ನಿಮ್ಮಲ್ಲಿ “ಒಂದು ವಿಧೇಯ ಹೃದಯ”ವು ಇದೆಯೊ?
ಸೊಲೊಮೋನನು ಪುರಾತನ ಇಸ್ರಾಯೇಲಿನ ಅರಸನಾದಾಗ, ತಾನು ಅದಕ್ಕೆ ಅಯೋಗ್ಯನು ಎಂದು ಅವನಿಗನಿಸಿತು. ಆದುದರಿಂದ ಅವನು ವಿವೇಕ ಹಾಗೂ ಜ್ಞಾನಕ್ಕಾಗಿ ದೇವರಲ್ಲಿ ಬೇಡಿಕೊಂಡನು. (2 ಪೂರ್ವಕಾಲವೃತ್ತಾಂತ 1:10) ಸೊಲೊಮೋನನು ಮತ್ತೂ ಪ್ರಾರ್ಥಿಸಿದ್ದು: “ನಿನ್ನ ಜನರಿಗೆ ತೀರ್ಪು ನೀಡಲಿಕ್ಕಾಗಿ ನೀನು ನಿನ್ನ ಸೇವಕನಿಗೆ ಒಂದು ವಿಧೇಯ ಹೃದಯವನ್ನೂ ಕೊಡಬೇಕು.” (1 ಅರಸು 3:9, NW) ಸೊಲೊಮೋನನಿಗೆ “ಒಂದು ವಿಧೇಯ ಹೃದಯ”ವಿರುತ್ತಿದ್ದಲ್ಲಿ, ಅವನು ದೈವಿಕ ನಿಯಮಗಳನ್ನು ಮತ್ತು ಮೂಲತತ್ವಗಳನ್ನು ಅನುಸರಿಸಸಾಧ್ಯವಿತ್ತು ಹಾಗೂ ಯೆಹೋವನ ಆಶೀರ್ವಾದವನ್ನು ಅನುಭವಿಸಸಾಧ್ಯವಿತ್ತು.
ಒಂದು ವಿಧೇಯ ಹೃದಯವು, ಹೊರೆಯಾಗಿರುವುದಕ್ಕೆ ಬದಲಾಗಿ, ಸಂತೋಷದ ಮೂಲವಾಗಿದೆ. ಅಪೊಸ್ತಲ ಯೋಹಾನನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ಖಂಡಿತವಾಗಿಯೂ ನಾವು ದೇವರಿಗೆ ವಿಧೇಯರಾಗಿರಬೇಕು. ಎಷ್ಟೆಂದರೂ ಯೆಹೋವನು ನಮ್ಮ ಮಹಾನ್ ಸೃಷ್ಟಿಕರ್ತನಾಗಿದ್ದಾನೆ. ಭೂಮಿಯೂ ಅದರಲ್ಲಿರುವ ಸಮಸ್ತವೂ, ಬೆಳ್ಳಿಬಂಗಾರಗಳೂ ಆತನಿಗೆ ಸೇರಿದ್ದಾಗಿವೆ. ಆದುದರಿಂದ ಆತನಿಗಾಗಿರುವ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಲಿಕ್ಕಾಗಿ ನಾವು ನಮ್ಮ ಹಣಕಾಸಿನ ಆಸ್ತಿಯನ್ನು ಉಪಯೋಗಿಸುವಂತೆ ಆತನು ಅನುಮತಿಸುವುದಾದರೂ, ವಾಸ್ತವದಲ್ಲಿ ನಾವು ಭೌತಿಕವಾಗಿ ದೇವರಿಗೆ ಏನನ್ನೂ ಕೊಡಲು ಸಾಧ್ಯವಿಲ್ಲ. (1 ಕೊರಿಂಥ 29:14) ನಾವು ಆತನನ್ನು ಪ್ರೀತಿಸುವಂತೆ ಹಾಗೂ ಆತನ ಚಿತ್ತವನ್ನು ಮಾಡುತ್ತಾ, ದೀನಭಾವದಿಂದ ಆತನೊಂದಿಗೆ ನಡೆಯುವಂತೆ ಯೆಹೋವನು ನಮ್ಮಿಂದ ಅಪೇಕ್ಷಿಸುತ್ತಾನೆ.—ಮೀಕ 6:8.
ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆಯು ಅತ್ಯಂತ ಶ್ರೇಷ್ಠವಾದ ಆಜ್ಞೆಯಾಗಿದೆ ಎಂದು ಯೇಸು ಕ್ರಿಸ್ತನು ಕೇಳಲ್ಪಟ್ಟಾಗ, ಅವನು ಹೇಳಿದ್ದು: “ನಿನ್ನ ದೇವರಾಗಿರುವ ಯೆಹೋವನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು.” (ಮತ್ತಾಯ 22:36-38) ಆ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವು, ದೇವರಿಗೆ ವಿಧೇಯರಾಗುವ ಮೂಲಕವೇ. ಆದುದರಿಂದಲೇ, ಯೆಹೋವನು ನಮಗೆ ಒಂದು ವಿಧೇಯ ಹೃದಯವನ್ನು ಕೊಡಬೇಕೆಂಬುದು ನಮ್ಮಲ್ಲಿ ಪ್ರತಿಯೊಬ್ಬರ ಪ್ರಾರ್ಥನೆಯಾಗಿರಬೇಕು.
ಅವರಿಗೆ ಒಂದು ವಿಧೇಯ ಹೃದಯವಿತ್ತು
ಬೈಬಲು ವಿಧೇಯ ಹೃದಯವಿದ್ದ ಅನೇಕ ಜನರ ಉದಾಹರಣೆಗಳಿಂದ ತುಂಬಿದೆ. ದೃಷ್ಟಾಂತಕ್ಕಾಗಿ, ಜೀವರಕ್ಷಣೆಗಾಗಿ ಒಂದು ದೊಡ್ಡ ನಾವೆಯನ್ನು ಕಟ್ಟುವಂತೆ ಯೆಹೋವನು ನೋಹನಿಗೆ ಹೇಳಿದನು. ಇದು ಸುಮಾರು 40 ಅಥವಾ 50 ವರ್ಷಗಳು ತಗಲಿದ ಒಂದು ಭಾರಿ ದೊಡ್ಡ ಕೆಲಸವಾಗಿತ್ತು. ಈಗ ಲಭ್ಯವಿರುವ ಎಲ್ಲ ಆಧುನಿಕ ವಿದ್ಯುತ್ ಉಪಕರಣಗಳು ಹಾಗೂ ಸಲಕರಣೆಗಳನ್ನು ಉಪಯೋಗಿಸಿದರೂ, ತೇಲಸಾಧ್ಯವಿರುವಂತಹ ಅಂಥ ಒಂದು ಬೃಹತ್ ನಾವೆಯನ್ನು ನಿರ್ಮಿಸುವುದು, ಯಂತ್ರಶಿಲ್ಪಿತನದ ಚಮತ್ಕಾರವಾಗಿರುತ್ತಿತ್ತು. ಇದಲ್ಲದೆ, ಖಂಡಿತವಾಗಿಯೂ ತನಗೆ ಅವಹೇಳನಮಾಡಿ, ಅಪಹಾಸ್ಯಮಾಡಿದಂತಹ ಜನರಿಗೆ ನೋಹನು ಎಚ್ಚರಿಕೆ ನೀಡಬೇಕಾಗಿತ್ತು. ಆದರೆ ತೀರ ಚಿಕ್ಕಪುಟ್ಟ ವಿಷಯಗಳನ್ನೂ ಅವನು ವಿಧೇಯತೆಯಿಂದ ಪಾಲಿಸಿದನು. ಬೈಬಲು ಹೇಳುವುದು: ‘ದೇವರು ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು.’ (ಆದಿಕಾಂಡ 6:9, 22; 2 ಪೇತ್ರ 2:5) ಅನೇಕ ವರ್ಷಗಳ ವರೆಗೆ ನಂಬಿಗಸ್ತ ವಿಧೇಯತೆಯ ಮೂಲಕ ನೋಹನು, ಯೆಹೋವನಿಗಾಗಿರುವ ತನ್ನ ಪ್ರೀತಿಯನ್ನು ತೋರಿಸಿದನು. ನಮ್ಮೆಲ್ಲರಿಗೂ ಎಂತಹ ಒಂದು ಅತ್ಯುತ್ತಮ ಮಾದರಿ!
ಮೂಲಪಿತೃವಾದ ಅಬ್ರಹಾಮನನ್ನು ಸಹ ಪರಿಗಣಿಸಿರಿ. ಕಲ್ದೀಯರ ಸಂಪದ್ಭರಿತವಾದ ಊರ್ ಪಟ್ಟಣದಿಂದ, ಅಜ್ಞಾತ ದೇಶವೊಂದಕ್ಕೆ ಸ್ಥಳಾಂತರಿಸುವಂತೆ ದೇವರು ಅವನಿಗೆ ಹೇಳಿದನು. ದೇವರ ಮಾತಿಗೆ ಎದುರಾಡದೆ ಅಬ್ರಹಾಮನು ವಿಧೇಯನಾದನು. (ಇಬ್ರಿಯ 11:8) ಅವನ ಉಳಿದ ಜೀವಮಾನ ಕಾಲದಲ್ಲೆಲ್ಲ, ಅವನೂ ಅವನ ಕುಟುಂಬವೂ ಗುಡಾರಗಳಲ್ಲಿ ವಾಸಿಸಿತು. ಆ ದೇಶದಲ್ಲಿ ಅನೇಕ ವರ್ಷಗಳ ವರೆಗೆ ಪರದೇಶಿಯಾಗಿದ್ದ ಬಳಿಕ, ಇಸಾಕ ಎಂಬ ಹೆಸರಿನ ಮಗನನ್ನು ಒದಗಿಸುವ ಮೂಲಕ ಯೆಹೋವನು ಅವನನ್ನೂ ಅವನ ವಿಧೇಯ ಪತ್ನಿಯಾದ ಸಾರಳನ್ನೂ ಆಶೀರ್ವದಿಸಿದನು. 100 ವರ್ಷ ಪ್ರಾಯದವನಾಗಿದ್ದ ಅಬ್ರಹಾಮನು, ತನ್ನ ವೃದ್ಧಾಪ್ಯದಲ್ಲಿ ಹುಟ್ಟಿದ ಈ ಮಗನನ್ನು ಎಷ್ಟು ಪ್ರೀತಿಸಿದ್ದಿರಬೇಕು! ಕೆಲವು ವರ್ಷಗಳ ತರುವಾಯ, ಇಸಾಕನನ್ನು ಸರ್ವಾಂಗಹೋಮವಾಗಿ ಬಲಿಕೊಡುವಂತೆ ಯೆಹೋವನು ಅಬ್ರಹಾಮನನ್ನು ಕೇಳಿಕೊಂಡನು. (ಆದಿಕಾಂಡ 22:1, 2) ಹಾಗೆ ಮಾಡುವುದರ ಯೋಚನೆಯೇ ಅಬ್ರಹಾಮನಿಗೆ ಬಹಳಷ್ಟು ವೇದನೆಯನ್ನು ಉಂಟುಮಾಡಿದ್ದಿರಬೇಕು. ಆದರೂ, ಅವನು ಅದಕ್ಕೆ ವಿಧೇಯನಾದನು, ಏಕೆಂದರೆ ಅವನು ಯೆಹೋವನನ್ನು ಪ್ರೀತಿಸಿದನು ಮತ್ತು ವಾಗ್ದಾನಿಸಲ್ಪಟ್ಟ ಸಂತತಿಯು ಇಸಾಕನ ಮೂಲಕವೇ ಬರಸಾಧ್ಯವಿತ್ತು—ಒಂದು ಪಕ್ಷ ದೇವರು ಅವನನ್ನು ಸತ್ತವರೊಳಗಿಂದ ಎಬ್ಬಿಸಬೇಕಾದಂತಹ ಸಂದರ್ಭಬಂದರೂ—ಎಂಬ ನಂಬಿಕೆ ಅವನಿಗಿತ್ತು. (ಇಬ್ರಿಯ 11:17-19) ಆದರೂ, ಅಬ್ರಹಾಮನು ತನ್ನ ಮಗನನ್ನು ಇನ್ನೇನು ಕೊಲ್ಲಲಿದ್ದಾಗ, ಯೆಹೋವನು ಅವನನ್ನು ತಡೆದು ಹೇಳಿದ್ದು: “ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬದು ಈಗ ತೋರಬಂತು.” (ಆದಿಕಾಂಡ 22:12) ತನ್ನ ವಿಧೇಯತೆಯ ಕಾರಣದಿಂದ, ದೇವಭಯವುಳ್ಳ ಅಬ್ರಹಾಮನು “ದೇವರ ಸ್ನೇಹಿತ”ನೆಂದು ಪ್ರಸಿದ್ಧನಾದನು.—ಯಾಕೋಬ 2:23.
ವಿಧೇಯತೆಯ ವಿಷಯದಲ್ಲಿ ಯೇಸು ಕ್ರಿಸ್ತನು ನಮ್ಮ ಅತ್ಯುತ್ತಮ ಮಾದರಿಯಾಗಿದ್ದಾನೆ. ತನ್ನ ಮಾನವಪೂರ್ವ ಅಸ್ತಿತ್ವದ ಸಮಯದಲ್ಲಿ, ಪರಲೋಕದಲ್ಲಿರುವ ತನ್ನ ತಂದೆಗೆ ಸಲ್ಲಿಸಿದ ವಿಧೇಯ ಸೇವೆಯಲ್ಲಿ ಅವನು ಆನಂದವನ್ನು ಕಂಡುಕೊಂಡನು. (ಜ್ಞಾನೋಕ್ತಿ 8:22-31) ಮನುಷ್ಯನಾಗಿದ್ದಾಗ, ಯೇಸು ಯೆಹೋವನ ಚಿತ್ತವನ್ನು ಮಾಡಲು ಸದಾ ಹರ್ಷಿಸುತ್ತಾ, ಎಲ್ಲ ವಿಷಯಗಳಲ್ಲಿ ಯೆಹೋವನಿಗೆ ವಿಧೇಯನಾದನು. (ಕೀರ್ತನೆ 40:8; ಇಬ್ರಿಯ 10:9) ಆದುದರಿಂದ, ಯೇಸು ಸತ್ಯವಾಗಿಯೂ ಹೀಗೆ ಹೇಳಸಾಧ್ಯವಿತ್ತು: “ತನ್ನಷ್ಟಕ್ಕೆ ತಾನೇ ಏನೂ ಮಾಡದೆ ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದನೆಂದೂ ನನ್ನ ವಿಷಯವಾಗಿ ನಿಮಗೆ ತಿಳಿಯುವದು. ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ, ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವದರಿಂದ ಆತನು ನನ್ನನ್ನು ಒಂಟಿಗನಾಗಿ ಬಿಡಲಿಲ್ಲ.” (ಯೋಹಾನ 8:28, 29) ಕೊನೆಯದಾಗಿ, ಯೆಹೋವನ ಪರಮಾಧಿಕಾರವನ್ನು ಸಮರ್ಥಿಸಲಿಕ್ಕಾಗಿ ಮತ್ತು ವಿಧೇಯ ಮಾನವಕುಲವನ್ನು ವಿಮೋಚಿಸಲಿಕ್ಕಾಗಿ, ಅತ್ಯಂತ ಅಪಮಾನಕರವಾದ ಹಾಗೂ ವೇದನಾಭರಿತವಾದ ಮರಣವನ್ನು ಅನುಭವಿಸುತ್ತಾ, ಯೇಸು ಮನಃಪೂರ್ವಕವಾಗಿ ತನ್ನ ಜೀವವನ್ನು ಬಲಿಕೊಟ್ಟನು. ವಾಸ್ತವದಲ್ಲಿ, “ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:8) ಒಂದು ವಿಧೇಯ ಹೃದಯವನ್ನು ಪ್ರದರ್ಶಿಸುವುದರಲ್ಲಿ ಎಂತಹ ಒಂದು ಮಾದರಿ!
ಆಂಶಿಕ ವಿಧೇಯತೆಯು ಮಾತ್ರ ಸಾಲದು
ತಾವು ದೇವರಿಗೆ ವಿಧೇಯರಾಗಿದ್ದೇವೆಂದು ಹೇಳಿಕೊಂಡವರೆಲ್ಲರೂ ವಾಸ್ತವದಲ್ಲಿ ಆತನಿಗೆ ವಿಧೇಯರಾಗಿಲ್ಲ. ಪುರಾತನ ಇಸ್ರಾಯೇಲಿನ ಅರಸನಾದ ಸೌಲನನ್ನು ಪರಿಗಣಿಸಿರಿ. ದುಷ್ಟ ಅಮಾಲೇಕ್ಯರನ್ನು ನಿರ್ನಾಮಮಾಡುವಂತೆ ದೇವರು ಅವನಿಗೆ ಅಪ್ಪಣೆಕೊಟ್ಟನು. (1 ಸಮುವೇಲ 15:1-3) ಒಂದು ಜನಾಂಗದೋಪಾದಿ ಸೌಲನು ಅವರನ್ನು ನಾಶಮಾಡಿದನಾದರೂ, ಅವರ ಅರಸನನ್ನು ಉಳಿಸಿ, ಅವರ ಕೆಲವು ಕುರಿಗಳನ್ನೂ ದನಕರುಗಳನ್ನೂ ತನಗಾಗಿ ಉಳಿಸಿಕೊಂಡನು. ಸಮುವೇಲನು ಕೇಳಿದ್ದು: “ನೀನು ಯೆಹೋವನ ಮಾತನ್ನು ಕೇಳದೆ . . . ದ್ರೋಹಮಾಡಿದ್ದೇಕೆ”? ಅದಕ್ಕೆ ಉತ್ತರವಾಗಿ ಸೌಲನು ಹೇಳಿದ್ದು: “ನಾನು ಯೆಹೋವನ ಮಾತನ್ನು ಕೇಳಲಿಲ್ಲವೋ? . . . [ಇಸ್ರಾಯೇಲ್ನ] ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿನ್ನ ದೇವರಾದ ಯೆಹೋವನಿಗೆ . . . ಯಜ್ಞಾರ್ಪಣೆಮಾಡುವದಕ್ಕಾಗಿ ಉಳಿಸಿ ತಂದರು.” ಸಂಪೂರ್ಣ ವಿಧೇಯತೆಯ ಅಗತ್ಯವನ್ನು ಒತ್ತಿಹೇಳುತ್ತಾ ಸಮುವೇಲನು ಉತ್ತರಿಸಿದ್ದು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ. ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವದು; ಹಟವು ಮಿಥ್ಯಾಭಕ್ತಿಗೂ ವಿಗ್ರಹಾರಾಧನೆಗೂ ಸಮಾನವಾಗಿರುವುದು. ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟದ್ದರಿಂದ ಆತನು ನಿನ್ನನ್ನು ಅರಸುತನದಿಂದ ತಳ್ಳಿಬಿಟ್ಟಿದ್ದಾನೆ.” (1 ಸಮುವೇಲ 15:17-23) ಸೌಲನಿಗೆ ವಿಧೇಯ ಹೃದಯವು ಇರಲಿಲ್ಲವಾದುದರಿಂದ, ಅವನಿಗೆ ಎಂತಹ ನಷ್ಟವು ಉಂಟಾಯಿತು!
ಒಂದು ವಿಧೇಯ ಹೃದಯಕ್ಕಾಗಿ ಪ್ರಾರ್ಥಿಸಿಕೊಂಡಿದ್ದ ವಿವೇಕಿ ಅರಸನಾದ ಸೊಲೊಮೋನನು ಸಹ, ಯೆಹೋವನಿಗೆ ವಿಧೇಯತೆಯನ್ನು ತೋರಿಸುತ್ತಾ ಮುಂದುವರಿಯಲಿಲ್ಲ. ದೈವಿಕ ಚಿತ್ತಕ್ಕೆ ವ್ಯತಿರಿಕ್ತವಾಗಿ, ಅವನು ವಿದೇಶೀ ಸ್ತ್ರೀಯರನ್ನು ಮದುವೆಯಾದನು. ಅವನು ದೇವರಿಗೆ ವಿರುದ್ಧವಾಗಿ ಪಾಪವನ್ನು ಮಾಡುವಂತೆ ಅವರು ಮಾಡಿದರು. (ನೆಹೆಮೀಯ 13:23, 26) ಸೊಲೊಮೋನನು ದೈವಿಕ ಅನುಗ್ರಹವನ್ನು ಕಳೆದುಕೊಂಡನು, ಏಕೆಂದರೆ ಒಂದು ವಿಧೇಯ ಹೃದಯವುಳ್ಳವನಾಗಿ ಅವನು ಮುಂದುವರಿಯಲಿಲ್ಲ. ಇದು ನಮಗೆ ಎಂತಹ ಒಂದು ಎಚ್ಚರಿಕೆಯಾಗಿದೆ!
ಯೆಹೋವನು ತನ್ನ ಮಾನವ ಸೇವಕರಿಂದ ಪರಿಪೂರ್ಣತೆಯನ್ನು ಕೇಳಿಕೊಳ್ಳುತ್ತಾನೆ ಎಂಬುದು ಇದರ ಅರ್ಥವಲ್ಲ. ‘ನಾವು ಧೂಳಿಯಾಗಿದ್ದೇವೆಂಬುದನ್ನು’ ಆತನು ‘ನೆನಪುಮಾಡಿಕೊಳ್ಳುತ್ತಾನೆ.’ (ಕೀರ್ತನೆ 103:14) ನಾವೆಲ್ಲರೂ ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತೇವೆ ಎಂಬುದು ನಿಶ್ಚಯ, ಆದರೆ ತನ್ನನ್ನು ಮೆಚ್ಚಿಸುವ ಹೃತ್ಪೂರ್ವಕ ಬಯಕೆಯು ನಮ್ಮಲ್ಲಿ ನಿಜವಾಗಿಯೂ ಇದೆಯೋ ಎಂಬುದನ್ನು ದೇವರು ನೋಡಬಲ್ಲನು. (2 ಪೂರ್ವಕಾಲವೃತ್ತಾಂತ 16:9) ಮಾನವ ಅಪರಿಪೂರ್ಣತೆಯ ಕಾರಣದಿಂದ ನಾವು ತಪ್ಪು ಮಾಡಿದರೂ, ಪಶ್ಚಾತ್ತಾಪಪಡುವಲ್ಲಿ, ಯೆಹೋವನು “ಮಹಾಕೃಪೆಯಿಂದ ಕ್ಷಮಿಸುವನು” ಎಂಬ ದೃಢಭರವಸೆಯಿಂದ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ನಾವು ಕ್ಷಮಾಪಣೆಯನ್ನು ಕೇಳಿಕೊಳ್ಳಸಾಧ್ಯವಿದೆ. (ಯೆಶಾಯ 55:7; 1 ಯೋಹಾನ 2:1, 2) ನಾವು ಆತ್ಮಿಕವಾಗಿ ಪುನಃ ಚೇತರಿಸಿಕೊಳ್ಳಲು ಹಾಗೂ ಸ್ವಸ್ಥಕರವಾದ ನಂಬಿಕೆಯನ್ನು ಮತ್ತು ವಿಧೇಯ ಹೃದಯವನ್ನು ಪಡೆಯಲು ಸಾಧ್ಯವಾಗುವಂತೆ, ಪ್ರೀತಿಪೂರ್ಣರಾದ ಕ್ರೈಸ್ತ ಹಿರಿಯರ ಸಹಾಯವು ಸಹ ಬೇಕಾಗಬಹುದು.—ತೀತ 2:2; ಯಾಕೋಬ 5:13-15.
ನಿಮ್ಮ ವಿಧೇಯತೆಯು ಎಷ್ಟು ಸಮಗ್ರವಾಗಿದೆ?
ನಿಸ್ಸಂದೇಹವಾಗಿಯೂ, ಯೆಹೋವನ ಸೇವಕರೋಪಾದಿ ನಮ್ಮಲ್ಲಿ ಅಧಿಕಾಂಶ ಮಂದಿಗೆ ವಿಧೇಯ ಹೃದಯವಿದೆ ಅನಿಸುತ್ತದೆ. ನಾವು ಹೀಗೆ ತರ್ಕಿಸಬಹುದು, ನಾನು ರಾಜ್ಯ ಸಾರುವಿಕೆಯ ಕೆಲಸದಲ್ಲಿ ಪಾಲ್ಗೊಳ್ಳುತ್ತೇನಲ್ಲವೊ? ತಾಟಸ್ಥ್ಯದಂತಹ ದೊಡ್ಡ ವಿವಾದಗಳು ಏಳುವಾಗ, ನಾನು ದೃಢವಾಗಿ ನಿಲ್ಲುತ್ತೇನಲ್ಲವೊ? ಮತ್ತು ಅಪೊಸ್ತಲ ಪೌಲನು ಪ್ರಚೋದಿಸಿದಂತೆ, ನಾನು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತೇನಲ್ಲವೊ? (ಮತ್ತಾಯ 24:14; 28:19, 20; ಯೋಹಾನ 17:16; ಇಬ್ರಿಯ 10:24, 25) ನಿಜ, ಒಟ್ಟಿನಲ್ಲಿ ಯೆಹೋವನ ಜನರು, ಅಂತಹ ಪ್ರಮುಖ ವಿಚಾರಗಳಲ್ಲಿ ಹೃತ್ಪೂರ್ವಕವಾದ ವಿಧೇಯತೆಯನ್ನು ತೋರಿಸುತ್ತಾರೆ.
ಆದರೆ ಪ್ರತಿದಿನದ ಆಗುಹೋಗುಗಳಲ್ಲಿನ ನಮ್ಮ ನಡತೆಯ ಕುರಿತಾಗಿ—ಬಹುಶಃ ಅತಿ ಕ್ಷುಲ್ಲಕವೆಂಬಂತೆ ತೋರುವ ವಿಷಯಗಳಲ್ಲಿ—ಏನು? ಯೇಸು ಹೇಳಿದ್ದು: “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು.” (ಲೂಕ 16:10) ಆದುದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ಸ್ವತಃ ಹೀಗೆ ಕೇಳಿಕೊಳ್ಳುವುದು ಒಳಿತಾಗಿರುವುದು, ಇತರರಿಗೆ ಯಾವುದರ ಕುರಿತಾಗಿ ಏನೂ ತಿಳಿದಿಲ್ಲವೋ ಅಂತಹ ಅತಿ ಚಿಕ್ಕ ವಿಷಯಗಳು ಅಥವಾ ವಿಚಾರಗಳಿಗೆ ಬರುವಾಗ, ನನ್ನಲ್ಲಿ ಒಂದು ವಿಧೇಯ ಹೃದಯವು ಇದೆಯೊ?
ತನ್ನ ಮನೆಯ ಒಳಗೆ, ಬೇರೆಯವರು ತನ್ನನ್ನು ನೋಡದಿರುವಾಗಲೂ ತಾನು ‘ಯಥಾರ್ಥಹೃದಯದಿಂದಲೇ ಪ್ರವರ್ತಿಸಿದೆನು’ ಎಂದು ಕೀರ್ತನೆಗಾರನು ತೋರಿಸಿದನು. (ಕೀರ್ತನೆ 101:2) ನಿಮ್ಮ ಮನೆಯೊಳಗೆ ಕುಳಿತಿರುವಾಗ, ನೀವು ಟೆಲಿವಿಷನನ್ನು ಆನ್ ಮಾಡಿ, ಒಂದು ಚಲನ ಚಿತ್ರವನ್ನು ವೀಕ್ಷಿಸಲು ಆರಂಭಿಸಬಹುದು. ಅಲ್ಲಿಯೇ ನಿಮ್ಮ ವಿಧೇಯತೆಯು ಪರೀಕ್ಷೆಗೆ ಒಡ್ಡಲ್ಪಡಸಾಧ್ಯವಿದೆ. ಆ ಚಲನ ಚಿತ್ರದಲ್ಲಿ ಕ್ರಮೇಣವಾಗಿ ಅನೈತಿಕತೆಯು ತೋರಿಸಲ್ಪಡಬಹುದು. ಈ ದಿನಗಳಲ್ಲಿ ಬರುವುದು ಇಂತಹದ್ದೇ ರೀತಿಯ ಚಲನ ಚಿತ್ರವೆಂದು ವಿಚಾರಮಾಡುತ್ತಾ, ನೀವು ಚಲನ ಚಿತ್ರವನ್ನು ನೋಡುತ್ತಾ ಇರುವಿರೊ? ಅಥವಾ ‘ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು’ ಎಂಬ ಶಾಸ್ತ್ರೀಯ ಎಚ್ಚರಿಕೆಗೆ ಅನುಸಾರವಾಗಿ ಕಾರ್ಯನಡಿಸುವಂತೆ ನಿಮ್ಮ ವಿಧೇಯ ಹೃದಯವು ನಿಮ್ಮನ್ನು ಪ್ರಚೋದಿಸುವುದೊ? (ಎಫೆಸ 5:3-5) ಆ ಕಥೆಯು ಬಹಳಷ್ಟು ಕುತೂಹಲ ಕೆರಳಿಸುವಂತಹದ್ದಾಗಿದ್ದರೂ, ನೀವು ಟಿವಿಯನ್ನು ಆಫ್ ಮಾಡುವಿರೊ? ಅಥವಾ ಒಂದು ಕಾರ್ಯಕ್ರಮವು ಹಿಂಸಾತ್ಮಕವಾಗಿ ಪರಿಣಮಿಸಿದರೆ, ನೀವು ಚಾನಲ್ಗಳನ್ನು ಬದಲಾಯಿಸುವಿರೊ? “ಯೆಹೋವನು ತಾನೇ ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ, ಮತ್ತು ಹಿಂಸಾಚಾರವನ್ನು ಪ್ರೀತಿಸುವವನನ್ನು ಆತನ ಪ್ರಾಣವು ಖಂಡಿತವಾಗಿಯೂ ದ್ವೇಷಿಸುತ್ತದೆ” ಎಂದು ಕೀರ್ತನೆಗಾರನು ಹಾಡಿದನು.—ಕೀರ್ತನೆ 11:5, NW.
ಒಂದು ವಿಧೇಯ ಹೃದಯವು ಆಶೀರ್ವಾದಗಳನ್ನು ತರುತ್ತದೆ
ನಿಜವಾಗಿಯೂ ನಾವು ನಮ್ಮ ಹೃದಯದಾಳದಿಂದ ದೇವರಿಗೆ ವಿಧೇಯರಾಗುತ್ತೇವೋ ಎಂಬುದನ್ನು ಕಂಡುಕೊಳ್ಳಲಿಕ್ಕಾಗಿ, ನಮ್ಮನ್ನು ಪ್ರಯೋಜನಕರವಾಗಿ ಪರೀಕ್ಷಿಸಿಕೊಳ್ಳಸಾಧ್ಯವಿರುವಂತಹ ಜೀವನ ಕ್ಷೇತ್ರಗಳು ಬಹಳಷ್ಟಿವೆ ಎಂಬುದು ನಿಶ್ಚಯ. ಯೆಹೋವನಿಗಾಗಿರುವ ನಮ್ಮ ಪ್ರೀತಿಯು, ನಾವು ಆತನನ್ನು ಪ್ರಸನ್ನಗೊಳಿಸಿ, ತನ್ನ ವಾಕ್ಯವಾದ ಬೈಬಲಿನಲ್ಲಿ ಆತನು ಏನನ್ನು ಹೇಳುತ್ತಾನೋ ಅದನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು. ಒಂದು ವಿಧೇಯ ಹೃದಯವು ನಮಗೆ, ಯೆಹೋವನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದು. ವಾಸ್ತವವಾಗಿ, ನಾವು ಸಂಪೂರ್ಣವಾಗಿ ವಿಧೇಯರಾಗಿರುವಲ್ಲಿ, ‘ನಮ್ಮ ಮಾತುಗಳೂ ನಮ್ಮ ಹೃದಯದ ಧ್ಯಾನವೂ ಯೆಹೋವನಿಗೆ ಸಮರ್ಪಕವಾಗಿರುವುದು.’—ಕೀರ್ತನೆ 19:14.
ಯೆಹೋವನು ನಮ್ಮನ್ನು ಪ್ರೀತಿಸುತ್ತಾನಾದ ಕಾರಣ, ನಮ್ಮ ಸ್ವಂತ ಒಳಿತಿಗಾಗಿ ಆತನು ನಮಗೆ ವಿಧೇಯತೆಯನ್ನು ಕಲಿಸುತ್ತಾನೆ. ಮತ್ತು ದೈವಿಕ ಬೋಧನೆಗೆ ಮನಃಪೂರ್ವಕವಾಗಿ ಗಮನ ಕೊಡುವ ಮೂಲಕ ನಾವು ಸ್ವತಃ ಮಹತ್ತರವಾಗಿ ಪ್ರಯೋಜನವನ್ನು ಪಡೆದುಕೊಳ್ಳುವೆವು. (ಯೆಶಾಯ 48:17, 18) ಆದುದರಿಂದ, ತನ್ನ ವಾಕ್ಯ, ತನ್ನ ಆತ್ಮ, ಹಾಗೂ ತನ್ನ ಸಂಸ್ಥೆಯ ಮೂಲಕ ನಮ್ಮ ಸ್ವರ್ಗೀಯ ತಂದೆಯು ಒದಗಿಸುವ ಸಹಾಯವನ್ನು ನಾವು ಆನಂದದಿಂದ ಸ್ವೀಕರಿಸೋಣ. ನಮಗೆ ಎಷ್ಟು ಚೆನ್ನಾಗಿ ಕಲಿಸಲಾಗುತ್ತಿದೆಯೆಂದರೆ, ಅದು “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ಹೇಳುತ್ತಿರುವ ಧ್ವನಿಯೊಂದನ್ನು ನಮ್ಮ ಹಿಂದಿನಿಂದ ನಾವು ಕೇಳಿಸಿಕೊಳ್ಳುತ್ತಿದ್ದೇವೋ ಎಂಬಂತಿದೆ. (ಯೆಶಾಯ 30:21) ಬೈಬಲಿನ ಮೂಲಕ, ಕ್ರೈಸ್ತ ಪ್ರಕಾಶನಗಳ ಮೂಲಕ, ಮತ್ತು ಸಭಾ ಕೂಟಗಳ ಮೂಲಕ ಯೆಹೋವನು ನಮಗೆ ಕಲಿಸುವಾಗ, ನಾವು ಗಮನ ಕೊಡೋಣ, ಕಲಿಯುವ ವಿಚಾರವನ್ನು ಅನ್ವಯಿಸಿಕೊಳ್ಳೋಣ, ಮತ್ತು ‘ಸರ್ವವಿಷಯದಲ್ಲೂ ವಿಧೇಯರಾಗಿ’ರೋಣ.—2 ಕೊರಿಂಥ 2:9.
ಒಂದು ವಿಧೇಯ ಹೃದಯವು, ಅತ್ಯಧಿಕ ಆನಂದ ಮತ್ತು ಅನೇಕ ಆಶೀರ್ವಾದಗಳಲ್ಲಿ ಫಲಿಸುವುದು. ಇದು ಮನಶ್ಶಾಂತಿಯನ್ನು ತರುವುದು, ಏಕೆಂದರೆ ನಾವು ಯೆಹೋವ ದೇವರನ್ನು ತುಂಬ ಪ್ರಸನ್ನಗೊಳಿಸುತ್ತಿದ್ದೇವೆ ಮತ್ತು ಆತನ ಮನಸ್ಸನ್ನು ಸಂತೋಷಪಡಿಸುತ್ತಿದ್ದೇವೆ ಎಂಬುದು ನಮಗೆ ಗೊತ್ತಿರುತ್ತದೆ. (ಜ್ಞಾನೋಕ್ತಿ 27:11) ನಾವು ತಪ್ಪನ್ನು ಮಾಡುವ ಶೋಧನೆಗೆ ಒಳಗಾಗುವಾಗ, ಒಂದು ವಿಧೇಯ ಹೃದಯವು, ನಮಗೆ ಒಂದು ಸಂರಕ್ಷಣೆಯಾಗಿರುವುದು. ಹಾಗಾದರೆ, ಖಂಡಿತವಾಗಿಯೂ ನಾವು ನಮ್ಮ ಸ್ವರ್ಗೀಯ ತಂದೆಗೆ ವಿಧೇಯರಾಗಬೇಕು ಮತ್ತು “ನಿನ್ನ ಸೇವಕನಿಗೆ ಒಂದು ವಿಧೇಯ ಹೃದಯವನ್ನೂ ಕೊಡು” ಎಂದು ಪ್ರಾರ್ಥಿಸಬೇಕು.
[ಪುಟ 29 ರಲ್ಲಿರುವ ಚಿತ್ರ ಕೃಪೆ]
ಕಿಂಗ್ ಜೇಮ್ಸ್ ಹಾಗೂ ರಿವೈಸ್ಡ್ ವರ್ಷನ್ಗಳನ್ನು ಒಳಗೊಂಡಿರುವ, ಸೆಲ್ಫ್ ಪ್ರೊನೌನ್ಸಿಂಗ್ ಎಡಿಷನ್ ಆಫ್ ದ ಹೋಲಿ ಬೈಬಲ್ನಿಂದ