ಒಂದಿಷ್ಟು ಆಸಕ್ತಿ ತೋರಿಸುವ ಎಲ್ಲರನ್ನೂ ಪುನಃ ಭೇಟಿಮಾಡಿರಿ
1 ಇಂದು ನಮ್ಮಲ್ಲಿ ಅನೇಕರು ಸತ್ಯದಲ್ಲಿರಲು ಕಾರಣ, ನಾವು ರಾಜ್ಯ ಸಂದೇಶಕ್ಕೆ ತೋರಿಸಿದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಯಾರೋ ಒಬ್ಬರು ಗಮನಿಸಿ ತಾಳ್ಮೆಯಿಂದ ನಮ್ಮನ್ನು ಮತ್ತೆ ಬಂದು ಭೇಟಿಮಾಡಿದ್ದರಿಂದಲೇ. ಆ ಆಸಕ್ತಿಯನ್ನು ಬೆಳೆಸಲು ಬಹುಶಃ ಅವರು ನಮ್ಮನ್ನು ಅನೇಕ ಬಾರಿ ಭೇಟಿಮಾಡಿದ್ದಿರಬೇಕು. ಅದೇ ರೀತಿಯಲ್ಲಿ ಒಂದಿಷ್ಟು ಆಸಕ್ತಿ ತೋರಿಸುವವರೆಲ್ಲರನ್ನು ನಾವು ಕೂಡ ಪ್ರಾಮಾಣಿಕವಾಗಿ ಭೇಟಿಮಾಡಬೇಕು. ಹೌದು, ‘ಶಿಷ್ಯರನ್ನಾಗಿ ಮಾಡಬೇಕೆಂದು’ ನಮಗೆ ಕೊಡಲ್ಪಟ್ಟಿರುವ ಆಜ್ಞೆಯಲ್ಲಿ ಪುನರ್ಭೇಟಿಗಳನ್ನು ಮಾಡುವುದೂ ಒಳಗೂಡಿದೆ.—ಮತ್ತಾ. 28:19, 20.
2 ಆಸಕ್ತಿಯನ್ನು ಗುರುತಿಸಿರಿ: ಒಬ್ಬ ವ್ಯಕ್ತಿ ಸಾಹಿತ್ಯವನ್ನು ಸ್ವೀಕರಿಸದಿದ್ದರೂ ರಾಜ್ಯ ಸಂದೇಶಕ್ಕೆ ಅವನಿಗಿರುವ ಸ್ವಲ್ಪ ಗಣ್ಯತೆಯನ್ನು ಅವನ ಮುಖಭಾವ, ಸ್ವರ ಮತ್ತು ಅವನ ಮಾತುಗಳು ಹೊರಪಡಿಸಬಹುದು. ಇವನ್ನು ಮನಸ್ಸಿನಲ್ಲಿಟ್ಟು ನಾವು ಪುನರ್ಭೇಟಿಮಾಡಬಹುದು. ಒಬ್ಬ ವ್ಯಕ್ತಿಯು ಯಾವುದೇ ಸಾಹಿತ್ಯವನ್ನು ತೆಗೆದುಕೊಳ್ಳದಿದ್ದರೂ ಸಹೋದರನೊಬ್ಬನು ಅವನನ್ನು ಕ್ರಮವಾಗಿ ಐದು ವಾರ ಭೇಟಿಮಾಡಿದನು. ಆರನೇ ವಾರ ಆ ವ್ಯಕ್ತಿ ಸಾಹಿತ್ಯವನ್ನು ಸ್ವೀಕರಿಸಿದನು. ಕ್ರಮೇಣ ಒಂದು ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು.
3 ನೀವು ಆಸಕ್ತಿಯನ್ನು ಗುರುತಿಸುವಲ್ಲಿ ಸಾಧ್ಯವಾದಷ್ಟು ಬೇಗನೆ ಒಂದೆರಡು ದಿನಗಳೊಳಗಾಗಿ ಪುನರ್ಭೇಟಿಮಾಡಿರಿ. ಆ ವ್ಯಕ್ತಿಯ ಹೃದಯದಲ್ಲಿ ಬಿತ್ತಲಾದ ಬೀಜವನ್ನು “ಸೈತಾನನು” ತೆಗೆದುಹಾಕಲು ಅವಕಾಶಕೊಡಬೇಡಿರಿ. (ಮತ್ತಾ. 13:19) ನಿರ್ದಿಷ್ಟ ಸಮಯಕ್ಕೆ ಬರುತ್ತೇನೆಂದು ನೀವು ಹೇಳಿರುವುದಾದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ.—ಮತ್ತಾ. 5:37.
4 ಬೀದಿ ಸಾಕ್ಷಿಕಾರ್ಯದಲ್ಲಿ: ಬೀದಿ ಸಾಕ್ಷಿಕಾರ್ಯ ಅಥವಾ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಕಂಡುಕೊಂಡ ಆಸಕ್ತಿಯನ್ನು ಬೆಳೆಸಲು ನೀವು ಪ್ರಯತ್ನಿಸುತ್ತೀರೊ? ಈ ರೀತಿಯ ಸಾಕ್ಷಿಕಾರ್ಯದಲ್ಲಿ ನೀವು ಕೊನೆಗೆ ಹೀಗೆ ಹೇಳಬಹುದು: “ನಿಮ್ಮೊಟ್ಟಿಗೆ ಮಾತಾಡಿ ನನಗೆ ತುಂಬ ಸಂತೋಷವಾಯಿತು. ಮತ್ತೊಮ್ಮೆ ನಿಮ್ಮನ್ನು ಎಲ್ಲಿ ಭೇಟಿಮಾಡಬಹುದು?” ಕೆಲವು ಪ್ರಚಾರಕರು ಸೂಕ್ತವೆಂದೆಣಿಸುವಲ್ಲಿ ತಮ್ಮ ಫೋನ್ ನಂಬರನ್ನು ಆಸಕ್ತ ವ್ಯಕ್ತಿಗೆ ಕೊಡಲು ಇಲ್ಲವೆ ಅವರ ಫೋನ್ ನಂಬರನ್ನು ಪಡೆದುಕೊಳ್ಳಲು ಬಯಸಬಹುದು. ಪ್ರಾಯಶಃ ನೀವು ಯಾವಾಗಲೂ ಒಂದು ನಿರ್ದಿಷ್ಟ ಸ್ಥಳದಲ್ಲಿಯೇ ಬೀದಿ ಸಾಕ್ಷಿಕಾರ್ಯ ಮಾಡುವುದನ್ನು ಜನರು ನೋಡುವಲ್ಲಿ ಅವರು ತಮ್ಮ ಫೋನ್ ನಂಬರನ್ನೊ ವಿಳಾಸವನ್ನೊ ಕೊಡಲು ಹಿಂಜರಿಯುವುದಿಲ್ಲ. ಒಂದುವೇಳೆ, ಪುನಃ ಹೇಗೆ ಭೇಟಿಮಾಡಬಹುದೆಂದು ಅವರು ತಿಳಿಸದಿದ್ದರು ಸಹ ನೀವು ಅವರನ್ನು ಮತ್ತೆ ಕಾಣುವಾಗ ಅವರ ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸಿರಿ.
5 ನಾವು ನೀರು ಹೊಯಿದು ಆರೈಕೆ ಮಾಡಿದ ಗಿಡ ಚೆನ್ನಾಗಿ ಬೆಳೆಯುವುದನ್ನು ನೋಡುವಾಗ ನಮಗೆ ಸಂತೋಷವಾಗುತ್ತದೆ ಅಲ್ಲವೆ? ತದ್ರೀತಿಯಲ್ಲಿ ಪುನರ್ಭೇಟಿಗಳನ್ನು ಮಾಡಿ ಆಧ್ಯಾತ್ಮಿಕವಾಗಿ ಪ್ರಗತಿಮಾಡಲು ನಾವು ಇತರರಿಗೆ ಸಹಾಯಮಾಡುವಾಗ ಸಂತೋಷವನ್ನು ಪಡೆದುಕೊಳ್ಳುವೆವು. (1 ಕೊರಿಂ. 3:6) ಆದುದರಿಂದ ಒಂದಿಷ್ಟು ಆಸಕ್ತಿ ತೋರಿಸುವ ಎಲ್ಲರನ್ನೂ ಪುನಃ ಭೇಟಿಮಾಡುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ.