ಪರೋಪಕಾರವನ್ನು ಮಾಡಿರಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿರಿ
1 ದೊರ್ಕಳು “ಸತ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.” (ಅ. ಕೃ. 9:36, 39) ಅವಳ ಉದಾರ ಮನೋಭಾವದಿಂದಾಗಿ, ಅವಳ ಪರಿಚಯವಿದ್ದ ಜನರಿಗೆ ಮತ್ತು ಯೆಹೋವ ದೇವರಿಗೆ ಅವಳು ಪ್ರೀತಿಪಾತ್ರಳಾದಳು. ಇಬ್ರಿಯ 13:16 ಹೇಳುವುದು: “ಪರೋಪಕಾರವನ್ನೂ ಧರ್ಮಮಾಡುವದನ್ನೂ [“ಇತರರೊಂದಿಗೆ ಹಂಚಿಕೊಳ್ಳುವದನ್ನೂ,” NW] ಮರೆಯಬೇಡಿರಿ; ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.” ಪರೋಪಕಾರವನ್ನೂ ಇತರರೊಂದಿಗೆ ಹಂಚಿಕೊಳ್ಳುವದನ್ನೂ ಇಂದು ನಾವು ಹೇಗೆ ಮಾಡಬಲ್ಲೆವು?
2 ಇದನ್ನು ಮಾಡುವ ಒಂದು ವಿಧವು, ನಮ್ಮ “ಆದಾಯ”ವನ್ನು ಹಂಚಿಕೊಳ್ಳುವ ಮೂಲಕ ನಾವು ಇತರರಿಗೆ ಪ್ರಯೋಜನವನ್ನು ತರಬಲ್ಲೆವು. (ಜ್ಞಾನೋ. 3:9) ಲೋಕವ್ಯಾಪಕ ಕೆಲಸಕ್ಕಾಗಿ ನಾವು ನೀಡುವ ದಾನಗಳು, ಲೋಕದ ಸುತ್ತಲೂ ರಾಜ್ಯ ಸಭಾಗೃಹಗಳನ್ನು, ಸಮ್ಮೇಳನ ಹಾಲ್ಗಳನ್ನು ಮತ್ತು ಬ್ರಾಂಚ್ ಸೌಕರ್ಯಗಳನ್ನು ಕಟ್ಟುವುದನ್ನು ಸಾಧ್ಯಗೊಳಿಸುತ್ತವೆ. ಲಕ್ಷಾಂತರ ಜನರು ದೇವಪ್ರಭುತ್ವಾತ್ಮಕ ಬೋಧನೆಯಿಂದ ಮತ್ತು ಭಕ್ತಿವೃದ್ಧಿಯನ್ನುಂಟುಮಾಡುವಂಥ ಸಹವಾಸದಿಂದ ಪ್ರಯೋಜನವನ್ನು ಹೊಂದುವುದನ್ನು ನಮ್ಮ ಉದಾರ ಮನೋಭಾವವು ಸಾಧ್ಯಗೊಳಿಸಿದೆ.
3 ಸಾಂತ್ವನವನ್ನು ನೀಡುವುದು: ವಿಪತ್ತು ಬಂದೆರಗುವಾಗ, ಯೆಹೋವನ ಜನರು ತಮ್ಮ ಜೊತೆ ವಿಶ್ವಾಸಿಗಳಿಗೆ ಮತ್ತು ತಮ್ಮಂಥದ್ದೇ ನಂಬಿಕೆಯನ್ನು ಹೊಂದಿರದವರಿಗೂ ‘ಒಳ್ಳೇದನ್ನು ಮಾಡಲು’ ಸಿದ್ಧರಿರುತ್ತಾರೆ. (ಗಲಾ. 6:10) ಫ್ರಾನ್ಸ್ನ ಒಂದು ರಾಸಾಯನಿಕ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದ ನಂತರ ಆ ಸ್ಥಾವರದ ಹತ್ತಿರದಲ್ಲಿ ವಾಸಿಸುತ್ತಿದ್ದ ಒಂದು ದಂಪತಿ ತಿಳಿಸಿದ್ದು: “ಕಟ್ಟಡದಲ್ಲಿದ್ದ ನಮ್ಮ ಮತ್ತು ಇತರರ ಮನೆಗಳನ್ನು ಸ್ವಚ್ಛಗೊಳಿಸುವುದರಲ್ಲಿ ಸಹಾಯಮಾಡಲು ನಮ್ಮ ಕ್ರೈಸ್ತ ಸಹೋದರರು ಕೂಡಲೆ ಧಾವಿಸಿಬಂದರು. ಅಷ್ಟೊಂದು ಜನರು ಸಹಾಯಕ್ಕಾಗಿ ಬಂದದ್ದನ್ನು ನೋಡಿ ನಮ್ಮ ನೆರೆಯವರು ಆಶ್ಚರ್ಯಪಟ್ಟರು.” ಇನ್ನೊಬ್ಬ ಸಹೋದರಿಯು ಕೂಡಿಸಿದ್ದು: “ನಮಗೆ ನೆರವು ನೀಡಲು ಹಿರಿಯರೆಲ್ಲರೂ ನಮ್ಮಲ್ಲಿಗೆ ಬಂದಿದ್ದರು. ಅವರು ನಮ್ಮನ್ನು ಉತ್ತೇಜಿಸಲು ಬಂದರು. ವಾಸ್ತವದಲ್ಲಿ, ಆ ಸಮಯದಲ್ಲಿ ನಮಗೆ ಭೌತಿಕ ಸಹಾಯಕ್ಕಿಂತ ಉತ್ತೇಜನವೇ ಹೆಚ್ಚು ಅಗತ್ಯವಾಗಿತ್ತು.”
4 ನಮ್ಮ ನೆರೆಯವರಿಗೆ ಉಪಕಾರವನ್ನು ಮಾಡಲು ಅನೇಕ ವಿಧಗಳಿದ್ದರೂ, ಅವರೊಂದಿಗೆ ಸತ್ಯದ ಅಮೂಲ್ಯ ಜ್ಞಾನವನ್ನು ಹಂಚಿಕೊಳ್ಳುವುದೇ ನಾವು ಅವರಿಗೆ ಮಾಡುವ ಅತಿ ಪ್ರಯೋಜನಕಾರಿ ಸಹಾಯವಾಗಿದೆ. ಇದರಲ್ಲಿ, ಸ್ವತಃ ಯೆಹೋವನೇ ವಾಗ್ದಾನಿಸಿರುವ ‘ನಿತ್ಯಜೀವದ’ ನಿರೀಕ್ಷೆಯು ಸೇರಿದೆ. (ತೀತ 1:1, 2) ಬೈಬಲ್ ಸಂದೇಶವು, ಲೋಕದ ಪರಿಸ್ಥಿತಿಗಳ ಕಾರಣ ಮತ್ತು ತಮ್ಮ ಸ್ವಂತ ಪಾಪಮಯ ಸ್ಥಿತಿಯ ಕಾರಣ ಗೋಳಾಡುತ್ತಿರುವವರಿಗೆ ನಿಜ ಸಾಂತ್ವನವನ್ನು ನೀಡುತ್ತದೆ. (ಮತ್ತಾ. 5:4) ನಮ್ಮ ಕೈಲಾದಾಗ ನಾವು ಪರೋಪಕಾರವನ್ನು ಮಾಡೋಣ ಮತ್ತು ಇತರರೊಂದಿಗೆ ಹಂಚಿಕೊಳ್ಳೋಣ.—ಜ್ಞಾನೋ. 3:27.