ವೈದ್ಯಕೀಯ ತುರ್ತುಪರಿಸ್ಥಿತಿಗೆ ಸಿದ್ಧರಾಗಿದ್ದೀರೊ?
ಒಂದು ವೈದ್ಯಕೀಯ ತುರ್ತುಪರಿಸ್ಥಿತಿ ತಟ್ಟನೆ, ಮುನ್ಸೂಚನೆಯಿಲ್ಲದೆ ಬರುವ ಸಾಧ್ಯತೆ ಇದೆ. (ಯಾಕೋ. 4:14) ಆದ್ದರಿಂದ ಒಬ್ಬ ಜಾಣ ವ್ಯಕ್ತಿ ಸಾಧ್ಯವಾದಷ್ಟು ಪೂರ್ವಸಿದ್ಧತೆ ಮಾಡಿಡುತ್ತಾನೆ. (ಜ್ಞಾನೋ. 22:3) ನಿಮಗೆ ಯಾವ ಚಿಕಿತ್ಸಾಕ್ರಮಗಳು ಒಪ್ಪಿಗೆಯೆಂದು ನಿರ್ಣಯಿಸಿ, ಬರವಣಿಗೆಯಲ್ಲಿ ದಾಖಲಿಸಿಟ್ಟಿದ್ದೀರಾ? ಈ ನಿಟ್ಟಿನಲ್ಲಿ ನಿಮಗೆ ನೆರವಾಗಲು, ನವೆಂಬರ್ 2006ರ ನಮ್ಮ ರಾಜ್ಯ ಸೇವೆಯಲ್ಲಿ “ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?” ಎಂಬ ಲೇಖನವನ್ನು ಪ್ರಕಾಶಿಸಲಾಯಿತು.
ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಕಾರ್ಡನ್ನು ಮನೆಯಲ್ಲಿ ತುಂಬಿಸಬಹುದಾದರೂ ಇಬ್ಬರು ಸಾಕ್ಷಿಗಳ ಮುಂದೆಯೇ ಸಹಿಹಾಕಿ, ದಿನಾಂಕ ಬರೆಯಬೇಕು. ಇದನ್ನು ರಾಜ್ಯ ಸಭಾಗೃಹದಲ್ಲಿ ಗುಂಪು ಮೇಲ್ವಿಚಾರಕ ಅಥವಾ ಬೇರೊಬ್ಬ ಹಿರಿಯರ ಸಹಾಯದಿಂದ ಮಾಡಬಹುದು. ಪ್ರಾಮುಖ್ಯ ಸಂಗತಿಯೇನೆಂದರೆ, “ಸಹಿಹಾಕಿದ ಸಾಕ್ಷಿಗಳ ಹೇಳಿಕೆ”ಗನುಸಾರ (STATEMENT OF WITNESSES) ನೀವು ಆ ಸಾಕ್ಷಿಗಳ ಮುಂದೆಯೇ ಸಹಿಹಾಕಬೇಕು. ಹೊಸ ಕಾರ್ಡನ್ನು ಇನ್ನೂ ಭರ್ತಿಮಾಡಿಲ್ಲದ ಪ್ರಚಾರಕರಿಗೆ ನೆರವಿನ ಅಗತ್ಯವಿದೆಯೇ ಎಂದು ಗುಂಪು ಮೇಲ್ವಿಚಾರಕರು ಆಗಾಗ್ಗೆ ವಿಚಾರಿಸಬಹುದು. ಪ್ರತಿ ವರ್ಷ ಹೊಸ ಕಾರ್ಡನ್ನು ತುಂಬಿಸಬೇಕೆಂಬದನ್ನು ದಯವಿಟ್ಟು ನೆನಪಿನಲ್ಲಿಡಿ. ಪ್ರಚಾರಕರು ಡೈರೆಕ್ಟಿವ್ ಕಾರ್ಡ್ನ ಮೂಲಪ್ರತಿಯನ್ನೇ ತಮ್ಮೊಂದಿಗೆ ಕೊಂಡೊಯ್ಯಬೇಕು, ನಕಲುಪ್ರತಿಯನ್ನಲ್ಲ.
ಕೆಲವೊಂದು ರೀತಿಯ ಚಿಕಿತ್ಸಾಕ್ರಮವನ್ನು ಸ್ವೀಕರಿಸುವುದು ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯ. ಆದ್ದರಿಂದ ನಿಮಗೆ ಯಾವುದು ಒಪ್ಪಿಗೆ ಇದೆ/ಇಲ್ಲ ಎಂಬ ನಿರ್ಣಯ ಮಾಡಲು ಕೊನೇ ಕ್ಷಣದ ತನಕ ಕಾಯಬೇಡಿ. ಕಾರ್ಡ್ನಲ್ಲಿರುವ ವಿಷಯ ನಿಮಗೆ ಪೂರ್ತಿ ಅರ್ಥವಾಗದಿದ್ದರೆ ನಿಮ್ಮ ಸಭೆಯಲ್ಲಿ ಇಂಗ್ಲಿಷ್ ಭಾಷೆ ಚೆನ್ನಾಗಿ ಗೊತ್ತಿರುವವರೊಬ್ಬರು ನಿಮಗದನ್ನು ವಿವರಿಸುವಂತೆ ಕೇಳಿ. ಬೇರೆ ಪ್ರಚಾರಕರ ಕಾರ್ಡಲ್ಲಿ ಇದ್ದದ್ದನ್ನೇ ನಕಲು ಮಾಡುವ ಬದಲು ಪ್ರತಿಯೊಬ್ಬ ಪ್ರಚಾರಕನೂ ರಕ್ತದ ಅಂಶಗಳು ಮತ್ತು ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ಪ್ರಾರ್ಥನಾಪೂರ್ವಕವಾಗಿ ಯೋಚಿಸಿ, ಸ್ವಂತ ನಿರ್ಣಯ ಮಾಡತಕ್ಕದ್ದು. “ದೇವರ ಪ್ರೀತಿ” ಪುಸ್ತಕದ 7ನೇ ಅಧ್ಯಾಯ, ಅದರಲ್ಲಿರುವ ರೆಫರೆನ್ಸ್ಗಳು ಹಾಗೂ ನವೆಂಬರ್ 2006ರ ನಮ್ಮ ರಾಜ್ಯ ಸೇವೆಯ ಪುರವಣಿ ನಿಮಗೆ ಬೇಕಾದ ಮಾಹಿತಿ ಕೊಟ್ಟು ಸರಿಯಾದ ನಿರ್ಣಯ ಮಾಡಲು ನೆರವಾಗುವವು. ನಿಮ್ಮ ದೀಕ್ಷಾಸ್ನಾನ ಆಗಿರುವಲ್ಲಿ ನಿಮ್ಮ ಆಯ್ಕೆಗಳನ್ನು ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಕಾರ್ಡ್ನಲ್ಲಿ ಬರೆಯಿರಿ. ಆ ಕಾರ್ಡ್ ಯಾವಾಗಲೂ ನಿಮ್ಮ ಬಳಿ ಇರಬೇಕು.
[ಪುಟ 3ರಲ್ಲಿರುವ ಚಿತ್ರ]
ನಿಮಗೆ ಯಾವ ಚಿಕಿತ್ಸಾಕ್ರಮಗಳು ಒಪ್ಪಿಗೆಯೆಂದು ನಿರ್ಣಯಿಸಿ ಬರವಣಿಗೆಯಲ್ಲಿ ದಾಖಲಿಸಿಟ್ಟಿದ್ದೀರಾ?