ನಿಮ್ಮ ಮಕ್ಕಳಿಗೆ ಯೆಹೋವನನ್ನು ಸ್ತುತಿಸಲು ಕಲಿಸಿರಿ
1. ಎಳೆಯ ಮಕ್ಕಳು ಯೆಹೋವನನ್ನು ಸ್ತುತಿಸಬಲ್ಲರೋ?
1 “ಯೆಹೋವನ ಹೆಸರನ್ನು ಸ್ತುತಿಸಿರಿ” ಎಂದು ಕೀರ್ತನೆ 148:12, 13 (NIBV) ಹುಡುಗ ಹುಡುಗಿಯರನ್ನು ಉತ್ತೇಜಿಸುತ್ತದೆ. ಯೆಹೋವನನ್ನು ಸ್ತುತಿಸಿದ ಎಳೆಯ ಮಕ್ಕಳ ಹಲವಾರು ಮಾದರಿಗಳು ದೇವರ ವಾಕ್ಯದಲ್ಲಿವೆ. ಉದಾಹರಣೆಗೆ, “ಬಾಲಕನಾದ ಸಮುವೇಲನು . . . ಯೆಹೋವನ ಸಾನಿಧ್ಯಸೇವೆಯನ್ನು ಮಾಡುತ್ತಿದ್ದನು.” (1 ಸಮು. 2:18) ನಾಮಾನನ ಕುಷ್ಠರೋಗವನ್ನು ಇಸ್ರಾಯೇಲಿನ ಯೆಹೋವನ ಪ್ರವಾದಿಯು ವಾಸಿಮಾಡಬಲ್ಲನೆಂದು ನಾಮಾನನ ಪತ್ನಿಗೆ ತಿಳಿಸಿದವಳು ಒಬ್ಬಳು ಚಿಕ್ಕ ‘ಹುಡುಗಿಯೇ.’ (2 ಅರ. 5:1-3) ಯೇಸು ದೇವಾಲಯವನ್ನು ಪ್ರವೇಶಿಸಿ ಸೂಚಕಕಾರ್ಯಗಳನ್ನು ಮಾಡಿದಾಗ, “ದಾವೀದನ ಕುಮಾರನಿಗೆ ಜಯಜಯ” ಎಂದು ಕೂಗಿದವರು ಚಿಕ್ಕ ಹುಡುಗರಾಗಿದ್ದರು. (ಮತ್ತಾ. 21:15) ಹೀಗೆ ಹೆತ್ತವರು ತಮ್ಮ ಮಕ್ಕಳಿಗೆ ಯೆಹೋವನನ್ನು ಸ್ತುತಿಸಲು ಕಲಿಸಸಾಧ್ಯವಿದೆ. ಆದರೆ ಹೇಗೆ?
2. ಹೆತ್ತವರು ತಮ್ಮ ಮಕ್ಕಳಿಗಾಗಿ ಒಳ್ಳೆಯ ಮಾದರಿಯನ್ನಿಡುವುದು ಏಕೆ ಪ್ರಾಮುಖ್ಯ?
2 ಮಾದರಿ: ತಮ್ಮ ಮಕ್ಕಳ ಹೃದಯಗಳಲ್ಲಿ ಸತ್ಯವನ್ನು ಬೇರೂರಿಸುವ ಮುಂಚೆ, ಮೊದಲಾಗಿ ಸ್ವತಃ ತಾವೇ ಯೆಹೋವನನ್ನು ಪ್ರೀತಿಸುವಂತೆ ಮತ್ತು ಆತನ ಆಜ್ಞೆಗಳನ್ನು ತಮ್ಮ ಸ್ವಂತ ಹೃದಯದಲ್ಲಿ ಇಟ್ಟುಕೊಳ್ಳುವಂತೆ ಇಸ್ರಾಯೇಲ್ಯರ ತಂದೆಯಂದಿರಿಗೆ ಸೂಚಿಸಲಾಗಿತ್ತು. (ಧರ್ಮೋ. 6:5-9) ಶುಶ್ರೂಷೆಯ ಕುರಿತು ನೀವು ಯಾವಾಗಲೂ ಉತ್ತೇಜಕವಾಗಿ ಮಾತಾಡುವುದಾದರೆ ಮತ್ತು ಅದು ನಿಮ್ಮ ವಾರದ ಶೆಡ್ಯೂಲಿನ ಭಾಗವಾಗಿರುವುದಾದರೆ, ನಿಮ್ಮ ಮಕ್ಕಳು ಶುಶ್ರೂಷೆಯನ್ನು ಪ್ರಾಮುಖ್ಯವೂ ಸಂತೃಪ್ತಿಕರವೂ ಆಗಿ ಕಾಣುವಂತೆ ಪ್ರೇರಿಸಲ್ಪಡುವರು.
3. ಒಬ್ಬಳು ಸಹೋದರಿ ತನ್ನ ಹೆತ್ತವರ ಮಾದರಿಯಿಂದ ಹೇಗೆ ಪ್ರಯೋಜನ ಪಡೆದಳು?
3 ಒಬ್ಬಳು ಸಹೋದರಿಯು ಮೆಚ್ಚಿನಿಂದ ನೆನಪಿಸಿಕೊಳ್ಳುವುದು: “ನಾನು ಚಿಕ್ಕವಳಾಗಿದ್ದಾಗ, ನಮ್ಮ ಕುಟುಂಬದ ನಿಯತಕ್ರಮದಲ್ಲಿ ಪ್ರತಿವಾರಾಂತ್ಯ ತಪ್ಪದೆ ಶುಶ್ರೂಷೆಯಲ್ಲಿ ಭಾಗವಹಿಸುವುದು ಸೇರಿತ್ತು. ನನ್ನ ಹೆತ್ತವರು ಸಾರುವ ಕಾರ್ಯದಲ್ಲಿ ನಿಜವಾಗಿ ಆನಂದಿಸುತ್ತಿದ್ದುದನ್ನು ನಾನು ಕಂಡಿದ್ದೆ. ಶುಶ್ರೂಷೆಯನ್ನು ಆನಂದದಾಯಕ ವಿಷಯವಾಗಿ ವೀಕ್ಷಿಸುತ್ತಾ ನಾವು ಬೆಳೆದೆವು.” ಈ ಸಹೋದರಿಯು ಏಳು ವಯಸ್ಸಿನಲ್ಲಿ ಅಸ್ನಾತ ಪ್ರಚಾರಕಳಾದಳು ಮತ್ತು ಈಗ 32ಕ್ಕಿಂತಲೂ ಹೆಚ್ಚು ವರ್ಷಗಳಿಂದ ಪೂರ್ಣಸಮಯದ ಸೇವೆಯಲ್ಲಿದ್ದಾಳೆ.
4. ಮಕ್ಕಳನ್ನು ಪ್ರಗತಿಪರವಾಗಿ ತರಬೇತು ಮಾಡುವುದರ ಅರ್ಥವೇನು?
4 ಪ್ರಗತಿಪರ ತರಬೇತಿ: ಶುಶ್ರೂಷೆಯಲ್ಲಿ ನೀವು ಪಾಲಿಗರಾಗುವಾಗ ನಿಮ್ಮ ಮಕ್ಕಳನ್ನೂ ಒಳಗೂಡಿಸಿರಿ. ಪ್ರಾಯಶಃ ಅವರು ಕರೆಗಂಟೆಯನ್ನು ಒತ್ತಿ, ಮನೆಯವನಿಗೆ ಒಂದು ಟ್ರ್ಯಾಕ್ಟನ್ನು ಕೊಡಬಹುದು ಇಲ್ಲವೆ ಒಂದು ವಚನವನ್ನು ಓದಿಹೇಳಬಹುದು. ಇದು ಮಕ್ಕಳ ಸಂತೋಷವನ್ನು ಹೆಚ್ಚಿಸುವುದು ಮಾತ್ರವಲ್ಲ ರಾಜ್ಯಸಂದೇಶವನ್ನು ಹಂಚಲು ಅವರಿಗಿರುವ ಸಾಮರ್ಥ್ಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು. ಅವರು ಬೆಳೆಯುತ್ತಾ ಬಂದಂತೆ ಶುಶ್ರೂಷೆಯಲ್ಲಿ ಅವರ ಪಾಲ್ಗೊಳ್ಳುವಿಕೆಯು ಇನ್ನೂ ಹೆಚ್ಚಾಗಬೇಕು. ಆದುದರಿಂದ ಅವರು ಪ್ರಗತಿಪರರಾಗುವಂತೆ ಮತ್ತು ಅದಕ್ಕಾಗಿ ಆಧ್ಯಾತ್ಮಿಕ ಗುರಿಗಳನ್ನಿಡುವಂತೆ ಸಹಾಯ ಮಾಡಿರಿ.
5 ಒಬ್ಬ ಅಸ್ನಾತ ಪ್ರಚಾರಕನಾಗಿ ಅರ್ಹತೆ ಪಡೆಯುವುದಕ್ಕೆ ಹುಡುಗನೊಬ್ಬನಿಗೆ ಏನು ಅಗತ್ಯವಿದೆ?
5 ನಿಮ್ಮ ಮಕ್ಕಳು ಅಸ್ನಾತ ಪ್ರಚಾರಕರಾಗಲು ಅರ್ಹರೆಂದು ನಿಮಗೆ ತಿಳಿದಕೂಡಲೆ ಮತ್ತು ಮಕ್ಕಳು ತಾವೇ ಆ ಅಪೇಕ್ಷೆಯನ್ನು ವ್ಯಕ್ತಪಡಿಸುವಾಗ ಹಿರಿಯರೊಂದಿಗೆ ಮಾತಾಡಿನೋಡಿರಿ. ಒಬ್ಬ ಪ್ರಚಾರಕರಾಗಿರುವ ವಿಷಯವು ತಾನೇ ಯೆಹೋವನನ್ನು ಸ್ತುತಿಸುವ ಮಕ್ಕಳ ವೈಯಕ್ತಿಕ ಜವಾಬ್ದಾರಿಯನ್ನು ಅವರ ಮೇಲೆ ಬಲವಾಗಿ ಅಚ್ಚೊತ್ತುವುದು. ಒಬ್ಬ ಹುಡುಗನಿಗೆ ಅರ್ಹತೆಯನ್ನು ಪಡೆಯುವ ಮುಂಚೆ ದೀಕ್ಷಾಸ್ನಾನ ಪಡೆದ ವಯಸ್ಕನಷ್ಟು ಸತ್ಯದ ಜ್ಞಾನವಿರಬೇಕಾದ ಅಗತ್ಯವಿಲ್ಲವೆಂಬುದನ್ನು ನೆನಪಿನಲ್ಲಿಡಿರಿ. ನಿಮ್ಮ ಮಗನು ಬೈಬಲಿನ ಪ್ರಧಾನ ಬೋಧನೆಗಳನ್ನು ತಿಳಿದಿರುತ್ತಾನೋ? ಬೈಬಲಿನ ನೈತಿಕ ಮಟ್ಟಗಳನ್ನು ಪಾಲಿಸುತ್ತಾನೋ? ಶುಶ್ರೂಷೆಯಲ್ಲಿ ಪಾಲಿಗನಾಗಲು ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ಗುರುತಿಸಲ್ಪಡಲು ಅವನು ಬಯಸುತ್ತಾನೊ? ಹಾಗಿರುವಲ್ಲಿ ಹಿರಿಯರು ಅವನು ಅಸ್ನಾತ ಪ್ರಚಾರಕನಾಗಲು ಅರ್ಹನೆಂಬುದಾಗಿ ನಿರ್ಣಯಿಸಬಹುದು.—ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು, ಪುಟ. 79-82ನ್ನು ನೋಡಿ.
6. ತಮ್ಮ ಮಕ್ಕಳನ್ನು ತರಬೇತಿಗೊಳಿಸುವುದು ಹೆತ್ತವರಿಗೆ ಪ್ರತಿಫಲದಾಯಕ ಏಕೆ?
6 ಮಕ್ಕಳು ಹೃದಯಪೂರ್ವಕವಾಗಿ ಯೆಹೋವನನ್ನು ಸ್ತುತಿಸುವಂತೆ ಕಲಿಸುವುದರಲ್ಲಿ ಬಹಳಷ್ಟು ಪ್ರಯತ್ನವು ಸೇರಿರುತ್ತದೆ. ಆದರೂ ಹೆತ್ತವರಿಗೆ ತಮ್ಮ ಮಕ್ಕಳ ಆಧ್ಯಾತ್ಮಿಕ ಪ್ರಗತಿಯಿಂದಾಗುವಷ್ಟು ಸಂತೋಷವು ಬೇರೆ ಹೆಚ್ಚು ವಿಷಯಗಳಿಂದ ದೊರೆಯಲಾರದು. ಇದಕ್ಕಿಂತಲೂ ಪ್ರಮುಖವಾಗಿ, ಮಕ್ಕಳು ಯೆಹೋವನ ಮಹತ್ಕಾರ್ಯಗಳ ಕುರಿತು ತಿಳಿಸುತ್ತಾ ಇರುವಾಗ ಆತನ ಹೃದಯವು ಹರ್ಷಿಸುವುದಂತೂ ನಿಶ್ಚಯ.