ನಮ್ರತೆಯನ್ನು ಧರಿಸಿಕೊಳ್ಳಿರಿ
1 ಒಬ್ಬ ಯುವ ಕುರುಬನು ಯೆಹೋವನಲ್ಲಿ ಭರವಸವಿಟ್ಟು ಬಲಿಷ್ಠ ರಣಧೀರನೊಬ್ಬನನ್ನು ಸೋಲಿಸಿಬಿಡುತ್ತಾನೆ. (1 ಸಮು. 17:45-47) ಒಬ್ಬ ಶ್ರೀಮಂತ ವ್ಯಕ್ತಿ ವಿಪತ್ತನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಾನೆ. (ಯೋಬ 1:20-22; 2:9, 10) ದೇವರ ಕುಮಾರನು ತನ್ನ ಬೋಧನೆಗಾಗಿ ದೊರೆತ ಸಕಲ ಕೀರ್ತಿಯನ್ನು ತನ್ನ ತಂದೆಗೆ ಸಲ್ಲಿಸುತ್ತಾನೆ. (ಯೋಹಾ. 7:15-18; 8:28) ಈ ಮೂರು ಮಾದರಿಗಳಲ್ಲೂ, ನಮ್ರತೆಯು ಒಂದು ಪ್ರಮುಖ ಪಾತ್ರವನ್ನು ವಹಿಸಿತು. ತದ್ರೀತಿಯಲ್ಲಿ ಇಂದು, ನಮಗೆ ಎದುರಾಗುವ ಪರಿಸ್ಥಿತಿಗಳಲ್ಲಿ ನಾವು ನಮ್ರತೆಯನ್ನು ತೋರಿಸುವುದು ಅತ್ಯಾವಶ್ಯಕವಾಗಿದೆ.—ಕೊಲೊ. 3:12.
2 ಸಾರುವಿಕೆಯಲ್ಲಿ: ಕ್ರೈಸ್ತ ಶುಶ್ರೂಷಕರೋಪಾದಿ ನಾವು ಎಲ್ಲಾ ರೀತಿಯ ಜನರೊಂದಿಗೆ—ಅವರ ಕುಲ, ಸಂಸ್ಕೃತಿ, ಅಥವಾ ಹಿನ್ನೆಲೆಯ ಮೇಲಾಧರಿಸಿ ಮುಂಚಿತವಾಗಿಯೇ ಯಾವುದೇ ತೀರ್ಮಾನವನ್ನು ಮಾಡದೆ, ಸುವಾರ್ತೆಯನ್ನು ನಮ್ರತೆಯಿಂದ ಹಂಚಿಕೊಳ್ಳುತ್ತೇವೆ. (1 ಕೊರಿಂ. 9:22, 23) ಒಂದುವೇಳೆ ಕೆಲವರು ಒರಟಾಗಿ ಪ್ರತಿಕ್ರಿಯಿಸುವುದಾದರೆ ಅಥವಾ ರಾಜ್ಯ ಸಂದೇಶವನ್ನು ಅಹಂಭಾವದಿಂದ ನಿರಾಕರಿಸುವುದಾದರೆ, ನಾವೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸದೆ, ಯೋಗ್ಯರು ಯಾರೆಂಬುದನ್ನು ತಾಳ್ಮೆಯಿಂದ ಹುಡುಕುತ್ತಾ ಹೋಗುತ್ತೇವೆ. (ಮತ್ತಾ. 10:11, 14) ನಮ್ಮ ಜ್ಞಾನ ಅಥವಾ ವಿದ್ಯಾಭ್ಯಾಸಗಳಿಂದ ಇತರರನ್ನು ಮೆಚ್ಚಿಸಲು ಪ್ರಯತ್ನಿಸುವ ಬದಲು, ನಾವು ಆಡುವ ಮಾತಿಗಿಂತಲೂ ಹೆಚ್ಚಾಗಿ ಬೈಬಲು ಮನವೊಲಿಸುವಂಥದ್ದಾಗಿದೆ ಎಂಬುದನ್ನು ಗ್ರಹಿಸುತ್ತಾ, ದೇವರ ವಾಕ್ಯದ ಕಡೆಗೆ ಗಮನವನ್ನು ನಿರ್ದೇಶಿಸುತ್ತೇವೆ. (1 ಕೊರಿಂ. 2:1-5; ಇಬ್ರಿ. 4:12) ಯೇಸುವನ್ನು ಅನುಕರಿಸುತ್ತಾ, ನಾವು ಎಲ್ಲಾ ಸ್ತುತಿಯನ್ನು ಯೆಹೋವನಿಗೆ ಕೊಡುತ್ತೇವೆ.—ಮಾರ್ಕ 10:17, 18.
3 ಸಭೆಯಲ್ಲಿ: ಕ್ರೈಸ್ತರು ‘ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಲೂಬೇಕು.’ (1 ಪೇತ್ರ 5:5) ಇತರರನ್ನು ನಾವು ನಮಗಿಂತ ಶ್ರೇಷ್ಠರೆಂದು ಎಣಿಸುವುದಾದರೆ, ನಮ್ಮ ಸಹೋದರರು ನಮಗೆ ಸೇವೆಮಾಡಬೇಕೆಂದು ಅಪೇಕ್ಷಿಸುವ ಬದಲು ನಾವು ಅವರಿಗೆ ಸೇವೆಮಾಡಲು ಅವಕಾಶಗಳಿಗಾಗಿ ಹುಡುಕುವೆವು. (ಯೋಹಾ. 13:12-17; ಫಿಲಿ. 2:3, 4) ರಾಜ್ಯ ಸಭಾಗೃಹವನ್ನು ಶುಚಿಗೊಳಿಸುವುದರಂಥ ಕೆಲಸಗಳು, ನಾನು ಮಾಡುವಂತಹ ಕೆಲಸಗಳಲ್ಲವೆಂದು ನಾವು ನೆನಸುವುದಿಲ್ಲ.
4 ‘ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳು’ವಂತೆ ನಮ್ರತೆಯು ನಮಗೆ ಸಹಾಯಮಾಡುತ್ತದೆ. ಹೀಗೆ, ಇದು ಸಭೆಯಲ್ಲಿ ಸಮಾಧಾನ ಮತ್ತು ಐಕ್ಯತೆಯನ್ನು ವರ್ಧಿಸುತ್ತದೆ. (ಎಫೆ. 4:1-3) ಮುಂದಾಳತ್ವ ವಹಿಸುವಂತೆ ನೇಮಿಸಲ್ಪಟ್ಟವರಿಗೆ ಅಧೀನರಾಗಿರಲು ಇದು ನಮಗೆ ಸಹಾಯಮಾಡುತ್ತದೆ. (ಇಬ್ರಿ. 13:17) ನಮಗೆ ಕೊಡಲ್ಪಡುವ ಯಾವುದೇ ಸಲಹೆ ಅಥವಾ ಶಿಸ್ತನ್ನು ಸ್ವೀಕರಿಸುವಂತೆ ಇದು ನಮ್ಮನ್ನು ಪ್ರಚೋದಿಸುತ್ತದೆ. (ಕೀರ್ತ. 141:5) ಮತ್ತು ಸಭೆಯಲ್ಲಿ ನಮಗೆ ಕೊಡಲ್ಪಡುವ ಯಾವುದೇ ನೇಮಕಗಳನ್ನು ನಾವು ನಿರ್ವಹಿಸುವಾಗ ಯೆಹೋವನ ಮೇಲೆ ಆತುಕೊಳ್ಳುವಂತೆ ಈ ನಮ್ರತೆಯು ನಮ್ಮನ್ನು ಪ್ರಚೋದಿಸುತ್ತದೆ. (1 ಪೇತ್ರ 4:11) ಯಶಸ್ಸು ಮಾನವ ಸಾಮರ್ಥ್ಯದ ಮೇಲಲ್ಲ ಬದಲಾಗಿ ಯೆಹೋವನ ಆಶೀರ್ವಾದದ ಮೇಲೆ ಆತುಕೊಂಡಿದೆ ಎಂಬುದನ್ನು ನಾವು ದಾವೀದನಂತೆ ಗ್ರಹಿಸಿಕೊಳ್ಳುತ್ತೇವೆ.—1 ಸಮು. 17:37.
5 ನಮ್ಮ ದೇವರ ಮುಂದೆ: ಎಲ್ಲದಕ್ಕಿಂತಲೂ ಮಿಗಿಲಾಗಿ, ನಾವು ‘ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಮ್ಮನ್ನು ತಗ್ಗಿಸಿಕೊಳ್ಳುವ’ ಆವಶ್ಯಕತೆಯಿದೆ. (1 ಪೇತ್ರ 5:6) ನಾವು ಶೋಧನಾತ್ಮಕ ಪರಿಸ್ಥಿತಿಗಳನ್ನು ಎದುರಿಸುತ್ತಿರುವುದಾದರೆ, ದೇವರ ರಾಜ್ಯವು ತರಲಿರುವ ಉಪಶಮನಕ್ಕಾಗಿ ನಾವು ಹಾತೊರೆಯುತ್ತಿರಬಹುದು. ಆದರೆ ಅದೇ ಸಮಯದಲ್ಲಿ ನಾವು ನಮ್ರತೆಯಿಂದ, ಯೆಹೋವನು ತನ್ನ ನೇಮಿತ ಸಮಯದಲ್ಲಿ ತನ್ನ ವಾಗ್ದಾನಗಳನ್ನು ನೆರವೇರಿಸುವಂತೆ ತಾಳ್ಮೆಯನ್ನು ವ್ಯಕ್ತಪಡಿಸುತ್ತೇವೆ. (ಯಾಕೋ. 5:7-11) ಸಮಗ್ರತಾ ಪಾಲಕನಾದ ಯೋಬನ ವಿಷಯದಲ್ಲಿ ನಿಜವಾಗಿದ್ದಂತೆಯೇ, ‘ಯೆಹೋವನ ನಾಮಕ್ಕೆ ಸ್ತೋತ್ರವಾಗುವುದೇ’ ನಮ್ಮ ಅತಿ ಪ್ರಾಮುಖ್ಯ ಚಿಂತೆಯಾಗಿರುತ್ತದೆ.—ಯೋಬ 1:21.
6 ಪ್ರವಾದಿಯಾದ ದಾನಿಯೇಲನು ‘ದೇವರ ಮುಂದೆ ತನ್ನನ್ನು ತಗ್ಗಿಸಿಕೊಂಡನು’ ಮತ್ತು ದೇವರ ಅನುಗ್ರಹವನ್ನೂ ಅನೇಕ ಉತ್ತಮ ಸುಯೋಗಗಳನ್ನೂ ಪಡೆದುಕೊಂಡನು. (ದಾನಿ. 10:11, 12) ತದ್ರೀತಿಯಲ್ಲಿ ನಾವು ಸಹ, “ಧನ ಮಾನ ಜೀವಗಳು ದೀನಭಾವಕ್ಕೂ [“ನಮ್ರತೆಗೂ,” NW] ಯೆಹೋವನ ಭಯಕ್ಕೂ ಫಲ” ಎಂಬುದನ್ನು ತಿಳಿದವರಾಗಿ ನಮ್ರತೆಯನ್ನು ಧರಿಸಿಕೊಳ್ಳೋಣ.—ಜ್ಞಾನೋ. 22:4.