“ಒಂದು ಪ್ರಾಮುಖ್ಯ ವೈದ್ಯಕೀಯ ರೂಢಿಯನ್ನು ಎತ್ತಿತೋರಿಸುವ ವಿಡಿಯೋ”
ಕಾನೂನಿನ ಮತ್ತು ಆರೋಗ್ಯಾರೈಕೆಯ ಸಿಬ್ಬಂದಿಯವರು, ವೈದ್ಯಕೀಯ ಗಮನವು ಅಗತ್ಯವಿರುವ ರೋಗಿಗಳ ನೈತಿಕ ದೃಷ್ಟಿಕೋನಗಳು ಮತ್ತು ಹಕ್ಕುಗಳಿಗೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದಾರೆ. ಇದು, ಯೆಹೋವನ ಸಾಕ್ಷಿಗಳು ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿರುವ ಹೊಸ ಚಿಕಿತ್ಸೆಗಳನ್ನು ಮತ್ತು ವಿಧಾನಗಳನ್ನು ಪ್ರವರ್ಧಿಸಿದೆ. (ಅ. ಕೃ. 15:28, 29) ಈ ವಿಷಯವೇ, ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ—ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು (ಇಂಗ್ಲಿಷ್) ಎಂಬ ವಿಡಿಯೋದ ಕೇಂದ್ರಬಿಂದುವಾಗಿದೆ. ಇದನ್ನು ನೋಡಿ, ನಂತರ ನೀವು ಕಲಿತದ್ದನ್ನು ಪುನರ್ವಿಮರ್ಶಿಸಿರಿ.—ಗಮನಿಸಿ: ವಿಡಿಯೋದಲ್ಲಿ ಶಸ್ತ್ರಚಿಕಿತ್ಸೆಯ ಕಿರುನೋಟಗಳಿರುವುದರಿಂದ, ಹೆತ್ತವರು ತಮ್ಮ ಚಿಕ್ಕ ಮಕ್ಕಳೊಂದಿಗೆ ಈ ವಿಡಿಯೋವನ್ನು ವೀಕ್ಷಿಸುವುದರ ಕುರಿತು ವಿವೇಚನೆಯನ್ನು ತೋರಿಸಬೇಕು.
(1) ರಕ್ತಪೂರಣಗಳ ಉಪಯೋಗವನ್ನು ವೈದ್ಯಕೀಯ ಸಮಾಜದಲ್ಲಿ ಕೆಲವರು ಏಕೆ ಮರುಪರಿಶೀಲಿಸುತ್ತಿದ್ದಾರೆ? (2) ರಕ್ತಪೂರಣಗಳಿಲ್ಲದೆ ಮಾಡಲ್ಪಡುವ ಜಟಿಲವಾದ ಶಸ್ತ್ರಚಿಕಿತ್ಸೆಗಳ ಕುರಿತಾದ ಮೂರು ಉದಾಹರಣೆಗಳನ್ನು ಕೊಡಿರಿ? (3) ರಕ್ತಪೂರಣಗಳಿಲ್ಲದೆ ತಮ್ಮ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲು ಸಿದ್ಧರಾಗಿದ್ದೇವೆ ಎಂದು ಲೋಕವ್ಯಾಪಕವಾಗಿ ಎಷ್ಟು ಮಂದಿ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ? ಅವರು ಹೀಗೆ ಮಾಡಲು ಏಕೆ ಮನಸ್ಸುಳ್ಳವರಾಗಿದ್ದಾರೆ? (4) ರಕ್ತದ ಉಪಯೋಗದ ಕುರಿತು ಇತ್ತೀಚಿನ ಹಾಸ್ಪಿಟಲ್ ಅಧ್ಯಯನಗಳು ಏನನ್ನು ವ್ಯಕ್ತಪಡಿಸಿವೆ? (5) ರಕ್ತಪೂರಣಗಳಿಗೆ ಸಂಬಂಧಿಸಿರುವ ವೈದ್ಯಕೀಯ ಅಪಾಯಗಳಾವುವು? (6) ರಕ್ತಪೂರಣ ಬದಲಿಗಳ ಪ್ರಯೋಜನಗಳ ಕುರಿತು ಅನೇಕ ತಜ್ಞರು ಯಾವ ತೀರ್ಮಾನಕ್ಕೆ ಬಂದಿದ್ದಾರೆ? (7) ಅನೀಮಿಯ (ರಕ್ತಹೀನತೆ)ವನ್ನು ಯಾವುದು ಉಂಟುಮಾಡುತ್ತದೆ? ಇದನ್ನು ಮಾನವ ದೇಹಗಳು ಎಷ್ಟರ ಮಟ್ಟಿಗೆ ತಾಳಿಕೊಳ್ಳಬಲ್ಲವು? ಇದರ ನಷ್ಟಭರ್ತಿ ಮಾಡಲು ಏನನ್ನು ಮಾಡಸಾಧ್ಯವಿದೆ? (8) ಒಬ್ಬ ರೋಗಿಯ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪನ್ನವನ್ನು ಹೆಚ್ಚಿಸಲು ಏನು ಮಾಡಸಾಧ್ಯವಿದೆ? (9) ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತದ ನಷ್ಟವನ್ನು ಕಡಿಮೆಗೊಳಿಸಲಿಕ್ಕಾಗಿ ಯಾವ ಕಾರ್ಯವಿಧಾನಗಳು ಉಪಯೋಗಿಸಲ್ಪಡುತ್ತಿವೆ? (10) ಎಳೆಯ ಮಕ್ಕಳಿಗೆ ಅಥವಾ ಜೀವಾಪಾಯದ ತುರ್ತು ಪರಿಸ್ಥಿತಿಗಳಿಗೆ ಒಳಗಾಗಿರುವ ವ್ಯಕ್ತಿಗಳಿಗೆ ರಕ್ತಪೂರಣ ಬದಲಿಗಳು ಪರಿಣಾಮಕಾರಿಯಾಗಿರಬಲ್ಲವೋ? (11) ಒಳ್ಳೆಯ ಆರೋಗ್ಯಾರೈಕೆಯ ಪ್ರಧಾನ ನೈತಿಕ ಮೂಲತತ್ತ್ವಗಳಲ್ಲಿ ಒಂದು ಯಾವುದು? (12) ರಕ್ತರಹಿತ ಚಿಕಿತ್ಸೆಯ ಆಯ್ಕೆಗಳನ್ನು ಕ್ರೈಸ್ತರು ಮುಂಚಿತವಾಗಿಯೇ ಮಾಡುವುದು ಏಕೆ ಪ್ರಾಮುಖ್ಯವಾಗಿದೆ? ಇದನ್ನು ನಾವು ಹೇಗೆ ಮಾಡಬಲ್ಲೆವು?
ಈ ವಿಡಿಯೋದಲ್ಲಿ ತೋರಿಸಲ್ಪಟ್ಟ ಕೆಲವು ಚಿಕಿತ್ಸಾ ವಿಧಾನಗಳನ್ನು ಸ್ವೀಕರಿಸಬೇಕೋ ಬೇಡವೋ ಎಂಬುದು, ಒಬ್ಬನು ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗೆ ಹೊಂದಿಕೆಯಲ್ಲಿ ಮಾಡುವ ವೈಯಕ್ತಿಕ ನಿರ್ಣಯವಾಗಿದೆ. ನೀವು ನಿಮಗಾಗಿ ಮತ್ತು ನಿಮ್ಮ ಮಕ್ಕಳಿಗಾಗಿ ಯಾವ ರಕ್ತಪೂರಣ ಬದಲಿಗಳನ್ನು ಉಪಯೋಗಿಸಲು ಮನಸ್ಸುಳ್ಳವರಾಗಿದ್ದೀರಿ ಎಂಬುದನ್ನು ನಿರ್ಣಯಿಸಿದ್ದೀರೋ? ಸಾಕ್ಷಿಯಲ್ಲದ ಕುಟುಂಬ ಸದಸ್ಯರಿಗೂ ನಿಮ್ಮ ನಿರ್ಣಯಗಳು ಮತ್ತು ಅವುಗಳಿಗಾಗಿರುವ ಕಾರಣಗಳ ಕುರಿತು ಪೂರ್ಣ ತಿಳಿವಳಿಕೆಯನ್ನು ಕೊಡಬೇಕು.—2004, ಜೂನ್ 15 ಮತ್ತು 2000, ಅಕ್ಟೋಬರ್ 15ರ ಕಾವಲಿನಬುರುಜು ಸಂಚಿಕೆಗಳಲ್ಲಿ “ವಾಚಕರಿಂದ ಪ್ರಶ್ನೆಗಳು” ಲೇಖನವನ್ನು ನೋಡಿರಿ.