‘ಹೃದಯದಿಂದ ವಿಧೇಯರಾಗುವಂತೆ’ ಇತರರಿಗೆ ಸಹಾಯಮಾಡಿರಿ
1. ಯೆಹೋವನು ತನ್ನ ಆರಾಧಕರಿಂದ ಏನನ್ನು ಅಪೇಕ್ಷಿಸುತ್ತಾನೆ?
1 ಯೆಹೋವನನ್ನು ಅಂಗೀಕಾರಾರ್ಹವಾಗಿ ಆರಾಧಿಸಬೇಕಾದರೆ ವಿಧೇಯತೆಯು ಅತ್ಯಾವಶ್ಯಕ. (ಧರ್ಮೋ. 12:28; 1 ಪೇತ್ರ 1:14-16) ಶೀಘ್ರವೇ, “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ [ವಿಧೇಯರಾಗದವರಿಗೂ]” ದೇವರು ನ್ಯಾಯತೀರ್ಪನ್ನು ತರುವನು. (2 ಥೆಸ. 1:8) ಹಾಗಾದರೆ, ದೇವರ ವಾಕ್ಯದ ಬೋಧನೆಗಳಿಗೆ ‘ಹೃದಯದಿಂದ ವಿಧೇಯರಾಗುವಂತೆ’ ನಾವು ಇತರರಿಗೆ ಹೇಗೆ ಸಹಾಯಮಾಡಬಲ್ಲೆವು?—ರೋಮಾ. 6:17, NW.
2. ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಇತರರಿಗೆ ಸಹಾಯಮಾಡಬೇಕು ಏಕೆ?
2 ನಂಬಿಕೆ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವ ಮೂಲಕ: ಶಾಸ್ತ್ರವಚನಗಳಲ್ಲಿ, ವಿಧೇಯತೆಯು ನಂಬಿಕೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. “ದೇವರ ಅಪ್ಪಣೆಯ ಪ್ರಕಾರ . . . ನಂಬಿಕೆಯೆಂಬ ವಿಧೇಯತ್ವವನ್ನು” ಉಂಟುಮಾಡುವುದರ ಬಗ್ಗೆ ಅಪೊಸ್ತಲ ಪೌಲನು ಮಾತಾಡಿದನು. (ರೋಮಾ. 16:25) ಇಬ್ರಿಯ 11ನೇ ಅಧ್ಯಾಯವು ಅನೇಕ ನಂಬಿಗಸ್ತ ವ್ಯಕ್ತಿಗಳ ಉದಾಹರಣೆಯನ್ನು ಉಲ್ಲೇಖಿಸುತ್ತದೆ; ಇವರಲ್ಲಿ ಅನೇಕರು ಯೆಹೋವನ ಪ್ರಕಟಿತ ಚಿತ್ತಕ್ಕೆ ಅನುಗುಣವಾಗಿ ಕ್ರಿಯೆಗೈದರು. (ಇಬ್ರಿ. 11:7, 8, 17) ಮತ್ತೊಂದು ಬದಿಯಲ್ಲಿ, ಅವಿಧೇಯತೆಯು ನಂಬಿಕೆಯ ಕೊರತೆಯೊಂದಿಗೆ ಸಂಬಂಧಿಸಲ್ಪಟ್ಟಿದೆ. (ಯೋಹಾ. 3:36; ಇಬ್ರಿ. 3:18, 19) ವಿಧೇಯತೆಯನ್ನು ಉಂಟುಮಾಡುವಂಥ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಇತರರಿಗೆ ಸಹಾಯಮಾಡಲಿಕ್ಕಾಗಿ ದೇವರ ವಾಕ್ಯವನ್ನು ಉಪಯೋಗಿಸುವುದರಲ್ಲಿ ನಾವು ಕುಶಲತೆಯನ್ನು ಬೆಳೆಸಿಕೊಳ್ಳಬೇಕು.—2 ತಿಮೊ. 2:15; ಯಾಕೋ. 2:14, 17.
3. (ಎ) ವಿಧೇಯತೆಯು ಪ್ರೀತಿಯೊಂದಿಗೆ ಸಂಬಂಧಿಸಿರುವುದು ಹೇಗೆ? (ಬಿ) ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನಾವು ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಬಲ್ಲೆವು?
3 ವಿಧೇಯತೆಯು ದೇವರ ಮೇಲಣ ಪ್ರೀತಿಯೊಂದಿಗೂ ಸಂಬಂಧಿಸಿದೆ. (ಧರ್ಮೋ. 5:10; 11:1, 22; 30:16) “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ” ಎಂದು 1 ಯೋಹಾನ 5:3 ಹೇಳುತ್ತದೆ. ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ನಾವು ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಬಲ್ಲೆವು? ಅಧ್ಯಯನದ ಸಮಯದಲ್ಲಿ ಯೆಹೋವನ ಗುಣಗಳಿಗಾಗಿ ಗಣ್ಯತೆಯನ್ನು ಬೆಳೆಸುವ ಅವಕಾಶಗಳಿಗಾಗಿ ಹುಡುಕಿರಿ. ದೇವರ ವಿಷಯದಲ್ಲಿ ನಿಮಗಿರುವ ಆಳವಾದ ಅನಿಸಿಕೆಗಳನ್ನು ಸಹ ವ್ಯಕ್ತಪಡಿಸಿರಿ. ಯೆಹೋವನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವುದರ ಕುರಿತು ಆಲೋಚಿಸುವಂತೆ ವಿದ್ಯಾರ್ಥಿಗೆ ಸಹಾಯಮಾಡಿರಿ. ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನ ಮೇಲಣ ಪ್ರೀತಿಯು ಆತನಿಗೆ ಹೃದಯದಿಂದ ವಿಧೇಯರಾಗುವಂತೆ ಇತರರನ್ನು—ಮತ್ತು ನಮ್ಮನ್ನು ಸಹ—ಪ್ರಚೋದಿಸುವುದು.—ಮತ್ತಾ. 22:37.
4. (ಎ) ನಮ್ಮ ಮಾದರಿಯು ಏಕೆ ಪ್ರಾಮುಖ್ಯವಾಗಿದೆ? (ಬಿ) “ವಿಧೇಯತೆಯುಳ್ಳ ಹೃದಯವನ್ನು” ಬೆಳೆಸಿಕೊಳ್ಳಲು ನಾವೇನು ಮಾಡತಕ್ಕದ್ದು?
4 ನಮ್ಮ ಮಾದರಿಯ ಮೂಲಕ: ಸುವಾರ್ತೆಗೆ ವಿಧೇಯರಾಗುವಂತೆ ನಾವು ಇತರರನ್ನು ಪ್ರೋತ್ಸಾಹಿಸಬಲ್ಲ ಅತಿ ಶಕ್ತಿಶಾಲಿ ವಿಧಾನವು ನಮ್ಮ ಮಾದರಿಯ ಮೂಲಕವೇ ಆಗಿದೆ. ಆದರೂ, “ವಿಧೇಯತೆಯುಳ್ಳ ಹೃದಯವನ್ನು” ಬೆಳೆಸಿಕೊಳ್ಳಲು ನಾವು ಸತತ ಪ್ರಯತ್ನವನ್ನು ಮಾಡಬೇಕು. (1 ಅರ. 3:9, NW; ಜ್ಞಾನೋ. 4:23) ಇದರಲ್ಲಿ ಏನು ಒಳಗೂಡಿದೆ? ಕ್ರಮವಾದ ಬೈಬಲ್ ಅಧ್ಯಯನ ಮತ್ತು ಕೂಟಗಳ ಹಾಜರಿಯ ಮೂಲಕ ನಿಮ್ಮ ಹೃದಯದಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ತುಂಬಿಸಿಕೊಳ್ಳಿ. (ಕೀರ್ತ. 1:1, 2; ಇಬ್ರಿ. 10:24, 25) ಸತ್ಯಾರಾಧನೆಯೊಂದಿಗೆ ಸಹಮತದಲ್ಲಿರುವ ಹೃದಯವನ್ನು ಹೊಂದಿರುವವರ ಸಂಗಡ ಸಹವಾಸವನ್ನು ಬೆಳೆಸಿಕೊಳ್ಳಿರಿ. (ಜ್ಞಾನೋ. 13:20) ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಸಹಾಯಮಾಡಬೇಕು ಎಂಬ ಪ್ರಾಮಾಣಿಕ ಇಚ್ಛೆಯೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳಿರಿ. ಒಂದು ಒಳ್ಳೆಯ ಹೃದಯವನ್ನು ಬೆಳೆಸಿಕೊಳ್ಳುವುದರಲ್ಲಿ ಮಾರ್ಗದರ್ಶನವನ್ನು ನೀಡುವಂತೆ ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳಿ. (ಕೀರ್ತ. 86:11) ನಿಮ್ಮ ಮನಸ್ಸನ್ನು ಭ್ರಷ್ಟಗೊಳಿಸಬಲ್ಲ ವಿಷಯಗಳನ್ನು ತ್ಯಜಿಸಿರಿ. ಅದು ಒಂದುವೇಳೆ ಅನೈತಿಕ ಅಥವಾ ಹಿಂಸಾತ್ಮಕ ಮನೋರಂಜನೆ ಆಗಿರಬಹುದು. ನಿಮ್ಮನ್ನು ದೇವರ ಸಮೀಪಕ್ಕೆ ತರಬಲ್ಲ ಮತ್ತು ಆತನೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಬಲ್ಲ ವಿಷಯಗಳನ್ನು ಬೆನ್ನಟ್ಟಿರಿ.—ಯಾಕೋ. 4:7, 8.
5. ವಿಧೇಯರು ಹೇಗೆ ಆಶೀರ್ವದಿಸಲ್ಪಡುತ್ತಾರೆ?
5 ತನ್ನ ಮಾತಿಗೆ ಕಿವಿಗೊಡುವುದಾದರೆ ಆಶೀರ್ವಾದಗಳು ಪ್ರಾಪ್ತವಾಗುವವು ಎಂದು ಯೆಹೋವನು ತನ್ನ ಪ್ರಾಚೀನ ಜನರಿಗೆ ಆಶ್ವಾಸನೆ ನೀಡಿದನು. (ಧರ್ಮೋ. 28:1, 2) ತದ್ರೀತಿಯಲ್ಲಿ ಇಂದು, ಯೆಹೋವನು “ತನಗೆ ವಿಧೇಯರಾಗಿರುವವರಿಗೆ” ಹೇರಳವಾದ ಆಶೀರ್ವಾದಗಳನ್ನು ನೀಡುತ್ತಾನೆ. (ಅ. ಕೃ. 5:32) ಆದುದರಿಂದ, ನಮ್ಮ ಬೋಧನೆ ಮತ್ತು ಮಾದರಿಯ ಮೂಲಕ ಹೃದಯದಿಂದ ವಿಧೇಯರಾಗುವಂತೆ ಇತರರಿಗೆ ಸಹಾಯಮಾಡೋಣ.