾಕ್ಷಿನೀಡುವುದು, ಯೆಹೋವನಿಗೆ ಸ್ತುತಿಯನ್ನು ತರುತ್ತದೆ ಮತ್ತು ನಮಗೆ ಸಂತೋಷವನ್ನು ನೀಡುತ್ತದೆ. ಅಷ್ಟುಮಾತ್ರವಲ್ಲ, ಇದು ಯಾರಾದರೊಬ್ಬರು ನಿತ್ಯಜೀವಕ್ಕೆ ನಡಿಸುವ ಮಾರ್ಗಕ್ಕೆ ಬರುವಂತೆ ಅವರಿಗೆ ಸಹಾಯಮಾಡಬಹುದು.