ಯೆಹೋವನ ಘನತೆಯನ್ನು ಪ್ರಸಿದ್ಧಪಡಿಸಿರಿ
1 “ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ. . . . ಜನಾಂಗಗಳಲ್ಲಿ ಆತನ ಘನತೆಯನ್ನೂ ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ” ಎಂದು ಕೀರ್ತನೆಗಾರನು ಘೋಷಿಸಿದನು. ಯೆಹೋವನು ನಮಗಾಗಿ ಏನು ಮಾಡಿದ್ದಾನೆ, ಮಾಡುತ್ತಿದ್ದಾನೆ ಮತ್ತು ಇನ್ನೂ ಮಾಡಲಿದ್ದಾನೆ ಎಂಬುದರ ಕುರಿತು ನಾವು ಆಲೋಚಿಸುವಾಗ, ಆತನ ಘನತೆಯನ್ನು ಪ್ರಸಿದ್ಧಪಡಿಸುವಂತೆ ನಮ್ಮ ಹೃದಯಗಳು ನಮ್ಮನ್ನು ಪ್ರಚೋದಿಸುತ್ತವೆ.—ಕೀರ್ತ. 96:1, 3.
2 ನಮ್ಮ ಶುಶ್ರೂಷೆಯಲ್ಲಿ: ಯೆಹೋವನ ಸಾಕ್ಷಿಗಳು ದೇವರ ನಾಮಧಾರಿಗಳಾಗಿರುವ ಮತ್ತು ಆ ನಾಮವನ್ನು ಭೂಮಿಯಾದ್ಯಂತ ಬಹಿರಂಗವಾಗಿ ಸ್ತುತಿಸುವ ಸುಯೋಗವನ್ನು ಹೊಂದಿದ್ದಾರೆ. (ಮಲಾ. 1:11) ತಮ್ಮ ಬೈಬಲ್ ಭಾಷಾಂತರಗಳಿಂದ ದೇವರ ನಾಮವನ್ನು ದುರಭಿಮಾನದಿಂದ ತೆಗೆದುಹಾಕುವ ಕ್ರೈಸ್ತಪ್ರಪಂಚದ ಪಾದ್ರಿಗಳಿಗೆ ಇದು ಎಷ್ಟು ವೈದೃಶ್ಯವಾಗಿದೆ! ದೇವರ ನಾಮವನ್ನು ತಿಳಿಯಪಡಿಸುವುದು ತುರ್ತಿನ ಕೆಲಸವಾಗಿದೆ, ಯಾಕೆಂದರೆ ಜನರು ಬರಲಿರುವ ಮಹಾ ಸಂಕಟದಿಂದ ಪಾರಾಗಬೇಕಾದರೆ ಆ ಹೆಸರನ್ನು ನಂಬಿಕೆಯಿಂದ ಹೇಳಿಕೊಳ್ಳಬೇಕಾಗಿದೆ. (ರೋಮಾ. 10:13-15) ಅಷ್ಟೇ ಅಲ್ಲ, ಭೂನಿವಾಸಿಗಳ ಮಧ್ಯೆ ಸ್ಥಾಪಿಸಲ್ಪಡುವ ಶಾಂತಿಯ ಸಮೇತ ವಿಶ್ವದಾದ್ಯಂತ ಸ್ಥಾಪಿಸಲ್ಪಡುವ ಶಾಂತಿಯು ದೇವರ ನಾಮದ ಪವಿತ್ರೀಕರಣದ ಮೇಲೆ ಅವಲಂಬಿಸಿದೆ. ವಾಸ್ತವದಲ್ಲಿ, ದೇವರ ಎಲ್ಲ ಕಾರ್ಯಗಳು ಆತನ ನಾಮದೊಂದಿಗೆ ಸಂಬಂಧಿಸಿವೆ.
3 “ಯೆಹೋವನು ದೊಡ್ಡವನೂ ಬಹಳವಾಗಿ ಸ್ತುತ್ಯನೂ ಆಗಿದ್ದಾನೆ.” ಆದರೆ, ಜನರು ‘ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಬೇಕಾದರೆ’ ಅವರು ಆತನ ಬಗ್ಗೆ ಸತ್ಯವನ್ನು ತಿಳಿಯಬೇಕು. (ಕೀರ್ತ. 96:4, 8) ಹೆಚ್ಚಿನವರಾದರೊ ದೇವರ ಅಸ್ತಿತ್ವವನ್ನೇ ಅಲ್ಲಗಳೆಯುತ್ತಾರೆ. (ಕೀರ್ತ. 14:1) ಇನ್ನೂ ಕೆಲವರು ಆತನು ಶಕ್ತಿಹೀನನೆಂದು ಆರೋಪಿಸುತ್ತಾರೆ, ಅಥವಾ ಆತನಿಗೆ ಮಾನವರ ವಿಚಾರಗಳಲ್ಲಿ ಆಸಕ್ತಿಯಿಲ್ಲವೆಂದು ಪ್ರತಿಪಾದಿಸುತ್ತಾರೆ. ಆದುದರಿಂದ ನಮ್ಮ ಸೃಷ್ಟಿಕರ್ತನು, ಆತನ ಉದ್ದೇಶಗಳು ಮತ್ತು ಆತನ ಆಕರ್ಷಕ ವ್ಯಕ್ತಿತ್ವದ ಕುರಿತು ನಿಷ್ಕೃಷ್ಟ ಜ್ಞಾನವನ್ನು ಪಡೆಯುವಂತೆ ಪ್ರಾಮಾಣಿಕ ಹೃದಯದ ಜನರಿಗೆ ನಾವು ಸಹಾಯಮಾಡುವಾಗ ಯೆಹೋವನನ್ನು ಘನಪಡಿಸುತ್ತೇವೆ.
4 ನಮ್ಮ ನಡತೆಯ ಮೂಲಕ: ಯೆಹೋವನ ನೈತಿಕ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವುದು ಆತನಿಗೆ ಗೌರವವನ್ನು ತರುತ್ತದೆ. ನಮ್ಮ ಒಳ್ಳೆಯ ನಡತೆಯು ಗಮನಿಸಲ್ಪಡದೆ ಇರುವುದಿಲ್ಲ. (1 ಪೇತ್ರ 2:12) ಉದಾಹರಣೆಗೆ, ನಮ್ಮ ಸ್ವಚ್ಛವಾದ ಹಾಗೂ ನೀಟಾದ ವೈಯಕ್ತಿಕ ತೋರಿಕೆಯು ಇತರರು ಸಕಾರಾತ್ಮಕ ಹೇಳಿಕೆಗಳನ್ನು ಮಾಡುವಂತೆ ಪ್ರಚೋದಿಸುತ್ತದೆ. ಮತ್ತು ಇದು, ದೇವರ ವಾಕ್ಯದಲ್ಲಿ ಕಂಡುಬರುವ ಮೂಲತತ್ತ್ವಗಳಿಗನುಸಾರವಾಗಿ ಜೀವಿಸುವುದರಿಂದ ಸಿಗುವ ಪ್ರಯೋಜನಗಳ ಕುರಿತು ಮಾತಾಡಲು ಅವಕಾಶವನ್ನು ಒದಗಿಸುತ್ತದೆ. (1 ತಿಮೊ. 2:9, 10) ಇತರರು ‘ನಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಮ್ಮ ತಂದೆಯನ್ನು ಕೊಂಡಾಡುವಾಗ’ ನಾವೆಷ್ಟು ಹರ್ಷಿಸುತ್ತೇವೆ!—ಮತ್ತಾ. 5:16.
5 ನಮ್ಮ ನಡೆನುಡಿಗಳಲ್ಲಿ ಮಹಿಮಾನ್ವಿತ ದೇವರನ್ನು ಪ್ರತಿ ದಿನ ಸ್ತುತಿಸುತ್ತಾ ಈ ಸಂತೋಷಭರಿತ ಕರೆಗೆ ಪ್ರತಿಕ್ರಿಯಿಸೋಣ: “ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ.”—ಕೀರ್ತ. 96:2.