ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 2: ಅಧ್ಯಯನವನ್ನು ನಡೆಸಲು ತಯಾರಿಮಾಡುವುದು
1 ಒಂದು ಬೈಬಲ್ ಅಧ್ಯಯನವನ್ನು ನಡೆಸುವಾಗ ಪರಿಣಾಮಕಾರಿಯಾಗಿ ಬೋಧಿಸುವುದರಲ್ಲಿ, ವಿಷಯಭಾಗವನ್ನು ಚರ್ಚಿಸುವುದು ಮತ್ತು ಉಲ್ಲೇಖಿಸಲ್ಪಟ್ಟಿರುವ ವಚನಗಳನ್ನು ತೆರೆದು ನೋಡುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ. ವಿದ್ಯಾರ್ಥಿಯ ಹೃದಯವನ್ನು ಸ್ಪರ್ಶಿಸುವಂಥ ರೀತಿಯಲ್ಲಿ ನಾವು ಮಾಹಿತಿಯನ್ನು ಪ್ರಸ್ತುತಪಡಿಸಬೇಕು. ಇದು ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ಣವಾಗಿ ತಯಾರಿಸುವುದನ್ನು ಅವಶ್ಯಪಡಿಸುತ್ತದೆ.—ಜ್ಞಾನೋ. 15:28.
2 ತಯಾರಿಸುವ ವಿಧ: ವಿದ್ಯಾರ್ಥಿಯ ಮತ್ತು ಅವನ ಅಗತ್ಯಗಳ ಕುರಿತು ಪ್ರಾರ್ಥಿಸುವ ಮೂಲಕ ಆರಂಭಿಸಿರಿ. ವಿದ್ಯಾರ್ಥಿಯ ಹೃದಯವನ್ನು ತಲಪಲು ನಿಮಗೆ ಸಹಾಯಮಾಡುವಂತೆ ಯೆಹೋವನಲ್ಲಿ ಕೇಳಿಕೊಳ್ಳಿ. (ಕೊಲೊ. 1:9, 10) ಮುಖ್ಯ ವಿಷಯವನ್ನು ಮನಸ್ಸಿನಲ್ಲಿ ಅಚ್ಚೊತ್ತಿಸಲು, ಅಧ್ಯಾಯ ಅಥವಾ ಪಾಠದ ಶೀರ್ಷಿಕೆಯನ್ನು, ಅದರ ಉಪ-ಶೀರ್ಷಿಕೆಗಳನ್ನು, ಮತ್ತು ಕೊಡಲ್ಪಟ್ಟಿರುವ ದೃಶ್ಯ ಸಹಾಯಕಗಳನ್ನು ಪರಿಗಣಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಸ್ವತಃ ಹೀಗೆ ಕೇಳಿಕೊಳ್ಳಿ: ‘ಈ ವಿಷಯಭಾಗದ ತಿರುಳು ಏನಾಗಿದೆ?’ ನೀವು ಅಧ್ಯಯನವನ್ನು ನಡೆಸುತ್ತಿರುವಾಗ ಮುಖ್ಯಾಂಶಗಳನ್ನು ಎತ್ತಿತೋರಿಸುವಂತೆ ಇದು ನಿಮಗೆ ಸಹಾಯಮಾಡುವುದು.
3 ವಿಷಯಭಾಗವನ್ನು ಒಂದರ ನಂತರ ಇನ್ನೊಂದು ಪ್ಯಾರಗ್ರಾಫ್ನಂತೆ ಜಾಗರೂಕತೆಯಿಂದ ಪರಿಶೀಲಿಸಿ. ಮುದ್ರಿತ ಪ್ರಶ್ನೆಗಳಿಗಾಗಿರುವ ಉತ್ತರಗಳನ್ನು, ಮುಖ್ಯ ಪದಗಳು ಮತ್ತು ಪದಗುಚ್ಛಗಳನ್ನು ಗುರುತಿಸುವ ಮೂಲಕ ಗೊತ್ತುಪಡಿಸಿ. ಪ್ಯಾರಗ್ರಾಫ್ನ ಮುಖ್ಯಾಂಶಕ್ಕೆ ಉಲ್ಲೇಖಿಸಲ್ಪಟ್ಟಿರುವ ವಚನಗಳು ಹೇಗೆ ಸಂಬಂಧಿಸುತ್ತವೆ ಎಂಬುದನ್ನು ಪರಿಶೀಲಿಸಿ, ಅಧ್ಯಯನದ ಸಮಯದಲ್ಲಿ ಯಾವುದನ್ನು ಓದಬೇಕು ಎಂದು ನಿರ್ಣಯಿಸಿರಿ. ಪ್ರಕಾಶನದ ಅಂಚಿನಲ್ಲಿ ಚುಟುಕಾದ ಟಿಪ್ಪಣಿಗಳನ್ನು ಬರೆದುಕೊಳ್ಳುವುದು ಉಪಯುಕ್ತಕರವೆಂದು ನೀವು ಕಂಡುಕೊಳ್ಳಬಹುದು. ತಾನು ಏನನ್ನು ಕಲಿಯುತ್ತಿದ್ದೇನೋ ಅದು ದೇವರ ವಾಕ್ಯದಿಂದಲೇ ಕಲಿಯುತ್ತಿದ್ದೇನೆ ಎಂಬುದನ್ನು ವಿದ್ಯಾರ್ಥಿಯು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.—1 ಥೆಸ. 2:13.
4 ವ್ಯಕ್ತಿಯ ಅಗತ್ಯಗಳಿಗೆ ಪಾಠವನ್ನು ಅಳವಡಿಸಿರಿ: ನಂತರ, ನಿರ್ದಿಷ್ಟ ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪಾಠವನ್ನು ಪರಿಗಣಿಸಿರಿ. ಅವನು ಕೇಳಬಹುದಾದ ಪ್ರಶ್ನೆಗಳು ಮತ್ತು ಅರ್ಥಮಾಡಿಕೊಳ್ಳಲು ಅಥವಾ ಸ್ವೀಕರಿಸಲು ಕಷ್ಟಕರವಾಗಿ ಕಂಡುಕೊಳ್ಳಬಹುದಾದ ಅಂಶಗಳನ್ನು ಮುಂಗಾಣಲು ಪ್ರಯತ್ನಿಸಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲಾಗುವಂತೆ ಅವನು ಯಾವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಅಥವಾ ಯಾವುದರ ಮೇಲೆ ಕೆಲಸಮಾಡಬೇಕಾಗಿದೆ? ನಾನು ಅವನ ಹೃದಯವನ್ನು ಹೇಗೆ ತಲಪಬಲ್ಲೆ?’ ನಂತರ ನಿಮ್ಮ ಕಲಿಸುವಿಕೆಯನ್ನು ಅದಕ್ಕನುಸಾರ ಅಳವಡಿಸಿಕೊಳ್ಳಿ. ಕೆಲವು ವೇಳೆ, ಒಂದು ನಿರ್ದಿಷ್ಟ ಅಂಶ ಅಥವಾ ಶಾಸ್ತ್ರವಚನದ ಅರ್ಥವನ್ನು ವಿದ್ಯಾರ್ಥಿಯು ಗ್ರಹಿಸಿಕೊಳ್ಳಲು ಸಹಾಯಮಾಡಲಿಕ್ಕಾಗಿ ನೀವು ಒಂದು ದೃಷ್ಟಾಂತವನ್ನೋ, ವಿವರಣೆಯನ್ನೋ, ಅಥವಾ ಪ್ರಶ್ನೆಗಳ ಒಂದು ಸರಮಾಲೆಯನ್ನೋ ತಯಾರಿಸುವ ಅಗತ್ಯವನ್ನು ಕಾಣಬಹುದು. (ನೆಹೆ. 8:8) ಆದರೆ, ಮುಖ್ಯ ವಿಷಯವನ್ನು ಸ್ಪಷ್ಟಪಡಿಸುವುದರಲ್ಲಿ ಸ್ವಲ್ಪವೇ ಸಹಾಯಮಾಡಬಲ್ಲ ಹೆಚ್ಚಿನ ಮಾಹಿತಿಯನ್ನು ಸೇರಿಸುವುದರಿಂದ ದೂರವಿರಿ. ಅಧ್ಯಯನದ ಅಂತ್ಯದಲ್ಲಿ ನಡೆಸಲ್ಪಡುವ ಒಂದು ಸಂಕ್ಷಿಪ್ತ ಪುನರ್ವಿಮರ್ಶೆಯು ಮುಖ್ಯಾಂಶಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಅವನಿಗೆ ಸಹಾಯಮಾಡುವುದು.
5 ಹೊಸಬರು ಯೆಹೋವನಿಗೆ ಸ್ತುತಿತರುವ ಸುನೀತಿಯೆಂಬ ಫಲವನ್ನು ಕೊಡುವಾಗ ಅದು ನಮಗೆಷ್ಟು ಆನಂದವನ್ನು ತರುತ್ತದೆ! (ಫಿಲಿ. 1:11) ಅವರು ಆ ಗುರಿಯನ್ನು ಮುಟ್ಟುವಂತೆ ಸಹಾಯಮಾಡಲಿಕ್ಕಾಗಿ ನೀವು ಪ್ರತಿ ಸಲ ಒಂದು ಬೈಬಲ್ ಅಧ್ಯಯನವನ್ನು ನಡೆಸಲಿರುವಾಗ ಒಳ್ಳೆಯ ತಯಾರಿಯನ್ನು ಮಾಡಿರಿ.