ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ
1 ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳನ್ನು ಬಲಪಡಿಸಲಿಕ್ಕಾಗಿ ತನ್ನಿಂದಾದುದೆಲ್ಲವನ್ನೂ ಮಾಡಿದನು. (ಅ. ಕೃ. 14:19-22) ತದ್ರೀತಿಯಲ್ಲಿ, ನಮ್ಮ ಸಹೋದರರು ಕಷ್ಟಕರ ಸನ್ನಿವೇಶಗಳನ್ನು ಎದುರಿಸುವಾಗ ನಾವು ಅವರ ಬಗ್ಗೆ ಚಿಂತಿಸುತ್ತೇವೆ ಮತ್ತು ಅವರಿಗೆ ಸಹಾಯವನ್ನು ನೀಡಲು ಬಯಸುತ್ತೇವೆ. ಹಿರಿಯರು ಮಾತ್ರವಲ್ಲದೆ ನಾವೆಲ್ಲರೂ ಇತರರಲ್ಲಿ ಆಸಕ್ತಿ ವಹಿಸಬೇಕು ಎಂದು ಬೈಬಲ್ ಸೂಚಿಸುತ್ತದೆ. (ರೋಮಾ. 15:1, 2) “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ” ಎಂಬ ಪ್ರೀತಿಭರಿತ ಉತ್ತೇಜನವನ್ನು ನಾವು ಅನುಸರಿಸಬಲ್ಲ ಎರಡು ವಿಧಗಳನ್ನು ಪರಿಗಣಿಸೋಣ.—1 ಥೆಸ. 5:11.
2 ಇತರರ ಅಗತ್ಯಗಳೇನೆಂಬುದನ್ನು ಗ್ರಹಿಸಿರಿ: ದೊರ್ಕಳು “ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು” ಎಂದು ದೇವರ ವಾಕ್ಯವು ವರದಿಸುತ್ತದೆ. (ಅ. ಕೃ. 9:36, 39) ಯಾರು ಅಗತ್ಯದಲ್ಲಿ ಬಿದ್ದಿದ್ದರೋ ಅವರನ್ನು ಅವಳು ಗಮನಿಸಿದಳು ಮತ್ತು ಅವರಿಗೆ ತನ್ನಿಂದಾದ ಸಹಾಯವನ್ನು ನೀಡಿದಳು. ಅವಳು ನಮಗೆ ಎಂತಹ ಉತ್ತಮ ಮಾದರಿಯನ್ನಿಟ್ಟಿದ್ದಾಳೆ! ಕೂಟಕ್ಕೆ ಬರಲು ಒಬ್ಬ ವೃದ್ಧ ಸಹೋದರ ಅಥವಾ ಸಹೋದರಿಗೆ ಸಹಾಯದ ಅಗತ್ಯವಿದೆ ಎಂದು ನೀವು ತಿಳಿದುಕೊಳ್ಳಬಹುದು. ಅಥವಾ ಒಬ್ಬ ಪಯನೀಯರರಿಗೆ ವಾರದಲ್ಲಿ ಒಂದು ದಿನ ಮಧ್ಯಾಹ್ನ ಅವರ ಜೊತೆಯಲ್ಲಿ ಸೇವೆಮಾಡಲು ಯಾರೂ ಇಲ್ಲದಿರಬಹುದು. ಇಂತಹ ಒಂದು ಅಗತ್ಯವಿದೆ ಎಂಬುದನ್ನು ಗ್ರಹಿಸಿ ನೀವು ಪ್ರಾಯೋಗಿಕ ನೆರವನ್ನು ನೀವು ನೀಡುವುದಾದರೆ, ಈ ನೆರವನ್ನು ಪಡೆದುಕೊಳ್ಳುವವರಿಗೆ ಎಷ್ಟು ಉತ್ತೇಜನ ಸಿಗುವುದು ಎಂಬುದನ್ನು ತುಸು ಊಹಿಸಿ ನೋಡಿ!
3 ಆಧ್ಯಾತ್ಮಿಕ ಸಂಭಾಷಣೆಗಳು: ನಾವು ನಮ್ಮ ಮಾತಿನ ಮೂಲಕವೂ ಇತರರ ಭಕ್ತಿವೃದ್ಧಿ ಮಾಡಸಾಧ್ಯವಿದೆ. (ಎಫೆ. 4:29) ಅನುಭವಸ್ಥ ಹಿರಿಯನೊಬ್ಬನು ತಾನು ಅವಲೋಕಿಸಿದ್ದನ್ನು ಹೀಗೆ ತಿಳಿಸಿದನು: “ನಿಮ್ಮ ಮಾತು ಉತ್ತೇಜನದಾಯಕವಾಗಿರಬೇಕಾದರೆ, ಆಧ್ಯಾತ್ಮಿಕ ವಿಷಯಗಳ ಕುರಿತು ಮಾತಾಡಿರಿ. ಭಕ್ತಿವೃದ್ಧಿಮಾಡುವಂಥ ಸಂಭಾಷಣೆಯನ್ನು ಆರಂಭಿಸಲಿಕ್ಕಾಗಿ, ‘ನೀವು ಸತ್ಯವನ್ನು ಹೇಗೆ ಕಲಿತಿರಿ?’ ಎಂಬ ಸರಳವಾದ ಪ್ರಶ್ನೆ ಸಾಕು.” ಸಭೆಯಲ್ಲಿರುವ ಯುವ ಜನರಲ್ಲಿ ಪ್ರಾಮಾಣಿಕ ಆಸಕ್ತಿಯನ್ನು ತೋರಿಸಿರಿ. ನಿರುತ್ತೇಜಿತರಾಗಿರುವವರಿಗೆ ಮತ್ತು ನಾಚಿಕೆ ಸ್ವಭಾವದವರಿಗೆ ವಿಶೇಷ ಅಕ್ಕರೆಯನ್ನು ತೋರಿಸಿ. (ಜ್ಞಾನೋ. 12:25) ಲೌಕಿಕ ಮನೋರಂಜನೆಯ ಕುರಿತಾದ ಮಾತುಕತೆಯು ಜೊತೆ ವಿಶ್ವಾಸಿಗಳೊಂದಿಗಿನ ಆಧ್ಯಾತ್ಮಿಕ ಚರ್ಚೆಗಳನ್ನು ಬದಿಗೊತ್ತುವಂತೆ ಅನುಮತಿಸಬೇಡಿ.—ರೋಮಾ. 1:11, 12.
4 ಇತರರ ಭಕ್ತಿವೃದ್ಧಿಮಾಡಲಿಕ್ಕಾಗಿ ನೀವು ಏನು ಹೇಳಸಾಧ್ಯವಿದೆ? ನಿಮ್ಮ ವೈಯಕ್ತಿಕ ಬೈಬಲ್ ವಾಚನ ಮತ್ತು ಅಧ್ಯಯನದಲ್ಲಿ, ಯೆಹೋವನಿಗಾಗಿರುವ ನಿಮ್ಮ ಗಣ್ಯತೆಯನ್ನು ಗಾಢಗೊಳಿಸಿದ ಯಾವುದೇ ಮೂಲತತ್ತ್ವವನ್ನು ನೀವು ಇತ್ತೀಚೆಗೆ ಕಂಡುಕೊಂಡಿರೋ? ನೀವು ಸಾರ್ವಜನಿಕ ಭಾಷಣ ಅಥವಾ ಕಾವಲಿನಬುರುಜು ಅಧ್ಯಯನದಲ್ಲಿ ಕೇಳಿಸಿಕೊಂಡ ಒಂದು ಸಂಗತಿಯು ನಿಮ್ಮನ್ನು ಆಳವಾಗಿ ಪ್ರಭಾವಿಸಿತೋ? ಅಥವಾ ನಂಬಿಕೆಯನ್ನು ಬಲಪಡಿಸುವಂಥ ಒಂದು ಅನುಭವವು ನಿಮ್ಮ ಮನಸ್ಸನ್ನು ಸ್ಪರ್ಶಿಸಿತೋ? ನೀವು ಇಂತಹ ಆಧ್ಯಾತ್ಮಿಕ ರತ್ನಗಳನ್ನು ಶೇಖರಿಸಿಕೊಳ್ಳುವುದಾದರೆ, ಇತರರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ನಿಮ್ಮ ಬಳಿ ಯಾವಾಗಲೂ ಉತ್ತೇಜನದಾಯಕವಾದ ಯಾವುದಾದರೂ ವಿಷಯವು ಇರುವುದು.—ಜ್ಞಾನೋ. 2:1; ಲೂಕ 6:45.
5 ಪ್ರಾಯೋಗಿಕ ನೆರವನ್ನು ನೀಡುವ ಮೂಲಕ ಮತ್ತು ನಮ್ಮ ನಾಲಿಗೆಯನ್ನು ವಿವೇಕಯುತವಾಗಿ ಉಪಯೋಗಿಸುವ ಮೂಲಕ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರೋಣ.—ಜ್ಞಾನೋ. 12:18.