ನಮ್ಮ ‘ಸಂತೋಷಭರಿತ ದೇವರಾದ’ ಯೆಹೋವನನ್ನು ಅನುಕರಿಸಿರಿ
1 ಯೆಹೋವನು ತನ್ನ ಜನರು ನಿಜವಾಗಿಯೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಮತ್ತು ಆತನ ವಾಕ್ಯವಾದ ಬೈಬಲ್ ಆತನು ಮಾನವಕುಲಕ್ಕಾಗಿ ಉದ್ದೇಶಿಸಿರುವ ಅದ್ಭುತಕರ ಆರ್ಶೀವಾದಗಳನ್ನು ನಾವು ಕೌತುಕದಿಂದ ಎದುರು ನೋಡುವಂತೆ ಮಾಡುತ್ತದೆ. (ಯೆಶಾ. 65:21-25) ಹೀಗಿರುವುದರಿಂದ, “ಭಾಗ್ಯವಂತನಾದ [“ಸಂತೋಷಭರಿತ,” NW] ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆ”ಯನ್ನು ಜನರೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಿಸುತ್ತೇವೆ ಎಂಬುದು ಅವರಿಗೆ ಸ್ಪಷ್ಟವಾಗಿ ತೋರಿಬರಬೇಕು. (1 ತಿಮೊ. 1:11) ರಾಜ್ಯದ ಸಂದೇಶವನ್ನು ನಾವು ತಿಳಿಸುವ ರೀತಿಯು, ಸತ್ಯಕ್ಕಾಗಿ ನಮಗಿರುವ ಪ್ರೀತಿಯನ್ನು ಮತ್ತು ನಾವು ಯಾರೊಂದಿಗೆ ಮಾತಾಡುತ್ತಿದ್ದೇವೊ ಅವರಲ್ಲಿ ನಮಗಿರುವ ನೈಜ ಆಸಕ್ತಿಯನ್ನು ಪ್ರತಿಬಿಂಬಿಸಬೇಕು.—ರೋಮಾ. 1:14-16.
2 ಕೆಲವು ಸಮಯಗಳಲ್ಲಿ ನಗುಮುಖದಿಂದ ಇರುವುದು ಕಷ್ಟಕರ ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಕೆಲವು ಟೆರಿಟೊರಿಗಳಲ್ಲಿ ರಾಜ್ಯಸಂದೇಶಕ್ಕೆ ಒಳ್ಳೇ ರೀತಿ ಪ್ರತಿಕ್ರಿಯೆ ತೋರಿಸುವ ಕೆಲವರನ್ನು ಮಾತ್ರ ನಾವು ಕಂಡುಕೊಳ್ಳಬಹುದು. ಅಥವಾ ಕೆಲವೊಮ್ಮೆ ನಾವೇ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುತ್ತಿರಬಹುದು. ಇಂಥ ಸಂದರ್ಭಗಳಲ್ಲಿ ನಾವು ಹರ್ಷಭರಿತ ಮನೋಭಾವವನ್ನು ಕಾಪಾಡಿಕೊಳ್ಳಬೇಕಾದರೆ, ನಮ್ಮ ಟೆರಿಟೊರಿಯಲ್ಲಿರುವ ಜನರು ನಾವು ಸಾರುತ್ತಿರುವ ರಾಜ್ಯದ ಸುವಾರ್ತೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದರ ಬಗ್ಗೆ ನಾವು ಆಲೋಚಿಸತಕ್ಕದ್ದು. (ರೋಮಾ. 10:13, 14, 17) ಇದರ ಕುರಿತು ಧ್ಯಾನಿಸುವುದು ರಕ್ಷಣೆಗಾಗಿ ಯೆಹೋವನು ಮಾಡಿರುವ ಕರುಣಾಭರಿತ ಏರ್ಪಾಡುಗಳ ಬಗ್ಗೆ ಹರ್ಷಾನಂದದಿಂದ ತಿಳಿಯಪಡಿಸುತ್ತಾ ಇರುವಂತೆ ನಮಗೆ ಸಹಾಯಮಾಡುತ್ತದೆ.
3 ಸಕಾರಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸಿರಿ: ನಾವೇನನ್ನು ಹೇಳುತ್ತೇವೊ ಅದಕ್ಕೆ ಸಹ ನಾವು ಗಮನಕೊಡಬೇಕಾಗಿದೆ. ಒಂದು ಸಮಸ್ಯೆಯ ಕುರಿತಾಗಿ ಅಥವಾ ಸಾಮಾನ್ಯವಾಗಿ ಜನರಿಗೆ ತಿಳಿದಿರುವ ವಾರ್ತಾವಿಷಯದ ಕುರಿತಾಗಿ ಉಲ್ಲೇಖಿಸುವ ಮೂಲಕ ನಾವು ಸಂಭಾಷಣೆಯನ್ನು ಆರಂಭಿಸಬಹುದಾದರೂ, ನಕಾರಾತ್ಮಕ ವಿಷಯಗಳ ಕುರಿತು ಉದ್ದವಾಗಿ ಮಾತಾಡುವುದರಿಂದ ದೂರವಿರಬೇಕು. ನಮ್ಮ ನೇಮಕವು “ಒಳ್ಳೆಯ ಶುಭಸಮಾಚಾರವನ್ನು” ತಿಳಿಸುವುದಾಗಿದೆ. (ಯೆಶಾ. 52:7, NIBV; ರೋಮಾ. 10:15) ಈ ಸುವಾರ್ತೆಯು ಉಜ್ವಲ ಭವಿಷ್ಯದ ಕುರಿತು ದೇವರು ಮಾಡಿರುವ ವಾಗ್ದಾನಗಳ ಮೇಲೆ ಆಧರಿತವಾಗಿರುವ ಸಂದೇಶವಾಗಿದೆ. (2 ಪೇತ್ರ 3:13) ಈ ವಿಷಯವನ್ನು ಮನಸ್ಸಿನಲ್ಲಿಟ್ಟು, ‘ಮನಮುರಿದವರನ್ನು ಕಟ್ಟಿ ವಾಸಿಮಾಡಲು’ ಶಾಸ್ತ್ರವಚನಗಳನ್ನು ಉಪಯೋಗಿಸಿರಿ. (ಯೆಶಾ. 61:1, 2) ಇದು, ಯಾವಾಗಲೂ ನಗುಮುಖದಿಂದ ಇರುವಂತೆ ಮತ್ತು ಸಕಾರಾತ್ಮಕ ಮನೋಭಾವವುಳ್ಳವರಾಗಿರುವಂತೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಹಾಯಮಾಡುವುದು.
4 ನಾವು ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಭಾಗವಹಿಸುವಾಗ ಜನರು ನಮ್ಮ ಹರ್ಷಚಿತ್ತ ಮನೋಭಾವವನ್ನು ತಪ್ಪದೆ ಗಮನಿಸುವರು. ಆದಕಾರಣ ನಮ್ಮ ಟೆರಿಟೊರಿಯಲ್ಲಿರುವ ಜನರೊಂದಿಗೆ ರಾಜ್ಯದ ಸುವಾರ್ತೆಯನ್ನು ಹಂಚಿಕೊಳ್ಳುವಾಗ ನಮ್ಮ ‘ಸಂತೋಷಭರಿತ ದೇವರಾದ’ ಯೆಹೋವನ ಮನೋಭಾವವನ್ನು ಯಾವಾಗಲೂ ಪ್ರತಿಬಿಂಬಿಸೋಣ.