ನಿಮ್ಮ ಸಮಯವನ್ನು ವಿವೇಕದಿಂದ ಉಪಯೋಗಿಸಿರಿ
1 ಯೆಹೋವನನ್ನು ಸಂತೋಷಪಡಿಸುವ ನಮ್ಮ ಬಯಕೆಯು, ನಮ್ಮ ಜೀವನಗಳನ್ನು ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸುವಂತೆ ಪ್ರೇರಿಸುತ್ತದೆ. ಆತನ ವಾಕ್ಯವು ನಮ್ಮನ್ನು ‘ಮೊದಲು ರಾಜ್ಯಕ್ಕಾಗಿ [ಹುಡುಕುವಂತೆ]’ ಮತ್ತು ‘ಉತ್ತಮ ಕಾರ್ಯಗಳನ್ನು ವಿವೇಚಿಸಿ’ ತಿಳಿದುಕೊಳ್ಳುವಂತೆ ಉಪದೇಶಿಸುತ್ತದೆ. (ಮತ್ತಾ. 6:33; ಫಿಲಿ. 1:10) ನಾವು ರಾಜ್ಯದ ಅಭಿರುಚಿಗಳಿಗಾಗಿ ಸಮಯವನ್ನು ಖರೀದಿಸಿ ಹೆಚ್ಚು ಪ್ರಾಮುಖ್ಯವಲ್ಲದ ಚಟುವಟಿಕೆಗಳನ್ನು ದ್ವಿತೀಯ ಸ್ಥಾನದಲ್ಲಿ ಇಡುವುದು ಹೇಗೆ?—ಎಫೆ. 5:15-17.
2 ರಾಜ್ಯದ ಚಟುವಟಿಕೆಗಳಿಗೆ ಆದ್ಯತೆ: ನಿಮ್ಮ ಸಮಯವು ಅನಾವಶ್ಯಕವಾದ ವಿಷಯಗಳ ಹಿಂದೆ ವ್ಯರ್ಥವಾಗಿ ವ್ಯಯಿಸಲ್ಪಡುವುದನ್ನು ತಡೆಗಟ್ಟಲಿಕ್ಕಾಗಿ ಸಮಯವನ್ನು ಶೆಡ್ಯೂಲ್ ಮಾಡಿರಿ. ಕೆಲವರು ತಮ್ಮ ಕ್ಯಾಲೆಂಡರ್ಗಳಲ್ಲಿ ಕ್ಷೇತ್ರ ಸೇವೆಗಾಗಿರುವ ನಿರ್ದಿಷ್ಟ ಸಮಯಗಳನ್ನು ಗುರುತುಮಾಡುವ ಮೂಲಕ ಪ್ರತಿ ತಿಂಗಳನ್ನು ಆರಂಭಿಸುತ್ತಾರೆ. ಅನಂತರ, ಬೇರಾವುದೇ ವಿಷಯವು ಆ ಸಮಯವನ್ನು ಕಬಳಿಸಿಬಿಡದಂತೆ ನೋಡಿಕೊಳ್ಳುತ್ತಾರೆ. ಕೂಟಗಳಿಗಾಗಿ, ವೈಯಕ್ತಿಕ ಅಧ್ಯಯನಕ್ಕಾಗಿ ಮತ್ತು ಅಧಿವೇಶನಗಳಿಗಾಗಿ ಸಮಯವನ್ನು ಖರೀದಿಸಲು ಸಹ ನಾವು ಇದನ್ನೇ ಮಾಡಬಹುದು. ಅನೇಕರು ತಮ್ಮ ದಿನವನ್ನು ಬೈಬಲ್ ಓದುವಿಕೆಯೊಂದಿಗೆ ಆರಂಭಿಸುವ ಅಥವಾ ಮುಗಿಸುವ ಶೆಡ್ಯೂಲನ್ನು ಹೊಂದಿದ್ದಾರೆ. ಪ್ರತಿಯೊಂದು ಪ್ರಮುಖ ಚಟುವಟಿಕೆಗಾಗಿ ಒಂದು ನಿರ್ದಿಷ್ಟ ಸಮಯವನ್ನು ಬದಿಗಿರಿಸಿರಿ ಮತ್ತು ಬೇರಾವುದೇ ವಿಷಯವು ಅದರ ಮಧ್ಯೆ ಬರದಂತೆ ನೋಡಿಕೊಳ್ಳಿ.—ಪ್ರಸಂ. 3:1; 1 ಕೊರಿಂ. 14:40.
3 ಲೋಕವನ್ನು ಉಪಯೋಗಿಸುವುದನ್ನು ಮಿತವಾಗಿರಿಸಿ: ಕೆಲವು ದೇಶಗಳಲ್ಲಿ ಕ್ರೀಡೆ, ಮನೋರಂಜನೆ, ವಿನೋದಾವಳಿ, ಹವ್ಯಾಸಗಳು ಮತ್ತು ಇತರ ಬೆನ್ನಟ್ಟುವಿಕೆಗಳು ಅತಿ ಸುಲಭದಲ್ಲಿ ಲಭ್ಯವಿರುತ್ತವೆ. ಅನೇಕರು ಟಿವಿ ನೋಡುವುದರಲ್ಲಿ ಅಥವಾ ಕಂಪ್ಯೂಟರನ್ನು ಉಪಯೋಗಿಸುವುದರಲ್ಲಿ ಅತಿ ಹೆಚ್ಚು ಸಮಯವನ್ನು ವ್ಯಯಿಸುತ್ತಾರೆ. ಆದರೂ, ವಿರಾಮ ಸಮಯದ ಚಟುವಟಿಕೆಗಳು ಮತ್ತು ಈ ಲೋಕವು ಒದಗಿಸುವ ಹೊಸ ಹೊಸ ಗ್ಯಾಜೆಟ್ಗಳನ್ನು ಉಪಯೋಗಿಸುವುದರಲ್ಲಿ ಮುಳುಗಿಹೋಗುವುದು ಕೇವಲ ನಿರಾಶೆಯನ್ನು ತರುವುದೆಂಬುದು ಖಂಡಿತ. (1 ಯೋಹಾ. 2:15-17) ಆದುದರಿಂದ, ಈ ಲೋಕವನ್ನು ಪರಿಪೂರ್ಣವಾಗಿ ಅನುಭೋಗಿಸದೆ ಇರುವಂತೆ ಶಾಸ್ತ್ರವಚನಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ. (1 ಕೊರಿಂ. 7:31) ಆ ವಿವೇಕಯುತ ಸಲಹೆಗೆ ಕಿವಿಗೊಡುವ ಮೂಲಕ, ಯೆಹೋವನ ಆರಾಧನೆಯು ನಿಮ್ಮ ಜೀವನದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂಬುದನ್ನು ನೀವು ಆತನಿಗೆ ತೋರಿಸಬಲ್ಲಿರಿ.—ಮತ್ತಾ. 6:19-21.
4 ಈ ವಿಷಯಗಳ ವ್ಯವಸ್ಥೆಗೆ ಉಳಿದಿರುವ ಸಮಯವು ಬೇಗನೆ ಕೊನೆಗೊಳ್ಳಲಿಕ್ಕಿದೆ. ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡುವವರು ಸಂತೋಷವನ್ನು ಮತ್ತು ದೇವರ ಅನುಗ್ರಹವನ್ನು ಪಡೆದುಕೊಳ್ಳುವರು. (ಜ್ಞಾನೋ. 8:32-35; ಯಾಕೋ. 1:25) ಆದುದರಿಂದ, ನಾವು ಸಮಯವೆಂಬ ಅಮೂಲ್ಯ ಸಂಪನ್ಮೂಲವನ್ನು ವಿವೇಕದಿಂದ ಉಪಯೋಗಿಸೋಣ.