ನಮ್ಮ ಶುಶ್ರೂಷೆ—ಕನಿಕರವನ್ನು ಪ್ರತಿಬಿಂಬಿಸುವ ಕೆಲಸ
1 ಯೇಸು, ತನ್ನ ಸಂದೇಶಕ್ಕೆ ಕಿವಿಗೊಡುತ್ತಿದ್ದ ಜನಸಮೂಹವು ‘ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿರುವುದನ್ನು’ ಗಮನಿಸಿದನು. (ಮತ್ತಾ. 9:36) ಅವರಿಗೆ ಕೋಮಲತೆ ಮತ್ತು ಪ್ರೀತಿಯಿಂದ ಯೆಹೋವನ ಮಾರ್ಗಗಳನ್ನು ಕಲಿಸಿದನು, ಸಾಂತ್ವನವನ್ನು ನೀಡಿದನು ಹಾಗೂ ಕನಿಕರದಿಂದ ಅವರ ಆಧ್ಯಾತ್ಮಿಕ ಅಗತ್ಯತೆಗಳನ್ನು ಪೂರೈಸಲು ಸಹಾಯಮಾಡಿದನು. ಹೀಗೆ ಯೇಸು ಏನೇನು ಮಾಡಿದನೋ ಅದರ ಕುರಿತು ನಾವು ಧ್ಯಾನಿಸುವಾಗ ಅವನಂತೆಯೇ ಆಲೋಚಿಸಿ ಭಾವಿಸಲು ಕಲಿಯುತ್ತೇವೆ ಮತ್ತು ಕನಿಕರದ ಈ ಗುಣವು ನಮ್ಮ ಶುಶ್ರೂಷೆಯಲ್ಲಿ ತೋರಿಬರುತ್ತದೆ.
2 ಸಹಾಯದ ತೀವ್ರ ಅಗತ್ಯವಿದ್ದ ಜನರು ಯೇಸುವಿನ ಬಳಿ ಬಂದಾಗ ಅವನು ಹೇಗೆ ಪ್ರತಿಕ್ರಿಯಿಸಿದನು ಎಂಬುದರ ಕುರಿತು ತುಸು ಆಲೋಚಿಸಿರಿ. (ಲೂಕ 5:12, 13; 8:43-48) ವಿಶೇಷ ಅಗತ್ಯವಿದ್ದ ಜನರಿಗೆ ಅವನು ಪರಿಗಣನೆ ತೋರಿಸಿದನು. (ಮಾರ್ಕ 7:31-35) ಇತರರ ಭಾವನೆಗಳ ಬಗ್ಗೆ ಅರಿವುಳ್ಳವನಾಗಿದ್ದು ಅವರಿಗೆ ಕಾಳಜಿತೋರಿಸಿದನು. ಅವನು ಕೇವಲ ಹೊರತೋರಿಕೆಗನುಸಾರ ವ್ಯವಹರಿಸುತ್ತಿರಲಿಲ್ಲ. (ಲೂಕ 7:36-40) ಹೌದು, ನಮ್ಮ ದೇವರ ಕೋಮಲ ಕನಿಕರವನ್ನು ಯೇಸು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು.
3 ‘ಕನಿಕರಪಟ್ಟನು’: ಯೇಸು ತನ್ನ ಶುಶ್ರೂಷೆಯನ್ನು ಕೇವಲ ಒಂದು ಕರ್ತವ್ಯವೆಂದು ನೆನಸಿ ಮಾಡಲಿಲ್ಲ. ಅವನಿಗೆ ಜನರ ಮೇಲೆ “ಕನಿಕರ” ಇದ್ದದ್ದರಿಂದ ಅದನ್ನು ಮಾಡಿದನು. (ಮಾರ್ಕ 6:34) ತದ್ರೀತಿಯಲ್ಲಿ ಇಂದು ನಾವು ಕೇವಲ ಸಂದೇಶ ಮುಟ್ಟಿಸಲು ಹೋಗುತ್ತಿಲ್ಲ ಬದಲಾಗಿ ಅಮೂಲ್ಯ ಜೀವಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಹಾಗಾಗಿ, ಜನರು ತೋರಿಸುವ ಯಾವುದೇ ಪ್ರತಿಕ್ರಿಯೆಗೆ ಕಾರಣವೇನೆಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಅವರು ಏಕೆ ಚಿಂತಾಗ್ರಸ್ತರಾಗಿದ್ದಾರೆ? ಅವರು ಸುಳ್ಳು ಧಾರ್ಮಿಕ ಕುರುಬರಿಂದ ಅಲಕ್ಷಿಸಲ್ಪಟ್ಟು ವಂಚಿಸಲ್ಪಟ್ಟಿದ್ದಾರೋ? ಇತರರಲ್ಲಿ ನಾವು ತೋರಿಸುವ ಯಥಾರ್ಥ ಆಸಕ್ತಿಯು ಅವರು ಸುವಾರ್ತೆಗೆ ಕಿವಿಗೊಡುವಂತೆ ಮಾಡಬಹುದು.—2 ಕೊರಿಂ. 6:3, 6.
4 ಕನಿಕರವು ಹೃದಯವನ್ನು ಸ್ಪರ್ಶಿಸುತ್ತದೆ. ಉದಾಹರಣೆಗೆ, ಸ್ತ್ರೀಯೊಬ್ಬಳು ತನ್ನ ಮೂರು ತಿಂಗಳ ಹೆಣ್ಣುಮಗುವನ್ನು ಸಾವಿನಲ್ಲಿ ಕಳೆದುಕೊಂಡ ದುಃಖದಲ್ಲಿದ್ದಾಗ, ಇಬ್ಬರು ಸಾಕ್ಷಿಗಳು ಅವಳನ್ನು ಭೇಟಿಯಾದರು. ಅವಳು ಅವರನ್ನು ಮನೆಯೊಳಗೆ ಕರೆದಳು. ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆಂಬುದಕ್ಕೆ ಅವರು ಕೊಡುವ ಕಾರಣಗಳೆಲ್ಲ ತಪ್ಪೆಂದು ತೋರಿಸುವುದೇ ಅವಳ ಉದ್ದೇಶವಾಗಿತ್ತು. ಆದರೆ ಅವಳು ತದನಂತರ ತಿಳಿಸಿದ್ದು: ‘ಅವರು ತುಂಬ ಕನಿಕರದಿಂದ ನನ್ನ ಮಾತುಗಳಿಗೆ ಕಿವಿಗೊಟ್ಟರು, ಮತ್ತು ಅವರು ನಮ್ಮ ಮನೆಯಿಂದ ಹೊರಡುವಷ್ಟರಲ್ಲಿ ನನಗೆ ಎಷ್ಟು ಹಾಯಾದ ಅನಿಸಿಕೆಯಾಯಿತೆಂದರೆ, ಅವರ ಇನ್ನೊಂದು ಭೇಟಿಗೆ ನಾನು ಒಪ್ಪಿಕೊಂಡೆ.’ ನೀವು ಭೇಟಿಯಾಗುವ ಪ್ರತಿಯೊಬ್ಬರಿಗೂ ಕನಿಕರ ತೋರಿಸಲು ಪ್ರಯಾಸಪಡುತ್ತೀರೊ?
5 ಕನಿಕರದ ಗುಣವನ್ನು ಬೆಳೆಸಿಕೊಳ್ಳುವುದು ನಾವು ಇತರರಿಗೆ ನಿಜ ಸಾಂತ್ವನವನ್ನು ನೀಡಲು ಸಹಾಯಮಾಡುತ್ತದೆ. ಹೀಗೆ ನಾವು ‘ಕನಿಕರವುಳ್ಳ ತಂದೆಯನ್ನು’ ಘನಪಡಿಸುತ್ತೇವೆ.—2 ಕೊರಿಂ. 1:3.