ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?
‘ರಕ್ತವನ್ನು ವಿಸರ್ಜಿಸಿರಿ’ ಎಂದು ಬೈಬಲ್ ಕ್ರೈಸ್ತರಿಗೆ ಆಜ್ಞಾಪಿಸುತ್ತದೆ. (ಅ. ಕೃ. 15:20) ಈ ಕಾರಣದಿಂದ ಯೆಹೋವನ ಸಾಕ್ಷಿಗಳು ರಕ್ತವನ್ನಾಗಲಿ, ಅದರ ನಾಲ್ಕು ಪ್ರಮುಖ ಘಟಕಗಳಾದ ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಕಿರುಫಲಕಗಳು ಮತ್ತು ಪ್ಲಾಸ್ಮವನ್ನಾಗಲಿ ರಕ್ತಪೂರಣಗಳ ಮುಖಾಂತರ ತೆಗೆದುಕೊಳ್ಳುವುದಿಲ್ಲ. ಅವರು ರಕ್ತದಾನವನ್ನು ಮಾಡುವುದಿಲ್ಲ ಇಲ್ಲವೆ ಮುಂದೆಂದಾದರೂ ತಮಗೆ ಅಗತ್ಯಬೀಳುವಲ್ಲಿ ಬಳಸಲು ತಮ್ಮ ಸ್ವಂತ ರಕ್ತವನ್ನು ಶೇಖರಿಸಿಡುವುದೂ ಇಲ್ಲ.—ಯಾಜ. 17:13, 14; ಅ. ಕೃ. 15:28, 29.
ರಕ್ತದ ಅಂಶಗಳು ಎಂದರೇನು, ಮತ್ತು ಅವುಗಳನ್ನು ಬಳಸಬೇಕೊ ಇಲ್ಲವೊ ಎಂಬ ನಿರ್ಣಯವನ್ನು ಪ್ರತಿಯೊಬ್ಬ ಕ್ರೈಸ್ತನು ಸ್ವತಃ ಏಕೆ ಮಾಡಬೇಕು?
ರಕ್ತದ ಅಂಶಗಳು, ಫ್ರ್ಯಾಕ್ಷನೇಶನ್ ಎಂಬ ಪ್ರಕ್ರಿಯೆಯ ಮೂಲಕ ರಕ್ತದ ಘಟಕಗಳಿಂದ ತೆಗೆಯಲಾಗುವ ಧಾತುಗಳಾಗಿವೆ. ಉದಾಹರಣೆಗೆ, ರಕ್ತದ ನಾಲ್ಕು ಪ್ರಮುಖ ಘಟಕಗಳಲ್ಲಿ ಒಂದಾದ ಪ್ಲಾಸ್ಮವನ್ನು ತೆಗೆದುಕೊಳ್ಳಿ. ಈ ಘಟಕದಲ್ಲಿ, ಸುಮಾರು 91 ಪ್ರತಿಶತ ನೀರು; ಸುಮಾರು 7 ಪ್ರತಿಶತ ಆಲ್ಬುಮಿನ್ಸ್, ಗ್ಲಾಬುಲಿನ್ಸ್, ಮತ್ತು ಫೈಬ್ರಿನೋಜೆನ್ ಎಂಬ ಪ್ರೋಟೀನುಗಳು; ಸುಮಾರು 1.5 ಪ್ರತಿಶತ ಪೌಷ್ಟಿಕಾಂಶಗಳು, ಹಾರ್ಮೋನುಗಳು, ಅನಿಲಗಳು, ಜೀವಸತ್ವಗಳು, ತ್ಯಾಜ್ಯ ವಸ್ತುಗಳು ಮತ್ತು ಎಲೆಕ್ಟ್ರೋಲೈಟ್ಸ್ ಇತ್ಯಾದಿ ಅಂಶಗಳು ಇವೆ.
ರಕ್ತವನ್ನು ವಿಸರ್ಜಿಸಬೇಕೆಂಬ ಆಜ್ಞೆಯಲ್ಲಿ, ರಕ್ತದ ಘಟಕಗಳಿಂದ ತೆಗೆಯಲಾಗಿರುವ ಅಂಶಗಳನ್ನು (ರಕ್ತದ ಅಂಶಗಳನ್ನು) ಸಹ ವಿಸರ್ಜಿಸುವುದು ಒಳಗೂಡಿದೆಯೊ? ಇದನ್ನು ನಾವು ಖಡಾಖಂಡಿತವಾಗಿ ಹೇಳಸಾಧ್ಯವಿಲ್ಲ. ರಕ್ತದ ಅಂಶಗಳ ಬಗ್ಗೆ ಬೈಬಲ್ ಯಾವುದೇ ನಿರ್ದಿಷ್ಟ ನಿರ್ದೇಶನವನ್ನು ಕೊಡುವುದಿಲ್ಲ.a ಆದರೆ ದಾನಮಾಡಲಾಗಿರುವ ರಕ್ತದಿಂದಲೇ ವೈದ್ಯಕೀಯ ಉದ್ದೇಶಗಳಿಗಾಗಿ ಅನೇಕ ಅಂಶಗಳನ್ನು ತೆಗೆಯಲಾಗುತ್ತದೆ ಎಂಬುದು ನಿಜ. ಹಾಗಾಗಿ, ಪ್ರತಿಯೊಬ್ಬ ಸಾಕ್ಷಿಯು ತಾನು ಇಂಥ ಅಂಶಗಳನ್ನು ವೈದ್ಯಕೀಯ ಕಾರಣಗಳಿಗಾಗಿ ಸ್ವೀಕರಿಸುವೆನೊ ತಿರಸ್ಕರಿಸುವೆನೊ ಎಂಬ ನಿರ್ಣಯವನ್ನು ತನ್ನ ಸ್ವಂತ ಮನಸ್ಸಾಕ್ಷಿಗನುಸಾರ ಮಾಡಬೇಕು.
ಇಂಥ ನಿರ್ಣಯಗಳನ್ನು ಮಾಡುವಾಗ, ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸಿರಿ: ನಾನು ರಕ್ತದ ಎಲ್ಲ ಅಂಶಗಳನ್ನು ನಿರಾಕರಿಸುವ ಅರ್ಥ, ಕೆಲವೊಂದು ವೈರಸ್ಗಳೊಂದಿಗೆ ಮತ್ತು ರೋಗಗಳೊಂದಿಗೆ ಹೋರಾಡುವಂಥ ಇಲ್ಲವೆ ರಕ್ತಸ್ರಾವ ನಿಲ್ಲಿಸಲಿಕ್ಕಾಗಿ ರಕ್ತಹೆಪ್ಪುಗಟ್ಟುವಂತೆ ಸಹಾಯಮಾಡುವ ಕೆಲವೊಂದು ಔಷಧಗಳನ್ನು ಸಹ ಸ್ವೀಕರಿಸುವುದಿಲ್ಲ ಎಂಬುದು ನನಗೆ ಸ್ಪಷ್ಟವಾಗಿದೆಯೊ? ರಕ್ತದ ನಿರ್ದಿಷ್ಟ ಅಂಶಗಳ ಬಳಕೆಯನ್ನು ನಾನೇಕೆ ನಿರಾಕರಿಸುತ್ತೇನೆ ಎಂಬುದನ್ನು, ಮತ್ತು ರಕ್ತದ ಕೆಲವೊಂದು ಅಂಶಗಳನ್ನು ಏಕೆ ಸ್ವೀಕರಿಸುತ್ತೇನೆಂಬುದನ್ನು ನಾನು ಒಬ್ಬ ವೈದ್ಯನಿಗೆ ವಿವರಿಸಬಲ್ಲೆನೊ?
ನನ್ನ ರಕ್ತವನ್ನು ಕೆಲವೊಂದು ಚಿಕಿತ್ಸಾಕ್ರಮಗಳಲ್ಲಿ ನನಗಾಗಿ ಬಳಸಬೇಕೊ ಇಲ್ಲವೊ ಎಂಬುದು ಒಂದು ವೈಯಕ್ತಿಕ ನಿರ್ಣಯವಾಗಿದೆ ಏಕೆ?
ರಕ್ತಪೂರಣಕ್ಕಾಗಿ ಕ್ರೈಸ್ತರು ತಮ್ಮ ರಕ್ತವನ್ನು ದಾನ ಮಾಡುವುದೂ ಇಲ್ಲ ಯಾ ಶೇಖರಿಸಿಡುವುದೂ ಇಲ್ಲವಾದರೂ, ಕೆಲವೊಂದು ಚಿಕಿತ್ಸಾಕ್ರಮಗಳಿಗಾಗಲಿ ರಕ್ತಪರೀಕ್ಷೆಗಳಿಗಾಗಲಿ ಒಬ್ಬ ವ್ಯಕ್ತಿಯು ತನ್ನ ರಕ್ತವನ್ನು ಬಳಸುವುದು ಬೈಬಲ್ ಮೂಲತತ್ತ್ವಗಳೊಂದಿಗೆ ನೇರವಾಗಿ ಸಂಘರ್ಷಿಸುವುದಿಲ್ಲ. ಆದುದರಿಂದ ಪ್ರತಿಯೊಬ್ಬ ವ್ಯಕ್ತಿಯು, ತನ್ನ ರಕ್ತವನ್ನು ಬಳಸುವಂಥ ಕೆಲವೊಂದು ವಿಧಗಳ ಚಿಕಿತ್ಸಾಕ್ರಮಗಳನ್ನು ಸ್ವೀಕರಿಸಬೇಕೊ ನಿರಾಕರಿಸಬೇಕೊ ಎಂಬುದನ್ನು ತನ್ನ ಸ್ವಂತ ಮನಸ್ಸಾಕ್ಷಿಗನುಸಾರ ನಿರ್ಣಯಿಸಬೇಕು.
ಇಂಥ ನಿರ್ಣಯಗಳನ್ನು ಮಾಡುವಾಗ, ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ಒಂದುವೇಳೆ ನನ್ನ ರಕ್ತವು ದೇಹದಿಂದ ಹೊರಕ್ಕೆ ಕಳುಹಿಸಲ್ಪಟ್ಟು, ಬಹುಶಃ ಅದರ ಹರಿವು ಕೇವಲ ಸ್ವಲ್ಪ ಸಮಯಕ್ಕೆ ನಿಲ್ಲಿಸಲ್ಪಡುವುದಾದರೂ ಆ ರಕ್ತವು ಇನ್ನೂ ನನ್ನ ದೇಹದ ಭಾಗವಾಗಿದೆಯೆಂದು ಪರಿಗಣಿಸಿ, ಈ ಕಾರಣದಿಂದ ಅದನ್ನು ‘ಭೂಮಿಯ ಮೇಲೆ ಸುರಿಸುವ’ ಅಗತ್ಯವಿಲ್ಲ ಎಂಬ ಸಂಗತಿಯನ್ನು ನನ್ನ ಮನಸ್ಸಾಕ್ಷಿ ಅನುಮತಿಸುವುದೊ? (ಧರ್ಮೋ. 12:23, 24) ಒಂದುವೇಳೆ ಒಂದು ಚಿಕಿತ್ಸಾಕ್ರಮದಲ್ಲಿ ನನ್ನ ಸ್ವಂತ ರಕ್ತವನ್ನು ಹೊರತಂದು, ಮಾರ್ಪಡಿಸಿ, ಪುನಃ ನನ್ನ ದೇಹದೊಳಕ್ಕೆ ಸೇರಿಸಲಾಗುವುದಾದರೆ, ನನ್ನ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಯು ನನ್ನನ್ನು ಕಾಡುವುದೊ? ನನ್ನ ಸ್ವಂತ ರಕ್ತವನ್ನು ಉಪಯೋಗಿಸಲಾಗುವ ಎಲ್ಲ ಚಿಕಿತ್ಸಾಕ್ರಮಗಳನ್ನು ನಾನು ನಿರಾಕರಿಸುವುದರ ಅರ್ಥ, ನಾನು ಡಯಾಲಿಸಿಸ್ ಇಲ್ಲವೆ ‘ಹೃದಯ-ಶ್ವಾಸಕೋಶ ಯಂತ್ರದ’ (ಹಾರ್ಟ್/ಲಂಗ್ ಯಂತ್ರದ) ಬಳಕೆಯನ್ನು ಸಹ ನಿರಾಕರಿಸುತ್ತಿದ್ದೇನೆಂಬುದು ನನಗೆ ತಿಳಿದಿದೆಯೊ? ಒಂದು ನಿರ್ಣಯವನ್ನು ಮಾಡುವ ಮೊದಲು ನಾನು ಈ ವಿಷಯವನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿದ್ದೇನೊ?b
ನನ್ನ ವೈಯಕ್ತಿಕ ನಿರ್ಣಯಗಳೇನು?
ಮುಂದಿನ ಪುಟಗಳಲ್ಲಿರುವ ಎರಡು ಪ್ರಶ್ನಾವಳಿಗಳನ್ನು ಪರಿಗಣಿಸಿರಿ. ಪ್ರಶ್ನಾವಳಿ 1, ರಕ್ತದಿಂದ ತೆಗೆಯಲಾಗಿರುವ ಅಂಶಗಳಲ್ಲಿ ಕೆಲವೊಂದನ್ನು ಪಟ್ಟಿಮಾಡಲಾಗಿದೆ ಮತ್ತು ಈ ಅಂಶಗಳನ್ನು ಔಷಧೋಪಚಾರದಲ್ಲಿ ಹೇಗೆ ಸಾಮಾನ್ಯವಾಗಿ ಬಳಸಲಾಗುತ್ತದೆ ಎಂಬುದನ್ನು ತಿಳಿಸಲಾಗಿದೆ. ರಕ್ತದ ಈ ಅಂಶಗಳಲ್ಲಿ ಪ್ರತಿಯೊಂದರ ಬಳಕೆಯನ್ನು ನೀವು ಸ್ವೀಕರಿಸುತ್ತೀರೊ ನಿರಾಕರಿಸುತ್ತೀರೊ ಎಂಬ ನಿಮ್ಮ ವೈಯಕ್ತಿಕ ಆಯ್ಕೆಯನ್ನು ಅಲ್ಲಿ ಭರ್ತಿಮಾಡಿರಿ. ಪ್ರಶ್ನಾವಳಿ 2, ನಿಮ್ಮ ಸ್ವಂತ ರಕ್ತವನ್ನು ಬಳಸುವಂಥ ಸರ್ವಸಾಮಾನ್ಯ ಚಿಕಿತ್ಸಾಕ್ರಮಗಳನ್ನು ಪಟ್ಟಿಮಾಡುತ್ತದೆ. ಈ ಚಿಕಿತ್ಸಾಕ್ರಮಗಳನ್ನು ನೀವು ಸ್ವೀಕರಿಸುತ್ತೀರೊ ನಿರಾಕರಿಸುತ್ತೀರೊ ಎಂಬ ನಿಮ್ಮ ವೈಯಕ್ತಿಕ ಆಯ್ಕೆಯನ್ನು ಅಲ್ಲಿ ಭರ್ತಿಮಾಡಿರಿ. ಈ ಪ್ರಶ್ನಾವಳಿಗಳು ಕಾನೂನುಬದ್ಧ ಡಾಕ್ಯುಮೆಂಟ್ಗಳಾಗಿರುವುದಿಲ್ಲ. ಆದರೆ ಇದರಲ್ಲಿರುವ ಪ್ರಶ್ನೆಗಳಿಗೆ ನೀವು ಕೊಟ್ಟಿರುವ ಉತ್ತರಗಳು, ನಿಮ್ಮ ಡೀಪೀಏ ಕಾರ್ಡ್—ಡ್ಯೂರಬ್ಲ್ ಪವರ್ ಆಫ್ ಅಟರ್ನಿ (ಡೀಪೀಏ - ಸ್ಥಿರ ಮುಖ್ತ್ಯಾರ ನಾಮೆ) ಸಾಕ್ಷ್ಯಪತ್ರವನ್ನು ನೀವು ಪೂರ್ಣವಾಗಿ ಭರ್ತಿಮಾಡುವಂತೆ ಸಹಾಯಮಾಡುವುದು.
ನಿಮ್ಮ ನಿರ್ಣಯಗಳು ಸ್ವತಃ ನೀವೇ ಮಾಡಿದಂಥವುಗಳಾಗಿರಬೇಕು. ಅವು ಬೇರೆಯವರ ಮನಸ್ಸಾಕ್ಷಿಯ ಮೇಲಾಧರಿತವಾಗಿರಬಾರದು. ಅದೇ ರೀತಿಯಲ್ಲಿ, ಇನ್ನೊಬ್ಬ ಕ್ರೈಸ್ತನು ಮಾಡಿರುವ ನಿರ್ಣಯಗಳನ್ನು ಯಾರೂ ಟೀಕಿಸಬಾರದು. ಈ ವಿಷಯದಲ್ಲಿ “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.”—ಗಲಾ. 6:4, 5.
cdefghiಗಮನಿಸಿರಿ: ಈ ಚಿಕಿತ್ಸಾಕ್ರಮಗಳನ್ನು ಪ್ರತಿಯೊಬ್ಬ ವೈದ್ಯನು ಭಿನ್ನಭಿನ್ನ ವಿಧಾನಗಳಲ್ಲಿ ಬಳಸಬಹುದು. ಆದುದರಿಂದ ನಿಮ್ಮ ವೈದ್ಯನು ನಿಮಗಾಗಿ ಶಿಫಾರಸ್ಸುಮಾಡುವ ಯಾವುದೇ ಚಿಕಿತ್ಸಾಕ್ರಮದಲ್ಲಿ ಏನೆಲ್ಲ ಒಳಗೂಡಿದೆ ಎಂಬುದನ್ನು ಸರಿಯಾಗಿ ವಿವರಿಸಿಹೇಳುವಂತೆ ನೀವು ಕೇಳಿಕೊಳ್ಳಬೇಕು. ಹೀಗೆ ಮಾಡುವುದರಿಂದ, ಆ ಚಿಕಿತ್ಸಾಕ್ರಮವು ಬೈಬಲ್ ಮೂಲತತ್ತ್ವಗಳಿಗೆ ಮತ್ತು ನಿಮ್ಮ ಮನಸ್ಸಾಕ್ಷಿಯ ಮೇಲಾಧರಿತವಾದ ನಿರ್ಣಯಗಳಿಗೆ ಹೊಂದಿಕೆಯಲ್ಲಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.