‘ನನ್ನನ್ನು ಹಿಂಬಾಲಿಸುತ್ತಾ ಇರಿ’
1 ಅನೇಕರು ಸ್ವತಃ ತಮ್ಮನ್ನು ಸಂತೋಷಪಡಿಸಿಕೊಳ್ಳುವುದರಲ್ಲಿ ಮಗ್ನರಾಗಿರುವುದಾದರೂ, ಸಾಮಾನ್ಯವಾಗಿ ಅವರು ಅಸಂತೋಷಿತರಾಗಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ನಿಜ ಸಂತೋಷವನ್ನು ತರುವಂತಹ ನಿಸ್ವಾರ್ಥಭಾವದ ಕೊಡುವಿಕೆಯ ಮಾರ್ಗಕ್ರಮವನ್ನು ಯೇಸು ಕ್ರಿಸ್ತನು ಶಿಫಾರಸ್ಸುಮಾಡಿದನು. (ಅ. ಕೃ. 20:35) ‘ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ನನ್ನನ್ನು ಹಿಂಬಾಲಿಸುತ್ತಾ ಇರಲಿ’ ಎಂದು ಯೇಸು ಹೇಳಿದನು. (ಮಾರ್ಕ 8:34) ಜೀವನದಲ್ಲಿ ಆಗಾಗ್ಗೆ ಕೆಲವೊಂದು ಸುಖಾನುಭವಗಳನ್ನು ತ್ಯಾಗಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಇದು ಒಳಗೂಡಿದೆ. ಇದರ ಅರ್ಥ ಪ್ರತಿದಿನವೂ ನಮ್ಮನ್ನಲ್ಲ, ಬದಲಾಗಿ ಯೆಹೋವನನ್ನು ಸಂತೋಷಪಡಿಸಲು ಜೀವಿಸುವುದು ಎಂದಾಗಿದೆ.—ರೋಮಾ. 14:8; 15:3
2 ಅಪೊಸ್ತಲ ಪೌಲನ ಉದಾಹರಣೆಯನ್ನು ಪರಿಗಣಿಸಿರಿ. “ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು” ಪೌಲನು ಸ್ವಾರ್ಥಪರ ಬಯಕೆಗಳನ್ನು ಬದಿಗೊತ್ತಿದನು ಮತ್ತು ರಾಜ್ಯಾಭಿರುಚಿಗಳನ್ನು ಹೆಚ್ಚಿಸಲು ತನ್ನನ್ನು ಮೀಸಲಾಗಿಟ್ಟುಕೊಂಡನು. (ಫಿಲಿ. 3:7, 8) ಇತರರ ಸೇವೆಮಾಡುವುದರಲ್ಲಿ “ನಾನಂತೂ ನನಗಿರುವದನ್ನು . . . ಅತಿಸಂತೋಷದಿಂದ ವೆಚ್ಚಮಾಡುತ್ತೇನೆ, ನನ್ನನ್ನೇ ವೆಚ್ಚಮಾಡಿಕೊಳ್ಳುತ್ತೇನೆ” ಎಂದು ಅವನು ಹೇಳಿದನು. (2 ಕೊರಿಂ. 12:15) ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳಬೇಕು: ‘ನಾನು ನನ್ನ ಸಮಯ, ಶಕ್ತಿ, ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಿದ್ದೇನೆ? ನನ್ನ ಸ್ವಂತ ಅಭಿರುಚಿಗಳನ್ನು ಬೆನ್ನಟ್ಟುವುದರಲ್ಲೇ ತಲ್ಲೀನನಾಗಿದ್ದೇನೊ ಅಥವಾ ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೊ?’
3 ಕೊಡುವುದಕ್ಕಾಗಿರುವ ಅವಕಾಶಗಳು: ಪ್ರತಿವರುಷ ದೇವಜನರು ಒಂದು ಶತಕೋಟಿಗಿಂತಲೂ ಅಧಿಕ ತಾಸುಗಳನ್ನು ಜೀವರಕ್ಷಕ ಕೆಲಸವಾದ ಸಾರುವಿಕೆಗಾಗಿ ಬದಿಗಿರಿಸುತ್ತಾರೆ. ಸಭೆಯಲ್ಲಿರುವ ಆಬಾಲವೃದ್ಧರೆಲ್ಲರೂ ಯಾವುದೇ ಭೇದವಿಲ್ಲದೆ ಇತರರಿಗೆ ಪ್ರಯೋಜನಕರವಾಗಿರುವ ವಿವಿಧ ರೀತಿಯ ನೇಮಕಗಳನ್ನು ಪೂರೈಸುತ್ತಾರೆ. ಸಮ್ಮೇಳನಗಳ ಹಾಗೂ ಅಧಿವೇಶನಗಳ ಸಂಬಂಧದಲ್ಲಿ ಮತ್ತು ಆರಾಧನೆಗಾಗಿ ಉಪಯೋಗಿಸುವ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿಯ ಸಂಬಂಧದಲ್ಲಿ ಬಹಳಷ್ಟನ್ನು ಮಾಡಲಿಕ್ಕಿದೆ. ಹಾಸ್ಪಿಟಲ್ ಲಿಏಸಾನ್ ಕಮಿಟಿಗಳು ಮತ್ತು ಪೇಷಂಟ್ ವಿಸಿಟೇಷನ್ ಗ್ರೂಪ್ಗಳ ಸದಸ್ಯರಾಗಿ ಸೇವೆಸಲ್ಲಿಸುವ ನಮ್ಮ ಸಹೋದರರ ಪ್ರೀತಿಪೂರ್ವಕ ಸಹಾಯದ ಬಗ್ಗೆ ಯೋಚಿಸಿರಿ. ಈ ಎಲ್ಲಾ ಸ್ವತ್ಯಾಗದ ಪ್ರಯತ್ನಗಳು ನಮ್ಮ ಕ್ರೈಸ್ತ ಸಹೋದರತ್ವಕ್ಕೆ ಒಂದು ಆಶೀರ್ವಾದದಂತಿವೆ.—ಕೀರ್ತ. 110:3
4 ಒಂದು ವಿಪತ್ತು ಬಂದೆರಗುವಾಗ ಅಥವಾ ತುರ್ತುಪರಿಸ್ಥಿತಿಯು ಎದುರಾದಾಗ ನಮ್ಮನ್ನು ವಿವಿಧ ರೀತಿಯಲ್ಲಿ ನೀಡಿಕೊಳ್ಳುವ ಅವಕಾಶಗಳು ದೊರೆಯುತ್ತವೆ. ಅನೇಕಬಾರಿ ನಮ್ಮ ಜೊತೆ ಕ್ರೈಸ್ತರಲ್ಲೊಬ್ಬರಿಗೆ ಸಹಾಯದ ಅಥವಾ ಉತ್ತೇಜನದ ಆವಶ್ಯಕತೆಯಿರುವುದನ್ನು ನಾವು ಮನಗಾಣಬಹುದು. (ಜ್ಞಾನೋ. 17:17) ಇತರರ ಸೇವೆಮಾಡಲು ಮತ್ತು ರಾಜ್ಯಾಭಿರುಚಿಗಳನ್ನು ವಿಸ್ತರಿಸಲು ನಮ್ಮನ್ನು ನೀಡಿಕೊಳ್ಳುವಾಗ, ನಾವು ಯೇಸುವಿನ ಮಾದರಿಯನ್ನು ಅನುಕರಿಸುತ್ತೇವೆ. (ಫಿಲಿ. 2:5-8) ನಾವು ಹೀಗೆ ಮಾಡುತ್ತಾ ಮುಂದುವರಿಯಲು ಪ್ರಯತ್ನಿಸೋಣ.