ಎಲ್ಲ ಸಮಯದಲ್ಲೂ ಸಾಕ್ಷಿಗಳಾಗಿರೋಣ
1. ಬಾವಿಯ ಬಳಿ ಯೇಸು ಸ್ತ್ರೀಯೊಬ್ಬಳಿಗೆ ಸಾಕ್ಷಿಕೊಟ್ಟ ವೃತ್ತಾಂತದಿಂದ ನಾವೇನು ಕಲಿಯುತ್ತೇವೆ?
1 ತಾಸುಗಟ್ಟಲೆ ನಡೆದು ಯೇಸುವಿಗೆ ತುಂಬ ಆಯಾಸವೂ ದಾಹವೂ ಆಗಿತ್ತು. ಅವನು ದಣಿವಾರಿಸಲೆಂದು ಸಮಾರ್ಯದ ಊರೊಂದರ ಹೊರಗೆ ಇದ್ದ ಬಾವಿಯ ಬಳಿ ಕುಳಿತನು. ಇತ್ತ ಅವನ ಶಿಷ್ಯರು ಆಹಾರ ಕೊಳ್ಳಲೆಂದು ಹೋಗಿದ್ದರು. ಯೇಸು ಸಮಾರ್ಯಕ್ಕೆ ಬಂದದ್ದು ಸಾರಲಿಕ್ಕಾಗಿ ಅಲ್ಲ ಬದಲಾಗಿ ಗಲಿಲಾಯಕ್ಕೆ ಸಾರಲು ಹೋಗುತ್ತಿದ್ದಾಗ ಅಲ್ಲಿಂದ ದಾಟುತ್ತಿದ್ದನಷ್ಟೆ. ಹಾಗಿದ್ದರೂ ಬಾವಿಯಿಂದ ನೀರು ಸೇದಲು ಬಂದಿದ್ದ ಸ್ತ್ರೀಗೆ ಸಾಕ್ಷಿಕೊಡುವ ಸಂದರ್ಭವನ್ನು ಅವನು ಬಿಟ್ಟುಬಿಡಲಿಲ್ಲ. (ಯೋಹಾ. 4:5-14) ಏಕೆಂದರೆ ಅವನು ಎಲ್ಲ ಸಮಯದಲ್ಲೂ ಯೆಹೋವನ ‘ನಂಬಿಗಸ್ತ ಮತ್ತು ಸತ್ಯ ಸಾಕ್ಷಿ’ ಆಗಿದ್ದನು. (ಪ್ರಕ. 3:14) ಎಲ್ಲ ಸಮಯದಲ್ಲೂ ಯೆಹೋವನ ಸಾಕ್ಷಿಗಳಾಗಿರುವ ಮೂಲಕ ನಾವು ಯೇಸುವನ್ನು ಅನುಕರಿಸುತ್ತೇವೆ.—1 ಪೇತ್ರ 2:21.
2. ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ನಾವು ಹೇಗೆ ತಯಾರಾಗಿರಬಹುದು?
2 ತಯಾರಾಗಿರಿ: ನಾವು ಹೋಗುವಲ್ಲೆಲ್ಲ ಸಾಹಿತ್ಯ ಕೊಂಡೊಯ್ಯುವಲ್ಲಿ ಅನೌಪಚಾರಿಕವಾಗಿ ಸಾಕ್ಷಿಕೊಡಲು ತಯಾರಿರುತ್ತೇವೆ. ಅನೇಕ ಪ್ರಚಾರಕರು ಟ್ರ್ಯಾಕ್ಟ್ಗಳನ್ನು ಅಥವಾ ಪತ್ರಿಕೆಗಳ ಸೂಕ್ತ ಸಂಚಿಕೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಅವನ್ನು ಅಂಗಡಿ ಮತ್ತು ಪೆಟ್ರೋಲ್ ಬಂಕ್ಗಳಿಗೆ ಹೋದಾಗ ಅಲ್ಲಿರುವ ಕೆಲಸಗಾರರಿಗೆ ಅಥವಾ ದಿನವಿಡೀ ಯಾರೆಲ್ಲ ಸಿಗುತ್ತಾರೋ ಅವರಿಗೆ ಕೊಡುತ್ತಾರೆ. (ಪ್ರಸಂ. 11:6) ಆದರೆ ನಮ್ಮ ಟೆರಿಟೊರಿಯಲ್ಲಿ ಸಮಸ್ಯೆಗಳಾಗುವ ಸಾಧ್ಯತೆಯಿದ್ದರೆ ನಿಜವಾಗಿ ಆಸಕ್ತಿಯಿರುವವರಿಗೆ ಮಾತ್ರ ಪ್ರಕಾಶನಗಳನ್ನು ನೀಡುವಂತೆ ಜಾಗ್ರತೆವಹಿಸಬೇಕು.
3. ನಾವು ಸಂಭಾಷಣೆ ಹೇಗೆ ಆರಂಭಿಸಬಹುದು?
3 ಸಂಭಾಷಣೆ ಪ್ರಾರಂಭಿಸಿ: ನಾವು ಅನೌಪಚಾರಿಕವಾಗಿ ಸಾಕ್ಷಿಕೊಡುವಾಗ ಆರಂಭದಲ್ಲೇ ಬೈಬಲ್ ವಿಷಯದ ಕುರಿತು ಮಾತಾಡಬೇಕೆಂದಿಲ್ಲ. ಯೇಸು ಸಮಾರ್ಯದ ಸ್ತ್ರೀಗೆ ತಾನೇ ಮೆಸ್ಸೀಯನೆಂದು ಪರಿಚಯಿಸಿಕೊಳ್ಳುತ್ತಾ ಮಾತು ಆರಂಭಿಸಲಿಲ್ಲ. ಕುಡಿಯಲು ನೀರು ಕೇಳಿದನಷ್ಟೆ. ಇದು ಅವಳ ಕುತೂಹಲ ಕೆರಳಿಸಿತು. (ಯೋಹಾ. 4:7-9) ತದ್ರೀತಿಯಲ್ಲಿ ಒಬ್ಬಾಕೆ ಸಹೋದರಿ, ‘ಹಬ್ಬ ಹೇಗಿತ್ತು?’ ಎಂದು ಯಾರಾದರೂ ಕೇಳಿದಾಗಲೆಲ್ಲ ‘ನಾನು ಯೆಹೋವನ ಸಾಕ್ಷಿ, ಆ ಹಬ್ಬ ಆಚರಿಸುವುದಿಲ್ಲ’ ಎಂದು ಹೇಳದೆ ‘ಆ ಹಬ್ಬ ಆಚರಿಸಬಾರದೆಂದು ನಾನು ನಿರ್ಧಾರ ಮಾಡಿದ್ದೇನೆ’ ಎಂದು ಹೇಳುತ್ತಾಳೆ. ಆಗ ಆ ವ್ಯಕ್ತಿಯ ಕುತೂಹಲ ಕೆರಳಿ ಯಾಕೆಂದು ಕೇಳುವಂತೆ ಮಾಡುತ್ತದೆ. ಹೀಗೆ ಆ ಸಹೋದರಿಗೆ ಸಾಕ್ಷಿಕೊಡಲು ಅವಕಾಶ ಸಿಗುತ್ತದೆ.
4. ಎಲ್ಲ ಸಮಯದಲ್ಲಿ ಸಾಕ್ಷಿನೀಡಲು ಮತ್ತಾಯ 28:18-20 ನಿಮ್ಮನ್ನು ಪ್ರಚೋದಿಸುವುದೇಕೆ?
4 ಯೇಸು ತನ್ನ ಭೂಶುಶ್ರೂಷೆಯನ್ನು ಹುರುಪಿನಿಂದ ಮಾಡಿ ಮುಗಿಸಿದನು. ಇಂದು ಕೂಡ ಹುರುಪಿನಿಂದ ನಡೆಸಲಾಗುತ್ತಿರುವ ಶುಶ್ರೂಷೆಯಲ್ಲಿ ಅವನು ತೀವ್ರಾಸಕ್ತನಾಗಿದ್ದಾನೆ. (ಮತ್ತಾ. 28:18-20) ಆದುದರಿಂದ ನಮ್ಮ ಆದರ್ಶನಾದ ಯೇಸುವಿನಂತೆ ಯಾವ ಸಮಯದಲ್ಲೂ ನಮ್ಮ ನಂಬಿಕೆಯ ಬಹಿರಂಗ ಅರಿಕೆಮಾಡಲು ಸದಾ ಸಿದ್ಧರಿರುವ ಸಾಕ್ಷಿಗಳು ನಾವಾಗಿದ್ದೇವೆ.—ಇಬ್ರಿ. 10:23.