ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ —ನಿಷ್ಪಕ್ಷಪಾತದಿಂದ ಸಾರುವ ಮೂಲಕ
1 ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ, ದೇವದೂತನೊಬ್ಬನು ಆಕಾಶಮಧ್ಯದಲ್ಲಿ ಹಾರಿಹೋಗುತ್ತಾ “ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ” ನಿತ್ಯವಾದ ಶುಭವರ್ತಮಾನವನ್ನು ಸಾರಿಹೇಳುತ್ತಿರುವುದನ್ನು ಕಂಡನು. (ಪ್ರಕ. 14:6) ನಿಷ್ಪಕ್ಷಪಾತದಿಂದ ಸಾರುವ ಮೂಲಕ ನಾವು ಆ ದೇವದೂತನನ್ನು ಅನುಕರಿಸುತ್ತೇವೋ? ನಮಗರಿವಿಲ್ಲದೆಯೇ ಕೆಲವು ಜನರ ಕುರಿತು ಪಕ್ಷಪಾತ ಅಥವಾ ಪೂರ್ವಕಲ್ಪಿತ ಮನೋಭಾವಗಳು ನಮ್ಮಲ್ಲಿರಬಹುದು. ನಾವು ಭೇಟಿಮಾಡುವ ಜನರೆಡೆಗೆ ನಮಗಿರುವ ಮನೋಭಾವವು ನಾವು ಸುವಾರ್ತೆಯನ್ನು ಸಾದರಪಡಿಸುವ ರೀತಿಯನ್ನು ಪ್ರಭಾವಿಸಬಲ್ಲ ಕಾರಣ, ವಿಭಿನ್ನ ಹಿನ್ನಲೆಗಳ ಜನರಿಗೆ ಸುವಾರ್ತೆಯನ್ನು ಸಾರುವಾಗ ನಾವು ನೈಜವಾದ ಪ್ರೀತಿಪೂರ್ವಕ ಆಸಕ್ತಿಯನ್ನು ತೋರಿಸುವುದು ಆವಶ್ಯಕವಾಗಿದೆ.
2 ನಿಮ್ಮ ಟೆರಿಟೊರಿಯಲ್ಲಿರುವವರನ್ನು ಮನಸ್ಸಿನಲ್ಲಿಡಿರಿ: ನಿಮ್ಮ ಟೆರಿಟೊರಿಯಲ್ಲಿ ಬೇರೆ ರಾಜ್ಯಗಳಿಂದ ಬಂದು ನೆಲೆಸಿರುವವರಿದ್ದಾರೋ ಅಥವಾ ಬೇರೆ ಭಾಷೆಗಳನ್ನು ಮಾತಾಡುವ ದೊಡ್ಡ ಸಮೂದಾಯಗಳಿವೆಯೋ? ಹಾಗಿರುವಲ್ಲಿ, ಅವರನ್ನು ಭೇಟಿಮಾಡಿ ಅಭಿವಂದಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಮತ್ತು ಅವರ ಒಳ್ಳೆಯ ಪರಿಚಯವನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ಅವರಿಗಿರುವ ಚಿಂತೆಗಳು, ಆವಶ್ಯಕತೆಗಳು, ಇಷ್ಟಾನಿಷ್ಟಗಳು, ವ್ಯಾಕುಲತೆಗಳು ಮತ್ತು ಪೂರ್ವಕಲ್ಪಿತ ಅಭಿಪ್ರಾಯಗಳೇನಾಗಿವೆ? ಅದಕ್ಕನುಗುಣವಾಗಿ, ರಾಜ್ಯ ಸಂದೇಶದ ನಿಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿರಿ. (1 ಕೊರಿಂ. 9:19-23) ಬೇರೆ ಸಮುದಾಯದವರು, ವಿಭಿನ್ನ ಸಂಸ್ಕೃತಿಯ ಜನರು, ಬೇರೆ ಭಾಷೆಯನ್ನಾಡುವವರು ಅಥವಾ ಐಶ್ವರ್ಯವಂತರನ್ನೂ ಸೇರಿಸಿ ನಮ್ಮ ಟೆರಿಟೊರಿಯಲ್ಲಿರುವ ಎಲ್ಲಾ ಜನರಿಗೆ ಸಾರಬೇಕೆಂಬ ಹಂಗು ನಮಗಿದೆಯೆಂದು ಅಪೊಸ್ತಲ ಪೌಲನಂತೆ ನಾವು ಮನಗಾಣಬೇಕು.—ರೋಮಾ. 1:14.
3 ಆದರೆ, ಪರಭಾಷೆಯನ್ನು ಮಾತಾಡುವವರಿಗೆ ನೀವು ಹೇಗೆ ಸಾಕ್ಷಿನೀಡಸಾಧ್ಯವಿದೆ? ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಪುಸ್ತಿಕೆಯ ಒಳ್ಳೆಯ ಉಪಯೋಗವನ್ನು ಮಾಡಿರಿ. ಸಾಮಾನ್ಯವಾಗಿ ನಿಮ್ಮ ಟೆರಿಟೊರಿಯಲ್ಲಿರುವ ಜನರು ಮಾತಾಡುವ ಭಾಷೆಗಳಲ್ಲಿ ಕೆಲವು ಟ್ರ್ಯಾಕ್ಟ್ಗಳನ್ನು ಮತ್ತು ಬ್ರೋಷರ್ಗಳನ್ನು ಸಹ ನೀವು ಕೊಂಡೊಯ್ಯಬಹುದು. (2003, ಜುಲೈ ತಿಂಗಳಿನ ನಮ್ಮ ರಾಜ್ಯದ ಸೇಯ ಪುಟ 8, ಪ್ಯಾರ. 2-3ನ್ನು ನೋಡಿರಿ.) ಇದಕ್ಕೆ ಕೂಡಿಸಿ ಕೆಲವು ಪ್ರಚಾರಕರು ಪರಭಾಷೆಯಲ್ಲಿ ಅಭಿವಂದಿಸುವುದನ್ನು ಮತ್ತು ಸರಳವಾದ ನಿರೂಪಣೆಗಳನ್ನು ಕಲಿಯುವ ಹೆಚ್ಚಿನ ಪ್ರಯತ್ನಮಾಡಿದ್ದಾರೆ. ಅನೇಕವೇಳೆ ಜನರು, ಇತರರು ತಮ್ಮೊಂದಿಗೆ ತಮ್ಮ ಸ್ವಂತ ಭಾಷೆಯಲ್ಲಿ ಅಲ್ಪಸ್ವಲ್ಪವಾದರೂ ಮಾತಾಡಲು ಪ್ರಯತ್ನಿಸುವುದನ್ನು ಗಮನಿಸುವಾಗ ಪ್ರಭಾವಿತರಾಗುತ್ತಾರೆ. ಆದುದರಿಂದ, ಇದು ಸುವಾರ್ತೆಯನ್ನು ಕೇಳುವಂತೆ ಅವರನ್ನು ಆಕರ್ಷಿಸಬಹುದು.
4 ಯೆಹೋವನನ್ನು ಅನುಕರಿಸಿರಿ: ವಿವಿಧ ಹಿನ್ನಲೆಗಳಿರುವ ಜನರಿಗೆ ಸುವಾರ್ತೆಯನ್ನು ತಲಪಿಸುವ ಮೂಲಕ ನಾವು ನಿಷ್ಪಕ್ಷಪಾತನಾಗಿರುವ ನಮ್ಮ ದೇವರಾದ ಯೆಹೋವನನ್ನು ಅನುಕರಿಸುತ್ತೇವೆ. ಏಕೆಂದರೆ “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.”—1 ತಿಮೊ. 2:3, 4.