ಕೃತಜ್ಞತಾಭಾವವನ್ನು ತೋರಿಸಿರಿ
1 ವ್ಯವಹರಿಸಲು ಕಷ್ಟಕರವಾಗಿರುವ ‘ಕಠಿನಕಾಲಗಳಲ್ಲಿ’ ನಾವು ಜೀವಿಸುತ್ತಿರುವುದಾದರೂ, ಯೆಹೋವನಿಗೆ ಕೃತಜ್ಞತೆಯನ್ನು ತೋರಿಸಲು ನಮಗೆ ಅನೇಕ ಕಾರಣಗಳಿವೆ. (2 ತಿಮೊ. 3:1) ಇದರಲ್ಲಿ ಅತಿ ಪ್ರಧಾನವಾದದ್ದು, ನಮ್ಮ ಪರವಾಗಿ ಆತನು ತನ್ನ ಕುಮಾರನನ್ನೇ ಅತ್ಯಮೂಲ್ಯ ಕೊಡುಗೆಯಾಗಿ ಕೊಟ್ಟದ್ದೇ. (ಯೋಹಾ. 3:16) ಮಾತ್ರವಲ್ಲದೆ, ಸುಳ್ಳು ಧರ್ಮದಲ್ಲಿರುವವರು ಆಧ್ಯಾತ್ಮಿಕವಾಗಿ ಹೊಟ್ಟೆಗಿಲ್ಲದಿರುವಾಗ ನಾವಾದರೋ ಆಧ್ಯಾತ್ಮಿಕ ಮೃಷ್ಟಾನ್ನದಲ್ಲಿ ಆನಂದಿಸುತ್ತಿದ್ದೇವೆ. (ಯೆಶಾ. 65:13) ನಾವು ಒಂದು ಲೋಕವ್ಯಾಪಕ ಸಹೋದರತ್ವದ ಭಾಗವಾಗಿದ್ದೇವೆ ಮತ್ತು ಸತ್ಯಾರಾಧನೆಯ ಪುಳಕಿತಗೊಳಿಸುವ ವಿಸ್ತರಣಾ ಕೆಲಸದಲ್ಲಿ ಪಾಲ್ಗೊಳ್ಳುವ ಸುಯೋಗ ನಮಗಿದೆ. (ಯೆಶಾ. 2:3, 4; 60:4-10, 22) ಯೆಹೋವನು ನಮ್ಮ ಮೇಲೆ ಸುರಿಸುವ ಆಶೀರ್ವಾದಗಳಿಗಾಗಿ ನಾವು ಆತನಿಗೆ ಹೇಗೆ ಕೃತಜ್ಞತೆಯನ್ನು ತೋರಿಸಬಲ್ಲೆವು?—ಕೊಲೊ. 3:15, 17.
2 ಆನಂದಭರಿತ, ಪೂರ್ಣಮನಸ್ಸಿನ ಸೇವೆ: ಭೌತಿಕ ಕೊಡುವಿಕೆಯ ಕುರಿತು ಮಾತನಾಡುತ್ತಿದ್ದಾಗ, ಅಪೊಸ್ತಲ ಪೌಲನು ಬರೆದುದು: “ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂ. 9:7) ಈ ಮೂಲತತ್ತ್ವವು ದೇವರಿಗೆ ನಾವು ಸಲ್ಲಿಸುವ ಸೇವೆಗೂ ಅನ್ವಯಿಸುತ್ತದೆ. ನಮ್ಮ ಕೃತಜ್ಞತಾಭಾವವು, ಸತ್ಯಕ್ಕಾಗಿರುವ ನಮ್ಮ ಉತ್ಸುಕತೆ, ಕ್ರೈಸ್ತ ಕೂಟಗಳಲ್ಲಿನ ನಮ್ಮ ಆನಂದ, ಕ್ಷೇತ್ರ ಶುಶ್ರೂಷೆಗಾಗಿರುವ ನಮ್ಮ ಹುರುಪು, ಮತ್ತು ದೈವಿಕ ಚಿತ್ತವನ್ನು ನೆರವೇರಿಸುವುದರಲ್ಲಿನ ನಮ್ಮ ಸಂತೋಷದಿಂದ ತೋರಿಬರುತ್ತದೆ.—ಕೀರ್ತ. 107:21, 22; 119:14; 122:1; ರೋಮಾ. 12:8, 11.
3 ಪುರಾತನ ಇಸ್ರಾಯೇಲಿನಲ್ಲಿ, ಕೆಲವು ಕಾಣಿಕೆಗಳ ವಿಷಯದಲ್ಲಿ ಧರ್ಮಶಾಸ್ತ್ರವು ಯಾವುದೇ ನಿರ್ದಿಷ್ಟ ಮೊತ್ತವನ್ನು ಗೊತ್ತುಪಡಿಸಲಿಲ್ಲ. ಪ್ರತಿಯೊಬ್ಬ ಆರಾಧಕನು “ತನಗೆ ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ” ಕೊಡುವ ಮೂಲಕ ತನ್ನ ಕೃತಜ್ಞತೆಯನ್ನು ತೋರಿಸಸಾಧ್ಯವಿತ್ತು. (ಧರ್ಮೋ. 16:16, 17) ತದ್ರೀತಿಯಲ್ಲಿ ಇಂದು, ಕೃತಜ್ಞತಾಭಾವವುಳ್ಳ ಮನಸ್ಸು ನಮ್ಮ ಪರಿಸ್ಥಿತಿಗಳು ಅನುಮತಿಸುವಷ್ಟರ ಮಟ್ಟಿಗೆ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುವುದು. ಬೇಸಗೆಯ ತಿಂಗಳುಗಳು, ನಮ್ಮ ಕೃತಜ್ಞತಾಭಾವವನ್ನು ತೋರಿಸುವಂತೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ. ಕೆಲವರು ಕೆಲಸದ ಅಥವಾ ಶಾಲೆಯ ರಜಾದಿನಗಳನ್ನು, ಕ್ಷೇತ್ರ ಸೇವೆಯಲ್ಲಿ ತಾವು ವ್ಯಯಿಸುವ ಸಮಯವನ್ನು ಹೆಚ್ಚಿಸಲಿಕ್ಕಾಗಿ ಅಥವಾ ಆಕ್ಸಿಲಿಯರಿ ಪಯನೀಯರ್ ಮಾಡಲಿಕ್ಕಾಗಿಯೂ ಸದುಪಯೋಗಿಸಿಕೊಳ್ಳುತ್ತಾರೆ. ನೀವು ಬೇಸಗೆ ಕಾಲದಲ್ಲಿ ನಿಮ್ಮ ಶುಶ್ರೂಷೆಯನ್ನು ಹೆಚ್ಚಿಸಬಲ್ಲಿರೋ?
4 ಕೃತಜ್ಞತಾಭಾವದಿಂದ ತುಂಬಿತುಳುಕುವುದು: ನಾವು ಯೆಹೋವನಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪ್ರಪ್ರಧಾನ ವಿಧಾನವು ಪ್ರಾರ್ಥನೆಯಾಗಿದೆ. (1 ಥೆಸ. 5:17, 18) ‘ಸತ್ಯಬೋಧನೆಯಲ್ಲಿ ದೃಢವಾಗಿದ್ದು ಕೃತಜ್ಞತಾಸ್ತುತಿಯಿಂದ ತುಂಬಿದವರಾಗಿರಬೇಕು’ ಎಂದು ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (ಕೊಲೊ. 2:7, ಪರಿಶುದ್ಧ ಬೈಬಲ್) ನಾವು ತೀರ ಕಾರ್ಯಮಗ್ನರಾಗಿರುವಾಗಲೂ ಅಥವಾ ಒತ್ತಡದಲ್ಲಿರುವಾಗಲೂ, ನಮ್ಮ ದೈನಂದಿನ ಪ್ರಾರ್ಥನೆಗಳಲ್ಲಿ ಯಾವಾಗಲೂ ಕೃತಜ್ಞತಾಸ್ತುತಿಯನ್ನು ಸೇರಿಸಬೇಕು. (ಫಿಲಿ. 4:6) ಹೌದು, ನಮ್ಮ ಶುಶ್ರೂಷೆಯ ಮೂಲಕ ಮತ್ತು ಪ್ರಾರ್ಥನೆಗಳ ಮೂಲಕವಾಗಿಯೂ ‘ದೇವರಿಗೆ ಹೆಚ್ಚು ಹೆಚ್ಚಾಗಿ ಕೃತಜ್ಞತಾಸ್ತುತಿಯನ್ನು’ ಸಲ್ಲಿಸೋಣ.—2 ಕೊರಿಂ. 9:12, ಪರಿಶುದ್ಧ ಬೈಬಲ್.