ದೈವಿಕ ನಾಮವನ್ನು ಪ್ರಕಟಪಡಿಸುವುದು
1. ದೇವರ ವೈಯಕ್ತಿಕ ಹೆಸರನ್ನು ತಿಳಿದುಕೊಳ್ಳುವುದು ಜನರ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು?
1 ನೀವು ಮೊದಲ ಬಾರಿ ದೇವರ ನಾಮದ ಕುರಿತು ತಿಳಿದುಕೊಂಡಾಗ ಹೇಗೆ ಪ್ರತಿಕ್ರಿಯಿಸಿದಿರಿ? ಅನೇಕರ ಪ್ರತಿಕ್ರಿಯೆಯು ಒಬ್ಬ ಸ್ತ್ರೀಯ ಪ್ರತಿಕ್ರಿಯೆಯಂತೆಯೇ ಇದೆ: “ಮೊದಲು ದೇವರ ಹೆಸರನ್ನು ಬೈಬಲಿನಲ್ಲಿ ಕಂಡುಕೊಂಡಾಗ, ನಾನು ಅತ್ತೆ. ನಾನು ಈ ಜ್ಞಾನದಿಂದ ಎಷ್ಟು ಪ್ರಭಾವಿತಳಾದೆನೆಂದರೆ, ನಾನು ವಾಸ್ತವದಲ್ಲಿ ದೇವರ ವೈಯಕ್ತಿಕ ಹೆಸರನ್ನು ತಿಳಿದುಕೊಂಡು ಅದನ್ನು ಉಪಯೋಗಿಸಲು ಸಾಧ್ಯವಾಯಿತು.” ಅವಳಿಗೆ, ಯೆಹೋವನನ್ನು ಒಬ್ಬ ವ್ಯಕ್ತಿಯನ್ನಾಗಿ ತಿಳಿದುಕೊಳ್ಳುವುದು ಮತ್ತು ಆತನೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳುವುದು, ದೈವಿಕ ನಾಮವನ್ನು ತಿಳಿದುಕೊಳ್ಳುವುದರಲ್ಲಿ ಒಂದು ಪ್ರಾಮುಖ್ಯ ಹೆಜ್ಜೆಯಾಗಿತ್ತು.
2. ಯೆಹೋವನ ಕುರಿತು ಇತರರಿಗೆ ಬೋಧಿಸುವುದು ಏಕೆ ಜರೂರಿಯದ್ದಾಗಿದೆ?
2 ಅದನ್ನು ಏಕೆ ಪ್ರಕಟಪಡಿಸಬೇಕು? ದೇವರ ಹೆಸರಿನೊಂದಿಗೆ ಆತನ ಗುಣಗಳು, ಉದ್ದೇಶಗಳು ಮತ್ತು ಕ್ರಿಯೆಗಳು ಜೋಡಿಸಲ್ಪಟ್ಟಿವೆ. ಮತ್ತು ರಕ್ಷಣೆಯೂ ಅದರೊಟ್ಟಿಗೆ ಜೋಡಿಸಲ್ಪಟ್ಟಿದೆ. “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು” ಅಪೊಸ್ತಲ ಪೌಲನು ಬರೆದನು. ಆದರೆ ಅವರು ಮೊದಲು ಯೆಹೋವನ ಕುರಿತು ಕಲಿತುಕೊಳ್ಳದೆ ಮತ್ತು ಆತನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸದೆ “ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ?” ಎಂದು ಪೌಲನು ತರ್ಕಿಸಿದನು. ಆದುದರಿಂದ, ದೇವರ ಹೆಸರನ್ನು ಮತ್ತು ಅದು ಪ್ರತಿನಿಧಿಸುವ ಸಮಸ್ತವನ್ನೂ ತಿಳಿಯಪಡಿಸುವ ಜರೂರಿ ಕ್ರೈಸ್ತರಿಗಿದೆ. (ರೋಮಾ. 10:13, 14) ಆದರೂ, ದೈವಿಕ ನಾಮವನ್ನು ಪ್ರಕಟಪಡಿಸಲಿಕ್ಕಾಗಿ ಮತ್ತೊಂದು ದೊಡ್ಡ ಕಾರಣವೂ ಇದೆ.
3. ನಾವು ಸಾರುವುದಕ್ಕಾಗಿರುವ ಪ್ರಪ್ರಧಾನ ಕಾರಣವು ಯಾವುದು?
3 ದೇವಜನರು 1920ಗಳಲ್ಲಿ, ದೇವರ ಪರಮಾಧಿಕಾರದ ನಿರ್ದೋಷೀಕರಣ ಮತ್ತು ಆತನ ನಾಮದ ಪವಿತ್ರೀಕರಣವನ್ನು ಒಳಗೊಂಡ ವಿಶ್ವವ್ಯಾಪಕ ವಿವಾದವನ್ನು ಶಾಸ್ತ್ರಗಳಿಂದ ಗ್ರಹಿಸಿದರು. ತನ್ನ ನಾಮದ ಮೇಲೆ ಹೊರಿಸಲ್ಪಟ್ಟಿರುವ ನಿಂದೆಯನ್ನು ತೆಗೆದುಹಾಕಲಿಕ್ಕಾಗಿ ಯೆಹೋವನು ದುಷ್ಟರನ್ನು ನಾಶಪಡಿಸುವ ಮೊದಲು, ಆತನ ಕುರಿತಾದ ಸತ್ಯವು “ಭೂಮಂಡಲದಲ್ಲೆಲ್ಲಾ ತಿಳಿದಿರ”ಬೇಕು. (ಯೆಶಾ. 12:4, 5; ಯೆಹೆ. 38:23) ಹಾಗಾಗಿ, ನಾವು ಸಾರುವುದಕ್ಕಾಗಿರುವ ಪ್ರಪ್ರಧಾನ ಕಾರಣವು ಯೆಹೋವನನ್ನು ಬಹಿರಂಗವಾಗಿ ಸ್ತುತಿಸುವುದು ಮತ್ತು ಇಡೀ ಮಾನವಕುಲದ ಮುಂದೆ ಆತನ ನಾಮವನ್ನು ಪವಿತ್ರೀಕರಿಸುವುದೇ ಆಗಿದೆ. (ಇಬ್ರಿ. 13:15) ದೇವರಿಗೆ ಮತ್ತು ನೆರೆಯವರಿಗಾಗಿರುವ ಪ್ರೀತಿಯು, ನಾವು ಈ ದೇವದತ್ತ ಕೆಲಸದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ನಮ್ಮನ್ನು ಪ್ರೇರಿಸುವುದು.
4. ಯೆಹೋವನ ಸಾಕ್ಷಿಗಳು ದೇವರ ಹೆಸರಿನೊಂದಿಗೆ ಗುರುತಿಸಲ್ಪಡುವುದು ಹೇಗೆ?
4 “ತನ್ನ ಹೆಸರಿಗಾಗಿ . . . ಒಂದು ಪ್ರಜೆ”: ನಾವು 1931ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಪಡೆದುಕೊಂಡೆವು. (ಯೆಶಾ. 43:10) ಆ ಸಮಯದಿಂದ, ದೇವಜನರು ದೇವರ ಹೆಸರನ್ನು ಎಷ್ಟರ ಮಟ್ಟಿಗೆ ಪ್ರಕಟಪಡಿಸಿದ್ದಾರೆಂದರೆ, ಘೋಷಿಸು (ಇಂಗ್ಲಿಷ್) ಪುಸ್ತಕವು 124ನೇ ಪುಟದಲ್ಲಿ ಉಲ್ಲೇಖಿಸುವುದು: “ಅಂತಾರಾಷ್ಟ್ರೀಯವಾಗಿ, ಯೆಹೋವ ಎಂಬ ಹೆಸರನ್ನು ಉಪಯೋಗಿಸುವ ಯಾವನೇ ವ್ಯಕ್ತಿಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದು ಒಡನೇ ಗುರುತಿಸಲ್ಪಡುತ್ತಾನೆ.” ನೀವು ತದ್ರೀತಿಯಲ್ಲಿ ಗುರುತಿಸಲ್ಪಡುತ್ತೀರೋ? ಯೆಹೋವನ ಒಳ್ಳೇತನಕ್ಕಾಗಿರುವ ಕೃತಜ್ಞತೆಯು, ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲೂ ನಾವು ಆತನ ಕುರಿತು ಮಾತಾಡುತ್ತಾ ‘ಆತನ ನಾಮವನ್ನು ಕೊಂಡಾಡುವಂತೆ’ ನಮ್ಮನ್ನು ಪ್ರಚೋದಿಸಬೇಕು.—ಕೀರ್ತ. 20:7; 145:1, 2, 7.
5. ದೇವರ ಹೆಸರನ್ನು ಹೊಂದಿರುವುದರಲ್ಲಿ ನಮ್ಮ ನಡತೆಯು ಹೇಗೆ ಒಳಗೂಡಿದೆ?
5 ‘ಆತನ ಹೆಸರಿಗಾಗಿ ಒಂದು ಪ್ರಜೆ’ಯಾಗಿರುವ ನಾವು, ಆತನ ಮಟ್ಟಗಳನ್ನು ಎತ್ತಿಹಿಡಿಯಬೇಕು. (ಅ. ಕೃ. 15:14; 2 ತಿಮೊ. 2:19) ಅನೇಕಬಾರಿ ಜನರು ಯೆಹೋವನ ಸಾಕ್ಷಿಗಳ ಕುರಿತು ಮೊದಲು ಗಮನಿಸುವುದು ಅವರ ಒಳ್ಳೇ ನಡತೆಯನ್ನೇ. (1 ಪೇತ್ರ 2:12) ದೈವಿಕ ಮೂಲತತ್ತ್ವಗಳನ್ನು ಉಲ್ಲಂಘಿಸುವ ಅಥವಾ ನಮ್ಮ ಜೀವಿತಗಳಲ್ಲಿ ಆತನ ಆರಾಧನೆಯನ್ನು ಎರಡನೆಯ ಸ್ಥಾನಕ್ಕೆ ತಳ್ಳಿಬಿಡುವ ಮೂಲಕ ನಾವು ಎಂದಿಗೂ ಆತನ ನಾಮಕ್ಕೆ ಕುಂದನ್ನು ತರಬಯಸೆವು. (ಯಾಜ. 22:31, 32; ಮಲಾ. 1:6-8, 12-14) ಬದಲಿಗೆ, ನಮ್ಮ ಜೀವನ ಮಾರ್ಗವು, ದೈವಿಕ ನಾಮವನ್ನು ಹೊಂದಿರುವ ನಮ್ಮ ಸುಯೋಗವನ್ನು ನಾವು ಅಮೂಲ್ಯವೆಂದೆಣಿಸುತ್ತೇವೆ ಎಂಬುದನ್ನು ತೋರಿಸಲಿ.
6. ಇಂದು ಮತ್ತು ಎಂದೆಂದಿಗೂ ನಾವು ಯಾವ ಸುಯೋಗದಲ್ಲಿ ಆನಂದಿಸುವೆವು?
6 ಇಂದು, ಯೆಹೋವನ ಈ ಘೋಷಣೆಯು ಪೂರೈಸಲ್ಪಡುತ್ತಿರುವುದನ್ನು ನಾವು ನೋಡುತ್ತೇವೆ: “ಸೂರ್ಯನು ಮೂಡುವ ದಿಕ್ಕಿನಿಂದ ಮುಣುಗುವ ದಿಕ್ಕಿನ ವರೆಗೂ ನನ್ನ ನಾಮವು ಅನ್ಯಜನಾಂಗಗಳಲ್ಲಿ ಘನವಾಗಿದೆ.” (ಮಲಾ. 1:11) ಯೆಹೋವನ ಕುರಿತಾದ ಸತ್ಯವನ್ನು ನಾವು ಪ್ರಕಟಪಡಿಸುತ್ತಾ ಮುಂದುವರಿಯೋಣ ಮತ್ತು ‘ಆತನ ಪರಿಶುದ್ಧನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡೋಣ.’—ಕೀರ್ತ. 145:21.