ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸುವಾಗ ಮಹಾ ಬೋಧಕನನ್ನು ಅನುಸರಿಸಿರಿ
1. ಯೇಸು ಹೇಗೆ ಬೋಧಿಸಿದನು?
1 ಮಹಾ ಬೋಧಕನಾದ ಯೇಸು ಯಾವಾಗಲೂ ವಿಷಯಗಳನ್ನು ಸರಳವಾಗಿ ಮತ್ತು ಸ್ಪಷ್ಟ ರೀತಿಯಲ್ಲಿ ವಿವರಿಸಿದನು. ಅವನು ತನ್ನ ಕೇಳುಗರನ್ನು ಯೋಚಿಸುವಂತೆ ಮಾಡಲಿಕ್ಕಾಗಿ ಕೆಲವೊಮ್ಮೆ ಮೊದಲಾಗಿ ಅವರ ಅಭಿಪ್ರಾಯವೇನೆಂದು ಕೇಳುತ್ತಿದ್ದನು. (ಮತ್ತಾ. 17:24-27) ಮಾತ್ರವಲ್ಲ, ದೇವರ ವಾಕ್ಯದೆಡೆಗೆ ಗಮನ ಸೆಳೆದನು. (ಮತ್ತಾ. 26:31; ಮಾರ್ಕ 7:6) ತನ್ನ ಶಿಷ್ಯರು ಮುಂದೆ ಹೆಚ್ಚು ವಿಷಯಗಳನ್ನು ಕಲಿಯುವರೆಂದು ಅವನಿಗೆ ಗೊತ್ತಿದ್ದರಿಂದ ಒಮ್ಮೆಲೆ ಎಲ್ಲವನ್ನೂ ಹೇಳಿ ಹೆಚ್ಚು ಭಾರ ಹೊರಿಸಲಿಲ್ಲ. (ಯೋಹಾ. 16:12) ತಾನು ಕಲಿಸಿದ ವಿಷಯಗಳನ್ನು ತನ್ನ ಶಿಷ್ಯರು ನಂಬಿದರೊ ಮತ್ತು ಅರ್ಥಮಾಡಿಕೊಂಡರೊ ಎಂಬದರಲ್ಲಿ ಸಹ ಯೇಸು ಆಸಕ್ತನಾಗಿದ್ದನು. (ಮತ್ತಾ. 13:51) ಇದೇ ರೀತಿಯಲ್ಲಿ ಕಲಿಸಲು ನಮ್ಮ ಸಹಾಯಕ್ಕಾಗಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ರಚಿಸಲಾಗಿದೆ.
2. ಪ್ರತಿಯೊಂದು ಅಧ್ಯಾಯದಲ್ಲಿರುವ ಪೀಠಿಕಾ ಪ್ರಶ್ನೆಗಳನ್ನು ನಾವು ಯಾವ ವಿಧಗಳಲ್ಲಿ ಉಪಯೋಗಿಸಬಹುದು?
2 ಪೀಠಿಕಾ ಪ್ರಶ್ನೆಗಳು: ನೀವು ಒಂದು ಅಧ್ಯಾಯವನ್ನು ಆರಂಭಿಸುವಾಗ ಶೀರ್ಷಿಕೆಯ ಕೆಳಗಿರುವ ಪೀಠಿಕಾ ಪ್ರಶ್ನೆಗಳಿಗೆ ಗಮನ ಸೆಳೆಯುವುದು ಪರಿಣಾಮಕಾರಿಯಾಗಿದೆ. ವಿದ್ಯಾರ್ಥಿಯಿಂದ ಉತ್ತರವನ್ನು ಕೂಡಲೇ ನಿರೀಕ್ಷಿಸದೆ ಆಸಕ್ತಿಯನ್ನು ಕೆರಳಿಸುವಂಥ ರೀತಿಯಲ್ಲಿ ಆ ಪ್ರಶ್ನೆಗಳನ್ನು ಕೇಳಿರಿ. ಅಥವಾ ಆ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸುವಂತೆ ಕೇಳಿಕೊಳ್ಳಿರಿ. ಅವನ ಉತ್ತರವನ್ನು ಉದ್ದುದ್ದವಾಗಿ ಚರ್ಚಿಸುವುದಾಗಲಿ ಪ್ರತಿಯೊಂದು ತಪ್ಪನ್ನು ತಿದ್ದುವುದಾಗಲಿ ಅಗತ್ಯವಿಲ್ಲ. ಅವನು ತನ್ನ ಅನಿಸಿಕೆಗಳನ್ನು ತಿಳಿಸಿದ್ದಕ್ಕಾಗಿ ಬರೀ ಉಪಕಾರ ಹೇಳಿ ಅಧ್ಯಾಯವನ್ನು ಪರಿಗಣಿಸಲು ಆರಂಭಿಸಬಹುದು. ಆ ಪೀಠಿಕಾ ಪ್ರಶ್ನೆಗಳ ಕುರಿತು ಅವನು ಹೇಳುವ ವಿಷಯಗಳಿಂದ ಅಧ್ಯಾಯದ ಯಾವ ಭಾಗಕ್ಕೆ ಅಧಿಕ ಗಮನಕೊಡಬೇಕಾಗಿದೆ ಎಂಬುದು ನಿಮಗೆ ತಿಳಿದುಬರುವುದು.
3. ಅಧ್ಯಯನವನ್ನು ನಾವು ಹೇಗೆ ಸರಳವಾಗಿಡಬಹುದು?
3 ಶಾಸ್ತ್ರವಚನಗಳು: ಅಧ್ಯಯನವನ್ನು ಬೈಬಲ್ನ ಮೇಲೆ ಕೇಂದ್ರೀಕರಿಸಬೇಕು. (ಇಬ್ರಿ. 4:12) ಹಾಗಿದ್ದರೂ ಕೊಡಲಾಗಿರುವ ಪ್ರತಿಯೊಂದು ವಚನಗಳನ್ನು ಓದಲೇಬೇಕೆಂದಿಲ್ಲ. ನಮ್ಮ ನಂಬಿಕೆಗಳಿಗೆ ಆಧಾರವಾಗಿರುವ ವಚನಗಳನ್ನು ಒತ್ತಿ ಹೇಳಿರಿ. ಹಿನ್ನೆಲೆ ಮಾಹಿತಿಯನ್ನು ನೀಡುವ ಬೈಬಲ್ ವಚನಗಳನ್ನು ಓದುವ ಅಗತ್ಯವಿಲ್ಲದಿರಬಹುದು. ಬೈಬಲ್ ಬೋಧಿಸುತ್ತದೆ ಪುಸ್ತಕವು ಸತ್ಯವನ್ನು ಸರಳವಾಗಿ ಪ್ರಸ್ತುತಪಡಿಸುತ್ತದೆ. ನೀವು ಸಹ ಅಧ್ಯಯನವನ್ನು ಸರಳವಾಗಿಡಿರಿ. ಮುಖ್ಯ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ತೀರಾ ಹೆಚ್ಚು ವಿವರಿಸುತ್ತಾ ಮಾತಾಡಬೇಡಿರಿ. ಇಲ್ಲವೆ ಸಂಬಂಧಿಸದ ವಿಚಾರಗಳನ್ನು ಅನಾವಶ್ಯಕವಾಗಿ ಚರ್ಚೆಯಲ್ಲಿ ಒಳತರಬೇಡಿರಿ.
4. ಅಧ್ಯಯನ ಸಮಯದಲ್ಲಿ ಪರಿಶಿಷ್ಟವನ್ನು ಪರಿಗಣಿಸಬೇಕೊ ಬಾರದೊ ಎಂಬುದನ್ನು ಯಾವುದರ ಆಧಾರದ ಮೇಲೆ ನಿರ್ಧರಿಸಬೇಕು?
4 ಪರಿಶಿಷ್ಟ: ಪರಿಶಿಷ್ಟದಲ್ಲಿರುವ 14 ವಿಷಯಗಳಲ್ಲಿ ಅಧ್ಯಾಯಭಾಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇದೆ. ಅಧ್ಯಯನದ ಸಮಯದಲ್ಲಿ ಈ ವಿಷಯಗಳನ್ನು ಚರ್ಚಿಸುವುದು ನಿಮ್ಮ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ಕೆಲವು ವಿಷಯಗಳನ್ನು ಪರಿಗಣಿಸುವಾಗ ಪರಿಶಿಷ್ಟದಲ್ಲಿರುವ ಹೆಚ್ಚಿನ ಮಾಹಿತಿಯನ್ನು ವಿದ್ಯಾರ್ಥಿಯೇ ಓದಿ ತಿಳಿಯುವಂತೆ ನೀವು ಉತ್ತೇಜಿಸಬಹುದು. ವಿಶೇಷವಾಗಿ ಅವನು ಅಧ್ಯಾಯದ ವಿಷಯವನ್ನು ಅರ್ಥಮಾಡಿಕೊಂಡು ಅಂಗೀಕರಿಸುವಲ್ಲಿ ನೀವು ಹಾಗೆ ಸಲಹೆ ನೀಡಬಹುದು. ಉದಾಹರಣೆಗೆ, ಯೇಸುವೇ ಮೆಸ್ಸೀಯನೆಂದು ವಿದ್ಯಾರ್ಥಿಯು ನಂಬುತ್ತಾನೆ ಎಂದಿಟ್ಟುಕೊಳ್ಳಿ. ಆಗ, “ಯೇಸು ಕ್ರಿಸ್ತನು ಯಾರು?” ಎಂಬ 4ನೇ ಅಧ್ಯಾಯವನ್ನು ಚರ್ಚಿಸುವಾಗ ಪರಿಶಿಷ್ಟದಲ್ಲಿರುವ “ಯೇಸು ಕ್ರಿಸ್ತನು—ವಾಗ್ದತ್ತ ಮೆಸ್ಸೀಯನು” ಎಂಬ ವಿಷಯವನ್ನು ಚರ್ಚಿಸುವ ಅಗತ್ಯವಿಲ್ಲದಿರಬಹುದು. ಆದರೆ ಇತರ ಸಂದರ್ಭಗಳಲ್ಲಿ ಅಧ್ಯಯನ ನಡೆಸುತ್ತಿರುವಾಗ ಪರಿಶಿಷ್ಟದಲ್ಲಿರುವ ವಿಷಯವನ್ನು ಅಥವಾ ಅದರ ಕೆಲವು ಭಾಗವನ್ನು ಚರ್ಚಿಸುವುದು ಪ್ರಯೋಜನಕರ.
5. ಪರಿಶಿಷ್ಟದಲ್ಲಿರುವ ವಿಷಯವನ್ನು ಚರ್ಚಿಸಬೇಕೆಂದಿರುವಲ್ಲಿ ನಾವದನ್ನು ಹೇಗೆ ಮಾಡಬಹುದು?
5 ಪರಿಶಿಷ್ಟದ ವಿಷಯವನ್ನು ನೀವು ಚರ್ಚಿಸಬೇಕೆಂದಿರುವಲ್ಲಿ ಮುಂಚಿತವಾಗಿಯೇ ಪ್ರಶ್ನೆಗಳನ್ನು ತಯಾರಿಸಿರಿ. ನೀವು ಅಧ್ಯಾಯಭಾಗವನ್ನು ಚರ್ಚಿಸುವಂಥ ರೀತಿಯಲ್ಲೇ ಪರಿಶಿಷ್ಟವನ್ನು ವಿದ್ಯಾರ್ಥಿಯೊಂದಿಗೆ ಪರಿಗಣಿಸಿರಿ. ಇಲ್ಲವೆ ಅವನ ಅಗತ್ಯಗಳಿಗನುಸಾರ ಪರಿಶಿಷ್ಟದಲ್ಲಿರುವ ವಿಷಯಗಳನ್ನು ಅಧ್ಯಯನ ಮಾಡುವಾಗ ಕೆಲವು ನಿಮಿಷ ಪರಿಶೀಲಿಸಬಹುದು. ಇದರಿಂದ ವಿದ್ಯಾರ್ಥಿಯು ಸ್ವತಃ ಓದುವ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾನೋ ಎಂಬುದು ನಿಮಗೆ ಖಚಿತವಾಗುವುದು.
6. ಪ್ರತಿ ಅಧ್ಯಯನದ ಕೊನೆಯಲ್ಲಿ ಪುನರ್ವಿಮರ್ಶೆಯ ಚೌಕವನ್ನು ಹೇಗೆ ಉಪಯೋಗಿಸಸಾಧ್ಯವಿದೆ?
6 ಪುನರ್ವಿಮರ್ಶೆಯ ಚೌಕ: ಪ್ರತಿ ಅಧ್ಯಾಯದ ಕೊನೆಯಲ್ಲಿರುವ ಚೌಕದಲ್ಲಿನ ಹೇಳಿಕೆಗಳು ಪೀಠಿಕಾ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತವೆ. ಅಧ್ಯಾಯದ ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಈ ಹೇಳಿಕೆಗಳನ್ನು ಉಪಯೋಗಿಸಬಹುದು. ಪ್ರತಿಯೊಂದು ಹೇಳಿಕೆಗಳನ್ನೂ ಪ್ರಾಯಶಃ ಜೊತೆಗಿರುವ ವಚನಗಳನ್ನೂ ವಿದ್ಯಾರ್ಥಿಯೊಂದಿಗೆ ಓದುವುದು ಸಹಾಯಕರವೆಂದು ಕೆಲವು ಪ್ರಚಾರಕರು ಕಂಡುಕೊಂಡಿದ್ದಾರೆ. ನಂತರ ಆ ವಚನಗಳು ಹೇಳಿಕೆಗಳನ್ನು ಹೇಗೆ ಬೆಂಬಲಿಸುತ್ತವೆಂದು ಚುಟುಕಾಗಿ ವಿವರಿಸುವಂತೆ ಅವರು ವಿದ್ಯಾರ್ಥಿಯನ್ನು ಕೇಳುತ್ತಾರೆ. ಇದು, ಅಧ್ಯಾಯದ ಮುಖ್ಯ ಅಂಶಗಳು ಮತ್ತು ಬೈಬಲ್ ಅವನ್ನು ಹೇಗೆ ಬೆಂಬಲಿಸುತ್ತವೆ ಎಂಬುದು ವಿದ್ಯಾರ್ಥಿಗೆ ಅರ್ಥವಾಯಿತೊ ಹಾಗೂ ಅವುಗಳನ್ನು ಅವನು ಒಪ್ಪುತ್ತಾನೊ ಎಂದು ಬೋಧಕನಿಗೆ ತೋರಿಸಿಕೊಡುತ್ತದೆ. ಇದು ಇತರರಿಗೆ ಸತ್ಯದ ಕುರಿತು ವಿವರಿಸುವಾಗ ಬೈಬಲನ್ನು ಉಪಯೋಗಿಸುವಂತೆಯೂ ವಿದ್ಯಾರ್ಥಿಯನ್ನು ತರಬೇತುಮಾಡುತ್ತದೆ.
7. ನಮ್ಮ ನೇಮಕವನ್ನು ಪೂರೈಸಲು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನಾವು ಹೇಗೆ ಉಪಯೋಗಿಸಸಾಧ್ಯವಿದೆ?
7 ಜನರಿಗೆ ಬೋಧಿಸಿ ಶಿಷ್ಯರನ್ನಾಗಿ ಮಾಡುವ ನಮ್ಮ ನೇಮಕವನ್ನು ಪೂರೈಸಲು ಅತಿ ಪರಿಣಾಮಕಾರಿಯಾದ ಮಾರ್ಗವು ಯೇಸುವಿನ ಬೋಧನಾ ವಿಧಾನಗಳನ್ನು ಅನುಸರಿಸುವುದೇ. (ಮತ್ತಾ. 28:19, 20) ಇದನ್ನು ಮಾಡಲು ಬೈಬಲ್ ಬೋಧಿಸುತ್ತದೆ ಪುಸ್ತಕವು ನಮಗೆ ಸಹಾಯಮಾಡುತ್ತದೆ. ಆದುದರಿಂದ ಸತ್ಯವನ್ನು ಸರಳ, ಸ್ಪಷ್ಟ ಮತ್ತು ಆಸಕ್ತಿಕರವಾಗಿ ಇತರರಿಗೆ ಕಲಿಸಲು ಅದನ್ನು ಸದುಪಯೋಗಿಸಿರಿ.