ಸಾರುತ್ತಾ ಇರಿ!
1 “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊ. 2:4) ಈ ಕಾರಣಕ್ಕಾಗಿಯೇ, ಸುವಾರ್ತೆಯನ್ನು ಸಾರುವಂತೆ ನಮಗೆ ಆತನು ನೇಮಕವನ್ನು ನೀಡಿದ್ದಾನೆ. (ಮತ್ತಾ. 24:14) ನಾವು ಏಕೆ ಸಾರಬೇಕು ಎಂಬುದನ್ನು ಗಣ್ಯಮಾಡುವುದಾದರೆ, ನಮ್ಮ ಹಾದಿಯಲ್ಲಿ ನಿರುತ್ತೇಜನ ಇಲ್ಲವೆ ಅಪಕರ್ಷಣೆಗಳಂತಹ ಯಾವುದೇ ಕಷ್ಟಗಳು ಬರುವುದಾದರೂ, ಅವು ನಮಗೆ ತಡೆಯಾಗಿರುವುದಿಲ್ಲ.
2 ಏಕೆ ಪಟ್ಟುಹಿಡಿದು ಸಾರಬೇಕು? ಇಂದು ಲೋಕದಲ್ಲಿ ಎಷ್ಟೊಂದು ಅಪಕರ್ಷಣೆಗಳಿವೆಯೆಂದರೆ, ನಾವು ಹೇಳುವ ವಿಷಯವನ್ನು ಜನರು ಒಂದೋ ಮರೆತುಬಿಡುತ್ತಾರೆ ಇಲ್ಲವೆ ಅದನ್ನು ಅಷ್ಟೇನೂ ಮಹತ್ತ್ವದ್ದಾಗಿ ಎಣಿಸುವುದಿಲ್ಲ. ಆದುದರಿಂದ ನಾವು ಅವರಿಗೆ ರಕ್ಷಣೆಯ ಕುರಿತಾದ ದೇವರ ಸಂದೇಶವನ್ನು ಪುನಃ ಪುನಃ ಹೇಳಬೇಕಾಗುತ್ತದೆ. (ಮತ್ತಾ. 24:38, 39) ಅಲ್ಲದೆ, ಜನರ ಜೀವಿತಗಳು ಆಗಾಗ್ಗೆ ಬದಲಾಗುತ್ತಿರುತ್ತವೆ. ಅಷ್ಟೇಕೆ, ಲೋಕದ ಪರಿಸ್ಥಿತಿಗಳು ಸಹ ಒಂದೇ ರಾತ್ರಿಯಲ್ಲಿ ಬದಲಾಗಸಾಧ್ಯವಿದೆ. (1 ಕೊರಿಂ. 7:31) ನಾವು ಯಾರಿಗೆ ಸಾರುತ್ತೇವೋ ಆ ಜನರ ಜೀವನದಲ್ಲಿ ನಾಳೆಯೋ, ಮುಂದಿನ ವಾರವೋ ಇಲ್ಲವೆ ಮುಂದಿನ ತಿಂಗಳೋ ಖಂಡಿತವಾಗಿಯೂ ಹೊಸ ಹೊಸ ಸಮಸ್ಯೆಗಳು ಇಲ್ಲವೆ ಚಿಂತೆಗಳು ಎದುರಾಗಬಹುದು. ಇದು ನಾವು ಹೇಳುವ ಸುವಾರ್ತೆಗೆ ಗಂಭೀರವಾದ ಪರಿಗಣನೆಯನ್ನು ತೋರಿಸುವಂತೆ ಮಾಡಬಹುದು. ನಿಮಗೆ ಸತ್ಯವನ್ನು ನೀಡಿದ ಸಾಕ್ಷಿಯು ಪಟ್ಟುಹಿಡಿದು ಸಾರಿದ್ದಕ್ಕಾಗಿ ನೀವು ಕೃತಜ್ಞತಾಭಾವವನ್ನು ಹೊಂದಿಲ್ಲವೋ?
3 ದೇವರ ದಯೆಯನ್ನು ಅನುಕರಿಸುವ ಕಾರಣದಿಂದ: ಯೆಹೋವನು ತಾಳ್ಮೆಯಿಂದ ದುಷ್ಟರ ಮೇಲೆ ನಾಶನವನ್ನು ತರುವುದಕ್ಕೆ ಇನ್ನೂ ಕೊಂಚ ಸಮಯವನ್ನು ಬಿಟ್ಟಿದ್ದಾನೆ. ತನ್ನ ಕಡೆಗೆ ತಿರುಗಿ, ರಕ್ಷಣೆ ಹೊಂದುವಂತೆ ನಮ್ಮ ಮುಖಾಂತರ ಆತನು ಸಹೃದಯಿಗಳಿಗೆ ಕರೆಕೊಡುತ್ತಿದ್ದಾನೆ. (2 ಪೇತ್ರ 3:9) ಜನರಿಗೆ ದೇವರ ದಯಾಭರಿತ ಸಂದೇಶವನ್ನು ತಿಳಿಸದಿದ್ದರೆ ಮತ್ತು ದುರ್ಮಾರ್ಗಗಳನ್ನು ಬಿಡದಿರುವಂಥ ಜನರಿಗೆ ದೇವರು ನ್ಯಾಯತೀರಿಸುತ್ತಾನೆ ಎಂಬ ಎಚ್ಚರಿಕೆಯನ್ನು ಕೊಡದಿದ್ದರೆ, ನಮ್ಮ ಮೇಲೆ ರಕ್ತಾಪರಾಧ ದೋಷವು ಬರುತ್ತದೆ. (ಯೆಹೆ. 33:1-11) ನಮ್ಮ ಸಂದೇಶಕ್ಕೆ ಯಾವಾಗಲೂ ಒಳ್ಳೆಯ ಪ್ರತಿಕ್ರಿಯೆ ಸಿಗುವುದಿಲ್ಲವಾದರೂ, ದೇವರ ದಯೆಗೆ ಗಣ್ಯತೆಯನ್ನು ತೋರಿಸುವಂತೆ ಪ್ರಾಮಾಣಿಕ ಹೃದಯದ ಜನರಿಗೆ ಸಹಾಯಮಾಡಲು ಯಾವಾಗಲೂ ಪ್ರಯತ್ನವನ್ನು ಮಾಡುವುದರಲ್ಲಿ ಅಲಕ್ಷ್ಯವನ್ನು ತೋರಿಸದಿರೋಣ.—ಅ. ಕೃ. 20:26, 27; ರೋಮಾ. 12:11.
4 ಪ್ರೀತಿಯನ್ನು ತೋರಿಸುವ ಕಾರಣದಿಂದ: ಯೆಹೋವನು ಭೂಮಿಯಲ್ಲೆಲ್ಲ ಸುವಾರ್ತೆಯನ್ನು ಸಾರಬೇಕು ಎಂಬ ಆಜ್ಞೆಯನ್ನು ಯೇಸುವಿನ ಮುಖಾಂತರ ಕೊಟ್ಟನು. (ಮತ್ತಾ. 28:19, 20) ನಮ್ಮ ಸಂದೇಶವನ್ನು ಕೇಳಿಸಿಕೊಳ್ಳಲು ಜನರು ನಿರಾಕರಿಸುವುದಾದರೂ, ಸರಿಯಾದುದನ್ನು ಮಾಡುವುದರಲ್ಲಿ ನಾವು ಪಟ್ಟುಹಿಡಿಯುವ ಮೂಲಕ, ದೇವರ ಕಡೆಗೆ ನಮ್ಮ ಪ್ರೀತಿಯನ್ನು ಹಾಗೂ ಭಕ್ತಿಯನ್ನು ತೋರಿಸುವ ಅವಕಾಶ ನಮಗಿರುತ್ತದೆ.—1 ಯೋಹಾ. 5:3.
5 ಆದುದರಿಂದ, ನಾವು ಸಾರುತ್ತಾ ಇರುವ ದೃಢಸಂಕಲ್ಪವನ್ನು ಮಾಡೋಣ! ಯೆಹೋವನ ‘ರಕ್ಷಣೆಯ ದಿನವು’ ಮುಂದುವರಿಯುತ್ತಿರುವ ಈ ಸಮಯದಲ್ಲಿ ನಾವು ಹುರುಪು ಮತ್ತು ಉತ್ಸಾಹದಿಂದ ಸಾರುತ್ತಾ ಇರೋಣ.—2 ಕೊರಿಂ. 6:2.