ನೀವು ಯಾವುದಕ್ಕೆ ಪ್ರಥಮ ಸ್ಥಾನ ನೀಡುತ್ತೀರಿ?
1 ಈ ಪ್ರಶ್ನೆಗೆ ನಿಮ್ಮ ಉತ್ತರವೇನು? ನಾವೆಲ್ಲರೂ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಲಿಚ್ಛಿಸುತ್ತೇವೆಂಬುದು ನಿಜ. (ಮತ್ತಾ. 6:33) ಆದರೆ, ‘ನನ್ನ ಆಯ್ಕೆಗಳು ನಾನಿದನ್ನು ಮಾಡುತ್ತಿದ್ದೇನೆಂದು ತೋರಿಸುತ್ತವೊ?’ ಎಂಬ ಪ್ರಶ್ನೆಯನ್ನು ನಾವು ಸ್ವತಃ ಕೇಳಿಕೊಳ್ಳುವುದು ಉತ್ತಮ. “ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ” ಎಂದು ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. (2 ಕೊರಿಂ. 13:5) ಹೀಗಿರುವುದರಿಂದ, ನಾವು ರಾಜ್ಯವನ್ನು ಪ್ರಥಮವಾಗಿಡುತ್ತಿದ್ದೇವೆಂದು ಹೇಗೆ ಪರಿಶೋಧಿಸಿ ತಿಳಿದುಕೊಳ್ಳಬಹುದು?
2 ನಮ್ಮ ಸಮಯ: ನಮ್ಮ ಸಮಯವನ್ನು ಹೇಗೆ ಉಪಯೋಗಿಸುತ್ತಿದ್ದೇವೆ ಎಂದು ಪರೀಕ್ಷಿಸುವ ಮೂಲಕ ನಾವಿದನ್ನು ಆರಂಭಿಸಬಹುದು. (ಎಫೆ. 5:15, 16) ಇತರರೊಂದಿಗೆ ಸಾಮಾಜಿಕವಾಗಿ ಬೆರೆಯುವುದು, ಟೆಲಿವಿಷನ್ ನೋಡುವುದು, ಇಂಟರ್ನೆಟ್ ಉಪಯೋಗ ಅಥವಾ ಹವ್ಯಾಸವನ್ನು ಬೆನ್ನಟ್ಟುವುದು ಈ ಮುಂತಾದ ವಿಷಯಗಳಿಗಾಗಿ ಒಂದು ವಾರದಲ್ಲಿ ಎಷ್ಟು ಸಮಯವನ್ನು ವಿನಿಯೋಗಿಸಲಾಗುತ್ತಿದೆ? ಅಂಥ ವಿಷಯಗಳಿಗೆ ನಾವು ವ್ಯಯಿಸುವ ಸಮಯವನ್ನು ಬರೆದಿಟ್ಟು ಅದನ್ನು ಆಧ್ಯಾತ್ಮಿಕ ಚಟುವಟಿಕೆಗಳಿಗೆ ವ್ಯಯಿಸುವ ಸಮಯದೊಂದಿಗೆ ತುಲನೆ ಮಾಡುವುದಾದರೆ ನಮಗೆ ಆಶ್ಚರ್ಯವಾಗಬಹುದು. ನಾವು ಪವಿತ್ರ ಸೇವೆಯನ್ನು ಅಲಕ್ಷಿಸಿ ಐಷಾರಾಮದ ಜೀವನವನ್ನು ನಡೆಸಲಿಕ್ಕಾಗಿ ಓವರ್ಟೈಮ್ ಕೆಲಸಮಾಡುತ್ತಿದ್ದೇವೊ? ಮನೋರಂಜನೆಗಾಗಿ ವಾರಾಂತ್ಯದಲ್ಲಿ ಪ್ರಯಾಣಬೆಳೆಸಲು ನಾವೆಷ್ಟು ಸಲ ಕೂಟಗಳನ್ನು ಅಥವಾ ಕ್ಷೇತ್ರಸೇವೆಯನ್ನು ತಪ್ಪಿಸುತ್ತೇವೆ?
3 ಆದ್ಯತೆಗಳನ್ನು ಇಡುವುದು: ನಾವು ಬಯಸಿದ್ದೆಲ್ಲವನ್ನು ಮಾಡಲು ಸಾಕಷ್ಟು ಸಮಯ ನಮ್ಮಲ್ಲಿ ಹೆಚ್ಚಿನವರಿಗೆ ಇರುವುದಿಲ್ಲ. ಆದುದರಿಂದ, ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡಲು ನಾವು ನಮ್ಮ ಆದ್ಯತೆಗಳನ್ನು ತೂಗಿನೋಡಬೇಕು ಮತ್ತು ‘ಉತ್ತಮ ಕಾರ್ಯಗಳಿಗಾಗಿ’ ಸಮಯವನ್ನು ಶೆಡ್ಯೂಲ್ ಮಾಡಬೇಕು. (ಫಿಲಿ. 1:10) ಇದು ದೇವರ ವಾಕ್ಯದ ಅಧ್ಯಯನ, ಶುಶ್ರೂಷೆಯಲ್ಲಿ ಭಾಗವಹಿಸುವುದು, ಕುಟುಂಬವನ್ನು ಪರಾಮರಿಸುವುದು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ಒಳಗೂಡುತ್ತದೆ. (ಕೀರ್ತ. 1:1, 2; ರೋಮಾ. 10:13, 14; 1 ತಿಮೊ. 5:8; ಇಬ್ರಿ. 10:24, 25) ಮಿತವಾದ ವ್ಯಾಯಾಮ ಮತ್ತು ಹಿತವಾದ ಮನೋರಂಜನೆಯಂಥ ಇತರ ಚಟುವಟಿಕೆಗಳು ಪ್ರಯೋಜನಕರ. (ಮಾರ್ಕ 6:31; 1 ತಿಮೊ. 4:8) ಆದರೆ ಹೆಚ್ಚು ಪ್ರಾಮುಖ್ಯವಲ್ಲದ ಈ ವಿಷಯಗಳು ರಾಜ್ಯಾಭಿರುಚಿಗಳನ್ನು ಕಬಳಿಸಿಬಿಡಬಾರದು.
4 ಒಬ್ಬ ಯುವ ಸಹೋದರನು, ಐಹಿಕ ಉದ್ಯೋಗ ಪಡೆಯುವುದಕ್ಕಾಗಿ ಉನ್ನತ ಶಿಕ್ಷಣವನ್ನು ಬೆನ್ನಟ್ಟದೆ ಪೂರ್ಣಸಮಯದ ಸೇವೆಯನ್ನು ಆರಂಭಿಸುವ ಮೂಲಕ ರಾಜ್ಯಾಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿಟ್ಟನು. ಮತ್ತು ಅವನು ಬೇರೊಂದು ಭಾಷೆಯನ್ನು ಕಲಿತು ಹೆಚ್ಚು ಅಗತ್ಯವಿದ್ದ ಇನ್ನೊಂದು ಸ್ಥಳಕ್ಕೆ ಹೋದನು. ಅವನು ಹೇಳಿದ್ದು: “ನಾನು ಇಲ್ಲಿ ನನ್ನ ಜೀವಿತವನ್ನು ಬಹಳವಾಗಿ ಆನಂದಿಸುತ್ತಿದ್ದೇನೆ. ಶುಶ್ರೂಷೆಯು ಎಷ್ಟು ಚೈತನ್ಯದಾಯಕವಾಗಿದೆ! ಪ್ರತಿಯೊಬ್ಬ ಯುವ ವ್ಯಕ್ತಿಯೂ ಇದನ್ನೇ ಮಾಡಬೇಕು ಮತ್ತು ನಾನು ಆನಂದಿಸುತ್ತಿರುವ ಅದೇ ಆನಂದವನ್ನು ಸವಿದುನೋಡಬೇಕೆಂದು ನಾನು ಹಾರೈಸುತ್ತೇನೆ. ಪೂರ್ಣಪ್ರಾಣದಿಂದ ನಾವು ಯೆಹೋವನನ್ನು ಸೇವಿಸುವುದಕ್ಕಿಂತ ಮಿಗಿಲಾದ ವಿಷಯವು ಇನ್ನೊಂದಿಲ್ಲ.” ಹೌದು, ರಾಜ್ಯವನ್ನು ಪ್ರಥಮವಾಗಿಡುವುದು ನಮಗೆ ಆಶೀರ್ವಾದಗಳನ್ನು ತರುತ್ತದೆ ಮತ್ತು ಹೆಚ್ಚು ಪ್ರಾಮುಖ್ಯವಾಗಿ ಅದು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನನ್ನು ಸಂತೋಷಪಡಿಸುತ್ತದೆ.—ಇಬ್ರಿ. 6:10.