ನೈಸರ್ಗಿಕ ವಿಪತ್ತಿಗಾಗಿ ಪೂರ್ವಸಿದ್ಧತೆ ಮಾಡಿದ್ದೀರೊ?
1. ವಿಪತ್ತುಗಳಿಗಾಗಿ ಪೂರ್ವಸಿದ್ಧರಾಗಿರುವುದು ವಿವೇಕಯುತವೇಕೆ?
1 ಲೋಕವ್ಯಾಪಕವಾಗಿ ಪ್ರತಿವರ್ಷ ನಮ್ಮ ಸಹೋದರ ಸಹೋದರಿಯರನ್ನೂ ಸೇರಿಸಿ ಲಕ್ಷಾಂತರ ಜನರು ಭೂಕಂಪ, ಸುನಾಮಿ, ಮಳೆ, ಪ್ರವಾಹ, ಸುಂಟರಗಾಳಿ ಮತ್ತು ಚಂಡಮಾರುತಗಳಿಂದ ಬಾಧಿತರಾಗುತ್ತಾರೆ. ನೈಸರ್ಗಿಕ ವಿಪತ್ತುಗಳು ಅನಿರೀಕ್ಷಿತವಾಗಿ ಸಂಭವಿಸುವ ಕಾರಣ ಅವು ನಮ್ಮಲ್ಲಿ ಯಾರನ್ನು ಬೇಕಾದರೂ ಬಾಧಿಸಬಲ್ಲವು. ಆದುದರಿಂದ ಪೂರ್ವಸಿದ್ಧರಾಗಿರುವುದು ವಿವೇಕಯುತವಾಗಿದೆ.—ಜ್ಞಾನೋ. 21:5.
2. ನಮ್ಮ ಇತ್ತೀಚಿಗಿನ ಸಂಪರ್ಕ ವಿಳಾಸ ಮತ್ತು ಫೋನ್ ನಂಬರ್ಗಳನ್ನು ಹಿರಿಯರಿಗೆ ಕೊಡುವುದು ಪ್ರಾಮುಖ್ಯವೇಕೆ?
2 ವಿಪತ್ತಿಗೆ ಮುಂಚೆ: ಕೆಲವೊಮ್ಮೆ ಅಧಿಕಾರಿಗಳು ವಿಪತ್ತಿನ ಕುರಿತು ಮುನ್ನೆಚ್ಚರಿಕೆಗಳನ್ನು ಕೊಡಲು ಶಕ್ತರಾಗಿರುತ್ತಾರೆ. ಆ ಮುನ್ನೆಚ್ಚರಿಕೆಗಳಿಗೆ ಕಿವಿಗೊಡುವುದು ಪ್ರಾಮುಖ್ಯ. (ಜ್ಞಾನೋ. 22:3) ಇಂಥ ಸನ್ನಿವೇಶಗಳಲ್ಲಿ ಹಿರಿಯರು ಸಭೆಯಲ್ಲಿರುವ ಎಲ್ಲರನ್ನು ಸಂಪರ್ಕಿಸಲು ಪ್ರಯತ್ನಿಸಿ ಆವಶ್ಯಕ ಸಿದ್ಧತೆಗಳನ್ನು ಮಾಡಲು ಸಹಾಯಮಾಡುವರು. ವಿಪತ್ತಿನ ನಂತರವೂ ಸಭೆಯವರೆಲ್ಲರನ್ನು ಸಂಪರ್ಕಿಸಲು ಹಿರಿಯರು ಪ್ರಯತ್ನಿಸುವರು. ಎಲ್ಲರೂ ಸುರಕ್ಷಿತರಾಗಿದ್ದಾರೋ ಮತ್ತು ಯಾರಿಗಾದರೂ ಸಹಾಯದ ಅಗತ್ಯವಿದೆಯೋ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳಲು ಸಹ ಅವರು ಪ್ರಯತ್ನಿಸುವರು. ಹಿರಿಯರ ಬಳಿ ಸಭೆಯವರನ್ನು ಸಂಪರ್ಕಿಸಲು ಸದ್ಯೋಚಿತವಾದ ಮಾಹಿತಿಗಳಿಲ್ಲದಿರುವಲ್ಲಿ ಬಹುಮೂಲ್ಯವಾದ ಸಮಯವು ಸುಮ್ಮನೆ ವ್ಯರ್ಥವಾಗಬಹುದು. ಆದುದರಿಂದ ಪ್ರಚಾರಕರೆಲ್ಲರೂ ತಮ್ಮ ಸಭೆಯ ಕಾರ್ಯದರ್ಶಿ ಮತ್ತು ಪುಸ್ತಕ ಅಧ್ಯಯನ ಮೇಲ್ವಿಚಾರಕರಿಗೆ ಇತ್ತೀಚಿಗಿನ ಸಂಪರ್ಕ ವಿಳಾಸ ಮತ್ತು ಫೋನ್ ನಂಬರ್ಗಳನ್ನು ಕೊಡುವುದು ಪ್ರಾಮುಖ್ಯ.
3. ಒಂದುವೇಳೆ ನಾವು ವಿಪತ್ತು ಸಂಭವನೀಯ ಪ್ರದೇಶದಲ್ಲಿರುವುದಾದರೆ ಹಿರಿಯರೊಂದಿಗೆ ಹೇಗೆ ಸಹಕರಿಸಬಲ್ಲೆವು?
3 ಸಭೆಯು ವಿಪತ್ತು ಸಂಭವನೀಯ ಪ್ರದೇಶದಲ್ಲಿರುವುದಾದರೆ, ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಸಾಧ್ಯವಾಗುವಂತೆ ಪ್ರತಿಯೊಬ್ಬ ಪ್ರಚಾರಕನೂ ಆ ಕ್ಷೇತ್ರದಿಂದ ಹೊರಗೆ ವಾಸಿಸುವ ತಮ್ಮ ಸಂಬಂಧಿಕರ ಅಥವಾ ಪರಿಚಯಸ್ಥರ ಟೆಲಿಫೋನ್ ನಂಬರ್ಗಳನ್ನು ಕೊಡುವಂತೆ ಹಿರಿಯರು ಕೇಳಿಕೊಳ್ಳಬಹುದು. ಇದರಿಂದ, ಯಾರಾದರೂ ಸ್ಥಳಾಂತರಿಸಲ್ಪಟ್ಟಿರುವಲ್ಲಿ ಅವರನ್ನು ಸಂಪರ್ಕಿಸಲು ಹಿರಿಯರಿಗೆ ಸಾಧ್ಯವಾಗುವುದು. ತುರ್ತು ಪರಿಸ್ಥಿತಿಯಲ್ಲಿ ಸಭೆಯು ಏನೆಲ್ಲಾ ಮಾಡಬೇಕೆಂಬುದರ ಕುರಿತು ಹಿರಿಯರು ಒಂದು ಯೋಜನೆಯನ್ನು ಸಹ ಮಾಡಬಹುದು. ಈ ಯೋಜನೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಅವಶ್ಯಕವಾದ ವಸ್ತುಗಳ ಒಂದು ಪಟ್ಟಿ, ಸ್ಥಳಾಂತರಿಸುವ ಏರ್ಪಾಡುಗಳು ಮತ್ತು ವಿಶೇಷ ಆರೈಕೆಯ ಅಗತ್ಯವಿರುವವರಿಗೆ ಸಹಾಯವನ್ನು ನೀಡಲು ಮಾಡಲಾಗಿರುವ ಏರ್ಪಾಡುಗಳು ಮುಂತಾದ ವಿಷಯಗಳು ಒಳಗೂಡಿರುವುವು. ಇಂಥ ಪ್ರೀತಿಯ ಏರ್ಪಾಡುಗಳಿಗೆ ಸಹಕರಿಸುವಂಥದ್ದು ತುಂಬ ಪ್ರಾಮುಖ್ಯ.—ಇಬ್ರಿ. 13:17.
4. ನಮ್ಮ ಕ್ಷೇತ್ರದಲ್ಲಿ ಒಂದು ವಿಪತ್ತು ಬಂದೆರಗುವಲ್ಲಿ ನಾವೇನು ಮಾಡತಕ್ಕದ್ದು?
4 ವಿಪತ್ತಿನ ನಂತರ: ನಿಮ್ಮ ಕ್ಷೇತ್ರದಲ್ಲಿ ಒಂದು ವಿಪತ್ತು ಬಂದೆರಗುವಲ್ಲಿ ನೀವೇನು ಮಾಡತಕ್ಕದ್ದು? ನಿಮ್ಮ ಕುಟುಂಬದ ತುರ್ತಿನ ಶಾರೀರಿಕ ಅಗತ್ಯತೆಗಳು ಪೂರೈಸಲ್ಪಟ್ಟಿವೆಯೊ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಧ್ಯವಿರುವಲ್ಲಿ ಬಾಧಿತರಿಗೆ ಸಹಾಯಮಾಡಿ. ಆದಷ್ಟು ಬೇಗ ನಿಮ್ಮ ಪುಸ್ತಕ ಅಧ್ಯಯನದ ಮೇಲ್ವಿಚಾರಕರನ್ನು ಅಥವಾ ಇನ್ನೊಬ್ಬ ಹಿರಿಯರನ್ನು ಸಂಪರ್ಕಿಸಲು ಪ್ರಯತ್ನಿಸಿರಿ. ನೀವು ಸುರಕ್ಷಿತರಾಗಿದ್ದು ಯಾವುದೇ ಸಹಾಯದ ಅಗತ್ಯವಿಲ್ಲದಿದ್ದರೂ ನೀವು ಹಿರಿಯರನ್ನು ಸಂಪರ್ಕಿಸತಕ್ಕದ್ದು. ಒಂದುವೇಳೆ ನಿಮಗೆ ಸಹಾಯದ ಅಗತ್ಯವಿರುವಲ್ಲಿ, ಅದಕ್ಕಾಗಿ ನಿಮ್ಮ ಸಹೋದರರು ತಮ್ಮಿಂದಾದುದ್ದೆಲ್ಲವನ್ನು ಮಾಡುತ್ತಿದ್ದಾರೆಂಬ ಖಾತರಿ ನಿಮಗಿರಲಿ. (1 ಕೊರಿಂ. 13:4, 7) ಯೆಹೋವನಿಗೆ ನಿಮ್ಮ ಸನ್ನಿವೇಶದ ಬಗ್ಗೆ ತಿಳಿದಿದೆ ಎಂಬುದನ್ನು ನೆನಪಿನಲ್ಲಿಟ್ಟು ಆತನ ಮೇಲೆ ಆತುಕೊಳ್ಳಿರಿ. ಆತನೇ ನಿಮ್ಮನ್ನು ಪೋಷಿಸಿ ಕಾಪಾಡುವನು. (ಕೀರ್ತ. 37:39; 62:8) ಇತರರನ್ನು ಆಧ್ಯಾತ್ಮಿಕವಾಗಿಯೂ ಭಾವನಾತ್ಮಕವಾಗಿಯೂ ಬಲಪಡಿಸಲು ಸಿಗುವ ಸಂದರ್ಭಗಳನ್ನು ಜಾಗರೂಕತೆಯಿಂದ ಉಪಯೋಗಿಸಿಕೊಳ್ಳಿರಿ. (2 ಕೊರಿಂ. 1:3, 4) ಸಾಧ್ಯವಾದಷ್ಟು ಬೇಗನೆ ಆಧ್ಯಾತ್ಮಿಕ ಚಟುವಟಿಕೆಗಳನ್ನು ಪುನಃ ಆರಂಭಿಸಿ.—ಮತ್ತಾ. 6:33.
5. ವಿಪತ್ತಿನ ಬೆದರಿಕೆಗೆಳು ಕ್ರೈಸ್ತರಾದ ನಮ್ಮನ್ನು ಹೇಗೆ ಪ್ರಭಾವಿಸುತ್ತವೆ?
5 ವಿಪತ್ತಿನ ಬೆದರಿಕೆಗಳು ಲೋಕವನ್ನು ಬಹಳಷ್ಟು ಚಿಂತೆಯಲ್ಲಿ ಮುಳುಗಿಸಿವೆ. ನಾವಾದರೊ ಭವಿಷ್ಯತ್ತನ್ನು ಭರವಸೆಯಿಂದ ಮುನ್ನೊಡಸಾಧ್ಯವಿದೆ. ಅತಿ ಬೇಗನೆ ಎಲ್ಲಾ ವಿಪತ್ತುಗಳು ಗತಕಾಲದ ಸಂಗತಿಗಳಾಗುವುವು. (ಪ್ರಕ. 21:4) ಅಷ್ಟರವರೆಗೆ, ಇಂದಿನ ಕಷ್ಟಸಂಕಷ್ಟಗಳನ್ನು ನಿಭಾಯಿಸಲು ಸಮಂಜಸವಾದ ಪೂರ್ವಸಿದ್ಧತೆಗಳನ್ನು ಮಾಡುವುದರ ಜೊತೆಗೆ ಇತರರಿಗೆ ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಾ ಇರೋಣ.