ಸಾರುವುದರಲ್ಲಿ ಪಟ್ಟುಹಿಡಿದು ಮುಂದುವರಿಯಿರಿ
1 ಇವು ಕಠಿನಕಾಲಗಳಾಗಿವೆ. ಆಂತರಿಕ ಕಲಹ, ಕುಲಸಂಬಂಧಿತ ಯುದ್ಧಗಳು, ನೈಸರ್ಗಿಕ ವಿಪತ್ತಗಳು ಮತ್ತು ಇತರ ಭೀಕರ ಘಟನೆಗಳು ಸರ್ವಸಾಮಾನ್ಯವಾಗಿವೆ. ಮಾನವ ಕುಟುಂಬಕ್ಕೆ ಸುವಾರ್ತೆಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಹಾಗಿದ್ದರೂ, ಆಧ್ಯಾತ್ಮಿಕ ವಿಷಯಗಳ ಕಡೆಗೆ ಅಲಕ್ಷ್ಯಭಾವವು ಇಂದು ವ್ಯಾಪಕವಾಗಿದೆ. ಕೆಲವು ಕ್ಷೇತ್ರಗಳಲ್ಲಿ, ಜನರನ್ನು ಮನೆಯಲ್ಲಿ ಕಂಡುಕೊಳ್ಳುವುದು ಕಷ್ಟಕರವಾಗಿರಬಹುದು. ಆದರೆ ನಮಗೆ ಕಿವಿಗೊಡುವ ಅಥವಾ ಬೈಬಲನ್ನು ಅಧ್ಯಯನಮಾಡಲು ಬಯಸುವ ಜನರನ್ನು ಕಂಡುಕೊಳ್ಳುವುದು ಅದಕ್ಕಿಂತಲೂ ಹೆಚ್ಚು ಕಷ್ಟಕರವಾಗಿರಬಹುದು. ಆದರೂ, ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನಾವು ಪಟ್ಟುಹಿಡಿದು ಮುಂದುವರಿಯುವುದು ಅತ್ಯಾವಶ್ಯಕ.—ಮತ್ತಾ. 24:14.
2 ಜನರ ಕಡೆಗೆ ಪ್ರೀತಿ: ನಮ್ಮ ಸಾರುವಿಕೆಯು ಜನರ ಕಡೆಗೆ ಯೆಹೋವನಿಗಿರುವ ಪ್ರೀತಿಯನ್ನು ಒತ್ತಿಹೇಳುತ್ತದೆ. ‘ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುತ್ತಾನೆ.’ (2 ಪೇತ್ರ 3:9; ಯೆಹೆ. 33:11) ಆದುದರಿಂದ, ಆತನು ಆಜ್ಞಾಪಿಸಿರುವುದನ್ನು ಯೇಸು ಉಲ್ಲೇಖಿಸುತ್ತಾ, “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು” ಎಂದು ಹೇಳಿದನು. (ಮಾರ್ಕ 13:10) ತನ್ನ ಕಡೆಗೆ ತಿರುಗಿಕೊಳ್ಳುವಂತೆ ಮತ್ತು ಸೈತಾನನ ಲೋಕದ ಮೇಲೆ ಬರಲಿರುವ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳುವಂತೆ ದೇವರು ಜನರನ್ನು ಕೇಳಿಕೊಳ್ಳುತ್ತಾನೆ. (ಯೋವೇ. 2:28, 29, 32; ಚೆಫ. 2:2, 3) ಆ ಅವಕಾಶವನ್ನು ಯೆಹೋವನು ನಮಗೆ ಕೊಟ್ಟಿರುವುದಕ್ಕಾಗಿ ನಾವು ಕೃತಜ್ಞರಾಗಿಲ್ಲವೊ?—1 ತಿಮೊ. 1:12, 13.
3 ಲೋಕವ್ಯಾಪಕ ವರದಿಯು ತೋರಿಸುವಂತೆ 2004ರ ಸೇವಾ ವರುಷದಲ್ಲಿ, ಪ್ರತಿ ತಿಂಗಳು ಸರಾಸರಿ 60,85,387 ಬೈಬಲ್ ಅಧ್ಯಯನಗಳು ನಡೆಸಲ್ಪಟ್ಟವು ಮತ್ತು ಪ್ರತಿ ವಾರ ಸರಾಸರಿ ಸುಮಾರು 5,000 ಮಂದಿ ಹೊಸ ಶಿಷ್ಯರು ದೀಕ್ಷಾಸ್ನಾನವನ್ನು ಪಡೆದುಕೊಂಡರು. ಹೊಸದಾಗಿ ಸಮರ್ಪಿಸಿಕೊಂಡ ಇವರಲ್ಲಿ ಕೆಲವರು, ತಮ್ಮ ನೇಮಿತ ಕ್ಷೇತ್ರದಲ್ಲಿ ಪ್ರತಿಯೊಬ್ಬರೊಂದಿಗೆ ಮಾತಾಡಲು ಪ್ರಯತ್ನಿಸಿದ ಪ್ರಚಾರಕರ ಸತತ ಪ್ರಯಾಸವನ್ನು ಯೆಹೋವನು ಆಶೀರ್ವದಿಸಿದ ಫಲಿತಾಂಶವಾಗಿ ಕಂಡುಕೊಳ್ಳಲ್ಪಟ್ಟರು. ಸಭೆಗಳಲ್ಲಿ ಇದು ಎಂಥ ಆನಂದವನ್ನು ಉಂಟುಮಾಡಿದೆ ಮತ್ತು ಈ ಜೀವರಕ್ಷಕ ಕೆಲಸದಲ್ಲಿ ದೇವರ ಜೊತೆ ಕೆಲಸದವರಾಗಿರುವುದು ಎಂಥ ಒಂದು ಸುಯೋಗ!—1 ಕೊರಿಂ. 3:5, 6, 9.
4 ದೇವರ ನಾಮವನ್ನು ಸ್ತುತಿಸುವುದು: ಯೆಹೋವನನ್ನು ಬಹಿರಂಗವಾಗಿ ಸ್ತುತಿಸುವ ಮತ್ತು ಆತನ ನಾಮವನ್ನು ಎಲ್ಲಾ ಮಾನವರ ಮುಂದೆ ಪವಿತ್ರೀಕರಿಸುವ ಸಲುವಾಗಿ ನಾವು ಸಾರುವುದರಲ್ಲಿ ಪಟ್ಟುಹಿಡಿದು ಮುಂದುವರಿಯುತ್ತೇವೆ. (ಇಬ್ರಿ. 13:15) ಮಾನವಕುಲದ ಸಮಸ್ಯೆಗಳನ್ನು ಪರಿಹರಿಸಲು ದೇವರು ಅಶಕ್ತನಾಗಿದ್ದಾನೆ, ಮಾನವರು ಅನುಭವಿಸುತ್ತಿರುವ ಕಷ್ಟಗಳ ಕುರಿತು ಆತನು ತಾತ್ಸಾರ ಭಾವವುಳ್ಳವನಾಗಿದ್ದಾನೆ ಅಥವಾ ದೇವರು ಅಸ್ತಿತ್ವದಲ್ಲಿಯೇ ಇಲ್ಲ ಎಂದು ನಂಬುವಂತೆ ಸೈತಾನನು “ಭೂಲೋಕದವರನ್ನೆಲ್ಲಾ” ಮರುಳುಗೊಳಿಸಿದ್ದಾನೆ. (ಪ್ರಕ. 12:9) ಆದರೆ ನಮ್ಮ ಸಾರುವ ಕೆಲಸದ ಮೂಲಕ ನಾವು ನಮ್ಮ ಮಹಿಮಾಭರಿತ ಸ್ವರ್ಗೀಯ ತಂದೆಯ ಕುರಿತಾದ ಸತ್ಯವನ್ನು ಸಮರ್ಥಿಸುತ್ತೇವೆ. ಆದುದರಿಂದ ಇಂದು ಮತ್ತು ಎಂದೆಂದಿಗೂ ನಾವು ಆತನ ನಾಮವನ್ನು ಸ್ತುತಿಸುತ್ತಾ ಮುಂದುವರಿಯೋಣ.—ಕೀರ್ತ. 145:1, 2.