ಸರಿಯಾದ ಹೊತ್ತಿಗೆ ಆಧ್ಯಾತ್ಮಿಕ ಆಹಾರ
1. ಯೆಹೆಜ್ಕೇಲ 36:29 ಇಂದು ಹೇಗೆ ನೆರವೇರುತ್ತಿದೆ?
1 “ನಾನು . . . ಬೆಳೆ ಬೆಳೆಯಲೆಂದು ಅಪ್ಪಣೆಕೊಟ್ಟು ಅದನ್ನು ವೃದ್ಧಿಗೊಳಿಸುವೆನು; ನಿಮಗೆ ಕ್ಷಾಮವನ್ನು ಇನ್ನು ಬರಮಾಡೆನು” ಎಂಬುದು ಪರಮಾಧಿಕಾರಿ ಕರ್ತನಾದ ಯೆಹೋವನ ನುಡಿಯಾಗಿದೆ. (ಯೆಹೆ. 36:29) ಆ ಪ್ರವಾದನಾ ಮಾತುಗಳು ಇಂದು ದೇವಜನರಿಗೆ ಅನ್ವಯಿಸುತ್ತವೆ. ಸಾಂಕೇತಿಕವಾಗಿ ಹೇಳುವುದಾದರೆ, ಯೆಹೋವನು ತನ್ನ ಜನರಿಗಾಗಿ ಜೀವಪೋಷಕ ಬೆಳೆಯನ್ನು ಸಮೃದ್ಧವಾಗಿ ಬೆಳೆಸಿದ್ದಾನೆ. ನಮ್ಮ ಜಿಲ್ಲಾ ಅಧಿವೇಶನಗಳ ಮೂಲಕವಾಗಿ ಒದಗಿಸಲ್ಪಡುವ ಸಮಯೋಚಿತವಾದ ಆಧ್ಯಾತ್ಮಿಕ ಆಹಾರವು ಈ ವಾಸ್ತವಾಂಶವನ್ನು ಸ್ಪಷ್ಟವಾಗಿ ದೃಷ್ಟಾಂತಿಸುತ್ತದೆ.
2. ಸರಿಯಾದ ಹೊತ್ತಿಗೆ ಆಧ್ಯಾತ್ಮಿಕ ಆಹಾರವನ್ನು ಒದಗಿಸಲು ಯೆಹೋವನು ಜಿಲ್ಲಾ ಅಧಿವೇಶನಗಳನ್ನು ಹೇಗೆ ಉಪಯೋಗಿಸಿದ್ದಾನೆ?
2 ಇಸವಿ 1931ರಲ್ಲಿ, ಒಹಾಯೋದ ಕೊಲಂಬಸ್ನಲ್ಲಿ ನಡೆಸಲ್ಪಟ್ಟ ಅಧಿವೇಶನದಲ್ಲಿ, ಯೆಹೋವನ ಸಾಕ್ಷಿಗಳು ಎಂಬ ಹೊಸ ಹೆಸರನ್ನು ತನ್ನ ಆರಾಧಕರು ಪಡೆದುಕೊಳ್ಳುವಂತೆ ಯೆಹೋವನು ನಿರ್ದೇಶಿಸಿದನು. (ಯೆಶಾ. 43:10-12) ಇಸವಿ 1935ರಲ್ಲಿ, ಪ್ರಕಟನೆ 7:9-17ರ ಮಹಾ ಸಮೂಹವು ಸರಿಯಾಗಿ ಗುರುತಿಸಲ್ಪಟ್ಟಿತು. ಇಸವಿ 1942ರಲ್ಲಿ, ಸಹೋದರ ನಾರ್ರವರು “ಶಾಂತಿ—ಅದು ಬಾಳಬಲ್ಲದೋ?” ಎಂಬ ಭಾಷಣವನ್ನು ಕೊಟ್ಟರು. ಆ ಭಾಷಣವು ಲೋಕವ್ಯಾಪಕ ಸಾರುವ ಕೆಲಸಕ್ಕೆ ಚಾಲಕಶಕ್ತಿಯನ್ನು ನೀಡಿತು ಮತ್ತು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ರಚನೆಗೆ ನಡೆಸಿತು. ಕೆಲವು ಅಧಿವೇಶನಗಳು ವಿಶೇಷವಾಗಿ ಸ್ಮರಣಾರ್ಹವಾಗಿರುವುದಾದರೂ, ಪ್ರತಿಯೊಂದು ಅಧಿವೇಶನವೂ ಸರಿಯಾದ ಹೊತ್ತಿಗೆ ಬಡಿಸಲ್ಪಡುವ ಪೌಷ್ಟಿಕದಾಯಕ ಆಧ್ಯಾತ್ಮಿಕ ಆಹಾರವನ್ನು ಹೊಂದಿರುವ ಮೃಷ್ಟಾನ್ನವಾಗಿ ಪರಿಣಮಿಸಿದೆ.—ಕೀರ್ತ. 23:5; ಮತ್ತಾ. 24:45.
3. ನಮ್ಮ ಜಿಲ್ಲಾ ಅಧಿವೇಶನದಲ್ಲಿ ಏರ್ಪಡಿಸಲಾಗಿರುವ ಆಧ್ಯಾತ್ಮಿಕ ಔತಣದಿಂದ ಪ್ರಯೋಜನ ಹೊಂದಲು ನಾವೇನು ಮಾಡಬೇಕು?
3 ನೀವು ಎಷ್ಟು ಚೆನ್ನಾಗಿ ತಿನ್ನುತ್ತಿದ್ದೀರಿ? ನಮ್ಮ ಸುತ್ತಮುತ್ತ ಆಹಾರ ಇರುವುದಾದರೂ ನಾವು ಅದನ್ನು ತಿನ್ನಲು ಶ್ರಮತೆಗೆದುಕೊಳ್ಳದಿದ್ದರೆ ನ್ಯೂನಪೋಷಣೆಯಿಂದ ಬಾಧಿತರಾಗಸಾಧ್ಯವಿದೆ. (ಜ್ಞಾನೋ. 26:15) ಆಧ್ಯಾತ್ಮಿಕ ಅರ್ಥದಲ್ಲಿಯೂ ಇದು ಸತ್ಯವಾಗಿದೆ. ಕೆಲವು ಅಧಿವೇಶನಗಳಲ್ಲಿ, ಕಾರ್ಯಕ್ರಮವು ನಡೆಯುತ್ತಿರುವಾಗ ಅನೇಕರು ಅನಾವಶ್ಯಕವಾಗಿ ಅತ್ತಿತ್ತ ಅಡ್ಡಾಡುತ್ತಿರುವುದನ್ನು ಅಥವಾ ಬೇರೆಯವರೊಂದಿಗೆ ಮಾತಾಡುತ್ತಿರುವುದನ್ನು ಗಮನಿಸಲಾಗಿದೆ. ಆತ್ಮೋನ್ನತಿ ಮಾಡುವ ಸಹವಾಸವು ಅಧಿವೇಶನದ ಒಂದು ಮುಖ್ಯ ವೈಶಿಷ್ಟ್ಯವಾಗಿರುವುದಾದರೂ, ಇದಕ್ಕಾಗಿರುವ ಸಮಯವು ಪ್ರತಿ ಸೆಷನ್ನ ಮುಂಚೆ ಮತ್ತು ನಂತರವಾಗಿದೆ. (ಪ್ರಸಂ. 3:1, 7) ನಾವು ನಮ್ಮ ಆಸನಗಳಲ್ಲಿದ್ದು ನಿಕಟ ಗಮನವನ್ನು ಕೊಡುತ್ತಿಲ್ಲವಾದರೆ, ಒಂದು ಅತ್ಯಾವಶ್ಯಕ ಅಂಶವನ್ನು ನಾವು ತಪ್ಪಿಸಿಕೊಳ್ಳಬಹುದು. ಪ್ರಯಾಣ ಮತ್ತು ಶುಷ್ಕ ಹವಾಮಾನ ಸ್ವಲ್ಪ ತೂಕಡಿಸುವಿಕೆಯನ್ನು ತರಬಹುದು. ಆದರೆ ರಾತ್ರಿ ನಾವು ಸಾಕಷ್ಟು ನಿದ್ರಿಸುವುದಾದರೆ, ಮರುದಿನ ಎಚ್ಚರವಾಗಿ ಉಳಿಯಲು ಮತ್ತು ಕಾರ್ಯಕ್ರಮದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಹಾಯವಾಗಬಹುದು. ಅಧಿವೇಶನ ಇಲಾಖೆಯ ಮೇಲ್ವಿಚಾರಕರು ಮತ್ತು ನೇಮಕಗಳನ್ನು ಹೊಂದಿರುವ ಸಹೋದರರಿಗೆ ಕೆಲವೊಮ್ಮೆ ಕಾರ್ಯಕ್ರಮವು ಜಾರಿಯಲ್ಲಿರುವಾಗ ಅಧಿವೇಶನದ ವಿಚಾರಗಳ ಕುರಿತು ಚರ್ಚಿಸಬೇಕಾದ ಸಂದರ್ಭಗಳು ಏಳಬಹುದು. ಇದರ ಹೊರತು, ಅವರು ಕಾರ್ಯಕ್ರಮಕ್ಕೆ ಗಮನಕೊಡುವ ವಿಧದಲ್ಲಿ ಇತರರಿಗೆ ಒಂದು ಮಾದರಿಯನ್ನು ಇಡಬೇಕು. ಎಲ್ಲರೂ ಪ್ರತಿ ದಿನದ ಸಮಾಪ್ತಿಯ ಪ್ರಾರ್ಥನೆಯ ವರೆಗೆ ಉಪಸ್ಥಿತರಿರಬೇಕು. ಒದಗಿಸಲ್ಪಡುವ ಆಧ್ಯಾತ್ಮಿಕ ಆಹಾರದ ಒಂದಂಶವನ್ನಾದರೂ ನಮ್ಮಲ್ಲಿ ಯಾರೂ ತಪ್ಪಿಸಿಕೊಳ್ಳಬಾರದು.—1 ಕೊರಿಂ. 10:12; ಫಿಲಿ. 2:12.
4. ಯೆಹೋವನು ಒದಗಿಸುತ್ತಿರುವ ಔತಣಕ್ಕಾಗಿ ನಾವು ಹೇಗೆ ನಮ್ಮ ಕೃತಜ್ಞತೆಯನ್ನು ತೋರಿಸಬಲ್ಲೆವು?
4 ಕ್ರೈಸ್ತಪ್ರಪಂಚದ ಸತ್ವರಹಿತ ಸುಳ್ಳು ಬೋಧನೆಗಳಿಗೆ ಹೋಲಿಸುವಾಗ, ಯೆಹೋವನು ಒದಗಿಸುವ ಸತ್ವಭರಿತ ಆಧ್ಯಾತ್ಮಿಕ ಸತ್ಯಗಳಲ್ಲಿ ನಾವೆಷ್ಟು ಆನಂದಿಸುತ್ತೇವೆ! (ಯೆಶಾ. 65:13, 14) ನಾವು ನಮ್ಮ ‘ಕೃತಜ್ಞತೆಯನ್ನು’ ತೋರಿಸುವ ಒಂದು ವಿಧವು, ಅಧಿವೇಶನವನ್ನು ಯೆಹೋವನಿಂದ ಬೋಧಿಸಲ್ಪಡುವ ಒಂದು ಸಂದರ್ಭವನ್ನಾಗಿ ವೀಕ್ಷಿಸುವ ಮೂಲಕವೇ. (ಕೊಲೊ. 3:15) ಭಾಷಣವನ್ನು ಕೊಡುತ್ತಿರುವ ಸಹೋದರನ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬೇಡಿರಿ, ಬದಲಿಗೆ ಸಂದೇಶವನ್ನು ನಮ್ಮ “ಮಹಾ ಶಿಕ್ಷಕ”ನಿಂದ ಬರುತ್ತಿರುವುದಾಗಿ ವೀಕ್ಷಿಸಿರಿ. (ಯೆಶಾ. 30:20, 21, NW; 54:13) ಏಕಾಗ್ರತೆಯ ಗಮನವನ್ನು ಕೊಡಿರಿ. ಮುಖ್ಯ ಅಂಶಗಳ ಚುಟುಕಾದ ಟಿಪ್ಪಣಿಗಳನ್ನು ಬರೆದುಕೊಳ್ಳುವುದರ ಪ್ರಮುಖತೆಯನ್ನೂ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಏಕೆಂದರೆ, ಇದು ಪ್ರತಿ ಸಾಯಂಕಾಲ ಕಾರ್ಯಕ್ರಮದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಲು ನಿಮಗೆ ಸಹಾಯಮಾಡುವುದರೊಂದಿಗೆ ತದನಂತರ ಸೇವಾ ಕೂಟದಲ್ಲಿ ನಡೆಸಲ್ಪಡಲಿರುವ ಮೌಖಿಕ ಪುನರ್ವಿಮರ್ಶೆಯಲ್ಲಿ ಭಾಗವಹಿಸುವಂತೆಯೂ ಸಹಾಯಮಾಡುವುದು. ನೀವು ಕಲಿಯುವ ವಿಷಯಗಳನ್ನು ಅನ್ವಯಿಸಿಕೊಳ್ಳಿರಿ.
5. ಜಿಲ್ಲಾ ಅಧಿವೇಶನಗಳು ನಮಗೆ ಹರ್ಷಿಸಲು ಯಾವ ಕಾರಣಗಳನ್ನು ಕೊಡುತ್ತವೆ?
5 ಅರ್ಮಗೆದೋನಿಗೆ ಮುಂಚೆ ನಡೆಸಲ್ಪಡುವ ಪ್ರತಿಯೊಂದು ಅಧಿವೇಶನವೂ—ಅದು ಒಂದು ನಿರಾಶ್ರಿತರ ಶಿಬಿರದಲ್ಲಿ ಅಥವಾ ಯುದ್ಧಪೀಡಿತ ದೇಶದಲ್ಲಿ ಇಲ್ಲವೆ ಹೆಚ್ಚು ಶಾಂತಿದಾಯಕ ಸನ್ನಿವೇಶದಲ್ಲಿ ದೊಡ್ಡದಾಗಿ ನಡೆಸಲ್ಪಡಲಿ—ಸೈತಾನನ ಮೇಲೆ ಸಾಧಿಸಲ್ಪಡುವ ಒಂದು ವಿಜಯವಾಗಿದೆ! ಒಂದು ಐಕ್ಯ ಸಹೋದರತ್ವದ ಭಾಗದೋಪಾದಿ, ಜಿಲ್ಲಾ ಅಧಿವೇಶನಗಳಲ್ಲಿ ಒಟ್ಟುಗೂಡಿಬರುವ ಸಂದರ್ಭಗಳನ್ನು ನಾವು ತುಂಬ ಅಮೂಲ್ಯವಾದದ್ದಾಗಿ ಪರಿಗಣಿಸುತ್ತೇವೆ. (ಯೆಹೆ. 36:38) ಯೆಹೋವನು ಪುನಃ ಒಮ್ಮೆ ಸರಿಯಾದ “ಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು” ಪ್ರೀತಿಯಿಂದ ಒದಗಿಸುವನು ಎಂಬ ದೃಢಭರವಸೆ ನಮಗಿದೆ.—ಲೂಕ 12:42.
[ಪುಟ 4ರಲ್ಲಿರುವಚೌಕ]
ಯೆಹೋವನ ಮೇಜಿಗಾಗಿ ಗಣ್ಯತೆಯನ್ನು ತೋರಿಸಿರಿ
◼ ನಿಕಟ ಗಮನವನ್ನು ಕೊಡಿರಿ
◼ ಮುಖ್ಯ ಅಂಶಗಳ ಟಿಪ್ಪಣಿ ತೆಗೆದುಕೊಳ್ಳಿ
◼ ಪ್ರತಿ ಸಾಯಂಕಾಲ ಕಾರ್ಯಕ್ರಮದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ
◼ ನೀವು ಕಲಿಯುವ ವಿಷಯಗಳನ್ನು ಅನ್ವಯಿಸಿಕೊಳ್ಳಿರಿ