ಕುಟುಂಬ ಕಾಲತಖ್ತೆ—ಕುಟುಂಬದ ಕ್ಷೇತ್ರ ಸೇವೆ
1 ಮಕ್ಕಳು ಯೆಹೋವನ ನಾಮವನ್ನು ಕೊಂಡಾಡುವಾಗ ಆತನಿಗೆ ಆನಂದವಾಗುತ್ತದೆ. (ಕೀರ್ತ. 148:12, 13) ಯೇಸುವಿನ ದಿನಗಳಲ್ಲಿ, ‘ಸಣ್ಣ ಮಕ್ಕಳೂ ಮೊಲೇಕೂಸುಗಳೂ [ದೇವರಿಗೆ] ಸ್ತೋತ್ರ’ ಸಲ್ಲಿಸಿದರು. (ಮತ್ತಾ. 21:15, 16) ಇಂದು ಸಹ ಅದೇ ಸಂಭವಿಸುತ್ತಿದೆ. ಹೆತ್ತವರೇ, ಕ್ರೈಸ್ತ ಶುಶ್ರೂಷೆಯಲ್ಲಿ ಯೆಹೋವನನ್ನು ಸ್ತುತಿಸಲು ನೀವು ಹೇಗೆ ನಿಮ್ಮ ಮಕ್ಕಳಲ್ಲಿ ಹುರುಪನ್ನು ತುಂಬಿಸಬಲ್ಲಿರಿ? ಸಭಾ ಕೂಟಗಳ ಕುರಿತಾದ ಮೇಲಿನ ಲೇಖನದಲ್ಲಿ ಒತ್ತಿಹೇಳಿದಂತೆ, ನಿಮ್ಮ ಮಾದರಿಯೇ ಇದಕ್ಕೆ ಪ್ರಾಮುಖ್ಯ ಕೀಲಿ ಕೈಯಾಗಿದೆ. “ನೀವು ಏನು ಹೇಳುತ್ತೀರೊ ಅದನ್ನು ಮಕ್ಕಳು ಮಾಡುವುದಿಲ್ಲ; ನೀವು ಏನು ಮಾಡುತ್ತೀರೊ ಅದನ್ನು ನೋಡಿ ಅವರು ಅದರಂತೆಯೇ ಮಾಡುತ್ತಾರೆ!” ಎಂದು ಒಬ್ಬ ತಂದೆಯು ಹೇಳಿದಾಗ, ಎಲ್ಲ ಕಡೆಗಳಲ್ಲಿರುವ ಹೆತ್ತವರ ಭಾವನೆಯನ್ನು ವ್ಯಕ್ತಪಡಿಸಿದನು.
2 ದೇವಭಯವುಳ್ಳ ಹೆತ್ತವರಿಂದ ಬೆಳೆಸಲ್ಪಟ್ಟ ಒಬ್ಬಾಕೆ ಸಹೋದರಿಯು ನೆನಪಿಸಿಕೊಳ್ಳುವುದು: “ನಾವೆಂದೂ ಶನಿವಾರ ಬೆಳಗ್ಗೆ ಎದ್ದು, ಶುಶ್ರೂಷೆಯಲ್ಲಿ ನಾವು ಹೋಗಲಿದ್ದೆವೊ ಎಂದು ಕೇಳಲಿಲ್ಲ. ನಾವು ಹೋಗಲಿದ್ದೆವೆಂದು ನಮಗೆ ಗೊತ್ತಿತ್ತು.” ತದ್ರೀತಿಯಲ್ಲಿ, ಕುಟುಂಬವಾಗಿ ಪ್ರತಿ ವಾರ ಕ್ರಮವಾಗಿ ಕ್ಷೇತ್ರ ಸೇವೆಗೆ ಹೋಗುವ ವಾಡಿಕೆಯನ್ನು ಮಾಡಿಕೊಳ್ಳುವ ಮೂಲಕ ನೀವು ಸಹ ನಿಮ್ಮ ಮಕ್ಕಳಲ್ಲಿ ಸಾರುವ ಕೆಲಸದ ಮಹತ್ವವನ್ನು ಬೇರೂರಿಸಸಾಧ್ಯವಿದೆ. ಇದು ನಿಮ್ಮ ಮಕ್ಕಳಿಗೆ ನಿಮ್ಮನ್ನು ನೋಡಿ ಕಲಿಯುವಂಥ ಸದವಕಾಶವನ್ನು ಒದಗಿಸುತ್ತದೆ ಮಾತ್ರವಲ್ಲ, ಅವರ ಮನೋಭಾವ, ರೀತಿನೀತಿಗಳು ಮತ್ತು ಬೆಳೆಯುತ್ತಿರುವ ಕುಶಲತೆಗಳನ್ನು ಗಮನಿಸುವಂತೆ ನಿಮಗೆ ಸಹ ಅವಕಾಶವನ್ನು ಮಾಡಿಕೊಡುತ್ತದೆ.
3 ಪ್ರಗತಿಪರವಾದ ತರಬೇತಿ: ಮಕ್ಕಳು ಶುಶ್ರೂಷೆಯಲ್ಲಿ ಆನಂದಿಸಬೇಕಾದರೆ, ಪರಿಣಾಮಕಾರಿಯಾಗಿ ಭಾಗವಹಿಸಲು ಸಾಧ್ಯವಾಗುವಂತೆ ಅವರು ತಯಾರಿ ಮಾಡಿರುವುದು ಅಗತ್ಯ. ಈ ಹಿಂದೆ ಉಲ್ಲೇಖಿಸಲಾದ ಸಹೋದರಿಯು ಸಹ ಹೇಳಿದ್ದು: “ನಾವು ಎಂದೂ ನಮ್ಮ ಹೆತ್ತವರನ್ನು ಅವರ ಕೆಲಸದಲ್ಲಿ ಜೊತೆಗೂಡಿದ ಹಿಂಬಾಲಕರು ಮಾತ್ರವೇ ಆಗಿರಲಿಲ್ಲ. ಅದು ಬಾಗಿಲ ಗಂಟೆಯನ್ನು ಬಾರಿಸಿ, ಒಂದು ಕರಪತ್ರವನ್ನು ಬಿಟ್ಟುಬರುವುದನ್ನು ಮಾತ್ರ ಒಳಗೊಂಡಿದ್ದರೂ, ನಮಗೊಂದು ಪಾಲಿತ್ತೆಂದು ನಮಗೆ ಗೊತ್ತಿತ್ತು. ಪ್ರತಿ ವಾರಾಂತ್ಯದ ಚಟುವಟಿಕೆಗಳ ಮುಂಚಿನ ಜಾಗರೂಕ ತಯಾರಿಯಿಂದಾಗಿ, ನಾವು ಹೇಳಲಿದ್ದ ವಿಷಯವು ನಮಗೆ ತಿಳಿದಿತ್ತು.” ನೀವು ಸಹ ಪ್ರತಿ ವಾರ, ನಿಮ್ಮ ಕುಟುಂಬ ಅಧ್ಯಯನದ ಸಮಯದಲ್ಲಿ ಅಥವಾ ಮತ್ತೊಂದು ಸಮಯದಲ್ಲಿ ನಿಮ್ಮ ಮಕ್ಕಳನ್ನು ಶುಶ್ರೂಷೆಗೆ ತಯಾರಿಸಲು ಕೆಲವೇ ನಿಮಿಷಗಳನ್ನು ವಿನಿಯೋಗಿಸುತ್ತಾ ಅದೇ ರೀತಿಯ ತರಬೇತಿಯನ್ನು ಅವರಿಗೆ ನೀಡಬಲ್ಲಿರಿ.
4 ಕುಟುಂಬವಾಗಿ ಸಾರುವ ಕೆಲಸದಲ್ಲಿ ಭಾಗವಹಿಸುವುದು, ಸತ್ಯವನ್ನು ನಿಮ್ಮ ಮಕ್ಕಳಲ್ಲಿ ಬೇರೂರಿಸುವಂತೆ ಇನ್ನೊಂದು ಸಂದರ್ಭವನ್ನು ಒದಗಿಸುತ್ತದೆ. ಒಬ್ಬ ಕ್ರೈಸ್ತ ತಂದೆಯು ತಮ್ಮ ಪಕ್ಕದ ಹಳ್ಳಿಗೆ ಹೋಗಿ ಟ್ರ್ಯಾಕ್ಟ್ಗಳನ್ನು ವಿತರಿಸಲು ಹತ್ತು ಕಿಲೋಮೀಟರ್ ನಡೆಯುತ್ತಿದ್ದನು ಮತ್ತು ಅವನು ತನ್ನೊಂದಿಗೆ ತನ್ನ ಮಗಳನ್ನೂ ಕರೆದುಕೊಂಡು ಹೋಗುತ್ತಿದ್ದನು. “ನನ್ನ ತಂದೆ ನನ್ನ ಹೃದಯದಲ್ಲಿ ಸತ್ಯವನ್ನು ತುಂಬಿದ್ದು ಆ ನಡಿಗೆಗಳ ಸಮಯದಲ್ಲಿಯೇ” ಎಂದು ಆ ಮಗಳು ಸಂತೋಷದಿಂದ ನೆನಪಿಸಿಕೊಳ್ಳುತ್ತಾಳೆ. (ಧರ್ಮೋ. 6:7) ಇದೇ ರೀತಿಯಲ್ಲಿ ನೀವು ಸಹ ಕ್ಷೇತ್ರ ಸೇವೆಯನ್ನು ನಿಮ್ಮ ವಾರದ ಕುಟುಂಬ ಕಾಲತಖ್ತೆಯ ಭಾಗವನ್ನಾಗಿ ಮಾಡಿದಕ್ಕಾಗಿ ಪ್ರತಿಫಲವನ್ನು ಪಡೆದುಕೊಳ್ಳುವಂತಾಗಲಿ.